Feeds:
Posts
Comments

        ಬೆಳಗ್ಗೆ ಅಷ್ಟು ಬೇಗ ಏಳೋದೇ ದೊಡ್ಡ ವಿಷ್ಯ. ಅಂತದ್ರಲ್ಲಿ ಬೆಳಗ್ಗೆ ಬೆಳಗ್ಗೆ ಮೈ ನೋವು ಮಾಡ್ಕೊಂಡು ಅರ್ಧಂಬರ್ಧ ಅರ್ಥ ಆಗೋ ಭಾಷೆಯ ಹಾಡು ಕೇಳಬೇಕು ಅಂದ್ರೆ ಅದೆಷ್ಟು ಉರೀಬೇಡ. ನಂಗೂ ದಿನಾ ಇದೇ ಆಗ್ತಿತ್ತು.. ಐದೂವರೆಗೆ ಎದ್ದು ಅಮ್ಮ ಕೊಡೊ ಬಿಸಿ ಬಿಸಿ ಬ್ರೆಡ್ಡು, ಬೂಸ್ಟ್ ಕುಡ್ಕೊಂಡು ಗಡ ಗಡ ನಡುಗ್ತಾ ಚಳೀಲಿ ಜಿಮ್ ಗೆ ಹೋದ್ರೆ ಅಲ್ಲಿ ಅದ್ಯಾವ್ದೋ ಏಳು ಸಮುದ್ರದ ಆಚೆ ಇರೋ ದೇಶದ ಇಂಗ್ಲಿಶ್ ಹಾಡುಗಳು ನನ್ನ ಕಿವೀಗೆ ಕರ್ಕಶವಾಗಿ ಕೇಳೋದು. ಎಲ್ಲೋ ಅಲ್ಲೊಂದು, ಇಲ್ಲೊಂದು ವಾಕ ವಾಕ, ವೆಂಗ ಬಾಯ್ಸ್ ಹಾಡು ಬಂದ್ರೆ ಮಾತ್ರ ನಾನು ಸ್ವಲ್ಪ ಬಾಯ್ ಆಡಿಸ್ಬೋದು. ಇಲ್ಲದೇ ಇದ್ರೆ ಜಿಮ್ಮಿಗೆ ಬರೋ ಸಾಕಷ್ಟು ಜನ ಅವ್ರೇ ಹಾಡಿರೋ ಹಾಡು ಅನ್ನೋ ತರ ಹಾಡ್ತಿರ್ತಾರಲ್ಲ, ಅವರ ಮುಖ ಮುಖ ನೋಡೋದಷ್ಟೇ ನನ್ನ ಕಾಯಕ. ಒಂದು ಕಡೆ ನಮ್ಮ ಟ್ರೈನೆರ್ ಜಾಸ್ತಿ ವೇಯ್ಟ್ ಎತ್ತಿ ಅಂತ ಕೊಡೋ ಟಾರ್ಚರ್, ಇನ್ನೊಂದು ಕಡೆ ಈ ದರಿದ್ರ ಇಂಗ್ಲಿಷ್ ಹಾಡು.  ಈ ಕಿತ್ತೋಗಿರೋ ಹಾಡು ನಿಲ್ಸಿ ಅಂತ ಹೇಳೋಣ ಅಂದ್ರೆ, ` ಮೊನ್ನೆ ಮೊನ್ನೆ ಸೇರ್ಕೊಂಡಿರೋ ನನ್ ಮಗ ಎಷ್ಟು ಗಾಂಚಲಿ ಮಾಡ್ತಾನೆ’ ಅಂತ ಅನ್ಕೊತಾರೆ ಅನ್ನೋ ಲಾಜಿಕ್ಕು. ಏನಾದ್ರು ಆಗ್ಲಿ ಅಂತ ಕಷ್ಟ ಪಟ್ಟು ಕೈಲಿದ್ದ 25 ಕೆಜಿ ಡಂಬಲ್ ಎತ್ತುತಾ ಆ ಹಾಡನ್ನ ಅರಗಿಸಿ ಕೊಳ್ತಾ ಇದ್ದೆ. ಅವಳ್ಯಾರೋ ನಮ್ ಏರಿಯಾ ಕಾಗೆ ತರ ಕಿರುಚ್ತಾ ಇದ್ರೆ, ಟ್ರೆಡ್ ಮಿಲ್ ಮೇಲೆ ಓಡ್ತಾ ಇದ್ದ ಆ ಕಪ್ಪು ಟಿ ಶರ್ಟಿನ ಹುಡುಗ ಫುಲ್ ಆ ಹಾಡನ್ನ ಎಂಜಾಯ್ ಮಾಡ್ತಾ ಇದ್ದ. ನೀವೋ, ನಿಮ್ ಹಾಡೋ ಅಂತ ಮನಸಲ್ಲೇ ಉಗೀತಾ, ಮತ್ತೆ ಇರೋ ಬರೋ ಶಕ್ತಿ ಬಿಟ್ಟು ಡಂಬಲ್  ಎತ್ತುತಾ ಇದ್ದೆ. ಅವತ್ತು ಮನೆಗೆ ಹೋದ ಮೇಲೂ ಆ ಇಂಗ್ಲಿಶ್ ಹಾಡುಗಳು ನಮ್ಮ ಮನೆಯ ಗಾಯತ್ರಿ ಮಂತ್ರವನ್ನ ಓವರ್ ಟೇಕ್ ಮಾಡಿ ಕಾಟ ಕೊಡ್ತಾ ಇದ್ವು. ಅವರೆಲ್ಲಾ ಆ ಇಂಗ್ಲಿಷ್ ಹಾಡುಗಳನ್ನ ಅದ್ ಹೇಗೆ ಅಷ್ಟು ಚೆನ್ನಾಗಿ ಹಾಡ್ತಾರೆ ಅನ್ನೋದೇ ನನ್ನ ಕಾಡ್ತಿದ್ದ ಪ್ರಶ್ನೆ. ಅವರ ಬಗ್ಗೆ ಒಂದು ಕಡೆ ಹೆಮ್ಮೆ, ಇನ್ನೊಂದ್ ಕಡೆ ಹೊಟ್ಟೆ ಉರಿ.

ಆದ್ರೆ ಮರುದಿನ ಜಿಮ್ ಗೆ ಹೋದವನಿಗೆ ಸಿಕ್ಕಾಪಟ್ಟೆ ಆಶ್ಚರ್ಯ. ಅವನು ಹಾಕೋ ಎಲ್ಲಾ ಹಾಡುಗಳನ್ನ ನಾನು ಆರಾಮಾಗಿ ಹಾಡ್ತಾ ಇದ್ದೀನಿ. ಇಷ್ಟು ದಿನ ಎಲ್ಲರ ಬಾಯನ್ನ ನಾನು ಬಾಯ್ ಬಾಯ್ ಬಿಡ್ಕೊಂಡು ನೋಡ್ತಾ ಇದ್ದೆ. ಆದ್ರೆ ಅವತ್ತು ಎಲ್ಲರೂ ನನ್ನನ್ನ ಬಾಯ್ ಬಾಯ್ ಬಿಡ್ಕೊಂಡು ನೋಡ್ತಾ ಇದ್ರೂ. ಇಷ್ಟು ದಿನ ನನ್ನ ಮನಸ್ಸಿಗೆ ಬರ್ತಾ ಇದ್ದ ಪ್ರಶ್ನೆಗಳು ಇವತ್ತು ಅವರನ್ನ ಕಾಡ್ತಾ ಇದ್ವು. ನಿಮಗೂ ಆಶ್ಚರ್ಯ ಆಗ್ಬೋದು, ಅದ್ ಹೇಗೆ ಇದ್ದಕ್ಕಿದ್ದ ಹಾಗೇ ಎಲ್ಲ ಹಾಡುಗಳನ್ನ ನಾನು ಹಾಡ್ತಾ ಇದ್ದೆ ಅಂತ. ಉತ್ತರ ಸಿಂಪಲ್ಲು, ಅವತ್ತು ಜಿಮ್ಮಲ್ಲಿ ಹಾಕಿದ್ದಿದ್ದು ಅದೇ ಕಿತ್ತೋಗಿರೋ ಕರ್ಕಶ ಇಂಗ್ಲಿಷ್ ಹಾಡಲ್ಲ. ಇಂಪಾದ ಕನ್ನಡ ಹಾಡುಗಳು. ಅದಕ್ಕೆ ನನ್ನ ಬಾಯಲ್ಲಿ ಎಲ್ಲಾ ಹಾಡುಗಳನ್ನ ನಾನು ಆರಾಮಾಗಿ ಹಾಡ್ತಾ ಇದ್ದೆ. ಕನ್ನಡ ಹಾಡುಗಳನ್ನ ಕೇಳಿದ ಕುಶೀಲಿ ಡಂಬಲ್ ನ ಎರಡು ಮೂರು ಸಲ ಜಾಸ್ತೀನೆ ಎತ್ತುತಾ ಇದ್ದೆ. ದಿನಾ ಹಿಂಗೆ ಇರಬಾರದಿತ್ತ ಅಂತ ಅನ್ನಿಸ್ತು. ಅಷ್ಟಕ್ಕೂ ಅಲ್ಲಿ ಹಾಕಿದ್ದ ಹಾಡುಗಳನ್ನ ಈ ಹೊತ್ತಲ್ಲಿ ನೆನಪಿಸ್ಕೊಳ್ಳೆ ಬೇಕಪ್ಪ.
ಅಲ್ಲಿ ಹಾಕಿದ್ದಿದ್ದು ಇತ್ತೀಚಿನ ಹೊಸ ಕನ್ನಡ ಹಾಡಲ್ಲ, ೬೦-೭೦ರ ದಶಕದ ಸ್ಲೋ ಮೋಶನ್ ಹಾಡುಗಳೂ ಅಲ್ಲ. ಅದೆಲ್ಲ 80-90′s ಹಿಟ್ಸ್. `ಜೀವ ಹೂವಾಗಿದೆ, ಭಾವ ಜೇನಾಗಿದೆ’ ಅಂತ ಹಾಡು ಬರ್ತಾ ಇತ್ತು. ನನ್ನ ಜೀವದಲ್ಲಿ ಶಕ್ತಿ ಏರ್ತಾ ಇತ್ತು. ಅಣ್ಣಾವ್ರ ವಾಯ್ಸು ಹಂಗೆ ವರ್ಕ್ ಔಟ್ ಮಾಡೋಕೆ ಇನ್ಪಿರೆಶನ್ ಅನ್ನೋ ಹಾಗಿತ್ತು. ಅದು ಮುಗೀತ ಇದ್ದ ಹಾಗೇ` ಬಾ ನಲ್ಲೆ ಬಾ ನಲ್ಲೆ ಮಧು ಚಂದ್ರಕೆ’. ಹನಿಮೂನ್ ಮಾತ್ರ ಗೊತ್ತಿರೋ ಇಂಗ್ಲಿಶ್ ಪುತ್ರರಿಗೆ ನಮ್ಮ ಮಧುಚಂದ್ರದ ಹಾಡು ಅಷ್ಟು ರುಚಿಸಿಲ್ಲ ಅಂತ ಗೊತ್ತಾಗ್ತಾ ಇತ್ತು. ನಾನು ಮಾತ್ರ ದೂರದಲ್ಲಿ ಟ್ರೆಡ್ ಮಿಲ್ ಮೇಲೆ ಓಡ್ತಾ ಇದ್ದ ಪಿಂಕ್ ಟಿಶರ್ಟ್ ಹುಡುಗಿ ನೋಡಿ ಮಧುಚಂದ್ರವನ್ನ ಎಂಜಾಯ್ ಮಾಡ್ತಾ ಇದ್ದೆ. ಅದು ಮುಗೀತಾ ಇದ್ದಂಗೆ ಶುರುವಾಗಿದ್ದೆ `ಚೆಲುವೆ ಒಂದು ಕೇಳ್ತೀನಿ’.. ವಾ ವಾ ಹಂಸಲೇಖ ಮ್ಯುಸಿಕ್ ನ ಆ ಜಾಗದಲ್ಲಿ ಎಂಜಾಯ್ ಮಾಡ್ತಾ ಇದ್ದಿದ್ದು ನಾನು ಮತ್ತು ಕಷ್ಟ ಪಟ್ಟು ಡಿಬ್ಸ್ ಹೊಡೀತ ಇದ್ದ ಆ ದಾವಣಗೆರೆ ಹುಡುಗ ಮಾತ್ರ. ಇನ್ನೆಲ್ಲರೂ ಅವತ್ತು ಮೂಕ ಪ್ರೇಕ್ಷಕರು. ನಾನು ಎಷ್ಟೋ ಸಲ ಅರ್ಥ ಆಗದೆ ಇದ್ರೂ ಇಂಗ್ಲಿಶ್ ಹಾಡು ಕೇಳ್ತಾ ಇರ್ತೀನಿ. ಆದ್ರೆ ಎಲ್ಲ ಇಂಗ್ಲಿಶ್ ಹಾಡಿನ ಪ್ರೇಮಿಗಳ ಮಧ್ಯೆ ಕನ್ನಡಿಗನಾಗಿ ಕನ್ನಡ ಹಾಡನ್ನ ಎಂಜಾಯ್ ಮಾಡೋದ್ ಇದ್ಯಲ್ಲ, ಅದರ ಮಜಾನೆ ಬೇರೆ. ಇನ್ನೇನ್ ನಾನ್ ಜಿಮ್ಮಿಂದ ಹೊರಡಬೇಕು, ಅಷ್ಟರಲ್ಲಿ ಶುರು ಆಯ್ತು` ಚೆಲುವೆಯೇ ನಿನ್ನ ನೋಡಲು ಮಾತುಗಳು ಬರದವನು… ‘ ಹಾಡು ಕೇಳಿ, ಮಾತು ಬಾರದಂತೆ ನಿಂತಿದ್ದ ಉಳಿದವರನ್ನ ನೋಡಿ, ಸಿರಿಗನ್ನಡಂ ಗೆಲ್ಗೆ ಅಂತ ಮನಸಲ್ಲಿ ಅನ್ಕೊಂಡು, ಹಾಡು ಮುಗಿಯೋ ತನಕ ಅಲ್ಲೇ ಇದ್ದು, ೪ ವರ್ಕ್ ಔಟ್ ಜಾಸ್ತಿ ಮಾಡಿ ಬಂದೆ. ನಂಗೊತ್ತು ನಾಳೆ ಬೆಳಿಗ್ಗೆ ಮತ್ತದೇ ಅರಚುವ ಸಂಗೀತ ನನ್ನ ಕಿವಿಗೆ ಹಿಂಸೆ ಕೊಡುತ್ತೆ ಅಂತ. ಆದ್ರೂ ಅವತ್ತು ಒಂದು ದಿನ ಕನ್ನಡ ಹಾಡುಗಳ ಮಧ್ಯೆ ನಾನೊಬ್ಬನೇ ಹೀರೋ ಆಗಿದ್ದೆ ಅನ್ನೋ ಸಮಾಧಾನ ನಂಗೆ.
ನಾವಾಡುವ ನುಡಿಯೇ ಕನ್ನಡ ನುಡಿ…

                   `ಕಂದಾ ಇದೊಂದು ಚಾಕಲೇಟ್ ತಗೊಳೇ’ ಅಂತ ಸಾವಿರ ಸಲ ಕೇಳಿದ್ರು ಮುಟ್ಟುವ ಜಾಯಮಾನ ಅವಳದಲ್ಲ.. ನಾನ್ ಕೇಳಿದ್ರೆ ತಂದು ಕೊಡು, ನಾನ್ ಕೇಳ್ದಾಗ ಕೊಡ್ಸು ಅಂತ ಹೇಳಿ ಇಲ್ಲಿ ತನಕ ನನ್ನ ಹತ್ರ ಏನೂ ಇಸ್ಕೊಂಡಿಲ್ಲ ಅವಳು. ನಂಗೆ ಆಶ್ಚರ್ಯ, ಅರೆ ಹುಡುಗೀರು ಹೀಗೂ ಇರ್ತಾರ ಅಂತ. ನಂಗೆ ಇದೇ ಬೇಕು, ಅದೇ ಬೇಕು ಅಂತ ಹಠ ಹಿಡಿದು ಕೊಡಿಸ್ಕೊಂಡ ಹುಡುಗೀರು ನನ್ನ ಜೊತೆಗಿದ್ರು. ಆದ್ರೆ ಇವಳು ಅವರೆಲ್ಲರಿಗಿಂತ ವಿಚಿತ್ರ, ವಿಶಿಷ್ಟ. ಅಂದ ಹಾಗೇ ಇವಳು ನನ್ನ ಹುಡುಗಿ. ಇನ್ನೇನು ಸ್ವಲ್ಪ ದಿನದಲ್ಲಿ ನನ್ನ ಕಷ್ಟ ಸುಖಕ್ಕೆ ಜೊತೆಯಾಗೋ ನನ್ನ ಬಾಳ ಸಂಗಾತಿ ಆಗೋ ಹುಡುಗಿ. ಅವಳ ಹೆಸರು ಕೇಳಬೇಡಿ, ಅವಳು ನನಗೆ ಮಾತ್ರ ಅರ್ಪಿತ…

ನಾವಿಬ್ರು ಮದುವೆಯಾಗಬೇಕು ಅಂತ ನಿರ್ಧಾರ ಮಾಡೋಕೆ ಮುಂಚೆ ಕನಿಷ್ಠ 1 ವರ್ಷದಿಂದ ಅವಳು ನಂಗೆ ಫ್ರೆಂಡ್ ಆಗಿ ಪರಿಚಯ, ಆದ್ರೆ ಯಾವತ್ತೂ ಅವಳಿಗೋಸ್ಕರ ನಾನು ಖರ್ಚು ಮಾಡಿದ ಉದಾಹರಣೆ ಇಲ್ಲ. ಹೆಚ್ಚಂದರೆ ಕಾಫಿ ಡೇ ಬಿಲ್, ಆಗಾಗ ಕೊಟ್ಟ ರೋಸ್, ಅದಕ್ಕಿಂತ ಹೆಚ್ಚಂದರೆ ಜೊತೆಗೆ ಮಾಡಿದ ಊಟ, ಅಷ್ಟೇ. ಇನ್ನೇನೆ ಕೇಳಿದ್ರು ನಂಗೆ ಬೇಡ, ನಂಗಿಷ್ಟ ಇಲ್ಲ. ಇದು ಅವಳ ರೆಡಿಮೇಡ್ ಆನ್ಸರ್. ನಂಗೂ ಸಾಕಾಗಿ ಈಗ ಕೇಳೋದೇ ಬಿಟ್ಟಿದೀನಿ. ಕೆಲವು ಹುಡುಗೀರು ಹಾಗಿರ್ತಾರೆ, ಅವರಿಗೆ ಬಾಯ್ ಫ್ರೆಂಡ್ ಅಂದ್ರೆ ಏಟಿಎಂ ಇದ್ದ ಹಾಗೆ. ಕೇಳಿದ್ದೆಲ್ಲಾ ಕೊಡೋ ಅಕ್ಷಯ ಪಾತ್ರೆ. ತನ್ನ ಜೇಬಲ್ಲಿ 10 ರುಪಾಯ್ ಇಲ್ಲದೆ ಇದ್ರೂ ಸಾವಿರ ರುಪಾಯಿ ಸಾಲ ಮಾಡಿ ತಂದು ಅವಳ ಇಷ್ಟವನ್ನ ಪೂರೈಸೋ ಎಷ್ಟು ಮೂರ್ಖ ಹುಡುಗರಿಲ್ಲ..! ಅಂತಹ ಹುಡುಗಿ ಜೊತೆಗಿರೋ ತನಕ ಅಂತಹ ಹುಡುಗರು ಬುದ್ದಿ ಕಲಿಯೋದೇ ಇಲ್ಲ. ನಮಗೆ ನಾವು ಮಾಡ್ತಿರೋದು ತಪ್ಪು ಅಂತ ಅರ್ಥ ಆಗಿ ಇನ್ನು ಮುಂದೆ ಖರ್ಚು ಕಮ್ಮಿ ಮಾಡ್ಬೇಕು ಅಂತ ಡಿಸೈಡ್ ಮಾಡಿದ್ರೆ ಅವಳು ನಮ್ಮನ್ನ ಬಿಟ್ಟು ಹೋಗೋಕೆ ಡಿಸೈಡ್ ಮಾಡಿರ್ತಾಳೆ. ನಮ್ಮಂತ ಹುಡುಗರು ಬಾಯ್ ಬಾಯ್ ಬಡ್ಕೊಬೇಕು. ಅವರು ಇನ್ಯಾರದೋ ಜೊತೇಲಿ ನಮ್ ಜೊತೆ ಮಾಡಿದ ತರದ್ದೇ ಶಾಪಿಂಗ್ ಮಾಡ್ತಿರ್ತಾರೆ. ಪಾಪ ಅವನು ಮಾತ್ರ ಯಾವತ್ತೋ ನಾವು ಬಕ್ರಾ ಆದ ಹಾಗೇ ಆಗ್ತಿರ್ತಾನೆ. ನಮ್ಮಂತ ಸೀನಿಯರ್ ಗಳ ಮಾತು ಕೇಳೋದೂ ಇಲ್ಲ. ಮತ್ಯಾವತ್ತೋ ಒಂದು ದಿನ ಅವನೂ ನಮ್ಮ ಸಂಘದ ಸದಸ್ಯ. ಅಂತಹ ಹುಡುಗೀರು ಮಾತ್ರ ಅಪ್ಪ ತೋರಿಸಿದ ಹುಡುಗನಿಗೆ ಸ್ವಂತ. ನಮ್ಮ ಕಥೆ ಗೋವಿಂದಾ ಗೋವಿಂದ..

`ಆದದ್ದೆಲ್ಲ ಒಳ್ಳೆಯದಕ್ಕೆ ಆಗುತ್ತದೆ’ ಅಂತ ಗೀತ ಸಾರದಲ್ಲಿ ಹೇಳಿದ್ದನ್ನ ನಾನು ಎಷ್ಟೋ ದಿನ ಒಪ್ಪಿರಲಿಲ್ಲ. ಈಗ ಒಪ್ಪಿಕೊಳ್ತೀನಿ..! ಕಾರಣ, ನಾನೇ ಅದಕ್ಕೆ ಬೆಸ್ಟ್ ಎಕ್ಸಾಂಪಲ್. ಯಾಕೆ, ಏನು ಅಂತೆಲ್ಲ ಕೇಳಬೇಡಿ. ಹೇಳುವುದಕ್ಕೂ, ಕೇಳುವುದಕ್ಕೂ ಇದು ಸಮಯವಲ್ಲ. ಸರಿ ಕಮಿಂಗ್ ಟು ದ ಪಾಯಿಂಟ್, ನಾನೀಗ ನಿರಾಳ. ಅವತ್ತೂ ಖರ್ಚು ಮಾಡೋಕೆ ಮನಸ್ಸಿಲ್ಲದಿದ್ರೂ ಅವಳ ಒತ್ತಾಯಕ್ಕೆ ಖರ್ಚು ಮಾಡಬೇಕಿತ್ತು. ಆದ್ರೆ ಇವತ್ತು ನಾನೇ ಖರ್ಚ್ ಮಾಡ್ಬೇಕು ಅಂದುಕೊಂಡರೂ ಅವಳು ಬಿಡೋದಿಲ್ಲ. ಕಾಲಾಯ ತಸ್ಮೈ ನಮಃ…!

ಸರಿ ಸರಿ ಜೊತೆಗಿರುವ ಹುಡುಗಿ ಕೊನೆ ತನಕ ನಿನ್ ಜೊತೆಗಿರ್ತೀನಿ ಅಂತ ಪ್ರಾಮಿಸ್ ಮಾಡಿದಾಳೆ. ಅವಳ ಉಳಿತಾಯ ಯೋಜನೆ ನಮ್ಮ ಮುಂದಿನ ಭವಿಷ್ಯ ಕಟ್ಟಿ ಕೊಡೋದ್ರಲ್ಲಿ ಅನುಮಾನವಿಲ್ಲ. ಅಂದ ಹಾಗೇ ಮೊನ್ನೆ ಅವಳು ನನ್ನ ಕಿವಿಗೆ ಒಂದು ಬಂಗಾರದ ಟಿಕ್ಕಿ ಹಾಕಿ ಹೋಗಿದಾಳೆ. 2 ವರ್ಷದವನಿದ್ದಾಗ ಮುಚ್ಚಿ ಹೋಗಿದ್ದ ಕಿವಿಯ ತೂತು ಅವಳ ಮಾತಿಗೆ ಮತ್ತೆ ಓಪನ್ ಆಗಿ, ಅದರೊಳಗೆ ಅವಳು ಕೊಟ್ಟು ಹೋದ ಟಿಕ್ಕಿ ಭದ್ರ.. ಅಮ್ಮ ಹೇಳ್ತಿರ್ತಾರೆ, `ಎಲ್ರೂ ನಿನ್ ಕಿವಿಗೆ ಹೂ ಇಟ್ಟು ಹೋದ್ರೂ.. ಇವಳೊಬ್ಬಳೆ ಬಂಗಾರ ಇಟ್ಟಿದ್ದು’ ಅಂತ.. ಅದೂ ನಿಜಾನೆ.. ಎನಿವೇ ಎಲ್ಲಾ ಒಳ್ಳೆಯದಾದ್ರೆ ಸ್ವಲ್ಪ ದಿನದಲ್ಲಿ ನಮ್ಮಿಬ್ಬರಿಗೂ ಮದುವೆ. ಅದೂ ರಿಜಿಸ್ಟರ್ ಮ್ಯಾರೇಜ್..! ಯಾಕೆ ಅಂದ್ರ.. ಖರ್ಚು ಮಾಡಬಾರದು ಕಣ್ರೀ… ಏನಂತೀರಿ… ?

                       ಳು ತಿಂಗಳಾಯ್ತು, ಬ್ಲಾಗ್ ನಲ್ಲಿ ಒಂದು ಅಕ್ಷರ ಬರೆದು. ಮತ್ತೆ ಬರೀತೀನಿ ಅಂತ ಹೇಳಿದವನಿಗೆ ಬರೆಯೋಕೆ ಆಗ್ಲೇ ಇಲ್ಲ. ಎಷ್ಟೋ ಸಲ ಟೈಮ್ ಇರ್ಲಿಲ್ಲ. ಟೈಮ್ ಇದ್ದಾಗ ಬರೆಯೋ ಮನಸಿರಲಿಲ್ಲ. ಈಗ ಟೈಮ್ ಮಾಡ್ಕೊಂಡಿದೀನಿ, ಮನಸು ಸಹ ಬರಿ ಬರಿ ಅಂತ ಹೇಳ್ತಾ ಇದೆ. ಸೋ ಹೊಸ ವರ್ಷದಲ್ಲಿ ಒಂದು ಹೊಸ ರೆಸ್ಯುಲೂಶನ್. ಇನ್ ಮೇಲೆ ಎಷ್ಟೇ ಕಷ್ಟ ಆದ್ರೂ ಬರೀತೀನಿ ಅನ್ನೋದು… ಮನಸು ನನಗೆ ಹೇಳಿದ್ದನ್ನ ನಾನು ಅಕ್ಷರ ರೂಪಕ್ಕೆ ತರ್ತೀನಿ. ನಿಮಗೆ ಟೈಮ್ ಇದ್ದಾಗ ಓದಿ. ಅನಿಸಿದ್ದನ್ನ ಹೇಳಿ. ನಂಗೂ ನನ್ನ ಸರಿ ತಪ್ಪುಗಳು ಗೊತ್ತಾಗುತ್ತೆ.

               ನಾನು ಈ ಸಲಾನೂ ಕೆಲವು ರೆಸಲ್ಯೂಶನ್ ಹಾಕ್ಕೊಂಡಿದೀನಿ ಅನ್ನೋದು ಮೊದಲ ವಿಶೇಷ. ಪ್ರತಿ ವರ್ಷ  ಅನ್ಕೊತಿದ್ದೆ, ಆದ್ರೆ ಪಾಲಿಸ್ತಿರ್ಲಿಲ್ಲ. ಆದ್ರೆ ಈ ಸಲ ಹಾಗಾಗಬಾರದು. ಎಷ್ಟೇ ಕಷ್ಟ ಆದ್ರೂ ಪಾಲಿಸ್ತೀನಿ. ನನ್ನ ರೆಸಲ್ಯೂಶನ್ ಗೆ ನಾನೇ ಮರ್ಯಾದೆ ಕೊಡದಿದ್ರೆ ಹೇಗೆ, ಆಲ್ವಾ? ಏನದು ರೆಸಲ್ಯೂಶನ್ ಅಂದ್ರ..? ಹೇಳ್ತೀನಿ ಕೇಳಿ..
- ಮೊದಲ ಬಹಳ ಕಷ್ಟದ ರೆಸಲ್ಯೂಶನ್… ಇನ್ ಮೇಲೆ ಸಿಕ್ಕಾಪಟ್ಟೆ ದುಡ್ಡು ಖರ್ಚು ಮಾಡಲ್ಲ. ಸುಖಾ ಸುಮ್ನೆ ಅದು ಇದು ಅಂತ ದುಡ್ಡು ವೇಸ್ಟ್ ಮಾಡಲ್ಲ. ಯಾವ್ ಯಾವ್ದುಕ್ಕೋ ಮನಸು ಬಂದ ಹಾಗೆ ಹಣ ಉಡೀಸ್ ಮಾಡಲ್ಲ. ಒಟ್ಟಾರೆ ದುಂದು ವೆಚ್ಚಕ್ಕೆ ದೊಡ್ಡ ಬ್ರೇಕ್ ಹಾಕ್ಬೇಕು ಅಂತ ಡಿಸೈಡ್ ಮಾಡಿದಿನಿ… ಅದೇನಾಗುತ್ತೋ ನಾನೂ ನೋಡ್ತೀನಿ..!!!
- ಇನ್ನು ಎರಡನೆಯ ರೆಸಲ್ಯೂಶನ್… ತಲೆ ಮೇಲೆ ತಲೆ ಬಿದ್ರು ಸಿಕ್ಕ ಸಿಕ್ಕ ಹುಡುಗೀರ ವಿಚಾರಕ್ಕೆ ಹೋಗಲ್ಲ. ಈ ಹುಡುಗೀರ ದೆಸೇಲಿ ನಂಗೆ ನೆಮ್ಮದಿ ಇಲ್ಲ. ಸೋ ನೋ ನ್ಯೂ ಗಲ್ ಫ್ರೆಂಡ್ಸ್..!  ನಾನ್ ನಿನ್ನ ಮದುವೆ  ಆಗ್ತೀನಿ ಅಂತ ಬಂದು ಈಗ ನನ್ನ ಜೊತೆಗಿರುವ ಹುಡುಗಿ ಮಾತ್ರ ನಂಗೆ ಸ್ವಂತ. ಈ ವರ್ಷ ಅವಳ ಜೊತೆ ನನ್ನ ಎಂಗೇಜ್ಮೆಂಟ್ ಆದ್ರೂ ಮಾಡಿಕೊಳ್ಳಲೇ ಬೇಕು… ನಿಮ್ ಆಶಿರ್ವಾದನು ಇರಲಿ..
- ಮೂರನೆಯ ರೆಸಲ್ಯೂಶನ್… ವರ್ಷ ಮುಗಿಯೋದರೊಳಗೆ ನನ್ನ ಕೈಯಲ್ಲಿ ನನ್ನ ಸ್ವಂತ ಕಾರಿನ ಸ್ಟೇರಿಂಗ್ ಇರ್ಬೇಕು. ಅಂದ್ರೆ ಒಂದು ಕಾರ್ ತಗೋಬೇಕು. ಹೊಸಾದೋ, ಹಳೆದೋ ಗೊತ್ತಿಲ್ಲ.. ನಂದು ಅಂತ ಹೇಳ್ಕೋಳೋಕೆ ನನ್ ಹತ್ರ ಒಂದು ಕಾರ್ ಇರ್ಬೇಕು ಅಷ್ಟೇ. ಆದಷ್ಟು ಬೇಗ ತಗೋಳಪ್ಪ ಅಂತ ಹಾರೈಸ್ಬೇಕಪ್ಪ ನೀವೆಲ್ಲ… !
- ಇನ್ನು  ನಾಲ್ಕನೆಯದು… ಪ್ರಮುಖವಾದುದು..! ಹೊಸ ಕೆಲಸ ನನ್ನ ಜೊತೆಗಿದೆ, ಹೊಸ ಜವಾಬ್ದಾರಿ ನನ್ನ ಹೆಗಲೇರಿದೆ. ನಮ್ಮ ಹೊಸ ನ್ಯೂಸ್ ಚಾನೆಲ್ ಇನ್ನೇನು ಸ್ವಲ್ಪ ದಿನದಲ್ಲಿ ಜನರೆದುರು ಬರುತ್ತೆ. ಅದರಲ್ಲಿ ಬರುವ ಒಟ್ಟು ಜಿ ಆರ್ ಪಿ ಯಲ್ಲಿ ವಾರಕ್ಕೆ ಕನಿಷ್ಠ 10 ರಿಂದ 15 ನನ್ನ ಪಾಲಿರ್ಬೇಕು. ಅದಕ್ಕೆ ಎಷ್ಟು ಕಷ್ಟ ಆದ್ರೂ ಹಠ ಬಿಡಬಾರದು. ಇದರ ಅರ್ಥ ,ಪ್ರೊಫೆಶನಲ್ ಲೈಫ್ ನ ಸಖತ್ ಸೀರಿಯಸ್ ಆಗಿ ತಗೋಬೇಕು ಅನ್ನೋದು. ಈ ವರ್ಷ ನನ್ನ ವೃತ್ತಿ ಜೀವನದ ಟರ್ನಿಂಗ್ ಪಾಯಿಂಟ್ ಆಗ್ಬೇಕು. ಆಗೇ ಆಗುತ್ತೆ…
- ಕೊನೆಯ very important ರೆಸಲ್ಯೂಶನ್… ಜೀವ ಹೋದ್ರೂ ನಾನು 2 ವರ್ಷ ಪ್ರೀತಿಸಿದ ಆ ಕೃತಜ್ಞತೆ ಇಲ್ಲದ, ಕಲ್ಲು ಮನಸ್ಸಿನ ಹೆಣ್ಣಿಗೆ ಫೋನ್ ಆಗ್ಲಿ, ಮೆಸೇಜ್ ಆಗ್ಲಿ ಮಾಡಲ್ಲ. ಅವಳು ಮಾಡಿದ್ರೆ ರಿಸೀವ್ ಮಾಡಲ್ಲ. ಅವಳ ಮೆಸೇಜ್ ಗೆ ರಿಪ್ಲೇ ಮಾಡಲ್ಲ. ಇವತ್ತು ನನ್ನ ಜೊತೆ ಫುಲ್ ಮೀಲ್ಸ್ ಇದೆ. ಚಿತ್ರಾನ್ನದ ಮೇಲೆ ಯಾಕೆ ಪ್ರೀತಿ ಇಟ್ಕೊಬೇಕು..? ಆಲ್ವಾ? ಕೈ ಮೇಲಾದ ಗಾಯದ ಗುರುತು ಕಾಣಬಾರದು ಅಂತ ಅದರ ಮೇಲೆ tattoo  ಹಾಕಿಸ್ಕೊಂಡು ನಾನ್ ದೊಡ್ಡ ಕ್ವೀನ್ ಅಂತ ಓಡಾಡೋ ಹೆಣ್ಣಿಗಿಂತ, ಆ ಕ್ವೀನ್ ಮಾಡಿ ಹೋದ ಮನಸಿನ ಗಾಯಕ್ಕೆ ಮದ್ದಾಗಿರ್ತೀನಿ ಅಂತ ನನ್ನ ಜೊತೆಗಿರೋ ಜೀವವೇ ಬೆಸ್ಟ್ ಆಲ್ವಾ? ಸೋ ಈ ಹೊಸ ವರ್ಷದಿಂದ ಹಳೆಯ ಹುಡುಗಿಯ ನೆನಪಿಲ್ಲ, ಅವಳು ಕೊಟ್ಟ ನೋವಿನ ಕನವರಿಕೆ ಇಲ್ಲ. ಈಗ ಅವಳ ಮೊಬೈಲ್ ನಂಬರ್ರೇ ನನ್ನ ಮೊಬೈಲ್ ನಲ್ಲಿ ಇಲ್ಲ ಬಿಡಿ..!
               ಇದಿಷ್ಟು ಈ ವರ್ಷದ ಮಹಾನ್ ರೆಸಲ್ಯೂಶನ್ಸ್.. ಎಷ್ಟು ಪಾಲಿಸ್ತೀನೋ ಗೊತ್ತಿಲ್ಲ… ಆದ್ರೆ ನಾಲ್ಕನೇ ಮತ್ತು ಕೊನೆಯ ರೆಸಲ್ಯೂಶನ್ ಮಾತ್ರ ಜೀವ ಹೋದ್ರೂ ಪಾಲಿಸ್ತೀನಿ… ಬರೀತಾ ಇದ್ರೆ ನಾನ್ ಬರೀತಾನೆ ಇರ್ತೀನಿ… ಇನ್ ಸ್ವಲ್ಪ ಹೊತ್ತು ಲ್ಯಾಪ್ ಟಾಪ್ ಕುಟ್ತಾ ಇದ್ರೆ ನಮ್ಮ ಬಂದು ನಂಗೆ ಕುಟ್ಟೋ ಚಾನ್ಸ್ ಇದೆ… ಇವತ್ತಿಗೆ ಇಷ್ಟು. ನೀವೂ ರೆಸಲ್ಯೂಶನ್ ಏನಾದ್ರು ಹಾಕ್ಕೊಂಡಿದ್ರೆ ಪಾಲಿಸ್ರಪ್ಪ. ನಿಮ್  ಒಳ್ಳೇದಕ್ಕೆ…! ಅಂದ ಹಾಗೆ ನಾನೆಂದೂ ಪಾಲಿಸದ ನನ್ನ ಇನ್ನೊಂದು ರೆಸಲ್ಯ್ಯೂಶನ್ ಒಂದಿದೆ… ಈ ವರ್ಷದಿಂದ ಗ್ಯಾರಂಟಿ ಜಿಮ್ ಗೆ ಹೋಗ್ತೀನಿ…! ಕನಿಷ್ಠ 10 ಕೆಜಿ ತೂಕ ಜಾಸ್ತಿ ಮಾಡ್ಕೊತೀನಿ..!  Please dont laugh.. Im serious.. :-)

                      ತ್ತೆ ಬರೀತಿದೀನಿ… ಇನ್ನು ಮುಂದೆ ಬರೀತಾ ಇರ್ತೀನಿ.. ಈ ಹಿಂದೆ ಬರೆದಿದ್ದರಲ್ಲಿ ಎಷ್ಟೋ ಹೊಗೆ ಹಾಕಿಸ್ಕೊಂಡು ಬಿಡ್ತು.. ಕಳೆದ ೪-೫ ತಿಂಗಳು ನನ್ನ ಜೀವನದ ಅತ್ಯಂತ ಕೆಟ್ಟ ಕೆಟ್ಟ ದಿನಗಳು. ಆದ್ರೂ ಆತ್ಮ ವಿಶ್ವಾಸ ಕುಗ್ಗಿಲ್ಲ.. ನಾನು ನನ್ನನ್ನ ನಂಬಿದವನು. ಜೀವಕ್ಕೆ ಜೀವದಂತಿದ್ದ ತಂಗಿ ನನ್ನ ಅರ್ಧ ಕುಗ್ಗಿಸಿ ಹೋಗಿಬಿಟ್ಟಳು… ಜೀವಕ್ಕೆ ಜೀವದಂತಿದ್ದ ನನ್ನ `ಅಪ್ಪಿ’ಗೆ ನಾನು ಬೇಡವೇ ಬೇಡ ಅನ್ನಿಸಿ ಬಿಟ್ಟಿದೆ. ಅಲ್ಲಿಗೆ ಅರ್ಧ ಸತ್ತು ಹೋದೆ ಅಂದುಕೊಂಡೆ.. ಆದ್ರೂ ಮನಸ್ಸು ಗಟ್ಟಿ ಮಾಡಿಕೊಂಡು ಮೇಲೆದ್ದೆ. ನನ್ನ ಜೀವನವೇ ಆಗಿ ಹೋಗಿದ್ದ ಸುವರ್ಣ ನ್ಯೂಸ್  ಬಿತ್ತು ಬಂದು ಬೇರೆ ಸಂಸ್ಥೆಯಲ್ಲಿ ಕೆಲಸ ಮಾಡ್ತಿದೀನಿ. ಕೆಲಸ ಗೊತ್ತಿದೆ. ಎಲ್ಲೇ ಇದ್ರೂ ಬದುಕ್ತೀನಿ, ಅದೂ ಯಶಸ್ವಿಯಾಗಿ ಬದುಕ್ತೀನಿ ಅನ್ನೋ ನಂಬಿಕೆ ಇದೆ. ಅದೇ ನಂಗೆ ಅನ್ನ ಹಾಕ್ತಾ ಇರೋದು.
ಬರೆಯೋಕೆ ತುಂಬಾ ಇದೆ… ಇನ್ನು ಮುಂದೆ ನಿರಂತರವಾಗಿ ಬರೀತಾ ಇರ್ತೀನಿ. ನೀವು ಓದಿ, ತಿದ್ದಿ, ಬುದ್ದಿ ಹೇಳಿ…

ತ್ತತ್ರ 2 ತಿಂಗಳೇ ಕಳೀತು, ನಾನು ನನ್ನ ಬ್ಲಾಗ್ ನಲ್ಲಿ ಏನಾದರೂ ಗೀಚಿ. ಇತ್ತೀಚಿಗೆ ಸ್ವಲ್ಪ ಬ್ಯುಸಿ ಆಗ್ಬಿಟ್ಟಿದೆ ಜೀವನ. ಈ ಮೀಡಿಯಾನೇ ಹಿಂಗೆ ಬಿಡಿ. ಎಷ್ಟು  ಮಾಡಿದರೂ ಮುಗಿಯದ ಕೆಲಸ, ತೀರದ ಹಸಿವು. ಸರಿ ಸರಿ ಈ ಎರಡು ತಿಂಗಳಲ್ಲಿ ಏನೆಲ್ಲಾ ಆಗೋಯ್ತು ಅಲ್ವ? ಸಕ್ಕತ್ತಾಗಿ ಗೋಳಾಡಿಸಿದ ವರ್ಷ ಕಳೆದೆ ಹೋಯ್ತು. ಹೊಸ ವರ್ಷಾಚರಣೆ ಈ ಸಲ ಆಫೀಸ್ ನಲ್ಲೆ ಕಳೆದು ಹೋಯ್ತು. ಎಲ್ಲಾ ಸಂಭ್ರಮದಿಂದ ಕುಣೀತಾ ಇದ್ರೆ ನಾನು ಸ್ಪೆಷಲ್ ಪ್ರೋಗ್ರಾಮ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗ್ಬಿಟ್ಟಿದ್ದೆ… ಆದ್ರೂ ಚೆನ್ನಾಗಿತ್ತು ಬಿಡಿ. . ಅಂದ ಹಾಗೆ ಹೊಸ ವರ್ಷದಲ್ಲಿ ಏನೇನೋ ಅನ್ಕೊಂಡಿದಿನಿ. ಆಗುತ್ತೋ ಬಿಡುತ್ತೋ ಸೆಕೆಂಡರಿ, ಆದ್ರೂ ಪ್ರಯತ್ನ ಅಂತೂ ಮಾಡಲೇ ಬೇಕಲ್ವ..? ನನ್ನ ಮುಂದಿರೋ ಮೊದಲ ಕನಸು ಅಪ್ಪ ಅಮ್ಮನ್ನ ಬೆಂಗಳೂರಿಗೆ ಕರ್ಕೊಂಡು ಬಂದು ನಂ ಜೊತೇಲೆ ಇಟ್ಕೋಳೋದು. ಇನ್ನೇನು ತಂಗಿಯ ಮದುವೆ ದಿನಗಳು ಹತ್ತಿರ ಆಗ್ತಿವೆ. ಅವಳಿಗೂ ನಂ ಜೊತೆ ಒಂದಷ್ಟು ದಿನ ಖುಶಿಕ್ಹುಸಿಯಾಗಿ ಇರ್ಬೇಕು ಅನ್ನೋ ಆಸೆ. ನಂಗೂ ೩ ಹೊತ್ತೂ ಹೋಟೆಲ್ ಊಟ ಮಾಡಿ ಸಾಕಾಗಿ ಹೋಗಿದೆ. ನಿಸರ್ಗ, ಪರಿಸರ ಅಂದ್ರೆ ವಾವ್ ಅಂತಿದ್ದೆ. ಈಗ ನಿಸರ್ಗ ಅಂದ್ರೆ ವ್ಯಾಕ್ ಅನ್ನೋ ಹಾಗಾಗಿದೆ. ಯಾಕೆ ಅಂದ್ರ..? ನಮ್ ಆಫೀಸ್ ಪಕ್ಕದಲ್ಲಿರೋ ಹೋಟೆಲ್ ಹೆಸರು ನಿಸರ್ಗ. 3 ವರ್ಷದಲ್ಲಿ ಕನಿಷ್ಠ 2 ಕ್ವಿಂಟಾಲ್ ಫುಡ್ ಆ ಹೋಟೆಲ್ಲಲ್ಲೇ ತಿಂದಿರೋದು. ಸಕತ್ ಕಾಸ್ಟ್ಲಿ, ಆದ್ರೂ ಅನಿವಾರ್ಯ. ದಿನಕ್ಕೆ 100 ರುಪಾಯ್ ಅನ್ಕೊಂಡ್ರೂ  3 ವರ್ಷದಲ್ಲಿ 1 ಲಕ್ಷ ರುಪಾಯ್ ಊಟಕ್ಕೆ ಹಾಕಿದಿನಿ. ಅದೇ ದುದ್ದಿದ್ದಿದ್ರೆ ನ್ಯಾನೋ ಕಾರ್ ಆದ್ರೂ ತಗೊಬಹುದಿತ್ತು… :-( ಪುಕ್ಷಟ್ಟೆ ಕೊಟ್ರೂ ನಾನದನ್ನ ತಗೋಳಲ್ಲ ಬಿಡಿ… )ಎನಿವೇ ಹಸಿದಾಗ ಅನ್ನ ಹಾಕಿದ ಆ ನಿಸರ್ಗಕ್ಕೂ ನನ್ನದೊಂದು ಥ್ಯಾಂಕ್ಸ್…

ಕೆಲವು ಗೆಳೆಯರು ಕಾಮೆಂಟ್ ಹಾಕ್ತ ಇರ್ತಾರೆ, ಏನಾದ್ರೂ ಬರಿ ಗುರು ಅಂತ. ಬರೀಬೇಕು ಅನ್ಕೊಂಡು ಕೂರ್ತೀನಿ, ಬರುದ್ರಾಯ್ತು ಬಿಡು ಅಂತ ಸುಮ್ನಾಗ್ತಿನಿ. ಕೆಲಸದಲ್ಲಿರೋ ಹುರುಪು ಈ ಬರೆಯೋದರಲ್ಲಿ ಯಾಕ್ ಬರಲ್ಲ ಅಂತ. ನನ್ನ ಹುಡುಗಿ ಕೈ ಕೊಟ್ಟು ಹೋದಾಗ ದಿನಾ ಕೂತ್ಕೊಂಡು ಪೇಜ್ ಗಟ್ಟಲೆ ಬರೀತಿದ್ದೆ. ಈಗ ನಾನ್ನದೆ ಸೂಪರ್ ಅನುಭವಗಳನ್ನ ಬರೆಯೋಣ ಅಂದ್ರೆ ಅದನ್ನ ಎಂಜಾಯ್ ಮಾಡೋಕೆ ಟೈಮ್ ಇಲ್ಲ, ಇನ್ನು ಬರೆದು ಗುಡ್ಡೆ ಹಾಕೋದು ಯಾವಾಗ…? ಎನಿವೇ.. ಹೊಸ ವರ್ಷದ ಪ್ಲಾನ್ ಗಳ ಬಗ್ಗೆ ಹೇಳ್ತಿದ್ದೆ ಅಲ್ವ…? ನಂಗೆ ಒಂದು ವಿಚಿತ್ರ ಚಟ ಇದೆ, ಈ ಬೆಸ್ಟ್ ದಿನಾಂಕಗಳ ದಿನ ಏನಾದ್ರೂ ಮಾಡೋದು, ಏನಾದ್ರೂ ತಗೋಳೋದು.. ಹೀಗೆ… ನಾನ್ ಹುಟ್ಟಿದ್ದು, 8-6-86, ಮನೆ ಕಟ್ಟಿದ್ದು ೦08-08-08, 09-09-09  ಗೆ ಜೀವನ ಬರ್ಬಾದಾಗಿತ್ತು, 10-10-10 ಕ್ಕೆ ಏನೂ ಮಾಡಕ್ಕಾಗಿಲ್ಲ, ಸೋ 11-11-11 ಕ್ಕೆ ಮೂರು ಪ್ಲ್ಯಾನ್ ಇದೆ. ತಂಗಿ ಮದುವೆ ಮಾಡೋದು, ಪುಟ್ಟದೊಂದು ಕಾರ್ ತಗೋಳೋದು ( ನ್ಯಾನೋ ಅಲ್ಲ), ನನ್ ಹುಡುಗಿ ಮನೇಲಿ ಕಿರಿಕ್ ಆದ್ರೆ ರಿಜಿಸ್ಟರ್ ಮ್ಯಾರೇಜ್ ಆಗೋದು.!!! ಇವೆಲ್ಲಾ ಆಗ್ಲಿ ಅಂತ ಪ್ಲೀಸ್ ಬೇಡ್ಕೊಬೇಕು ನೀವೆಲ್ಲ… ಪ್ಲಾನ್ಸ್ ಹೇಳಿದೀನಿ. .. ನಿಮಗೆ ಏನನ್ಸುತ್ತೋ ಹೇಳ್ರಪ್ಪ… ಯಾರು ಮಕ್ಕುಗೀಬೇಡಿ, ಆಡೋ ವಯಸ್ಸು ಮದುವೆ ಯಾಕೋ ಅಂತ… ಅದು ನಂಗೂ ಅರ್ಥ ಆಗುತ್ತೆ, ನನ್ನಮ್ಮ, ನನ್ ಹುಡುಗಿ ಇಬ್ರಿಗೂ ಅರ್ಥ ಆಗಲ್ಲ. ಯಾವತ್ತೋ ಆಗೋದು, ಆಗಿ ಹೋಗ್ಲಿ ಬಿಡಿ… ನಮಗೆ ಮದುವೆ ಆದ್ರೂ ಒಂದೇ, ಆಗದೆ ಇದ್ರೂ ಒಂದೇ… ಜೀವನ, ಜೀವನ ಶೈಲಿ ಸ್ವಲ್ಪಾನೂ ಬದಲಾಗಲ್ಲ… ನಾಯಿ ಬಾಲಕ್ಕೆ ದೆಬ್ಬೆ ಕಟ್ಟಿದ್ರೆ ಬಾಲ ನೆಟ್ಟಗಾಗುತ್ತಾ.? ನೋ ಚಾನ್ಸ್.. ನಿಮಗೂ ನಾನ್ ಹೇಳೋದಿಷ್ಟೇ… ಇರೋ ಅಷ್ಟು ದಿನ ಲೈಫ್ ಎಂಜಾಯ್ ಮಾಡಿ… ನಾಳೆ ಹೇಗಿರುತ್ತೋ ಯಾವನಿಗ್ ಗೊತ್ತು… ಬಿ ಹ್ಯಾಪಿ…

ಗ ನಾನು ನನ್ನ ಹತ್ತನೇ ಕ್ಲಾಸಿನ ದಸರಾ ರಜಾದಲ್ಲಿದ್ದೆ. ಆ ರಜಕ್ಕೆ ನಾನು ಅಜ್ಜಿ ಮನೆಗೆ ಹೋಗಿರಲಿಲ್ಲ. ಹಾಗಾಗಿ ಅಮ್ಮನ ಜೊತೆ ಮನೇಲೆ ಇದ್ದೆ. ನಾನು ಪರೀಕ್ಷೆ ಟೈಮಲ್ಲೇ ಓದೋ ಮಗಾ ಅಲ್ಲ. ಅಂತಾದ್ರಲ್ಲಿ ರಜದಲ್ಲಿ ಓದ್ತೀನ? ನೋ ಚಾನ್ಸ್… ಆದ್ರೆ ನಮ್ಮ ಹೋಟೆಲ್ ಗೆ ಊಟಕ್ಕೆ ಬರ್ತಿದ್ದ ಗಡ್ಡ ನಾಗೇಶ್ ಮಾಮ ನನ್ನನ್ನ ಅವರ ರೂಮಿಗೆ ಕರ್ಕೊಂಡ್ ಹೋಗಿ ಒಂದು ಪೆಟ್ಟಿಗೆ ಓಪನ್ ಮಾಡಿ ಅದ್ರಲ್ಲಿಂದ ನೂರಾರು ಪುಸ್ತಕ ತೋರ್ಸಿದ್ರು. ಇದೆಲ್ಲ ಓದಿದಿರಾ ಅಂತ ನಾನು ಆಶ್ಚರ್ಯದಿಂದ ಕೇಳಿದ್ದೆ. ಅವರೂ ಹೌದಪ್ಪ, ಓದಕ್ಕೆ ಅಂತ ತಂದಮೇಲೆ ಓದಬೇಕಲ್ಲ ಅಂದಿದ್ರು. ನಿಂಗೆ ಓದೋ ಅಭ್ಯಾಸ ಇಲ್ವಾ ಅಂತ ಕೇಳ್ದಾಗ ` ನಾನ್ ಸ್ಕೂಲ್ ಪುಸ್ತಕಾನೇ ಓದಲ್ಲ, ಇದನ್ನೆಲ್ಲಾ ಎಲ್ಲಿ ಓದ್ತೀನಿ’ ಅಂದಿದ್ದೆ. ಅದಕ್ಕವರು, ಇದು ಸ್ಕೂಲ್ ಬುಕ್ಸ್ ತಾರಾ ಅಲ್ಲ ಕಣೋ ದಡ್ಡ. ಇದು ಬುದ್ದಿ ಬೆಳೆಯೋಕೆ, ಪ್ರಪಂಚ ಜ್ಞಾನಕ್ಕೆ ಅಂದಿದ್ರು. ಮೊದಲು ಈ ಪುಸ್ತಕ ಓದು ಅಂತ ನನ್ನ ಕೈಗೊಂಡು ಪುಸ್ತಕ ಕೊಟ್ಟು ಕಳ್ಸಿದ್ರು. ನಾನ್ ಓದಿದಂಗೆ ಅಂತ ಮನಸಲ್ಲೇ ಅನ್ಕೊಂಡು ಮನೆಗೆ ಹೋಗಿ ಅದೆಲ್ಲೋ ಒಂದ್ ಕಡೆ ಬಿಸಾಕ್ದೆ. ಅದಾಗಿ ವಾರ ಬಿಟ್ಟು ಮತ್ತೆ ನಾಗೇಶ್ ಮಾಮ ಕೇಳಿದ್ರು, `ಕೀರ್ತಿ ಆ ಪುಸ್ತಕ ಓದಿದ್ಯೇನೋ’ ಅಂತ. `ಇಲ್ಲ ಮಾಮ ಓದಬೇಕು’ ಅಂತ ಹೇಳ್ದಾಗ, `ಅದು ನಿಮ್ಮಂತ ಹುಡುಗರು ಓದಲೇ ಬೇಕಾದ ಪುಸ್ತಕ ಕಣೋ’ ಅಂತ ಬಯ್ದಿದ್ರು. `ಯಾಕೆ ಈ ಮನುಷ್ಯ ಈ ಪುಸ್ತಕ ಓದಕ್ಕೆ ಇಷ್ಟು ಹಠ ಮಾಡ್ತಿದಾರೆ’ ಅಂತ ಮನಸಲ್ಲೇ ಬಯ್ಕೊಂಡು, ಆಗಿದ್ದಾಗ್ಲಿ ಅಂತ ಅವತ್ತು ರಾತ್ರಿ ಮಲ್ಕೊಂಡು ನಿದ್ದೆ ಕಣ್ಣಲ್ಲಿ ಆ ಪುಸ್ತಕದ ಮೇಲೆ ಕಣ್ಣಾಡಿಸಿದೆ. ಮುನ್ನುಡಿ ಓದ್ತಾ ಇದ್ದ ಹಾಗೆ ನನ್ನ ನಿದ್ದೆ ಹಾರಿ ಹೋಯ್ತು. ಮಲಗಿದ್ದವನು ಎದ್ದು ಕೂತೆ. 198 ಪುಟಗಳ ಪುಸ್ತಕ ಮುಂದಿನ 6-7 ಗಂಟೆಯ ಒಳಗೆ ನನ್ನ ತಲೆಗೆ ಹೊಕ್ಕಿ ಕೂತಿತ್ತು. ಸಿಂಗಲ್ ಸಿಟ್ಟಿಂಗ್ ನಲ್ಲಿ ನಾನು ಆ ಪುಸ್ತಕ ಓದಿ ಮುಗಿಸಿದ್ದೆ. ನಾನು ನನ್ನ ಜೀವನದಲ್ಲಿ ಓದಿದ ಪುಸ್ತಕ ನನ್ನ ರಕ್ತ ಕುದಿಯೋ ಹಾಗೆ ಮಾಡಿತ್ತು. ನನ್ನೊಳಗಿನ ರಾಷ್ಟ್ರ ಪ್ರೇಮಿ ಆ ದಿನ ರೊಚ್ಚಿಗೆದ್ದಿದ್ದ. ಬೆಳಿಗ್ಗೆ ಎದ್ದು ಅಜ್ಜಿ ರೂಮಿನಲ್ಲಿದ್ದ ನೆಹರೂ ಫೋಟೋ ನನ್ನ ಆಕ್ರೋಶಕ್ಕೆ ಬಲಿಯಾಗಿತ್ತು. ಶಾಲಾ ಪುಸ್ತಕಗಳನ್ನು ಬಿಟ್ಟು ಬೇರೆ ಪುಸ್ತಕಗಳನ್ನು ಓದುವ ನನ್ನ ಚಟಕ್ಕೆ ಮುನ್ನುಡಿ ಬರೆದ ಆ ಪುಸ್ತಕ-ಹಿಮಾಲಯನ್ ಬ್ಲಂಡರ್.

ಆ ಪುಸ್ತಕದ ಶಕ್ತಿ ಅಂತದ್ದು, ಆ 198 ಪುಟಗಳ ಪುಸ್ತಕ ನನ್ನ ಪ್ರತಿ ಜರ್ನಿಯ ಸಂಗಾತಿ. ನಾನು ಎಲ್ಲಿಗೆ ಹೋದ್ರೂ, ನನ್ನ ಜೊತೆಗೆ ಯಾವುದೇ ಪುಸ್ತಕವಿದ್ರೂ, ಹಿಮಾಲಯನ್ ಬ್ಲಂಡರ್ ನನ್ನ ಜೊತೆಗಿರುತ್ತೆ. ಇಲ್ಲೀ ತನಕ ಕನಿಷ್ಠ ೧೫ ಸಲ ನಾನು ಆ ಪುಸ್ತಕವನ್ನ ಓದಿದ್ದೇನೆ. ಆ ಪುಸ್ತಕದ ಇಂತದ್ದೇ ಪುಟದಲ್ಲಿ ಇದರ ಬಗ್ಗೆನೇ ಇದೆ ನಾನು ಹೇಳಬಲ್ಲೆ. ಅಷ್ಟರ ಮಟ್ಟಿಗೆ ಅದು ನನ್ನೊಳಗೆ ಬೆರೆತು ಹೋಗಿದೆ. ಅಷ್ಟಕ್ಕೂ ಆ ಪುಸ್ತಕದಲ್ಲಿ ಏನಿದೆ…? ಅದು 1962ರ ಭಾರತ-ಚೈನಾ ಯುದ್ದದ ಚಿತ್ರಣ. ಭಾರತ ಆ ಯುದ್ದವನ್ನ ಹೀನಾಯವಾಗಿ ಸೋತಿದ್ಯಾಕೆ ಅನ್ನೋದನ್ನ ಎಳೆಎಳೆಯಾಗಿ ಬಿಚ್ಚಿಡತ್ತೆ ಆ ಪುಸ್ತಕ. ಆ ಯುದ್ದದಲ್ಲಿ ಭಾರತೀಯ ಸೈನಿಕರು ಪಟ್ಟ ಪಾಡು, ಎರಡೂ ಕಾಲಿಗೆ ಬಲಗಾಲಿನ ಶೂ ಹಾಕಿ ಅವರು ಮಾಡಿದ ಯುದ್ದ, ಹೊಟ್ಟೆಗೆ ಹಿಟ್ಟಿಲ್ಲದೆ ಕಡೆಯ ಬುಲೆಟ್ ಶತ್ರುವಿನೆಡೆಗೆ ಹಾರಿಸುವ ತನಕ ಅವರು ನಡೆಸಿದ ಹೋರಾಟ, ಹಿಮದ ಬೀಡಲ್ಲಿ ಹರಿದ ರಕ್ತದೋಕುಳಿ, ಚೈನಾ ಸೈನಿಕರ ಅಟ್ಟಹಾಸ, ಎಲ್ಲವನ್ನೂ ಕಿಚ್ಚೆಬ್ಬಿಸುವಂತೆ ನಮ್ಮೆದುರು ಒಂದೊಂದೇ ಪುಟವಾಗಿ ತೆರೆದುಕೊಳ್ಳುವ ಪುಸ್ತಕ ಹಿಮಾಲಯನ್ ಬ್ಲಂಡರ್.

ಆ ಯುದ್ದದ ಸಂಧರ್ಭದಲ್ಲಿ ಬ್ರೆಗೆಡಿಯರ್ ಆಗಿದ್ದ ಜಾನ್ ಪಿ ದಳವಿ ತಾವು ಪಟ್ಟ ಪಾಡನ್ನ ಹೇಳುವುದರ ಜೊತೆಗೆ ಆ ಸಮಯದಲ್ಲಿ ದೇಶ ಆಳುತ್ತಿದ್ದ ರಾಜಕಾರಣಿಗಳ ಬಣ್ಣ ಬಯಲು ಮಾಡುತ್ತಾರೆ. ಅಷ್ಟು ದೊಡ್ಡ ಶತ್ರು ರಾಷ್ಟ್ರ ನಮ್ಮ ಮೇಲೆ ಎರಗಿ ಬರುವಾಗ ನಮ್ಮ ದೇಶದ ಪ್ರಧಾನಿ ಆ ಯುದ್ದಕ್ಕೆ ಹೇಗೆ ಸಿದ್ದವೇ ಆಗಿರದೆ `ಇಂಡಿಯ-ಚೀನಾ ಭಾಯಿ ಭಾಯಿ’ ಅಂತ ಓಡಾಡ್ತಿದ್ರು ಅನ್ನೋದನ್ನ ನಮಗೆ ತಿಳಿಸಿಕೊಡ್ತಾರೆ. ಹೇಗೆ ನಮ್ಮ ಸೈನ್ಯದ ಅಧಿಕಾರಿಗಳು ಚೀನಾದ ಯುದ್ದ ಕೈದಿಗಳಾಗಿ ಯಮ ಯಾತನೆ ಅನುಭವಿಸಿದರು ಅನ್ನೋದನ್ನ ತಿಳಿಸಿಕೊಡ್ತಾರೆ. ಇದೆಲ್ಲದರ ಜೊತೆಗೆ ನಮ್ಮ ದೇಶಕ್ಕಾದ ಅವಮಾನವನ್ನ ಸಹಿಸಲಾಗದ ಪರಿಸ್ಥಿತಿಯ ಚಿತ್ರಣ ಕೊಡ್ತಾರೆ. ಅದೆಲ್ಲವನ್ನೂ ನಿಜವಾಗಿ ಅನುಭವಿಸಿದಂತಾಗೋದು ಜಾನ್ ಪಿ ದಳವಿ ಅವರ ಪುಸ್ತಕವನ್ನ ನಮ್ಮದೇ ಕನ್ನಡ ಭಾಷೆಯಲ್ಲಿ ಓದಿದಾಗ. ಹಿಮಾಲಯನ್ ಬ್ಲಂಡರ್ ಪುಸ್ತಕವನ್ನ ಅದೇ ಹೆಸರಿನಲ್ಲಿ ಕನ್ನಡಿಗರಿಗೆ ಉಡುಗೊರೆಯಾಗಿ ನೀಡಿದ್ದಾರೆ ಹಿರಿಯ ಪತ್ರಕರ್ತ ರವಿ ಬೆಳಗೆರೆಯವರು. ಅವರಿಗೆ ಎಲ್ಲ ಕನ್ನಡಿಗರ ಪರವಾಗಿ ಕೋಟಿ ಕೋಟಿ ಥ್ಯಾಂಕ್ಸ್…

ಇಲ್ಲಿಯ ತನಕ ಈ ಪುಸ್ತಕವನ್ನ ನಾನು 16  ಜನರಿಗೆ ಉಡುಗೊರೆಯಾಗಿ ನೀಡಿದ್ದೇನೆ. ಆ ಪುಸ್ತಕ ಯಾರಿಗೆ ಕೊಟ್ಟರೂ ನಾನು ವಾಪಸ್ ಇಸ್ಕೊಳಲ್ಲ. ಅದರ ಬದಲಿಗೆ ಇನ್ಯಾರಿಗಾದ್ರೂ ಆ ಪುಸ್ತಕವನ್ನು ಓದೋಕೆ ಕೊಡಲು ಹೇಳ್ತೀನಿ. ಅಷ್ಟರ ಮಟ್ಟಿಗೆ ಅದು ಪ್ರತಿ ಭಾರತೀಯನೂ ಓದಲೇ ಬೇಕಾದ ಪುಸ್ತಕ. ಮೊನ್ನೆ ಊರಿಗೆ ಹೋದಾಗ ಮತ್ತೆ ಅದನ್ನ ಕಂಪ್ಲೀಟ್ ಆಗಿ ಓದಿದ ಮೇಲೆ ನನ್ನ ಬ್ಲಾಗ್ ನಲ್ಲಿ ಅದರ ಬಗ್ಗೆ ಬರೀಬೇಕು ಅನ್ನಿಸಿ ಬರೀತಿದೀನಿ. ಆ ಪುಸ್ತಕದ ಬೆಲೆ ಬರೀ 125 ರುಪಾಯಿ. ಆದ್ರೆ ಅದರಲ್ಲಿನ ಪ್ರತಿ ಅಕ್ಷರ ಲಕ್ಷ ಲಕ್ಷ ಬೆಲೆ ಬಾಳುತ್ತೆ. ನಿಮ್ಮೊಳಗೊಬ್ಬ ರಾಷ್ಟ್ರಪ್ರೇಮಿ ಇದ್ರೆ, ಅಂದಿನ ಯುದ್ದದ ಚಿತ್ರಣಗಳು ಕಣ್ಣಿಗೆ ಕಟ್ಟಬೇಕಾದರೆ, ಅವತ್ತಿನ ಹೊಲಸು ರಾಜಕೀಯ ವ್ಯವಸ್ಥೆ ಬಗ್ಗೆ ತಿಳ್ಕೊಬೇಕು ಅಂದ್ರೆ ಈಗಲೇ ಹತ್ತಿರದ ಬುಕ್ ಶಾಪ್ ಗೆ ಹೋಗಿ ಆ ಪುಸ್ತಕ ತಂದು ಓದಲು ಕೂತ್ಕೊಳಿ. ನಾನು ಚಾಲೆಂಜ್ ಮಾಡ್ತೀನಿ`ನೀವೂ ಆ ಪುಸ್ತಕವನ್ನ ಸಿಂಗಲ್ ಸಿಟ್ಟಿಂಗ್ ನಲ್ಲಿ ಓದಿ ಮುಗಿಸ್ತೀರಿ…’ಯಾಕಂದ್ರೆ ಇದು `ಸಹಸ್ರ ಯೋಧರ ನೆತ್ತರಗಾಥೆ…’

ಮಂತ್ರಿ ಮಾಲ್ ನ ಯೂನಿವರ್ಸಲ್ ಶಾಪ್ ನಲ್ಲಿ ನೋಕಿಯಾದ ಯಾವ್ದೋ ಹೊಸ ಮೊಬೈಲ್ ನೋಡ್ತಾ ಇದ್ದೆ. ಮುಂದಿನ ಹಲ್ಲಿಗೆ ಏನೋ ಸಿಕ್ ಹಾಕ್ಕೊಂಡಿದೆ ಅನ್ನಿಸ್ತು. ನಾಲಿಗೆಯಿಂದ ಹೊರ ತೆಗೆಯೋ ಪ್ರಯತ್ನ ಮಾಡ್ದೆ. ಉಪಯೋಗ ಆಗ್ಲಿಲ್ಲ, ಹಾಗಾಗಿ ಕಿರುಬೆರಳಿನ ತೆಳು ಉಗುರಿನಿಂದ ಹಲ್ಲಿನ ಗ್ಯಾಪ್ ಗೆ ಕೈ ಹಾಕ್ದೆ. `ಓ ಮೈ ಗಾಡ್’ ಕೈಗೆ ಬಂದಿದ್ದು ನನ್ನ ಮುಂದಿನ ಹಲ್ಲಿನ ಮಧ್ಯ ಭಾಗ. ಶಿವನೆ ಶಂಭು ಲಿಂಗ. ಪಕ್ಕದಲ್ಲಿದ್ದ ನನ್ನ ಫ್ರೆಂಡ್ ಗೆ ಹಲ್ಕಿರಿದು ಕೇಳ್ದೆ ಏನಾಗಿದೆ ನೋಡು ಅಂತ. ಅವಳ ಮುಖದಲ್ಲೋ ಆಶ್ಚರ್ಯ, ಅಸಹ್ಯ!  `ಅಯ್ಯೋ ಹಲ್ಲು ಮುರಿದಿದೆ ಕಣೋ ‘ ಅಂದ್ಲು. ತಕ್ಷಣ ಅಲ್ಲಿಂದ ಹೊರಟವನು ಮಲ್ಲೇಶ್ವರಂ ಕಡೆ ಬೈಕ್ ತಿರುಗಿಸ್ದೆ. ಅಲ್ಲೊಂದು ಡೆಂಟಲ್ ಕ್ಲಿನಿಕ್ ಬೋರ್ಡ್ ಕಣ್ಣಿಗೆ ಬಿತ್ತು. ಪಟ ಪಟ ಅಂತ ಓಡಿ ಹೋಗಿ ಹೆಸರು ಬರೆಸಿ ಕೂತವನಿಗೆ ಒಳಗೊಳಗೇ ತಳಮಳ,ಏನಾಗುತ್ತೋ ಅಂತ. ಅಲ್ಲಿ ಕೂತವನಿಗೆ ಸುಮ್ಮನೆ ಕೂರಲಾಗದೆ ಆ ಪುಡಿಯಾಗಿದ್ದ ಹಲ್ಲನ್ನ ಮತ್ತೆ ಅದೇ ಜಾಗಕ್ಕೆ ಸೇರಿಸಲು ಪ್ರಯತ್ನಿಸಿ ಸಕ್ಸಸ್ ಆದೆ. ಆ ಗ್ಯಾಪ್ ಫಿಲ್ ಮಾಡಿಬಿಟ್ಟಿದ್ದೆ ನಾನು. ಅದಾಗಿ 2 ನಿಮಿಷಕ್ಕೆ ಆ ತೆಳ್ಳಗಿನ ಹುಡುಗಿಯೊಬ್ಬಳು  `ಬನ್ನಿ ಕೀರ್ತಿ’  ಅಂತ ಒಳಗೆ ಕರೆದಳು. ಒಳಗೆ ಹೋಗಿ ಕೂತ ತಕ್ಷಣ `ವಾಟ್ಸ್ ಯುವರ್  ಪ್ರಾಬ್ಲಂ ‘ಅನ್ನೋ ಹಾಗೆ ಮುದ್ದಾಗಿ ಕೇಳಿದಳು. ನಾನು `ಹಿಂಗಿಂಗೆ, ಹಿಂಗಿಂಗೆ, ಹಂಗಾಗಿ ನಾನ್ ಇಲ್ಲಿಗೆ ‘ ಅಂತೆಲ್ಲಾ ಹೇಳ್ದೆ. ಅವಳು ಆ ಫಿಲ್ ಆಗಿದ್ದ ಮುರಿದ ಹಲ್ಲನ್ನ ತೆಗೆಯೋಕೆ ಎಷ್ಟೇ ಪ್ರಯತ್ನ ಪಟ್ರೂ ಆಗ್ಲಿಲ್ಲ. ಒಂದು ಹತ್ತು ನಿಮಿಷ ಹೊರಗಿರಿ, ಎರಡು ಹಲ್ಲು ಡ್ಯಾಮೇಜ್ ಆಗಿದೆ 1100 ರೂಪಾಯ್ ಆಗುತ್ತೆ ಓಕೆ ನ ಅಂತ ಕೇಳಿದಳು.` ಅಯ್ಯೋ ತಾಯಿ ಖರ್ಚಿನ ಚಿಂತೆ ಬಿಡು ಮೊದಲು ನನ್ನ ಹಲ್ಲು ಸರಿ ಮಾಡು’ ಅನ್ನೋ ಹಾಗೆ ಮುಖ ನೋಡಿ ಹೊರಗೆ ಬಂದು ಕೂತು ಮತ್ತೆ ನನ್ನ ಕಿರುಬೆರಳ ಉಗುರನ್ನ ಹಲ್ಲಿನ ಗ್ಯಾಪ್ ಗೆ ಹಾಕ್ದೆ. ಮತ್ತೆ ಆ ಮುರಿದ ಹಲ್ಲು ನನ್ನ ಕೈ ಸೇರಿತ್ತು. ಸರಿ ಇನ್ನು ಮಂಗಾಟ ಬೇಡ ಅನ್ಕೊಂಡು ಹಲ್ಲನ್ನ ಕೈಲಿ ಹಿಡಿದು ಒಳಗೆ ಹೋದವನಿಗೆ ಆ ಹಲ್ ಕೀಳೋ ಚೇರ್ ಮೇಲೆ ಕೂರಕ್ ಹೇಳಿದ್ರು.

Scared Keerthi in Dental Clinic

ಈಗ ಬಂದವಳು ಬೇರೆ ಹುಡುಗಿ. ಮೊದಲು ಚೆಕ್ ಮಾಡಿದವಳೇ ನೋಡಕ್ ಚೆನ್ನಾಗಿದ್ಳು. ಆದ್ರೆ ಅವಳು ಜ್ಯೂನಿಯರ್, ಅವಳೇ ಟ್ರೀಟ್ಮೆಂಟ್ ಕೊಟ್ಟಿದ್ರೆ ನನ್ನ ಹಲ್ಲು ಅಪ್ಪನಾನೆ ಸರಿ ಆಗ್ತಿರ್ಲಿಲ್ಲ  ಅನ್ನೋದು ಆಮೇಲ್ ಗೊತ್ತಾಯ್ತು. ಅದೇನೇ ಇರ್ಲಿ ಈಗ ಬಂದಾಕೆ ಆಶಾ ಅಂತ ಗೊತ್ತಾಗೋಕೆ ಜಾಸ್ತಿ ಹೊತ್ತು ಬೇಕಾಗಲಿಲ್ಲ. ಈ ಆಶಾ ಬಾಳ ಬಯ್ತಾಳಪ್ಪ. ಹಲ್ಲಿಗೆ ಹತ್ತಿ, ಅದು ಇದು ಎಲ್ಲಾ ತುರುಕಿ `ಏನ್ರಿ ಬೇಗ ಬರಕ್ಕಾಗಲ್ವ, ಗಂಟೆ 9 ಆಯ್ತು. ನಾವ್ ಮನೆಗ್ ಹೋಗೋದ್ ಬೇಡ್ವ ‘ ಅಂತೆಲ್ಲಾ ಬಯ್ತಾನೆ ಇದ್ಲು. ನಾನು ಏನು ಮಾತಾಡೋ ಹಾಗೂ ಇಲ್ಲ. ನನ್ನ ಬಾಯಿಗೆ ಆಸ್ಪತ್ರೇಲಿ ಇರೋದನ್ನೆಲ್ಲ ತುರುಕಿ ಕೂರ್ಸಿದಾಳೆ. `ಆ ‘ಅಂದ್ರು ಬಯ್ತಾರೆ, `ಊ’ ಅಂದ್ರು ಬಯ್ತಾಳೆ. ಕರ್ಮ ಅನ್ಕೊಂಡು ನನ್ನ ಮೊಬೈಲ್ ನಲ್ಲಿ ಮೆಸೇಜ್ ಟೈಪ್ ಮಾಡಿ ಮಾಡಿ ಅವಳ ಜೊತೆ communicate ಮಾಡ್ದೆ. ಸರಿ ಸರಿ ಅಂತ ಅದೇನೇನೋ ಆಯುಧಗಳನ್ನ ಹಿಡ್ಕೊಂಡ್ ಬಂದ್ಲಪ್ಪ, ನನ್ ಮೀಟರ್ ಆಫ್ ಆಗಿದ್ದು ಅವಾಗ್ಲೇ. `ಆ’ ಮಾಡಿ ಅಂತ ಆ ಡ್ರಿಲ್ಲಿಂಗ್ ಮಿಶಿನ್ ನ ಬಾಯೊಳಗೆ ಹಾಕಿ ಗಿರ್ರ್ ಅನ್ಸಿದ್ಲಪ್ಪ,ಬಳ್ಳಾರಿ ಗಣಿ ನೆನಪಾಗಿ ಹೋಯ್ತು.  ನೂರ್ ಲೋಕ ಕೂತ ಜಾಗದಲ್ಲೇ ನೋಡಿದ ಹಂಗಾಗಿತ್ತು ನಂಗೆ. ಆ ತಾಯಿ ಬಯ್ತಾ ಬಯ್ತಾ ನನ್ನ ಹಲ್ಲು ಕೊರೀತಾನೆ ಇದ್ಲು. ನೋವಾಗ್ತಾ ಇದ್ದೀಯ ಅಂತ ಕೇಳ್ತಾ ಕೇಳ್ತಾ `ಹೂ’ ಅಂದಾಗೆಲ್ಲ `ಸ್ವಲ್ಪ ಹೊತ್ತು ಸ್ವಲ್ಪ ಹೊತ್ತು ‘ಅಂತ ಕೊರೀತಾನೆ ಇದ್ಲು. ಕೊನೆಗೆ ಅದೇನೋ ಫೆವಿಕಾಲ್ ತರದ್ದೊಂದು ಗಮ್ ತಂದು ಸೂಜಿ ತರದ ಆಯುಧದ ತುದಿಗೆ ತಾಗಿಸಿ ನನ್ನ ಬಾಯೊಳಗೆ ತುರುಕ್ತಾ ಇದ್ಲು. ನನಗೇನು ಗೊತ್ತಾಗ್ತಾ ಇಲ್ಲ. ನನ್ನ ಬಾಯಿ, ಹಲ್ಲು ಎಲ್ಲ ಅವಳ ಕೈಗೆ ಕೊಟ್ಟು ಶಸ್ತ್ರ ದಾನ ಮಾಡಿದವನ ಹಾಗೆ ಕೂತಿದ್ದೆ. ಒಂದು ಗಂಟೆ ಸರ್ಕಸ್ ಮಾಡಿ ಬಾಯಿಗೆ ತುರುಕಿದ್ದ ಗುಜರಿ ಐಟಂ ಎಲ್ಲ ಹೊರಗ ತೆಗೆದ್ಲಪ್ಪ. ನಂಗೆ ಅವಾಗ್ಲು ಬಾಯ್ ಮುಚ್ಚೋಕ್ ಆಗ್ತಿಲ್ಲ. ಅಷ್ಟು ಹೊತ್ತು ಬಾಯಿ ತೆರೆದಿಟ್ಟಿದ್ದರ ಪರಿಣಾಮ ಅದು. ಇಷ್ಟೆಲ್ಲಾ ಮುಗಿಯೋದ್ರೊಳಗೆ ಗಂಟೆ ಹತ್ತಾಗಿತ್ತು. ಎರಡು ಹಲ್ಲಿಗೂ ಫಿಲ್ಲಿಂಗ್ ಮಾಡಿ, ಬೆಳಿಗ್ಗೆ ಬನ್ನಿ ಪಾಲಿಶ್ ಮಾಡ್ತೀನಿ. ಜಾಸ್ತಿ ಮಾತಾಡಬೇಡಿ, ಸಾಂಬಾರ್ ತಿನ್ಬೇಡಿ, ಓನ್ಲಿ ಮೊಸರನ್ನ ಅಂತೆಲ್ಲ ವಾರ್ನಿಂಗ್ ಮಾಡಿ ಕಳ್ಸಿದ್ಲು. ಸರಿ ತಾಯಿ ಅನ್ಕೊಂಡು ಆಫೀಸಿಗೆ ಹೋದೆ.

ಮಾರನೆ ದಿನ ಬೆಳಗ್ಗೆ ಮತ್ತೆ ಅವಳ ಹತ್ರ ಹೋಗಿ ಕೂತೆ. ಸರಿ ಕೂತ್ಕೊಳಿ ಅಂತ ಹೇಳಿ ಮತ್ತೆ ಈಗ ಡ್ರಿಲ್ಲಿಂಗ್ ಮಿಶಿನ್ ತರದ್ದೇ ಪಾಲಿಶ್ ಮಿಶಿನ್ ತಗೊಂಬಂದು ಹಲ್ಲನ್ನ ಪಾಲಿಶ್ ಮಾಡ್ತಾ ಇದ್ರೆ ನಂಗೆ ನಮ್ ಮನೆ ಕಟ್ಟಬೇಕಾದರೆ ಟೈಲ್ಸ್ ಪಾಲಿಶ್ ಮಾಡ್ತಾ ಇದ್ದಿದ್ದು ನೆನಪಾಗ್ತಾ ಇತ್ತು. ತಾಯಿ, ಒಂದರ್ಧ ಗಂಟೆ ಒಳಗೆ ಮಿಶಿನ್ ನಲ್ಲಿ ಮಾಡಿದ ಪಾಲಿಶ್ ಮುಗಿಸಿ ಸಾಲ್ಟ್ ಪೇಪರ್ ತರದ ವಸ್ತು ಏನನ್ನೋ ತಂದು ಹಲ್ಲಿಗೆ ಹಾಕಿ ತಿಕ್ತಾ ಇದ್ರೆ ನಂಗೆ ನನ್ನ ಹಲ್ಲಿನ ಮೇಲೆ ನಖಶಿಖಾಂತ ಕೋಪ ಉಕ್ಕುತಾ ಇತ್ತು. ಹೆಂಗೋ ಅಷ್ಟೆಲ್ಲ ಪ್ರಯತ್ನದ ಫಲವಾಗಿ ಅವಳು ನನ್ನ ಕೈಗೆ ಕನ್ನಡಿ ಕೊಟ್ಟು` ನೋಡ್ಕೊಳಿ’ ಅಂದಾಗ ನನ್ನ ಹಲ್ಲು ಮೊದಲಿನ ಹಾಗೇ ಆಗಿತ್ತು ಅನ್ನೋದಷ್ಟೇ ಸಮಾಧಾನದ ವಿಚಾರ.

ಇಷ್ಟೆಲ್ಲಾ ಚೆನ್ನಾಗಿ ಸರಿ ಮಾಡಿದಾಳೆ. ಮೊದಲೇ ನನ್ನ ಹಲ್ಲಿನ ಸಮಸ್ಯೆ ಜಾಸ್ತಿ. ಎಲ್ಲಾ ಹಲ್ಲೂ ಸರಿ ಮಾಡ್ಸಿ ಬಿಡೋಣ ಅನ್ಕೊಂಡು ಟೋಟಲ್ ಪ್ಯಾಕೇಜ್ ಲೆಕ್ಕದಲ್ಲಿ ಎಷ್ಟ್ ಖರ್ಚಾಗ್ಬೋದು ಹೇಳ್ತೀರಾ ಅಂದೇ. ಫುಲ್ ಕುಶೀಲಿ ಅವರ ಸೀನಿಯರ್ ಮೇಡಂ ಒಬ್ಬರನ್ನ ಕರೆದು ಮೇಡಂ `ಯಾವ್ದೋ ಕುರಿ ಕಡೀರಿ’ ಅನ್ನೋ ಹಾಗೇ ನನ್ನ ಹಲ್ಲುಗಳನ್ನ ತೋರ್ಸಿದ್ಲು. ಅವರೂ ಎಲ್ಲಾ ನೋಡಿ ಮತ್ತೊಬ್ಬ ಬ್ಯೂಟಿಫುಲ್ ಹುಡುಗಿ ಕೈಲಿ ಎಲ್ಲ ಸೇರಿ ಎಷ್ಟಾಗುತ್ತೆ ಅಂತ ಬರೆದು ಕಳ್ಸಿದ್ರು. 2 ಹಲ್ಲು ರೂಟ್ ಕೆನಲ್, 3 ಫಿಲ್ಲಿಂಗ್, 2 ಬ್ರಿಡ್ಜ್, 5 ಕ್ಯಾಪ್ ಎಲ್ಲಾ ಸೇರಿ 28 ರಿಂದ ಮೂವತ್ತು ಸಾವಿರ!!!! ಎಲ್ಲ ತೆಗ್ಸಿ ಸೆಟ್ ಹಾಕಿಸಿ ಬಿಡೋಣ ಅನ್ನೋ ಅಷ್ಟು ಕೋಪ ಬಂದಿತ್ತು. ಆದರೂ ನನ್ನ ಹೆಂಡತಿ ಆಗೊಳನ್ನ ನೆನಸ್ಕೊಂಡು ಇವತ್ತಲ್ಲ ನಾಳೆ ಮಾಡ್ಸಿದ್ರಾಯ್ತು ಅನ್ಕೊಂಡು ಅಲ್ಲಿಂದ ಕಾಲು ಕಿತ್ತೆ. ನನ್ನ ಜೊತೆಗೆ ಬಂದಿದ್ದ ನನ್ನ ಫ್ರೆಂಡ್ ರವಿ,` ಏನಣ್ಣ, ಒಂದು ತಿಂಗಳ ಸಂಬಳ ಪೂರ್ತಿ ಹಲ್ಲು ರೆಡಿ ಮಾಡ್ಸೋಕೆ ಬೇಕಲ್ಲ’ ಅಂತ ರೇಗಿಸ್ತಿದ್ದ. ನಾನು ರೆಡಿಯಾದ ಹಲ್ಲನ್ನ ನಾಲಿಗೆಯಲ್ಲಿ ಸವರುತ್ತಾ , ಎಲ್ಲ ನಿನ್ನಿಂದಾನೆ ಆಗಿದ್ದು ಅಂತ ಶಾಪ ಹಾಕ್ತಾ ಇದ್ದೆ. ಈಗ ಮನಸ್ಸಿನೊಳಗೆ  ಒಂದೇ ಪ್ರಶ್ನೆ, ` 30 ಸಾವಿರ ಕೊಟ್ಟು ಹಲ್ಲು ಸರಿ ಮಾಡಿಸಬೇಕಾ?’

ಬ್ಬಕ್ಕೆ ಊರಿಗೆ ಹೋಗಿದ್ದೆ… ಹಬ್ಬದ ಹೆಸರು ದೀಪಾವಳಿ.. ಆದ್ರೆ ಊರವರೆಲ್ಲ ಹೊಡೀತಿದ್ದ ಪಟಾಕಿ ಹಾವಳಿ ಬಿಟ್ರೆ ಹಬ್ಬದಲ್ಲಿ  ಗತ್ತು ಗಮ್ಮತ್ತು ಏನು ಕಾಣಿಸಲೇ ಇಲ್ಲ. ನಾನು 3-4 ವರ್ಷದಿಂದ ದೀಪಾವಳಿ ಹಬ್ಬಕ್ಕೆ ಊರಿಗೆ ಹೋದವನಲ್ಲ. ನಾನ್ ಯಾವ ಮನೇಲಿ ಬಾಡಿಗೆಗೆ ಇರ್ತೀನೋ ಆ ಓನರ್ ಮನೇಲೆ ನನ್ನ ದೀಪಾವಳಿ ಹಬ್ಬ ಮುಗಿದು ಹೋಗ್ತಿತ್ತು. ಆದ್ರೆ ಈ ಸಲ ಹಾಗಾಗಬಾರದು ಅಂತ ನನ್ನ ತಂಗಿಯ ಕಣ್ಣೀರಿನ ಆಹ್ವಾನಕ್ಕೆ ಕರಗಿ ಊರಿಗೆ ಹೋಗಿದ್ದೆ. ಆದ್ರೆ ನಾನ್ ನೋಡಿದ, ನಾನ್ ನಿರೀಕ್ಷಿಸಿದ್ದ ದೀಪಾವಳಿ ಇದಲ್ಲ ಅಂತ ನಂಗೆ ಹೋದ ಸ್ವಲ್ಪ ಹೊತ್ತಿಗೇ ಗೊತ್ತಾಗಿ ಬಿಡ್ತು.

ಯಾಕೆ ಹೀಗೆ ಅಂದ್ರ..? ಇನ್ನೀನ್ರಿರಿ… ಇನ್ನೂ ನೆನಪಿದೆ ನಂಗೆ ಅಜ್ಜಿ ಮನೆಯ ಆ ದೀಪಾವಳಿ. ಹಬ್ಬದ ಹಿಂದಿನ ದಿನ ಮನೆ ಮನೆಗೆ ಬರ್ತಿದ್ದ ಅಂಟಿಗೆ ಪಿಂಟಿಗೆಯವರು, ಅವರ ಜೊತೆಯಲ್ಲಿ ಬರುತ್ತಿದ್ದ ಹುಲಿ ವೇಷಧಾರಿಗಳು. ಅಮ್ಮನ ಸೆರಗ ಹಿಂದೆ ಅವಿತು ಬೆದರಿದ ಕಂಗಳು ಅವರನ್ನ ನೋಡ್ತಾ ಇದ್ದಿದ್ದು ಈಗೆಲ್ಲಿದೆ?  ಹಬ್ಬದ ಹಿಂದಿನ ದಿನ ನಮ್ಮ ಮನೆಯಲ್ಲಂತೂ ಎಲ್ಲರೂ ಗಡದ್ದಾಗಿ ನಿದ್ದೆ ಮಾಡ್ತಿದ್ರು. ನಮ್ಮ ಮನೇಲಿ ಮಾತ್ರ ಅಲ್ಲ, ಎಲ್ಲರ ಮನೇಲೂ ಗೊರಕೆಯದ್ದೇ ಅಟ್ಟಹಾಸ.

ನಂಗೆ ಅಜ್ಜಿ ಮನೆಯಲ್ಲಿ ಮಾಡ್ತಿದ್ದ ಆ ದಿನಗಳ ದೀಪಾವಳಿ ನೆನಪು ಮಾಡ್ಕೊಬೇಕು ಅನ್ನಿಸ್ತು. ಅವತ್ತಿನ ಹಬ್ಬ ಎಲ್ಲ ಕನಿಷ್ಠ 3-4 ದಿನದ ಸಂಭ್ರಮ. ಒಂದೊಂದು ದಿನಕ್ಕೂ ಒಂದೊಂದು ವಿಶೇಷ. ನಮ್ಮ ಫ್ಯಾಮಿಲಿ, ಚಿಕ್ಕಪ್ಪ-ಚಿಕ್ಕಮ್ಮಂದಿರು, ದೊಡ್ಡಪ್ಪ-ದೊಡ್ಡಮ್ಮ, ಅವರ ಮಕ್ಕಳು, ದೂರದ ಬಾಂಬೆಯಿಂದ ಚಾಕಲೇಟು, ಬಿಸ್ಕೆಟ್ಟು, ಹೊಸ ಬಟ್ಟೆ ತರ್ತಿದ್ದ ಮಾವ ಎಲ್ಲರೂ ಸೇರಿ ಹಬ್ಬ ಆಚರಿಸೋ ಆ ಮಜಾನೆ ಬೇರೆ ಇತ್ತು. ಎಲ್ಲರೂ ಸೇರಿ ಎಣ್ಣೆ ಸ್ನಾನ ಮಾಡೋದೇನು, ವರ್ಷದಲ್ಲಿ ನಡೆದಿದ್ದನ್ನೆಲ್ಲಾ ಮೆಲುಕು ಹಾಕೋದೇನು, ಹೋಳಿಗೆ ಹೂರಣ ಕದ್ದು ಅಜ್ಜಿ ಹತ್ರ ಬೈಸಿಕೊಲ್ಲೋ ಮಜಾ,  ಮೋಟುದ್ದ ಪಟಾಕಿ ಹಿಡಿದು ಅದನ್ನ ಹಚ್ಚೋಕೆ ನಾವೆಲ್ಲಾ ಒದ್ದಾಡ್ತಾ ಇದ್ದಿದ್ದು, ದೊಡ್ಡಣ್ಣ ಅದನ್ನ ಕಿತ್ಕೊಂಡು ಢಂ ಅನ್ನಿಸಿದಾಗ ಧಾರಾಕಾರವಾಗಿ ಕಂಗಳಿಂದ ಬರ್ತಿದ್ದ ನೀರು… ಅಜ್ಜನಿಗಿಡ್ತಿದ್ದ ಎಡೆ, ತುಳಸಿ ಗಿಡದ ಸುತ್ತಲಿನ ದೀಪಗಳು, ಗದ್ದೆ ಬದಿಯಲ್ಲಿ ನೆಟ್ಟು ಬರ್ತಿದ್ದ ದೀಪದ ದೊಂದಿಗಳು. `ದೀಪ್ ದೀಪೋಳ್ಗೆ’ ಅಂತ ಕೂಗ್ತಿದ್ದ ಕೂಗುಗಳು.   ವಾ ವಾ ಆ ತರದ ದೀಪಾವಳಿ ಇನ್ಯಾವತ್ತೂ ನನ್ನ ಜೀವನದಲ್ಲಿ ಮರಳಿ ಬರೋಕೆ ಸಾಧ್ಯಾನೇ ಇಲ್ಲ. ಆ ದಿನಗಳನ್ನ ನಾನ್ಯಾಕೋ ತುಂಬಾ ಮಿಸ್ ಮಾಡ್ಕೊಳ್ತಾ ಇದ್ದೀನಿ ಅನ್ನಿಸ್ತಿದೆ.

ನಂಗೆ ಇನ್ನೂ ನೆನಪಿದೆ, ಅದರ ಹೆಸರು ಗೋ ಪೂಜೆ ಅಂತ. ಮನೇಲಿರೋ ದನ ಕರುಗಳಿಗೆಲ್ಲ ತಿಕ್ಕಿ ಸ್ನಾನ ಮಾಡಿಸಿ ಅರಿಶಿನ ಕುಂಕುಮ ಇಟ್ಟು, ಲೋಟದ ಮೇಲ್ಬಾಗಕ್ಕೆ ಬಣ್ಣ ಅದ್ದಿ ಅವುಗಳ ಮೈ ಮೇಲೆಲ್ಲಾ ಹಚ್ಚಿ, ಕೋಡಿಗೆ ರಿಬ್ಬನ್ ಕಟ್ಟಿ , ಬಾಳೆಹಣ್ಣು ಕುತ್ತಿಗೆಗೆ ಕಟ್ಟಿ ಅವುಗಳ ಎದುರು ಪಟಾಕಿ ಹೊಡೆದು ಬೆದರಿಸಿ ಓಡಿಸೋದಿದ್ಯಲ್ಲ, ಅದರ ಮಜಾನೆ ಬೇರೆ. ಆಮೇಲೆ ಯಾರ್ ಯಾರದೋ  ಮನೆಯ ದನದ ಕುತ್ತಿಗೆಯಲ್ಲಿದ್ದ ಬಾಳೆ ಹಣ್ಣು ಕಿತ್ತು ತಿಂದ್ರಂತೂ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಸಂಭ್ರಮ. ಆ ಮಜಾ ಈಗೆಲ್ಲಿದೆ?

ಈ ಸಲದ ದೀಪಾವಳಿ ಕೇಳಿ ಹೇಗಿತ್ತು ಅಂತ. ಮನೆಗೆ ಮಗಾ ಬಂದಿದ್ದು ನಮ್ಮಂಗೆ ಹಬ್ಬಕ್ಕಿಂತ ದೊಡ್ಡ ಸಂಭ್ರಮ. ನನ್ನ ಜೊತೆಗೆ ಈ ಸಲದ ಹಬ್ಬಕ್ಕೆ ನನ್ನ ಗೆಳೆಯ ಮುದ್ದೀನು ಕರ್ಕೊಂಡ್ ಹೋಗಿದ್ದೆ, ಬಾರೋ ನಮ್ಮನೇಲಿ ಹಬ್ಬ ಮಾಡೋಣ ಅಂತ.ಊರಿಗೆ ಹೋದ ದಿನ ಪೂರ್ತಿ ನಾನು ಅವರಿವರ ಮನೆಗೆ ಹೋಗಿ ಮಾತಾಡಿಸ್ಕೊಂಡು ಬರೋದ್ರಲ್ಲೇ ಕಳೆದು ಹೋಯ್ತು. ಸಂಜೆ  ಹಬ್ಬ ಬದಿಗಿಟ್ಟು ನಮ್ಮಮ್ಮ ಮಗನಿಗೆ ಇಷ್ಟ ಅಂತ ಕಬಾಬ್, ನೀರ್ ದೋಸೆ, ಚಿಕನ್ ಗ್ರೇವಿ, ಅದೂ ಇದೂ ಅಂತ ಮಾಡಿದ್ರು. ದೇವರ ಕೋಣೆಯಿಂದ ದೇವರು ಇಣುಕಿ ನೋಡಿ ` ಕರ್ಮ ಕರ್ಮ, ಹಬ್ಬದ ದಿನ ನಾನ್ ವೆಜ್ಜಾ?’ ಅಂತ ಕೇಳ್ತಿದ್ದ ಹಾಗಿತ್ತು. ಮಾಡಿದ ಕೆಲವೇ ಕ್ಷಣಗಳಲ್ಲಿ ದೇವರಿಗೆ ಬೇಜಾರ್ಯಾಕೆ ಅಂತ ಕಂಪ್ಲೀಟ್ ಖಾಲಿ ಮಾಡಿದ್ದು ನನ್ನ ಸಾಧನೆ. ಆ ದಿನ ತಂಗಿ ಮನೆ ಸುತ್ತಾ ದೀಪ ಜೋಡಿಸಿಡ್ತಾ ಇದ್ದಿದ್ದು ನೋಡಿ ಜೀವನ ಪಾವನ ಆಗೋಯ್ತು ಅನ್ಕೊಂಡೆ. ಇನ್ನು ನಮ್ಮನೇಲಿ ಪರಿಸರ ಉಳಿಸೋ ದೃಷ್ಟಿಯಿಂದ  ಮೂರು ವರ್ಷದಿಂದ ಪಟಾಕಿ ಹೊಡಿಯೋಲ್ಲ ಅನ್ನೋದು ನಮ್ಮ ಹೆಮ್ಮೆ…

ಮಾರನೆ ದಿನ ಎದ್ದು ಸೂರಿ ಮಾಮನ ಮನೆಗೆ ಹೋದೆ, ಅವರ ಮನೇಲಿ ಈಗ್ಲೂ ಸಕತ್ ದನಗಳಿವೆ. ಹಂಗಾಗಿ ಗೋ ಪೂಜೆ ನೋಡೋಣ ಅಂತ. ನೋ ಯೂಸ್ ಸಾಹೇಬರು ಗಂಟೆ ಹತ್ತಾದ್ರು ಶಿವಮೊಗ್ಗಕ್ಕೆ ಹೂ ತರೋಕೆ ಹೋದವರು ಇನ್ನೂ ಬಂದಿರ್ಲಿಲ್ಲ. ಅತ್ತೆ ಕೊಟ್ಟ `ಕೊಟ್ಟೆ ಕಡುಬು’ ನಮಗಾದ ಲಾಭ ಅಷ್ಟೇ. ಅಲ್ಲಿಂದ ಬಂದು ನಾನು ಕೆಲಸ ಕಲಿತಿದ್ದ ಸ್ಟೂಡಿಯೋದಲ್ಲಿ 3 ಗಂಟೆ ತನಕ ಕೂತೆ. ಅಷ್ಟು ಹೊತ್ತಿಗೆ ಅಮ್ಮನ ಕರೆ ಬಂತು. ಮನೆಗೆ ಹೋದ್ರೆ ಪರಮಾಶ್ಚರ್ಯ. ಅಮ್ಮ ವೆರೈಟಿ ವೆರೈಟಿ ಅಡುಗೆ ಮಾಡಿ ಎಡೆ ಇಟ್ಟಿದಾರೆ. ಆಹಾ ಅನ್ನಿಸಿ ಊಟಕ್ಕೆ ಕೂತೆ. ಕೋಸಂಬರಿ, ಕಾಳು ಪಲ್ಯ, ಟೇಸ್ಟಿ ಉಪ್ಪಿನಕಾಯಿ, ಅನ್ನಪೂರ್ಣ ಉಪ್ಪು, ಬೇಳೆ ಹೂರಣದ ಹೋಳಿಗೆ, ಅದಕ್ಕೆ ತುಪ್ಪ, ಶ್ಯಾವಿಗೆ ಪಾಯಸ, ಅದಕ್ಕೆ ಬೂಂದಿ, ಬಿಸಿ ಬಿಸಿ ವಡೆ, ಅನ್ನಕ್ಕೆ ಸಾಂಬಾರ್, ತಿಳಿ ಸಾರು, ಮಜ್ಜಿಗೆ… ಅಬ್ಬಬ್ಬ ಸಕ್ಕತ್ ಊಟ. ಗೆಳೆಯನನ್ನ ಕರ್ಕೊಂಡು ಬಂದಿದ್ದಕ್ಕೆ ಮರ್ಯಾದೆ ಉಳೀತು ಅನ್ಕೊಂಡೆ. ಎಲ್ಲರೂ ಸೇರಿ ಸಕ್ಕತಾಗಿ ಬಾರಿಸಿದ್ವಿ. ಅದಾಗಿ ಮೂರ್ನಾಲ್ಕು ಗಂಟೆಯೊಳಗೆ ನನ್ನ ರಿಸರ್ವೇಶನ್ ಮಾಡಿದ ಬಸ್ಸಿನ ಹಾರನ್ ಸಣ್ಣಗೆ ಕೇಳಿಸಿದ ಹಾಗಾಯ್ತು. ಬಸ್ ಹತ್ತಿ ಕೂತು ಕಣ್ಣು ಮುಚ್ಚಿದ್ವಿ, ಕಣ್ಣು ಬಿಟ್ರೆ ಮತ್ತದೇ ಬೆಂಗಳೂರು. ಅಲ್ಲಿಂದ ಡೈರೆಕ್ಟ್ ಆಫೀಸಿಗೆ ಬಂದವನು ಇನ್ನೂ ರೂಮಿಗೆ ಹೋಗಿಲ್ಲ. ಅಜ್ಜಿ ಮನೆಯ ದೀಪಾವಳಿ ಅಲ್ಲದಿದ್ರೂ ಓಕೆ ಓಕೆ ಅನ್ನೋ ಹಾಗಿದ್ದ ದೀಪಾವಳಿ ನೆನಪ್ಯಾಕೋ ಇನ್ನೂ ಕಾಡ್ತಾ ಇದೆ… ಅಟ್ ದ ಸೇಮ್ ಟೈಮ್ ಕ್ವಿಂಟಾಲ್ ಗಟ್ಲೆ ಕೆಲಸ ಇನ್ನೂ ಬಾಕಿ ಇದೆ… ಅದನ್ನ ಮುಗಿಸದೆ ಇದ್ರೆ ಬಾಸ್ ಮಕ್ಕುಗೀತಾರೆ. ಬಾಯ್ ಬಾಯ್

ಭಲೆ ಭಲೆ ಬಲಮುರಿ...

`ಲೋ ಮಗಾ ಒಂದ್ ಟ್ರಿಪ್ ಅರೇಂಜ್ ಮಾಡಲೇ, ಒಂದ್ ದಿನ ಆರಾಮಾಗ್ ಹೋಗ್ ಬರಣ’ ಅಂತ ಸುಪ್ರೀತ್  ಸಾವಿರ ಸಲ ಹೇಳಿದ್ದ. ನಾನೂ ಅವನಿಗೆ ಆಶ್ವಾಸನೆ ಕೊಡ್ತಾನೆ ಇದ್ದೆ. `ಆಯ್ತು ಮಗಾ, ಹೋಗಣ, ಒಂಚೂರು ಫ್ರೀ ಆಗ್ತೀನಿ. ಆಮೇಲ್ ಹೋಗಣ’ ಅಂತ ಕಾಗೆ ಹಾರಿಸ್ತಾನೆ ಇದ್ದೆ. ಆದ್ರೆ ಮೊನ್ನೆ ಭಾನುವಾರ ಹೋಗಲೇಬೇಕು ಅಂತ ನಂಗೂ ಮನಸಾಯ್ತು. ಸುಪ್ರೀತ್, ದಿವ್ಯ, ಚೇತು, ಯಶು, ರಕ್ಷಾ ಒತ್ತಾಯಕ್ಕೆ ಮಣಿದು ಜೈ ಅಂತ ಹೊರಟೇ ಬಿಟ್ವಿ. ಯಶು, ಚೇತು ಹೆಂಗಿದ್ರೂ ಮೈಸೂರಲ್ಲೇ ಇರ್ತಾರೆ. ನಾವೂ ಅಲ್ಲಿಗೆ ಹೋಗಿ ಅಲ್ಲಿಂದ ಎಲ್ಲಿಗಾದ್ರೂ ಹೋಗಣ ಅನ್ಕೊಂಡು ಸೂರ್ಯ ಹುಟ್ಟೋಕೆ ಮುಂಚೆ ಟ್ರೈನ್ ಹತ್ತಿ ಮೈಸೂರಿಗೆ ಹೊರಟೇ ಬಿಟ್ವಿ… ನಾನು, ಸುಪ್ರೀತ್, ಮಲ್ಲಿ, ದಿವ್ಯ, ರಕ್ಷಾ, ಲಕ್ಷ್ಮಣ್  ಹೀಗೆ ಆರು ಜನರ ಟೀಮು…  ಹತ್ತು ಫೋಟೋ ತೆಗೆದು, 16 ಡೈಲಾಗ್ ಹೊಡೆದು, ಅವರಿವರಿಗೆ ಕಾಲೆಳಿತಾ ಇದ್ದಂಗೆ ಮೈಸೂರಲ್ಲಿ ನಮ್ ಟ್ರೇನು ಕೂ… ಅಂತ ಕೂಗ್ತಾ ಇತ್ತು. `ಯಲಾ ಇವನಾ ಮೈಸೂರ್ ಇಷ್ಟ ಹತ್ರ ಆಗೋಯ್ತಾ ‘ಅನ್ಕೊಂಡು ಅಲ್ಲೇ ನಲ್ಲೀಲಿ ಸಣ್ಣಗೆ  ಬರ್ತಿದ್ದ ನೀರಲ್ಲಿ ಮುಖ ತೊಳೆದು, ಗಬ್ಬೆದ್ದ ಕರ್ಚೀಫಲ್ಲಿ ಮುಖ ಒರುಸ್ಕೊಂಡು, ಕಣ್ಣಿಗೆ ರಜನಿ ಸ್ಟೈಲಲ್ಲಿ ಗ್ಲಾಸ್ ಏರುಸ್ಕೊಂಡು ಮೈಸೂರಿನ ನೆಲದ ಮೇಲೆ ಕಾಲಿಟ್ಟೆ. ಕರ್ಮಕಾಂಡ, ಗಾಳಿ ಜೋರಾಗ್ ಬೀಸಲಿಲ್ಲ. ಮಳೆ ಬರ್ಲಿಲ್ಲ, ಮಿಂಚು ಗುಡುಗಿಲ್ಲ. ಅದು ಬರೀ ದರ್ಶನ್, ರಜನೀಕಾಂತ್, ಚಿರಂಜೀವಿ ಫಿಲ್ಮಲ್ಲಿ ಮಾತ್ರ ಅನ್ಕೊಂಡು 100 ಹೆಜ್ಜೆ ಇಡ್ತಿದ್ದ ಹಾಗೆ ನನ್ನ ಮುದ್ದು ತಂಗ್ಯವ್ವ ಯಶು ಕಾಣಿಸಿದ್ಲು. `ಅಯ್ಯೋ ಬಂಗಾರ ಎಷ್ಟು ದಿನಾ ಆಯ್ತೆ ನಿನ್ನ ನೋಡಿ’ ಅಂತ ಮನಸಲ್ಲೇ ಅನ್ಕೊಂಡು ಅವಳನ್ನ ಮಾತಾಡಿಸ್ಕೊಂಡು ರೈಲ್ವೆ ಸ್ಟೇಷನ್ನಿಂದ ಹೊರಗೆ ಬಂದ್ವಿ. ಸ್ವಲ್ಪ ಹೊತ್ತಿಗೆ ನಾವಿದ್ದ ಜಾಗಕ್ಕೆ `ಮೈಸೂರ್  ಮಿತ್ರ’ ಕೆ.ಪಿ ಬಂದ. ಅವನ ಜೊತೆ ಒಂದಷ್ಟು ಹರಟಿ ಅವನಿಗೆ ಟಾಟಾ ಮಾಡ್ತಿದ್ದ ಹಾಗೆ ಬಹು ನಿರೀಕ್ಷಿತ ಚೇತನಾ ಅಲಿಯಾಸ್ ಪುಂಗಿ ಬಂದ್ಳು. ಅವಳು ಹಚ್ಚಿದ್ದ ಫೇರ್ ಎವರ್ ವಾಸನೆ ಮೂಗಿಗೆ ಇನ್ನೂ ಹೊಡೀತಾನೆ ಇತ್ತು. ಅಷ್ಟರ ಮಟ್ಟಿಗೆ ಅವಳು ಫ್ರೆಶ್ ಆಗಿ ಟ್ರಿಪ್ ಗೆ ರೆಡಿ ಆಗಿ ಬಂದಿದ್ಲು…

ಹೋಗೋದೆಲ್ಲಿಗೆ? ಅದು ಎಲ್ಲರಿಗೂ ಕಾಡ್ತಿದ್ದ ಪ್ರಶ್ನೆ. ಸುಪ್ರೀತ ಅಷ್ಟರೊಳಗೆ ನೂರಾರು ಸಲ ಬಲಮುರಿ -ಎಡಮುರಿ ಅಂತ ಮಂತ್ರ ಜಪಿಸಿದ್ದ. ಎಲ್ಲರಿಗೂ ಆ ಜಾಗ ಓಕೆ ಅನ್ನಿಸ್ತು. ಅಲ್ಲೇ ಒಂದು ಕಾರ್ ಬಾಡಿಗೆ ಮಾಡ್ಕೊಂಡು ಹೊರಟವರಿಗೆ ಮುಂದಿನ 25 ನಿಮಿಷದಲ್ಲಿ ಬಲಮುರಿ ಫಾಲ್ಸ್ ನ ಝರಿಯ ಶಬ್ದ ಕೇಳಿಸ್ತು. ಕಾರ್ ನಿಂತ 5-10 ನಿಮಿಷದಲ್ಲಿ ಎಲ್ಲರ ಪಾದಗಳಿಗೆ ಕಾವೇರಿಯ ತಂಪು ತಾಗಿತ್ತು. ಅಷ್ಟು ಅರ್ಜೆಂಟ್  ಎಲ್ಲರಿಗೂ ನೀರಿನಲ್ಲಿ ಆಡಿ ಕುಣಿಯೋಕೆ… ಸೂಪರ್ ಅನ್ಕೊಂಡು ಮುಂದೆ ಮುಂದೆ ಹೋಗ್ತಿದ್ರೆ ನೀರಿನ ಸೆಳೆತ ಜಾಸ್ತಿ ಆಗ್ತಾ ಇತ್ತು. ಆದರೂ ನಮ್ ಹುಡುಗರ್ ಕೇಳ್ಬೇಕಾ. ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಅಂತ ಹೋಗ್ತಾನೆ ಇದ್ರು. ಫೈನಲಿ ಎಲ್ಲರೂ ಒಂದು ಜಾಗದಲ್ಲಿ ಹೋಗಿ ಸೆಟ್ಲ್ ಆದ್ವಿ… ನಾನು, ಸುಪ್ರೀತ್,ಮಲ್ಲಿ, ದಿವ್ಯ ಈಜು ಬರೋರು. ಇನ್ನುಳಿದವರು ಮೂಕ ಪ್ರೇಕ್ಷಕರು. ಕ್ಯಾಮರಾ ಹಿಡ್ಕೊಂಡು ಬಂದ್ರೆ ನೀರಿಗೆ ಇಳಿಯೋದು ತಪ್ಪುತ್ತೆ ಅನ್ಕೊಂಡು ಬಂದ ಯಶು ಸಹ ನಾವ್ ಆಡೋ ಆಟ ನೋಡಿ ಲಕ್ಷ್ಮಣ್ ಕೈಗೆ ಕ್ಯಾಮರಾ ಕೊಟ್ಟು ನಮ್ಮ ಜೊತೆ ಜಾಯ್ನ್ ಆದ್ಲು… ಇಷ್ಟೆಲ್ಲಾ ಆಟ ಆಡ್ಕೊಂಡು ಆರಾಮಾಗಿ ಇದ್ದ ಹೊತ್ತಿಗೆ ನನ್ನ ಮಂಗಾಟದ ತಲೆಗೇನೋ ಹೊಳೀತು ಅನ್ನೋ ತರ ನೀರಿನಿಂದ ಎದ್ದು ರಭಸದಲ್ಲಿ ಹರೀತಿದ್ದ ನೀರಿನ ಕಡೆಗೆ ಹೊರಟೆ. ನೀರಿನ ಸೆಳೆತ ಸಖತ್ತಾಗೆ ಇತ್ತು. ಹೆಂಗೇ ಅಳೆದೂ-ತೂಗಿದರೂ ನನ್ನ ತೂಕ ೫೪ ದಾಟಲ್ಲ. ಇಂತಾ ದೇಹ ಇಟ್ಕೊಂಡು ನೀರಿನ ವಿರುದ್ದ ಯುದ್ದ ಮಾಡೋನ ಹಾಗೆ ಒಂದು ಕಲ್ಲನ್ನ ಹಿಡ್ಕೊಂಡು` ಹೆಂಗೆ’ ಅಂತ ಪೋಸ್ ಕೊಡ್ತಾ ಇದ್ದೆ. ಅಷ್ಟರಲ್ಲಿ ನನ್ನ ಕೈ ಕಲ್ಲಿಂದ ಜಾರಿತ್ತು… ಎಲ್ಲಾ ನೋಡ್ತಾ ಇದ್ದ ಹಾಗೆ ನಾನು ಉರುಳ್ಕೊಂಡು ಹೋಗಿ 5-6 ಅಡಿ ಕೆಳಗಿದ್ದ ಕಲ್ಲುಗಳ ಮೇಲೆ ಪಲ್ಟಿ ಹೊಡೆದಿದ್ದೆ. ಮೇಲೆ ನೋಡ್ತಾ ಇದ್ದೋರೆಲ್ಲ `ಅನ್ಯಾಯವಾಗಿ ಹೋಗೆ ಹಾಕುಸ್ಕೊಂಡ’ ಅನ್ನೋ ತರ ನೋಡ್ತಾ ಇದ್ರು. ನಮ್ ಟೀಮ್ ಹುಡುಗರೆಲ್ಲ ಲಬೋ ಲಬೋ ಅಂತ ಬಡ್ಕೊತಾ ಇದ್ರು. ನಾನು ಎಷ್ಟ್ ಹೊಡೆತ ಬಿದ್ರು ಏನೂ ಆಗದ ತೆಲುಗು ಹೀರೋ ತರ ಅಲ್ಲಿಂದ ಮೇಲೆದ್ದೆ. ಅಷ್ಟರಲ್ಲಿ ಮೀಟರ್ ಆಫ್ ಆಗಿದ್ರೂ ನಂಗೇನೂ ಆಗಿಲ್ಲ ಅನ್ನೋ ತರ ಪೋಸ್ ಕೊಟ್ಟೆ. ಕಷ್ಟ ಪಟ್ಕೊಂಡು ನೀರಿನ ಫೋರ್ಸಿನ ವಿರುದ್ದ ಹೋರಾಡಿ ದಡ ಸೇರ್ಕೊಂಡೆ. ಆಮೇಲೂ ಸ್ವಲ್ಪ ಧೈರ್ಯ ಮಾಡಿ ಆಟ ಆಡಿದ್ದಾಯ್ತು. ಒಂದಷ್ಟು ಹೊತ್ತು ಮಂಗಾಟ ಆಡಿ ಕಷ್ಟ ಪಟ್ಕೊಂಡು ಕಾರಿನ ಹತ್ರ  ಹೋಗಿ ಸೆಟ್ಲ್ ಆದ್ವಿ… ಆದ್ರೆ ನಮ್ಮ ಸುಪ್ರೀತನಿಗೆ ಇನ್ನೂ ನೀರಿನ ಚಟ ತೀರಿರಲಿಲ್ಲ. ಊಟ ಮುಗಿಸಿ ಪುಂಗಿ, ಯಶು, ಲಕ್ಷ್ಮಣ್ ಕರ್ಕೊಂಡು ಹೋದವನು ಒಂದು ಗಂಟೆ ಬಿಟ್ಟು ಬಂದ…ಅಷ್ಟರಲ್ಲಿ ನಾನು, ಮಲ್ಲಿ, ದಿವ್ಯ, ರಕ್ಷಾ ಕಾರಲ್ಲಿ ಕೂತು 2 ಪ್ಲೇಟ್ ಕಬಾಬ್ ಖಾಲಿ ಮಾಡಿದ್ವಿ.   ಒಂದಂತೂ ಸತ್ಯ, ಬಹಳ ದಿನಗಳ ನಂತರ ಎಲ್ಲರೂ ಜೊತೆಯಾಗಿ ಒಂದು ಟ್ರಿಪ್ ಗೆ ಹೋಗ್ಬೇಕು ಅನ್ಕೊಂಡು ಬಂದಿದ್ದಕ್ಕೂ ಸಖತ್ ಸಮಾಧಾನ ಆಗಿತ್ತು. ಎಲ್ಲರೂ ಫುಲ್ ಖುಷ್. ಅಷ್ಟರ ಮಟ್ಟಿಗೆ ಟ್ರಿಪ್ ಸಕ್ಸಸ್.

ನಾನು-ಯಶು... ನನ್ನ ಕಂದಮ್ಮ (ತಂಗ್ಯವ್ವ)

ಅಲ್ಲಿಂದ ನೇರವಾಗಿ ಮೈಸೂರಿಗೆ ವಾಪಸ್ ಬಂದು ದಸರಾ ಎಕ್ಸಿಬಿಶನ್ ನಲ್ಲಿ ಮೂಕನ ಹಾಗೆ ಮಂಗಾಟ ಆಡಿ, ಕಿರಿಚಾಡಿ ಕೂಗಾಡಿ ಹೊರಗೆ ಬರೋದ್ರೊಳಗೆ ಗಂಟೆ ಎಂಟಾಗಿತ್ತು. ಬೆಂಗಳೂರು ನಮ್ಮನ್ನ ಕರೀತಾ ಇತ್ತು. ಹಾಗಾಗಿ ಎಲ್ಲರೂ ಆಟೋ ಹತ್ತಿ ಬಸ್ ಸ್ಟ್ಯಾಂಡ್ ತಲುಪಿದ್ವಿ.  ಅಲ್ಲೀ ತನಕ ಇದ್ದ ಸಂತೋಷ ಸಡಗರ ಆ ಸ್ಥಳದಲ್ಲಿ ಮರೆಯಾಗಿತ್ತು. ಎಲ್ಲರ ಮುಖದಲ್ಲೂ  ಒಂತರಾ ಬೇಜಾರು. ಬಸ್ ಹತ್ತೊದ್ರೊಳಗೆ ದಿವ್ಯ, ಚೇತನಾ ಸೇರಿ ಮುಂದಿನ ಟ್ರಿಪ್ ಪ್ಲಾನ್ ಮಾಡ್ತಾ ಇದ್ರು. ನಾನು ಮನಸಲ್ಲೇ ನಗ್ತಾ ಇದ್ದೆ.  ನಾನ್ ಫ್ರೀ ಆಗ್ತಿನೋ ಇಲ್ವೋ ಅಂತ. ಆಗ್ಲೇ ಬೇಕು ಅಂತ ನಿರ್ಧಾರ ಮಾಡಿ ನನ್ನ ಮುದ್ದು ತಂಗಿಯ ಹಣೆಗೊಂದು ಮುತ್ತಿಟ್ಟು ಬಸ್ ಹತ್ತಿ ಸೀಟಿಗೊರಗಿ ಮಲಗಿದ 3 ಗಂಟೆಯಲ್ಲಿ ನನಗೆ ಕಂಡಿದ್ದು ಮತ್ತದೇ ಕಂಪ್ಯೂಟರ್ರು, ಮತ್ತದೇ ನ್ಯೂಸ್ ಡೆಸ್ಕು, ಆ ದಿನದ ಸವಿ ನೆನಪುಗಳನ್ನ ನೆನಪು ಮಾಡ್ಕೊಂಡು ಇವತ್ಯಾವ ಕೆಲಸಾನೂ ಮಾಡಲ್ಲ ಅಂತ ನನ್ನ ಕುರ್ಚಿಗೆ ತಲೆ ಕೊಟ್ಟೆ. ಮತ್ತೆ ಕಣ್ಣು ಬಿಟ್ಟಾಗ ಬೆಳಿಗ್ಗೆ 5 ಗಂಟೆ ಆಗಿತ್ತು. ಅಯ್ಯೋ ಲೇಟಾಯ್ತು ಅಂತ ಸಿಂಗ್ರಿ ರೌಂಡ್ಸ್ ಸ್ಕ್ರಿಪ್ಟ್ ಹೊಡೀತಾ ಕೂತೆ.  ಆದರೂ ಮಧ್ಯ ಮಧ್ಯ ಬಲಮುರಿ ನನ್ನನ್ನ ತುಂಬಾ ಕಾಡ್ತಾ ಇತ್ತು…

Im missing them… Very Badly…

ಹೇ ಮತ್ಯಾವಾಗಾದ್ರೂ ಅಂತದ್ದೇ ಮತ್ತೊಂದು ಟ್ರಿಪ್ ನೆಪದಲ್ಲಿ ಎಲ್ಲ ಮೀಟ್ ಮಾಡೋಣ್ವಾ…? ಪ್ಲೀಸ್…

`ಏನು…? ನಾಳೆ ಹಬ್ಬಾನ? ಯಾವ್ ಹಬ್ಬ…!?’ ದೇವರಾಣೆ ಈ ಪ್ರಶ್ನೆನ ನಾನು ನಿನ್ನೆ ರಾತ್ರಿ ನನ್ನ ಗೆಳತಿ ಚೇತನಾಗೆ ಕೇಳಿದ್ದೆ. ಆಶ್ಚರ್ಯ ಏನಿಲ್ಲ… ಈ ಬೆಂಗಳೂರಲ್ಲಿ ನಾಲ್ಕು ಗೋಡೆಯ ನಡುವಿನ ಬದುಕು ವಾರ, ದಿನಾಂಕವನ್ನೆ ಮರೆಸಿಬಿಡುತ್ತವೆ. ಅಂತದ್ರಲ್ಲಿ ಹಬ್ಬದ ನೆನಪಾದ್ರೂ ಹೇಗೆ ಆಗೋಕೆ ಸಾಧ್ಯ. ನೋ ಚಾನ್ಸ್.. ಅಟ್ ಲೀಸ್ಟ್  ಅಮ್ಮ, ತಂಗೀನಾದ್ರೂ ಫೋನ್ ಮಾಡಿ ಹಬ್ಬಕ್ಕೆ ಬರಲ್ವ ಅಂತ ಕೇಳಿರ್ತಿದ್ರು. ಆದ್ರೆ ಊರಿಗೆ ಕರೆದಾಗಲೆಲ್ಲಾ  ನನ್ನ ಹತ್ರ ಬೈಸಿಕೊಂಡು ಅವರೂ ಸುಮ್ನಾಗಿ ಹೋಗಿದಾರೆ. ಹಂಗಾಗಿ ಅವರೂ ಕರೆಯಲ್ಲ, ನಾನೂ ಹೋಗಲ್ಲ… ನಂದೂ ಒಂದು ಬದುಕು…

ಅಂದಹಾಗೆ ಇವತ್ತಿನ ಹಬ್ಬ ಆಯುಧ ಪೂಜೆ ಅಲ್ವ? ಅದೇ 8 -10 ವರ್ಷಗಳ ಹಿಂದೆ ನಮ್ಮೂರ ರೈಸ್ ಮಿಲ್ ಎದುರು ಕುಂಬಳಕಾಯಿ ಒಡೆದಾಗ ಅದೊರಳಗೆ ಅವಿತು ಕೂತ ಕುಂಕುಮ ತುಂಬಿದ ಕಾಯಿನ್ ಗಳಿಗಾಗಿ ಕೈ ನುಗ್ಗಿಸಿ ಕಿತಾಡ್ತಾ ಇದ್ವಲ್ಲ ಅದೇ ಹಬ್ಬ ತಾನೇ… ಅದೇ ಅದೇ.. ಯಾಕಂದ್ರೆ ನಮ್ ಆಫೀಸ್ ನಲ್ಲೂ ಇವತ್ತು ಕ್ಯಾಮರಾ, ಲೈಟು, ಕಂಪ್ಯೂಟರ್ ಗೆಲ್ಲಾ ಪೂಜೆ ಮಾಡಿ ಅಂತದ್ದೇ ಕುಂಬಳಕಾಯಿಯನ್ನ ಹೊರಗೆ ಓಡೀತಾ ಇದ್ರು… ಅದೇನೇ ಇರ್ಲಿ ನಾನ್ ಹೇಳೋಕೆ ಹೊರಟಿರೋದು ಬ್ಯಾಚುಲರ್ ಗಳ ಹಬ್ಬಗಳು ಈ ಬೆಂಗಳೂರಲ್ಲಿ ಹೇಗಿರುತ್ತೆ ಅಂತ… ನಾನು ಬೆಂಗಳೂರಿನಲ್ಲಿ 4 ವರ್ಷದಿಂದ ಬ್ಯಾಚುಲರ್.. ಹಂಗಾಗಿ ಅನುಭವದ ಮೇಲೆ ಇವೆಲ್ಲಾ ಹೇಳ್ತೀನಿ ಕೇಳಿ… ನಾನು ಮನೆಗೆ ಹೋಗಿ ಇವತ್ತಿಗೆ ಏಳು ದಿನ ಆಗಿತ್ತು. ಆಫೀಸ್-ಶೂಟಿಂಗ್ ಮನೆ ಇಷ್ಟೇ ನನ್ನ ಬದುಕು… ಆದ್ರೆ ಇವತ್ತು ಹಬ್ಬ ಅನ್ನೋ ಕಾರಣಕ್ಕೆ ನನ್ನನ್ನ ಅಪರೂಪಕ್ಕೆ ನೋಡೋ ನನ್ನ ರೂಮಿಗೆ ಹೋಗಿ ನನ್ನ ಬಾತ್ ರೂಂಗೆ ನನ್ನ ಕೊಳಕು ಮೈ ತೋರಿಸಿ, ಡವ್ ಸೋಪೇ ಕಪ್ಪಾಗೋ ಹಾಗೇ ಮೈ ತಿಕ್ಕಿ ಸ್ನಾನ ಮಾಡಿ ಬಂದೆ… ಅದೊಂದೇ ಇವತ್ತಿನ ಮಟ್ಟಿಗೆ ನಾನು ಹಬ್ಬಕ್ಕೆ ಕೊಟ್ಟ ಉಡುಗೊರೆ. ಆಫಿಸಿಗೆ ಬಂದ್ರೆ ಎಲ್ಲರ ಬೈಕುಗಳೂ ಲಕ ಲಕ ಮಿಂಚ್ತಾ ಇದೆ. ನನ್ನ ಬೈಕು ಮಾತ್ರ ನಿನ್ನೆ ಮೊನ್ನೆ ಗಂಡನನ್ನ ಕಳೆದುಕೊಂಡವಳ ಹಾಗೆ ಮಂಕಾಗಿದೆ… `ನೀನ್ ಮಾತ್ರ ಸ್ನಾನ ಮಾಡಿ ಬಂದೆ ಕನಿಷ್ಠ ನನ್ನ ಹೊದ್ದುಕೊಂಡಿರೋ ಧೂಳಾದ್ರು ಒರೆಸು’ ಅಂತ ಬೇಡ್ಕೊಳ್ತಾ ಇರೋ ಹಾಗಿತ್ತು ನನ್ನ ಬೈಕ್…’ ಆದ್ರೆ ನಾನು ಆ ವಿಚಾರದಲ್ಲಿ ನಿಷ್ಕರುಣಿ. `ಮಳೆ ಬಂದ್ರೆ ಮಾತ್ರ ನಿಂಗೆ ಸ್ನಾನ’ ಅಂತ ಹೇಳಿ ಅದರ ಬೆನ್ನು ಎಳೆದು ಸ್ಟ್ಯಾಂಡ್ ಹಾಕಿ ಆಫೀಸ್ ಒಳಗೆ ಬಂದ್ರೆ ಎಲ್ಲೆಲ್ಲೂ ಕಲರ್ ಕಲರ್ ಕಲರ್.. ಹುಡುಗೀರು ಸೀರೆಯುಟ್ಟು ಮಿಂಚ್ತಾ ಇದಾರೆ, ಹುಡುಗರೆಲ್ಲಾ ಹೊಸ ಬಟ್ಟೆಯಲ್ಲಿ ಶೈನಿಂಗ್.. ಅದೃಷ್ಟಕ್ಕೆ ನಾನಿವತ್ತು ಮನುಷ್ಯನ ಹಾಗೆ ನೀಟಾಗಿ ಫಾರ್ಮಲ್ ಹಾಕ್ಕೊಂಡು ಬಂದಿದ್ದೆ. ಮರ್ಯಾದೆ ಉಳೀತು.ಅವರನ್ನೆಲ್ಲ ನೋಡಿದ ಮೇಲೆ ನಂಗೂ ಗ್ಯಾರಂಟಿ ಆಯ್ತು,  ಇವತ್ತು ನಿಜವಾಗಲೂ ಹಬ್ಬ ಅಂತ… !

ಆದರೂ ನಮ್ಮದೇನು ಬದುಕು ಅಂತೀನಿ…? ಹಬ್ಬ ಇಲ್ಲ, ಹರಿದಿನ ಇಲ್ಲ… ಎಲ್ಲಾ ದಿನಾನೂ ಒಂದೇ.. ಆ ಕಾಲ ಎಷ್ಟ್ ಸಕ್ಕತ್ತಾಗಿತ್ತು.. ಇವತ್ ಹೆಂಗಿದೆ…? ಇವತ್ತು ಯಾರೋ ತಂದು ಕಳ್ಳೆಪುರಿ ಕೊಟ್ರು. ಅವತ್ತು ಕವರ್ ಹಿಡ್ಕೊಂಡು ಅಂಗಡಿ ಅಂಗಡಿಲಿ ಕಳ್ಳೆಪುರಿ ಕಲೆಕ್ಷನ್ ಮಾಡ್ತಾ ಇದ್ದಿದ್ದು ನೆನಪಾಯ್ತು.. ದುಡಿಮೆಯ ಹೆಸರಲ್ಲಿ ಹಬ್ಬ, ಸಂಸ್ಕೃತಿ, ಆಚರಣೆ ಮರೆತ ಈ ಬದುಕಿಗಿಂತ ಆ ಬದುಕೇ ಸಕ್ಕತ್ತಾಗಿತ್ತು ಅನ್ಸುತ್ತೆ… ಅಮ್ಮ ಮಾಡ್ತಿದ್ದ ಹೋಳಿಗೆ, ಕದ್ದು ತಿಂತಿದ್ದ ಹೂರಣ, ಅಪ್ಪ ತರ್ತಿದ್ದ ಜಿಲೇಬಿ, ಒಟ್ಟಿಗೆ ಕೂತು ಮಾಡ್ತಿದ್ದ ಊಟ.. ವಾ ವಾ.. ಮತ್ಯಾವತ್ತೂ ಆ ಲೈಫ್ ಸಿಗೋಕೆ ಚಾನ್ಸೇ ಇಲ್ಲ… ಇವತ್ತು ನಮ್ಮ ಪರಿಸ್ಥಿತಿ ನೋಡಿ, ಎಂತಹ ಸ್ಪೆಷಲ್ ಡೇ ಆದರೂ ನಮಗೆ ಆಫೀಸ್ ಪಕ್ಕದ ಹೋಟೆಲ್ಲೇ ಗತಿ. ಅಲ್ಲಿ ಸಿಗೋ ಮಿನಿ ಇಡ್ಲಿ, ವಾಂಗಿಬಾತೆ ಶ್ರೇಷ್ಠ… ಎಲ್ಲಾ ಬ್ಯಾಚುಲರ್ಸ್ ಬದುಕೂ ಹೀಗೇನ ಅಂತ ಡೌಟ್ ಇತ್ತು ನಂಗೆ. ಪಕ್ಕದ ಹೋಟೆಲ್ ಹುಡುಗನ್ನ ಕೇಳಿದೆ, `ಊರಿಗೆ ಹೊಗಿಲ್ವೇನ್ರಿ’  ಅಂತ.. `ಅಯ್ಯೋ ಯಜಮಾನ್ರು ರಜಾ ಕೊಡಲಿಲ್ಲ ‘ ಅಂದ ಅವನು… ನಿಂದೂ ನನ್ನ ತರದ್ದೇ ಬದುಕು ಬಿಡು ಅನ್ಕೊಂಡೆ… ನಮ್ಮ ಆಫೀಸಿನ ಗುಂಡುರಾವ್ ` ನಮಗ್ಯಾವ ಹಬ್ಬ ಬಿಡು ಗುರು, ಇನ್ನೂ ಎಪಿಸೋಡ್ ಹೋಗಿಲ್ಲ’ ಅಂತ ಯಾರಿಗೋ ಹೇಳ್ತಾ ಇದ್ದಿದ್ದು ಕಿವಿಗೆ ಬಿತ್ತು… ಮದುವೆಯಾಗಿರೋ ಅನಿಲ್  ಹಬ್ಬದ ಹೆಸರಲ್ಲಿ ರಜಾ ಹಾಕಿ ಇಷ್ಟು ಹೊತ್ತಿಗೆ ಊರಲ್ಲಿ ಸೆಟಲ್ ಆಗಿರ್ತಾನೆ. ಇನ್ನುಳಿದಂತೆ ಬ್ಯಾಚುಲರ್ ಗಳು ಮಾತ್ರ ಎಂದಿನಂತೆ ಕೆಲಸದಲ್ಲಿ ಫುಲ್ ಬ್ಯುಸಿ…. ಏನಾದ್ರೂ ಆಗ್ಲಿ ಅಂತ ಸಂಜೆ ಪಕ್ಕದ ಹೋಟೆಲ್ ಗೆ ಹೋದೆ, ಅಲ್ಲಿ ಸಿಗೋ ಕಾಯಿ ಹೊಲಿಗೆನಾದ್ರೂ ತಿಂದು ಬರೋಣ ಅಂತ… ಗ್ರಹಚಾರಕ್ಕೆ ಅದೂ ಬಾಗಿಲು ಹಾಕಿತ್ತು. ವಾಪಸ್ ಬರಬೇಕಾದ್ರೆ ನನ್ನ ಬೈಕ್ ಕಡೆ ಕಣ್ಣು ಹಾಯಿಸ್ದೆ… ಎಲ್ಲಾ ಸಿಂಗಾರಗೊಂಡ ಬೈಕುಗಳ ನಡುವೆ ಅದು ಅನಾಥ ಪ್ರಜ್ಞೆ ಹೊತ್ತು ಅಲ್ಲೇ ನಿಂತಿತ್ತು.. `ದೀಪಾವಳಿಗೆ ನಾನೇ ಸ್ನಾನ ಮಾಡಿಸ್ತೀನಿ, ಡೋಂಟ್ ವರಿ…’  ಅಂತ ಹೇಳಿ ಲಿಫ್ಟ್ ಹತ್ತಿ ನನ್ನ ಸಿಸ್ಟಂ ಎದುರು ಕೂತು ಈ ಶೋಕ ಕಥನ ಬರೀತಾ ಇದೀನಿ.. ನೀವು ಓದು ಮುಗಿಸಿ ಮುಗುಳ್ನಗ್ತಾ  ಇದೀರಿ… ಇಷ್ಟೇ ಬ್ಯಾಚುಲರ್ ಬದುಕು…
ವಿಶೇಷ ಸೂಚನೆ : 7 -8 ದಿನ ಮನೆಗೆ ಹೋಗದೆ ಇದ್ರೂ, ಶೂಟಿಂಗ್ ಮನೆಯಲ್ಲಿ ನಾನು ಸ್ನಾನ ಮಾಡ್ಕೊಂಡಿದ್ದೆ.. ಆದ್ರೆ ಸರಿಯಾಗಿ ಮಾಡೋಕ್ ಆಗಿರಲಿಲ್ಲ ಅಷ್ಟೇ… !!!!

Older Posts »

Follow

Get every new post delivered to your Inbox.