ನನ್ ಆರೋಗ್ಯ ಯಾಕೋ ಕೈ ಕೊಟ್ಟಿತ್ತು. ಹಾಗಾಗಿ ಡಾಕ್ಟ್ರು ಬ್ರೆಡ್ ತಿನ್ನು ಅಂತ ಸಲಹೆ ಕೊಟ್ಟಿದ್ರು. ಅವರಿಗ್ಯಾಕ್ ಬೇಜಾರ್ ಮಾಡ್ಸೋದು ಅಂತ ನಾನು ಸರಿ ಅಂತ ಹೇಳಿ ಒಂದು ಪೌಂಡ್ ಬ್ರೆಡ್ ತಂದು ಎರಡು ಪೀಸ್ ತಿಂದೆ. ಅಯ್ಯಯ್ಯಪ್ಪಾ, ಜನ ಇದನ್ ಅದೆಂಗ್ ತಿಂತಾರೋ ಅಂತ ಮನಸಲ್ಲೇ ಗೊಣಗ್ತಾ ಅಲ್ಲೇ ಬಿಟ್ಟೆ. ಎರಡು ದಿನ ಆದ್ಮೇಲೆ ರೂಮಿಗೆ ಬಂದ ಫ್ರೆಂಡ್ ಒಬ್ಬ ‘ ಲೋ ಮಂಗ ನನ್ ಮಗನೆ, ನೀನ್ ತಿಂದಿಲ್ಲ ಅಂದ್ರೆ ನಾಯಿಗಾದ್ರು ಹಾಕು. ಯಾಕ ವೇಸ್ಟ್ ಮಾಡ್ತಿಯ’ ಅಂತ ಬೈದ. ನನಗೂ ಅವನ ಮಾತು ನಿಜ ಅನ್ಸಿ ಮಾರನೆ ದಿನ ಆಫೀಸಿಗೆ ಹೊರಡುವಾಗ ಆ ಬ್ರೆಡ್ ಪ್ಯಾಕ್ ಕಷ್ಟ ಪಟ್ಟು ಬೈಕ್ ನ ಟ್ಯಾಂಕ್ ಮೇಲೆ ಇಟ್ಕೊಂಡು ಹೊರಟೆ. ರಾತ್ರಿ ಇಡೀ ನಿದ್ದೆ ಮಾಡೋಕೆ ಬಿಡದೆ ಬೊಗಳ್ತಿದ್ದ ನಾಯಿಗಳು ಅವತ್ತು ಒಂದು ಮನೆ ಹತ್ರ ಕಾಣ್ತಿಲ್ಲ. ನಮ್ ಏರಿಯ ನಾಯಿಗಳಿಗೆ ನಾನ್ ಕೊಡೊ ಬ್ರೆಡ್ ತಿನ್ನೋ ಯೋಗ ಇಲ್ಲ ಅನ್ಕೊಂಡು ಕಷ್ಟ ಪಟ್ಟು ಬೈಕ್ ನ ಕಿಕ್ ಹೊಡೆದು ನಿಧಾನವಾಗಿ ರಸ್ತೆಯ ಎರಡು ಕಡೆ ನಾಯಿಗಳನ್ನ ಹುಡುಕಿಕೊಂಡು ಹೊರಟೆ. ನನ್ನ ಗ್ರಹಚಾರಕ್ಕೆ ನಾನು ತಿಂಡಿಗೆ ಹೋಗೋ ಹೋಟೆಲ್ ತನಕ ಯಾವ ನಾಯಿನೂ ಕಾಣಲಿಲ್ಲ. ಹಾಳಾಗ್ ಹೋಗ್ಲಿ ಅಂತ ಬ್ರೆಡ್ ಪ್ಯಾಕ್ ನ ಹೆಲ್ಮೆಟ್ ಒಳಗೆ ಬಚ್ಚಿಟ್ಟು ತಿಂಡಿ ತಿಂದು ಮತ್ತೆ ಅಲ್ಲಿಂದ ಹೊರಟೆ. ಮತ್ತೆ ನನ್ನ ಕಣ್ಣುಗಳು ಹುಡುಕ್ತಾ ಇದ್ದಿದ್ದು ನಾಯಿಗಳನ್ನೇ. !!!
ಶ್ರೀನಗರದಿಂದ ಹೊರಟವನಿಗೆ ವಿವೇಕಾನಂದ ಸರ್ಕಲ್ ತನಕ ಒಂದೇ ಒಂದು ನಾಯಿ ಕಾಣಲಿಲ್ಲ. ನಂದ್ ಒಳ್ಳೆ ನಾಯಿ ಪಾಡಾಯ್ತಲ್ಲ ಅಂತ ಮನಸಲ್ಲೇ ಅನ್ಕೊಂಡು ಮತ್ತೆ ರಸ್ತೆಯ ಅತ್ತಿತ್ತ ನಾಯಿ ಹುಡುಕ್ತಾ ನಿಧಾನವಾಗಿ ಹೊರಟೆ. ಕರ್ಮಕಾಂಡ, ಬೆಂಗಳೂರಿನ ನಾಯಿಗಳಿಗೆಲ್ಲ ಏನಾಯ್ತಪ್ಪ ಅಂತ ಅನ್ಸೋಕೆ ಶುರು ಆಯ್ತು. ಆದರೂ ನನ್ ಹಠ ಬಿಡಲಿಲ್ಲ ನಾನು. ಹೇಗಾದ್ರು ಮಾಡಿ ಇವತ್ತು ನಾಯಿಗೆ ಬ್ರೆಡ್ ಹಾಕಲೇ ಬೇಕು ಅಂತ ಡಿಸೈಡ್ ಮಾಡ್ಕೊಂಡೆ.
ನನ್ನ ಗ್ರಹಚಾರಕ್ಕೆ ಕಾರ್ಪೋರೇಶನ್ ಸರ್ಕಲ್ ಬಂದರೂ ನನ್ ಕಣ್ಣಿಗೆ ಒಂದೇ ಒಂದು ನಾಯಿ ಕಾಣಿಸ್ಲಿಲ್ಲ. ಆದ್ರೆ ಬೇಸರದ ಹೆಚ್ಚು ಹೊತ್ತಿರಲಿಲ್ಲ, ಕಬ್ಬನ್ ಪಾರ್ಕ್ ಒಳ ಹೋಗ್ತಿದ್ದ ಹಾಗೆ ಒಂದು ಕಂದು ಬಣ್ಣದ ನಾಯಿ ಕಾಣಿಸಿದ ತಕ್ಷಣ ನನ್ನ ಖುಷಿಗೆ ಪಾರವೇ ಇರ್ಲಿಲ್ಲ. ಅಬ್ಬ ದೇವ್ರೇ ಕೊನೆಗೂ ಒಂದು ನಾಯಿನ ಕರುನಿಸಿದ್ಯಲ್ಲ ಅನ್ಕೊಂಡು ಅದಕ್ಕೆ ಬ್ರೆಡ್ ಹಾಕ್ತಾ ಇದ್ದ ಹಾಗೆ ಎಲ್ಲಿಂದಲೋ ಬಂತು ಅಶರೀರವಾಣಿ. `ರೀ ಯಾರ್ರಿ ಅದು.. ‘ ಅಂತ. ಕೋಲು ಹಿಡಿದು ಬಂದ ಸೆಕ್ಯೂರಿಟಿ ನಾಯಿಯನ್ನು ಅಲ್ಲಿಂದ ಓಡಿಸಿಯೇ ಬಿಟ್ಟ. ಆ ನಾಯಿ ಒಂದು ಪೀಸ್ ಸಹ ತಿಂದಿರಲಿಲ್ಲ. ಸೆಕ್ಯೂರಿಟಿ ನನ್ನನ್ನೇ ದುರುಗುಟ್ಟಿ ನೋಡ್ತಿದ್ದ, ಇಲ್ಲೇ ನಿಂತಿದ್ರೆ ನಂಗೂ ನಾಯಿ ಗತೀನೆ ಅಂತ ಗೊತ್ತಾಗಿ ನಿಧಾನವಾಗಿ ಅಲ್ಲಿಂದ ಜಾಗ ಖಾಲಿ ಮಾಡ್ದೆ..
ಆದರೂ ಇನ್ನೂ ಉಳಿದಿರುವ ಬ್ರೆಡ್ ಏನ್ ಮಾಡೋದು ಅನ್ನೋ ಚಿಂತೆ ಕಾಡ್ತಿತ್ತು. ಅಷ್ಟರಲ್ಲಿ ನನ್ ಬೈಕ್ ವಸಂತ ನಗರದ ಅಂಬೇಡ್ಕರ್ ಭವನದಲ್ಲಿತ್ತು. ಅಂಬೇಡ್ಕರ್ ಭವನದ ಎದುರಿಗೆ ಮಲಗಿದ್ದ ನಾಯಿಗೆ ಕುರು ಕುರು ಹೇಳಿ ಹತ್ತಿರ ಕರೆಸ್ಕೊಂಡು ಒಂದು ಪೀಸ್ ಬ್ರೆಡ್ ಹಾಕ್ದೆ. ಏನು ಉಪಯೋಗವಾಗಲಿಲ್ಲ, ನಾಯಿ ನನ್ನ ಮುಖ, ಬ್ರೆಡ್ ಎರಡನ್ನು ನೋಡಿ ಅಲ್ಲಿಂದ ಹೊರಟು ಹೋಯ್ತು. ಅಯ್ಯೋ ನಾಯಿನೆ ಅಂತ ಬೈಕೊಂಡು ಉಳಿದ ಬ್ರೆಡ್ ಹಿಡ್ಕೊಂಡು ಆಫೀಸ್ ಹತ್ರ ಬೈಕ್ ಪಾರ್ಕ್ ಮಾಡಿ ಪೈ ವಿಹಾರ್ ಹೋಟೆಲ್ ಎದುರಿಗಿದ್ದ ನಾಯಿಗೆ ಬ್ರೆಡ್ ತೋರಿಸಿ ಆಫೀಸ್ ಬಾಗಿಲಿನ ತನಕ ಕರ್ಕೊಂಡ್ ಬಂದು ಬ್ರೆಡ್ ಹಾಕಿದೆ. ನೋ ನೋ ನೋ ನಾಯಿಗಳು ಬ್ರೆಡ್ ಮೂಸ್ತಾನೆ ಇಲ್ಲ. ಇದೇನ್ ಗ್ರಹಚಾರಾನೋ ಏನೋ ಅನ್ಕೊಂಡು ಅಲ್ಲೇ ಮೂಲೇಲಿ ಬ್ರೆಡ್ ಪ್ಯಾಕ್ ಇಟ್ಟು ಆಫೀಸ್ ಒಳಗೆ ಹೊರಟುಬಿಟ್ಟೆ. ಮೆತ್ತಗೆ ಬಾಲ್ಕನಿಯಿಂದ ನಾನಿಟ್ಟ ಬ್ರೆಡ್ ಏನಾಯ್ತು ಅಂತ ನೋಡಿದ್ರೆ, ಅದಲ್ಲಿ ಅನಾಥ. ಯಾವ್ ನಾಯೀನು ಅದನ್ನ ಮುಟ್ಟಿಲ್ಲ. ಇನ್ ಮುಂದೆ ಮನೇಲೆ ಹಾಳಾದ್ರೂ ಪರವಾಗಿಲ್ಲ ನಾಯಿಗೆ ಮಾತ್ರ ಏನೂ ಹಾಕಲ್ಲ ಅಂತ ಮನಸಲ್ಲೇ ನಿರ್ಧಾರ ಮಾಡಿ ನನ್ ಕಂಪ್ಯೂಟರ್ ಮುಂದೆ ಕೂತು ನನ್ನ ನಾಯಿ ಪಾಡು ನೆನಸ್ಕೊಂಡು ಸುಮ್ನೆ ನಗ್ತಾ ಕೆಲಸ ಶುರು ಮಾಡ್ದೆ. ಆಫೀಸಿನ ಉಳಿದವರೆಲ್ಲ `ನಾಯಿ ನನ್ ಮಗಾ ಸುಮ್ ಸುಮ್ನೆ ನಗ್ತಿರ್ತಾನೆ ‘ ಅಂತ ಅನ್ಕೊಂಡು ಅವರವರ ಕೆಲಸದಲ್ಲಿ ಮುಳುಗಿ ಹೋದ್ರು.
Chennagide.
ನಿಮ್ಮ ಕಥೆ ಓದಿ ನಾನು ತುಂಭ ನಕ್ಕು ಬಿಟ್ಟೆ. ಚೆನ್ನಾಗಿ ಬರೆದಿದ್ದೀರ.
ಪ್ರದೀಪ್
channagide…very funny…:)