Feeds:
ಲೇಖನಗಳು
ಟಿಪ್ಪಣಿಗಳು

ಜೈ ರಾಘವೇಂದ್ರ…

ವತ್ತು ಅವನು ನಂಗೆ ಫೋನ್ ಮಾಡಿ ಸುಮ್ಮನೆ ಬಾಯಿಗೆ ಬಂದಿದ್ದೇ ಮಾತಾಡ್ತಾ ಇದ್ದ. `ನನ್ನ ಬಗ್ಗೆ ಯಾಕೆ ಏನೆಲ್ಲಾ ಮಾತಾಡ್ತೀರ..? ಏನ್ ಹೇಳೋದಿದ್ರೂ ನಂಗೇ ಹೇಳಿ. ಇದೆಲ್ಲಾ ಸರಿ ಅಲ್ಲ. ಹಂಗೇ ಹಿಂಗೇ’ ಅಂತ… ನಂಗೂ ಪಿತ್ತ ನೆತ್ತಿಗೇರಿತ್ತು. `ಅಲ್ಲರೀ, ನಿಮಗೆ ನಂಬಿಕೆ ಇಲ್ಲ ಅಂದಮೇಲೆ ನನ್ ಜೊತೆ ಯಾಕ್ರೀ ನಿಮ್ಮ ಸ್ನೇಹ..? ಇವತ್ತಿಗೆ ನಂಗೂ ನಿಮಗೂ ಪರ್ಸನಲಿ ಏನೂ ಇಲ್ಲ. ನಿಮ್ಮ ಪಾಡು ನಿಮಗೆ, ನನ್ನ ಪಾಡು ನನಗೆ’ ಅಂತ ನಾನು ರೇಗಾಡಿ ಫೋನ್ ಕಟ್ ಮಾಡಿ ಬಿಟ್ಟೆ. ಅಷ್ಟೆ, ಅದಾದ ಮೇಲೆ 15-20 ನಿಮಿಷ ಮಾತಿಲ್ಲ ಕಥೆ ಇಲ್ಲ. ನಂಗೆ ಅನ್ನಿಸ್ತಿತ್ತು `ಛೇ, ಹಾಗೆಲ್ಲಾ ನಾನೂ ಕಿರುಚಾಡ್ಬಾರ್ದಿತ್ತು’ ಅಂತ. ನಂಗೊತ್ತು ಅವನಿಗೂ ಹಾಗೇ ಅನ್ಸಿರುತ್ತೆ. ಯಾರದೋ ಮಾತು ಕೇಳಿ ಕೀರ್ತಿ ಮೇಲೆ ಕೂಗಾಡಿಬಿಟ್ಟೆ ಅನ್ನೋ ಫೀಲಿಂಗ್ ಅವನಿಗೂ ಖಂಡಿತ ಇದ್ದೇ ಇರುತ್ತೆ. ಅಷ್ಟರಲ್ಲಿ ವಾಟ್ಸಾಪ್‍ನಲ್ಲಿ ಅವನದೇ ಮೆಸೇಜು. ` ಸಾರಿ’ ಅಂತ. ನಾನ್ ರಿಪ್ಲೆ ಕಳಿಸಿದೆ `ಐ ಹೇಟ್ ಯು’. ಮತ್ತೆ ರಿಪ್ಲೆ ಬಂತು. ` ಸಾರಿ, ಡಾರ್ಲಿಂಗ್, ಐ ಲವ್ ಯೂ’. ಅವನೊಂತರಾ ಹಂಗೆ..! ಒಂದ್ ಸಲ ಸ್ಪೀಡೋಮೀಟರ್, ಮತ್ತೊಂದು ಕ್ಷಣಕ್ಕೆ ಜ್ವರವಿರದ ಬಾಯಲ್ಲಿರೋ ಥರ್ಮಾಮೀಟರ್..! ಅವನು ರಾಘವೇಂದ್ರ ಭಟ್ ಅಲಿಯಾಸ್ ರಾಘು, ಅಲಿಯಾಸ್ ರಘು, ಅಲಿಯಾಸ್ ಪ್ರಿನ್ಸ್ ರಘು, ಅಲಿಯಾಸ್ ಸ್ಮಾರ್ಟ್ ರಘು…!
23ಅದೊಂಥರಾ ವಿಚಿತ್ರ, ವಿಶಿಷ್ಟ, ವಿಭಿನ್ನ ವ್ಯಕ್ತಿತ್ವದ ವ್ಯಕ್ತಿ. ನನ್ನ ಕ್ಲೋಸ್ ಫ್ರೆಂಡ್‍ಗಳಲ್ಲೇ ಅತ್ಯಂತ ಲೇಟೆಸ್ಟ್ ಎಂಟ್ರಿ ಈ ರಘು. ಪರಿಚಯವಾಗಿದ್ದು ಸಂದೇಶ್ ಎಂಬ ಸ್ನೇಹಿತನಿಂದ, ಹತ್ತಿರವಾಗಿತ್ತು ಶೆಟ್ಟಿ ಸರ್ ಸಹವಾಸದಿಂದ. ಈಗ ಕಿತ್ತಾಡೋದು, ಒಂದಾಗೋದು, ಕಿರಚಾಡೋದು, ಸಾರಿ ಕೇಳೋದು ನಮ್ಮಿಬ್ಬರ ಸ್ನೇಹದಿಂದ. ಕಾರಣ ಗೊತ್ತಿಲ್ಲ, ಆದ್ರೂ ಅವನಂದ್ರೆ ನಂಗೆ ಸಿಕ್ಕಾಪಟ್ಟೆ ಲವ್ವು, ಅವನಿಗೂ ಅಂತದ್ದೇ ಫೀಲಿಂಗ್ ಇದೆ ಅನ್ನೊದು ನನ್ನ ನಂಬಿಕೆ. ಲವ್ ಇದೆ ಅನ್ನೋದಕ್ಕೆ ಸಾಕಷ್ಟು ಸಲ ಅನುಭವಾನೂ ಆಗಿದೆ. ಫ್ರೆಂಡ್‍ಶಿಪ್ಪಲ್ಲಿ ವ್ಯವಹಾರ ಮಾಡ್ಬಾರ್ದು ಅಂತಾರೆ, ಆದ್ರೆ ವ್ಯವಹಾರದಿಂದಲೇ ನಮ್ಮ ಸ್ನೇಹ ಗಟ್ಟಿಯಾಗಿದ್ದು..! ಅವನಲ್ಲಿ ಇಷ್ಟವಾಗುವ ನೂರು ಗುಣಗಳಿವೆ. ಇಷ್ಟವಾಗದಿರೋದು ಒಂದೇ ಒಂದಿದೆ. ಅದು ಅವನ ಹಿತ್ತಾಳೆ ಕಿವಿ. ಎಲ್ಲರ ವಿಚಾರದಲ್ಲೂ ಹಾಗೇನಾ..? ಅದು ನಂಗೊತ್ತಿಲ್ಲ. ಆದ್ರೆ ನಾವಿಬ್ಬರೂ ತುಂಬಾ ಕಮ್ಮಿ ಟೈಮಲ್ಲಿ ಸಿಕ್ಕಾಪಟ್ಟೆ ಕ್ಲೋಸ್ ಆದ್ವಿ ಅನ್ನೋ ಕಾರಣಕ್ಕೆ ಕೆಲವು ಸೋ ಕಾಲ್ಡ್ ಸ್ನೇಹಿತರೇ ನಮ್ಮಿಬ್ಬರ ನಡುವೆ ತಂದಿಟ್ಟು ಮಜಾ ನೋಡಿದಾರೆ. ಅಂತಾ ಟೈಮಲ್ಲೆಲ್ಲಾ ಅವನು ನಂಗೆ ಫೋನ್ ಮಾಡಿ `ನೀವ್ ಹಂಗಂದ್ರಿ, ಹಿಂಗಂದ್ರಿ’ ಅಂತ ಸೌಂಡ್ ಮಾಡಿದ್ದಾನೆ. ಅದಾಗಿ ಮತ್ತೆ 15-20 ನಿಮಿಷಕ್ಕೆ ಮತ್ತೆ ನಮ್ಮಿಬ್ಬರದು ಸೇಮ್ ಓಲ್ಡ್ ಸ್ನೇಹ..! ನಾವಿಬ್ಬರೂ ಪರಸ್ಪರ ಸಖತ್ ನಂಬ್ತೀವಿ. ಆದ್ರೆ ಅದರಷ್ಟೇ ನಂಬಲ್ಲ.. ಅದೇ ನಮ್ಮ ಸ್ನೇಹದಲ್ಲಿರೋ ಸ್ಪೆಷಾಲಿಟಿ.
ನಾವಿಬ್ಬರೂ ಸೇರಿಕೊಂಡ್ರೆ ನಮ್ಮಿಬ್ಬರಿಗೂ ಆನೆ ಬಲ. ಜಯಪ್ರಕಾಶ್ ಶೆಟ್ಟಿ ಸರ್ ಯಾವಾಗಲೂ ಹೇಳ್ತಿರ್ತಾರೆ `ನಿನ್ನ ಹತ್ತಿರ ಏನಿಲ್ವೋ ಅದು ಅವನ ಹತ್ತಿರ ಇದೆ, ಅವನ ಹತ್ತಿರ ಏನಿಲ್ವೋ ಅದು ನಿನ್ ಹತ್ತಿರ ಇದೆ. ಇಬ್ಬರೂ ಸೇರ್ಕೊಂಡು ಏನಾದ್ರೂ ಮಾಡಿ. ನೀವು ಗೆದ್ದೇ ಗೆಲ್ತೀರ’ ಅಂತ. ಆದ್ರೆ ಅದ್ಯಾಕೋ ಅಂತದ್ದೊಂದು ಕೆಮಿಸ್ಟ್ರಿ ನಮ್ಮಿಬ್ಬರ ನಡುವೆ ಇಲ್ಲೀ ತನಕ ವರ್ಕ್‍ಔಟ್ ಆಗಲೇ ಇಲ್ಲ. ಇಬ್ಬರೂ ಒಟ್ಟಾಗಿ ಒಂದು ಬಿಸ್‍ನೆಸ್ ಮಾಡೋದು ಅಂತ ಡಿಸೈಡ್ ಮಾಡಿ, ಆಫೀಸ್ ಜಾಗ ಹುಡುಕಿ ಇನ್ನೇನು ಶುರು ಮಾಡ್ಬೇಕು ಅನ್ನೋ ಟೈಮಲ್ಲಿ ರಘು ಹಿಂದೆ ಸರಿದುಬಿಟ್ಟ. ಆದ್ರೆ ನಂಗೆ ಬೇಜಾರಾಗ್ಲಿಲ್ಲ. ಯಾಕಂದ್ರೆ ಅದು ನಮ್ಮ ರಘು. ಏನೇ ಮಾಡಿದ್ರೂ ಯೋಚನೆ ಮಾಡಿ ಮಾಡಿರ್ತಾನೆ ಅನ್ನೋ ಗ್ಯಾರಂಟಿ ನಂಗಿತ್ತು. ಆದ್ರೆ ಅವನ ಆ ನಿರ್ಧಾರದಿಂದಾಗಿ ನಮಗೆ ಆಫೀಸಿಗೆ ಅಂತ ಜಾಗ ಕೊಡಿಸಿದ್ದ ರಂಗನಾಥ್ ಭಾರದ್ವಾಜ್ ಸರ್ ನನ್ನ ಮುಖಕ್ಕೆ ಉಗುದ್ರು. ಆ ಜಾಗ ನಮಗೇ ಕೊಡ್ತೀವಿ ಅಂತ ನಿರ್ಧಾರ ಮಾಡಿದ್ದ ಆ ಬಿಲ್ಡಿಂಗ್ ಅಧ್ಯಕ್ಷರು `ಇನ್ಯಾವತ್ತೂ ಈ ತರ ಮಾಡ್ಬೇಡಿ’ ಅಂತ ಚಾರ್ಜ್ ಮಾಡಿದ್ರು. ಇದ್ಯಾವುದನ್ನೂ ನಾನು ರಘುಗೆ ಇವತ್ತಿಗೂ ಹೇಳಿಲ್ಲ. ಕಾರಣ ರಘು ಬೇಜಾರಾಗ್ಬೋದು. ಮತ್ತೆ ಬೇಜಾರ್ ಮಾಡ್ಕೊಂಡ್ರೆ ಅವನು ಮತ್ತೆ ಒಂದೆರೆಡು ದಿನ ಮಾತಾಡಲ್ಲ. ಅವನು ಮಾತಾಡಿಲ್ಲ ಅಂದ್ರೆ ನಂಗಾಗಲ್ಲ. ಇನ್‍ಫ್ಯಾಕ್ಟ್ ಅವನಿಗೂ ಆಗಲ್ಲ.
ಸ್ನೇಹ ಶುರುವಾದ ದಿನಗಳಲ್ಲಿ ನಾನು-ಅವನು ಪ್ರತಿದಿನ ಸಿಕ್ತಾ ಇದ್ವಿ. ಆಫೀಸ್ ಮುಗಿದ ಮೇಲೆ ಎಲ್ಲಾದ್ರೂ ಕೂತ್ರೆ ರಾತ್ರಿ 12ರವರೆಗೂ ನಾವು ಜೊತೇಲೇ ಇರ್ತಿದ್ವಿ. ನಮ್ಮ ಜೊತೆಗೆ ಶೆಟ್ಟಿ ಸರ್, ಸಂದೇಶ್, ಭವಿತ್, ಚಂದನ್, ಆಗಾಗ ಸೋಮಣ್ಣ ಮಾಚಿಮಡ. ನಾವೆಲ್ಲಾ ಒಟ್ಟಿಗಿದ್ದ ಅಷ್ಟೂ ದಿನ ನಾನು ರಘು ಅಕ್ಕಪಕ್ಕದಲ್ಲೇ ಕೂತು ಮಾತಾಡಿಕೊಂಡು ಕಾಲ ಕಳೆದಿದೀವಿ. ನಮ್ಮಿಬ್ಬರಿಗೂ ಅದೇನೋ ಅಟ್ಯಾಚ್‍ಮೆಂಟು. ಒಂಥರಾ ಫಿವಿಕಾಲ್ ಕಾ ಜೋಡ್ ಹೆ.
ರಘು ನನಗಿಂತ ವಯಸ್ಸಲ್ಲಿ ಸ್ವಲ್ಪ ದೊಡ್ಡವನು, ಅವನು ನನ್ನ ಸ್ನೇಹಿತನಿಗಿಂತ ಸಹೋದರನಾಗಿ ನಂಗೆ ತುಂಬಾ ಇಷ್ಟವಾಗ್ತಾನೆ. ನನ್ನೆಲ್ಲಾ ಗುಡ್ ಅಂಡ್ ಬ್ಯಾಡ್ ಟೈಮಲ್ಲಿ `ನಾನಿದೀನಿ ಬ್ರದರ್, ಡೋಂಟ್ ವರಿ’ ಅಂತ ಅವನು ಕೊಡೋ ಕಾನ್ಫಿಡೆನ್ಸು ನನ್ನನ್ನು ಎಷ್ಟೋ ಸಲ ಗೆಲ್ಲಿಸಿದೆ. ಅವನಿಗೆ ಒಂದೇ ಆಸೆ, `ಬ್ರದರ್, ನಾನು ಸಖತ್ ಫೇಮಸ್ ಆಗ್ಬೇಕು, ನಾನು ರೋಡಲ್ಲಿ ಹೋಗ್ತಿದ್ರೆ ಜನ ನನ್ನನ್ನು ಗುರುತು ಹಿಡೀಬೇಕು’ ಅನ್ನೋದು. ರಘುಗೆ ಸಿನಿಮಾ ಅಂದ್ರೆ ಪ್ರೀತಿ. ನೋಡೋಕಲ್ಲ, ಆಕ್ಟ್ ಮಾಡೋಕೆ..! 3-4 ಸಿನಿಮಾದಲ್ಲಿ ಆಕ್ಟ್ ಸಹ ಮಾಡಿದ್ದಾನೆ ನಮ್ ರಘು. ಅವನ ಆಸೆ ಈಡೇರುತ್ತೆ. ಅವನ ಹಠ-ಛಲ ಅವನನ್ನು ಖಂಡಿತ ಗೆಲ್ಲಿಸುತ್ತೆ. ಅದಕ್ಕೆ ಒಬ್ಬ ಗೆಳೆಯನಾಗಿ, ಸಹೋದರನಾಗಿ ಅವನ ಜೊತೆ ಯಾವತ್ತಿಗೂ ನಾನಿರ್ತೀನಿ, ನಾನಿರ್ಲೇಬೇಕು.
ಯಸ್, ಕಮಿಂಗ್ ಟು ದ ಪಾಯಿಂಟ್. ಸುಮಾರು 15-16 ವರ್ಷದ ಹಿಂದೆ ಒಬ್ಬ ಹುಡುಗ ಬೆಂಗಳೂರೆಂಬ ಸಮುದ್ರಕ್ಕೆ ಬೀಳ್ತಾನೆ. ಅವನದು ಖಾಲಿ ಕೈ, ಮೆಜೆಸ್ಟಿಕ್‍ನಲ್ಲಿದ್ದ ಬಾರ್ ಕೆಳಗಿನ ಒಂದು ಪುಟ್ಟ ಆಫೀಸಲ್ಲಿ ಕೆಲಸ. ಅವತ್ತೇ ಅವನ ಕಣ್ಣಲ್ಲೊಂದು ಕಿಚ್ಚಿತ್ತು. ನಾನ್ ಏನೋ ಆಗ್ತೀನಿ ಅಂತ. ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬಾರ್ ಕೆಳಗೆ ಪುಡಿಗಾಸಿಗೆ ಕೆಲಸ ಮಾಡ್ತಿದ್ದ ಹುಡುಗ ಮುಂದೊಂದು ದಿನ ಆ ಬಾರಿನ ಫ್ಲೋರ್ ಮಾಲೀಕ. ಅದ್ಬುತ ಪಾಂಡಿತ್ಯವೇನಿಲ್ಲ, ಆದ್ರೆ ತಲೆ ಇತ್ತು. ಹೇಗೆ ಬದುಕಬೇಕು ಅನ್ನೋದು ಗೊತ್ತಿತ್ತು. ಅಷ್ಟೇ ಸಾಕಲ್ವಾ. ಅವನು ತಿರುಗಿ ನೋಡ್ಲೇ ಇಲ್ಲ. ಅವನ ಬ್ಯಾಂಕ್ ಬ್ಯಾಲೆನ್ಸ್, ಲೈಫ್ ಸ್ಟೈಲ್ ಎಲ್ಲಾ ಚೇಂಜ್ ಆಯ್ತು. ಇವತ್ತವನಿಗೆ ಬೆಂಗಳೂರಲ್ಲಿ ಸ್ವಂತ ಮನೆ ಇದೆ. ಓಡಾಡೋಕೆ ಎರಡೆರೆಡು ಕಾರ್ ಇದೆ. ಮೈಮೇಲೆ ಬ್ರ್ಯಾಂಡೆಡ್ ಬಟ್ಟೆಗಳಿದೆ. ಕಾಲಲ್ಲಿ ರೀಬಾಕ್, ನೈಕ್ ಶೂ ಇದೆ. ಯಾವುದೂ ಆಕಾಶದಿಂದ ಬಿದ್ದಿದ್ದಲ್ಲ, ಕಷ್ಟಪಟ್ಟು ದುಡಿದಿದ್ದು. ಶ್ರಮಕ್ಕೆ ಸಿಕ್ಕ ಪ್ರತಿಫಲ ಅದು. ಇಷ್ಟೆಲ್ಲಾ ಹೇಳಿದ್ದು ಅವನ ಬಗ್ಗೇನೆ. ಅದೇ ನನ್ನ ಬ್ರದರ್ ರಘು ಬಗ್ಗೆ.
ಇತ್ತೀಚೆಗೆ ಅವನೊಂದು ಕ್ಯಾಮರಾ ತಗೊಂಡ, ಎರಡೂವರೆ ಲಕ್ಷದ್ದು. ತಗೋಬೇಕಾದ್ರೆ ಜೊತೆಗೆ ನನ್ನನ್ನೂ ಕರ್ಕೊಂಡ್ ಹೋಗಿದ್ದ. ಅವನಿಗೇನೋ ನಂಬಿಕೆ ನನ್ನ ಬಗ್ಗೆ. ಅದರ ಚೆಕ್ ಕೊಡುವಾಗ, `ಬ್ರದರ್ ಈ ಚೆಕ್ ಅವರಿಗೆ ನೀವೇ ಕೊಡಿ’ ಅಂತ ಆ ಕ್ಯಾಮರಾ ಕೊಟ್ಟವರಿಗೆ ಕೊಡಿಸಿದ. `ನಂಗೆ ಇದೆಲ್ಲಾ ಏನೂ ಗೊತ್ತಿಲ್ಲ ಬ್ರದರ್ ನೀವೇ ಏನೋ ಮಾಡಿ’ ಅಂದ. ಆದ್ರೆ ನೀವ್ ನಂಬ್ತಿರೋ ಬಿಡ್ತಿರೋ ಆ ಕ್ಯಾಮರಾ ತಗೊಂಡ 1 ತಿಂಗಳ ಒಳಗೆ ಏನಿಲ್ಲಾ ಅಂದ್ರು ಒಂದು ಲಕ್ಷ ದುಡಿದಿದ್ದಾನೆ ನಮ್ ಹೀರೋ. ಅದು ಅವನ ಟ್ಯಾಲೆಂಟು..! ಗೊತ್ತಿರೋರಿಗೆ ಬಾಡಿಗೆ ಕೊಟ್ಟು, ಯಾವ್ದಾದ್ರೂ ಸಿನಿಮಾ ಟೀಮಿನ ಜೊತೆ ಸ್ಟ್ಯಾಂಡ್‍ಬೈ ಕ್ಯಾಮರಾ ಅಂತ ಕಳಿಸಿ ದಿನಕ್ಕೆ ಅದರಲ್ಲೇ 3-4 ಸಾವಿರ ದುಡಿದು ಬಿಡ್ತಾನೆ. ಅವನು ಚಾಣಕ್ಯನ ದೂರದ ರಿಲೀಶನ್ ಇರ್ಬೇಕು ಅನ್ನೋ ಡೌಟು ನಂಗೆ ಯಾವಾಗ್ಲೂ ಬರೋದು ಇಂತದ್ದೇ ಕಾರಣಗಳಿಗೆ. ಅಂದಹಾಗೆ ಇತ್ತೀಚೆಗೆ ಅವನದೊಂದು ಫೋಟೋ ಶೂಟ್ ಸಹ ಅದೇ ಕ್ಯಾಮರಾದಲ್ಲಿ ಮಾಡಿದ್ದೆ ನಾನು. ಹೆಸರಿಗೆ ತಕ್ಕ ಹಾಗೇ ಫೋಟೊದಲ್ಲೂ ಸ್ಮಾರ್ಟ್ ನಮ್ಮ ರಘು..
ನಮ್ಮ ರಘು ಒಳಗೆ ಒಂದು ಮಗುವಿನ ಮನಸ್ಸಿದೆ. ಅವನು ಮುಗ್ಧ ಅಂದ್ರೆ ತಪ್ಪಾಗುತ್ತೆ, ಆದ್ರೆ ಅವನು ಕೆಟ್ಟವನಲ್ಲ ಅನ್ನೋದಂತೂ ಸತ್ಯ. ಅವನಿಗೆ ನಮ್ಮವ್ರು ತಮ್ಮವ್ರು ಅಂದ್ರೆ ಭಲೇ ಪ್ರೀತಿ. ಅವನು ಯಾರನ್ನೂ ಅಷ್ಟು ಸುಲಭಕ್ಕೆ ಹತ್ತಿರ ಸೇರ್ಸಲ್ಲ. ಹತ್ತಿರವಾದ್ರೆ ಅವನು ಅವರನ್ನ ಅಪ್ಪನಾಣೆ ಬಿಡಲ್ಲ. ಯಾವಾಗ್ಲೂ ಹೇಳ್ತಿರ್ತಾನೆ, `ನಿಮಗೆಲ್ಲಾ ಏನಾದ್ರೂ ಒಂದ್ ವ್ಯವಸ್ಥೆ ಮಾಡೋಣ ಬ್ರದರ್, ಎಲ್ಲರೂ ಚೆನ್ನಾಗಿರ್ಬೇಕು’ ಅಂತ. ಅವನು ಮಾಡ್ತಾನೋ ಬಿಡ್ತಾನೋ ಗೊತ್ತಿಲ್ಲ. ಆದ್ರೆ ಹಾಗೆ ಹೇಳೋ ಮನಸ್ಸಾದ್ರೂ ಈ ಕಾಲದಲ್ಲಿ ಯಾರಿಗಿದೆ ನೀವೇ ಹೇಳಿ.? ಅದಕ್ಕೊಂದು ಒಳ್ಳೇ ಮನಸ್ಸು ಬೇಕು, ಅದು ಅವನಿಗಿದೆ. ಅದಕ್ಕೇ ಅವನಂದ್ರೆ ನಂಗೆ ತುಂಬಾ ಇಷ್ಟ. ಅವನು ನಂಗೆ ಎಷ್ಟ್ ಒಳ್ಳೇ ಫ್ರೆಂಡ್ ಅನ್ನೋಕೆ ಮತ್ತೊಂದ್ ಸಾಕ್ಷಿ ಏನು ಗೊತ್ತಾ..? ಅವನು ನನ್ನನ್ನು ಶಬರಿಮಲೆಗೂ ಕರೀತಾನೆ, ಬ್ಯಾಂಕಾಕಿಗೂ ಕರೀತಾನೆ..!
ಅವತ್ತೊಂದು ದಿನ ರಘು ಅವನ ಸಿನಿಮಾದ ಶೂಟಿಂಗ್‍ನಲ್ಲಿದ್ದ. ಅದೆಲ್ಲೋ ಬಾಣಸವಾಡಿ ಹತ್ತಿರ. ಅವನು ನನ್ನನ್ನು ಶೂಟಿಂಗ್ ಟೈಮಲ್ಲಿ ಬನ್ನಿ ಅಂತ ಕರೆದಿದ್ದ. ಆದ್ರೆ ಕಾರಣಾಂತರದಿಂದ ಹೋಗೋಕೆ ಸಾಧ್ಯ ಆಗ್ಲಿಲ್ಲ. ಅರ್ಜೆಂಟ್ ಕೋಲಾರದ ಅಣ್ಣನ ಮನೆಗೆ ನಾನು, ನನ್ನ ಹೆಂಡ್ತಿ ಹೋಗಿದ್ವಿ. ಕೋಲಾರ ತಲುಪೋದ್ರೊಳಗೆ ರಘು ಫೋನಿಂದ 10-12 ಮಿಸ್ ಕಾಲ್ ಇತ್ತು. ಮನೆಯ ಒಳಗೆ ಹೋಗೋಕೆ ಮುಂಚೆ ಅವನಿಗೆ ಕಾಲ್ ಮಾಡಿ ಮಾತಾಡೋಣ ಅಂತ ಫೋನ್ ಮಾಡಿದ್ರೆ, ಆ ಕಡೆಯಿಂದ ರಘು ಸ್ಟಾರ್ಟ್ ಮಾಡ್ಕೊಂಡ. ` ಇಷ್ಟೇ ಬ್ರದರ್, ನಾವೆಲ್ಲಾ ನಿಮಗೆ ಏನೂ ಅಲ್ಲ. ನಮ್ ರಘು ಸಿನಿಮಾ ಮಾಡ್ತಿದ್ದಾನೆ, ಶೂಟಿಂಗ್ ಸ್ಪಾಟಿಗೆ ಹೋದ್ರೆ ಅವನಿಗೆ ಒಂದಷ್ಟು ಕಾನ್ಫಿಡೆನ್ಸ್ ಬರುತ್ತೆ ಅಂತ ಯೋಚನೆ ಮಾಡ್ಲಿಲ್ಲ ನೀವು. ನನ್ನ ಮಾತಿಗೆ ಬೆಲೆ ಇಲ್ಲ, ನಮಗೆ ನಿಮ್ ಹತ್ತಿರ ಮಾರ್ಯಾದಿ ಇಲ್ಲ.’ ಹೀಗೇ ಶುರುವಾಗಿದ್ದು ನಿಲ್ಲಲೇ ಇಲ್ಲ. ಎಷ್ಟು ಕನ್ವಿನ್ಸ್ ಮಾಡಿದ್ರು ಅವನು ಕೇಳೋಕೆ ರೆಡೀನೇ ಇಲ್ಲ. ನಾನೂ ಲೈಟಾಗಿ ರೇಗಿ ಫೋನ್ ಕಟ್ ಮಾಡ್ಬಿಟ್ಟೆ. ಮಾರನೇ ದಿನ ನಾನು ಕೋಲಾರದಿಂದ ಬೆಂಗಳೂರಿಗೆ ಹೊರಟೆ. ಅವತ್ತು ಆಫೀಸಿಗೆ ರಜೆ ಹಾಕಿ ನನ್ನ ಹೆಂಡತೀನೂ ಕರ್ಕೊಂಡು ರಘು ಸಿನಿಮಾದ ಶೂಟಿಂಗ್ ಸ್ಪಾಟಿಗೆ ಹೋದೆ. ನಾವು ಹೋದ ಟೈಮಲ್ಲಿ ರಘು ಶೂಟಿಂಗ್‍ನಲ್ಲಿ ಬಿಜಿó. ಆದ್ರೂ ನನ್ನನ್ನು ನೋಡಿದ ಕೂಡ್ಲೆ ಎಲ್ಲಿಲ್ಲದ ಖುಷಿ ಅವನಿಗೆ. ಅವನ ಆ ಸಂಭ್ರಮ, ಸಂತಸ ಕೋಟಿ ಕೊಟ್ಟರೂ ಸಿಗಲಿಕ್ಕಿಲ್ಲ..! ನಂಗೂ ಅನ್ನಿಸ್ತು, ನಾನು ನಿನ್ನೇನೆ ಬರ್ಬೇಕಿತ್ತು ಅಂತ. ಒಬ್ಬ ಒಳ್ಳೆ ಫ್ರೆಂಡ್ ಇನ್ನೊಬ್ಬ ಫ್ರೆಂಡನ್ನ ಇಷ್ಟು ಎಕ್ಸ್‍ಪೆಕ್ಟ್ ಮಾಡ್ತಾನೆ ಅನ್ನೋದು ರಘು ನೋಡಿದ್ರೆ ಗೊತ್ತಾಗುತ್ತೆ.
ರಘು ರೀಲ್ ಲೈಫಲ್ಲಿ ಹೀರೋ ಆಗ್ಬೇಕು ಅಂತ ಸಖತ್ ಪ್ರಯತ್ನ ಮಾಡ್ತಿದ್ದಾನೆ. ಅವನು ಒಂದಲ್ಲಾ ಒಂದು ದಿನ ದೊಡ್ಡ ಸ್ಟಾರ್ ಆಗೇ ಆಗ್ತಾನೆ. ಆದ್ರೆ ಅವನಿಗೇ ಗೊತ್ತಿಲ್ಲದ ಸತ್ಯ ಅಂದ್ರೆ ಅವನು ರಿಯಲ್ ಲೈಫ್‍ನಲ್ಲಿ ಆಲ್ರೆಡಿ ಹೀರೋ ಆಗಿದಾನೆ. ಏನೂ ಇಲ್ಲದೆ ಬಂದವನು ಇವತ್ತು ಏನೇನೋ ಆಗಿದ್ದಾನೆ. ಕೆಲವರು ಕನಸು ಕಾಣೋಕೆ ಬದುಕ್ತಾರೆ, ಇನ್ನು ಕೆಲವರು ಕನಸು ಕಾಣ್ತಾ ಬದುಕ್ತಾರೆ, ಮತ್ತೆ ಕೆಲವರು ಕನಸು ನನಸು ಮಾಡೋಕೆ ಬದುಕ್ತಾರೆ. ಇದ್ರಲ್ಲಿ ಮೂರನೇ ಸಾಲಿಗೆ ಸೇರ್ತಾನೆ ನಮ್ಮ ಹೀರೊ ರಘು..! ಅವನ ಕನಸುಗಳು ಜೀವನದುದ್ದಕ್ಕೂ ನನಸಾಗ್ತಾ ಇರ್ಲಿ. ಅವನ ಟಿಕೆಟ್ ಬುಕ್ಕಿಂಗ್ ಆಫೀಸ್, ರಿಯಲ್ ಎಸ್ಟೇಟ್ ವ್ಯವಹಾರ, ಸಿನಿಮಾ ಬದುಕು, ಹೀಗೆ ಎಲ್ಲದರಲ್ಲೂ ನನ್ನ ಗೆಳೆಯ ಗೆಲ್ಲಲಿ ಅನ್ನೋದು ನನ್ನ ಹಾರೈಕೆ. ಅದೆಲ್ಲದಕ್ಕೂ ಮುಂಚೆ ಅವನಿಗೊಂದು ಮದುವೆ ಮಾಡ್ಸಪ್ಪ ಅನ್ನೋದು ದೇವರಲ್ಲಿ ನನ್ನ ಪ್ರಾರ್ಥನೆ. `ಜೈ ರಾಘವೇಂದ್ರ’

ಕುಚಿಕು ಕುಚಿಕು ಕುಚಿಕು… ನೀನು ಚಡ್ಡಿ ದೋಸ್ತು ಕಣೋ ಕುಚಿಕು…
ಎಲ್ಲಾ ಸ್ನೇಹಿತರಿಗೂ ಈ ಹಾಡು ಹೇಳೋಕಾಗಲ್ಲ. ಚಡ್ಡಿ ಅಂದ್ರೆ ಚಡ್ಡಿ ದೋಸ್ತೇ ಆಗಿರಬೇಕು. ಚಡ್ಡಿ ಹಾಕೋ ಟೈಮಲ್ಲಿ ಚಡ್ಡಿಯೊಳಗೆ ಚಡ್ಡಿ ಹಾಕೋಕಿನ್ನೂ ಶುರು ಮಾಡಿರಲ್ವಲ್ಲ, ಅವಾಗಿಂದ ಜೊತೇಗಿರೋನೇ ಚಡ್ಡಿ ದೋಸ್ತ್. ಅಂತಹ ಕೆಲವರು ನನ್ನ ಜೊತೆಗೆ ಈಗ್ಲೂ ಇದ್ದಾರೆ. ಅದರಲ್ಲಿ ಒಂದು ಎಕ್ಸ್‍ಟ್ರಾ ಆರ್ಡಿನರಿ ಕ್ಯಾಂಡಿಡೇಟ್ ಇದೆ. ಅದು ನನ್ನ ಜೀವನದ ಬೆಸ್ಟ್‍ಫ್ರೆಂಡ್ ಅಂದ ತಕ್ಷಣ ನನ್ನ ಮನಸ್ಸಿಗೆ ಹಾಗೂ ಕಣ್ಣ ಮುಂದೆ ಬರೋ ಫೇಸ್‍ಕಟ್. ಹೆಂಗೇ ಲೆಕ್ಕ ಹಾಕಿದ್ರೂ ನಮ್ಮಿಬ್ಬರ ಸ್ನೇಹಕ್ಕೆ ಸಿಲ್ವರ್ ಜ್ಯೂಬಿಲಿ ಆಗಿದೆ. ಆದ್ರೂ ಒಂದೇ ಒಂದು ಸಲ ನಾವಿಬ್ರೂ ಕಿತ್ತಾಡಿರೋ ನೆನಪಿಲ್ಲ. ನಮ್ಮಿಬ್ಬರದೂ ವಿಷ್ಣುವರ್ಧನ್-ಅಂಬರೀಶ್‍ಗಿಂತ ಸ್ವಲ್ಪ ಜಾಸ್ತೀನೇ ಫ್ರೆಂಡ್‍ಶಿಪ್ಪು… ಎಲ್ಲರ ಲೈಫಲ್ಲೂ ಇಂತವನೊಬ್ಬ ಇರ್ಬೇಕು ಅನ್ನಿಸೋ ಲೆವೆಲ್ಲಿಗೆ ಭಲೇ ಫ್ರೆಂಡು ಈ ನನ್ ಚಡ್ಡಿದೋಸ್ತು. ಹೆಸರು ಸುಮನ್… ಸುಮನ್ ಜಾನ್ ಫರ್ನಾಂಡಿಸ್.

bangdeನಮ್ ಸ್ಕೂಲ್ ಹೆಸರು ಅರವಿಂದ ಸ್ಕೂಲ್ ಅಂತ. ಆ ಕಾಲಕ್ಕೆ ನಮ್ಮೂರ್ ಸುತ್ತಮುತ್ತ ಇದ್ದ ಬೆಸ್ಟ್ ಸ್ಕೂಲು. ನಮ್ ಕ್ಲಾಸಲ್ಲಿ 25-30 ಜನ. ಅದ್ರಲ್ಲಿ 4-5 ಪ್ರಚಂಡರು. ಆ ಗುಂಪಲ್ಲಿ ನಾನು ಅವನು ಸಹ ಇದ್ವಿ. ಒಂದನೇ ಕ್ಲಾಸಿನಲ್ಲಿ ಪಾಠ ಮಾಡ್ತಿದ್ದ ಲೂಸಿ ಮಿಸ್‍ನಿಂದ ಹಿಡಿದು, 4ನೇ ಕ್ಲಾಸಲ್ಲಿ ಪಾಠ ಮಾಡಿದ ಶೈನಿ ಮಿಸ್‍ಗೂ ನಾವೇ ಟಾರ್ಗೆಟ್ಟು. ಐದನೇ ಕ್ಲಾಸಲ್ಲಿ ಗಣಿತ ಪಾಠ ಮಾಡಿದ ನಿರ್ಮಲ ಮಿಸ್‍ನಿಂದ ಹಿಡಿದು 10 ಕ್ಲಾಸ್‍ನಲ್ಲಿ ಕನ್ನಡ ಕಲಿಸಿದ ಜಯಮ್ಮ ಮಿಸ್ ತನಕ ಸುಮನ್-ಕೀರ್ತಿ ಅಂದ್ರೆ ತರ್ಲೆಗಳು ಅಂತಾನೇ ಫೇಮಸ್ಸು. ನಮಗದು ಅರವಿಂದ ಸ್ಕೂಲಲ್ಲಿ ಕೊಟ್ಟ ಐಎಸ್‍ಐ ಮಾರ್ಕ್. ನಮ್ ಜೊತೆ ಪ್ರಕಾಶ್ ಅಲಿಯಾಸ್ ಪುಕ್ಕಿ, ಪುನೀತ್ ಅಲಿಯಾಸ್ ಡೋರ, ತೋಪೆ ಅಲಿಯಾಸ್ ಕಿಶೋರ್ ಇದ್ರೂ ಸಹ. ನಮಗೆ ನಮ್ಮದೇ ಆದ `ಐಡೆಂಟಿಟಿ’ ಇತ್ತು. ನಾವಿಬ್ಬರೂ ಏನಿಲ್ಲ ಅಂದ್ರು 10 ವರ್ಷದ ಸ್ಕೂಲಲ್ಲಿ ಕನಿಷ್ಟ 10 ವರ್ಷ ಒಟ್ಟಿಗೇ, ಒಂದೇ ಬೆಂಚಲ್ಲಿ ಕೂತು ತರ್ಲೆ ಮಾಡಿದೀವಿ. ಅಂದ ಹಾಗೆ ನಾವು ಕ್ಲಾಸಿನ ಲಾಸ್ಟ್ ಬೆಂಚ್ ಬಾಯ್ಸ್..!

ನಮ್ಮಿಬ್ಬರದು ಒಂದು ಪ್ರಾಬ್ಲಮ್ಮು. ಸ್ಕೂಲಲ್ಲಿದ್ದ ಅಷ್ಟೂ ದಿನ ಇಬ್ಬರಿಗೂ ಒಂದೇ ಟೈಮಲ್ಲಿ ಒಂದು ಮತ್ತು ಎರಡು ಬರ್ತಿತ್ತು. ಅವನಿಗೆ ಬಂತು ಅನ್ನೋ ಕಾರಣಕ್ಕೆ ನಂಗೂ ಬರ್ತಿತ್ತೋ, ಅಥವಾ ನಂಗೆ ಬಂತು ಅಂತ ಅವನಿಗೂ ಬರ್ತಿತ್ತೋ ಗೊತ್ತಿಲ್ಲ. ಆದ್ರೆ ಇಬ್ಬರೂ ಒಟ್ಟಿಗೇ ಕಿರುಬೆರಳು ತೋರ್ಸಿ ಸುಸ್ಸು ಮಾಡೋಕೆ ಪರ್ಮಿಶನ್ ಕೇಳಿದ್ದಕ್ಕೆ ಲೆಕ್ಕವೇ ಇಲ್ಲ. ನಮ್ ಬ್ಯಾಚ್ ಒಂಥರಾ ಸಖತ್ತಾಗಿತ್ತು, ಒಬ್ಬಬ್ಬರು ಒಂದೊಂದರಲ್ಲಿ ಪಂಟರ್. ಇಲ್ಲಿ ನನ್ನದೂ ಸುಮನ್‍ದು ಕಾಂಪಿಟೇಶನ್. ನಮ್ಮಿಬ್ಬರ ಟ್ಯಾಲೆಂಟು ಸೇಮ್ ಟು ಸೇಮ್. ಅವನೂ ರನ್ನಿಂಗ್ ರೇಸು, ನಾನೂ ರನ್ನಿಂಗ್ ರೇಸು. ನಾನೂ ಸಿಂಗರ್, ಅವನೂ ಸಿಂಗರ್. ಯಾವುದೇ ಕಾಂಪಿಟೇಶನ್‍ಗಳಲ್ಲಿ ಅವನು ಫಸ್ಟ್ ಬಂದಿದ್ರೆ ನಾನ್ ಸೆಕೆಂಡ್, ನಾನ್ ಫಸ್ಟ್ ಬಂದಿದ್ರೆ ಅವನು ಸೆಕೆಂಡ್. ಆದ್ರೆ ಓದೋ ವಿಚಾರಕ್ಕೆ ಬಂದ್ರೆ ಅವನು ಬುದ್ಧಿವಂತ ಬಾಲಕ. ಆದ್ರೆ ನಮಗೂ ಪುಸ್ತಕಕ್ಕೂ ಎಣ್ಣೆ ಸಿಗೇಕಾಯಿ ಇದ್ದಹಾಗೆ. ಹಾಗಾಗಿ ಆ ವಿಚಾರದಲ್ಲಿ ನಾವು ವೀಕು. `ಸುಮನನ್ ಜೊತೆಗೇ ಇರ್ತೀಯ, ತರ್ಲೆ ಕೆಲಸ ಮಾಡೋಕಾಗುತ್ತೆ, ಅವನ ತರ ಕೂತು ಓದೋಕೆ ಏನ್ ರೋಗ’ ಅಂತ 10 ವರ್ಷ ನಿರಂತರವಾಗಿ ಉಗಿಸಿಕೊಂಡ ಖ್ಯಾತಿ ನಮ್ಮದು. ನಾವ್ ಏನ್ ಮಾಡೋದ್ ಸ್ವಾಮಿ, ಗುರುಪ್ರಸಾದ್ ಸ್ಟೈಲಲ್ಲಿ ಹೇಳೋದಾದ್ರೆ ನಮ್ಮ ವಿಚಾರದಲ್ಲಿ `ವಿದ್ಯೆ ನೈವೇದ್ಯ’

ಅಂದ ಕಾಲತ್ತಿಲ್ ನಮ್ ಸುಮನ ಗುಂಡುಗುಂಡುಗೆ ಮುದ್ದು ಮುದ್ದಾಗಿದ್ದ. ಪೌಡರ್ ಹಾಕ್ಕೊಂಡು, ನೀಟಾಗಿ ತಲೆ ಬಾಚ್ಕೊಂಡು, ಕರ್ಚಿಫ್ ಇಟ್ಕೊಂಡು, ಐರನ್ ಮಾಡಿರೋ ಬಟ್ಟೆ ಹಾಕ್ಕೊಂಡು ಬಂದ್ರೆ ಸಂಜೆ ಹೋಗೋ ತನಕ ಹಂಗೇ ಇರೋನು. ಇನ್ನು ನಮಗೆ ಆ ಕಾಲದಲ್ಲಿ ಕರೀತಿದ್ದಿದ್ದು `ವಡ್ಡ’ ಅಂತ. ನೀವೇ ಊಹಿಸಿ ನಾನು ಹೇಗಿದ್ದೆ ಅಂತ. ಅದು ಬರ್ತಾ ಬರ್ತಾ `ಮಿಸ್ಟರ್ ವಿ’ ಅಂತ ಬದಲಾಗಿದ್ದು ಸಮಾಧಾನಕರ ವಿಚಾರ. ಅಂತಹ ನೀಟ್-ಕ್ಯೂಟ್ ಹುಡುಗ ಸ್ಕೂಲಲ್ಲಿ ಎಲ್ಲರ ಫೇವರೇಟ್. ನಮಗೆ ಅಷ್ಟೆಲ್ಲಾ ಸೀನಿಲ್ಲ. ಆದ್ರೂ ಅವನು ನಾನು ವೆರಿ ವೆರಿ ಕ್ಲೋಸ್. ಅವನಿಗೆ ನಾನಿಷ್ಟ, ನನಗೆ ಅವನಿಷ್ಟ. ಕ್ರಿಶ್ಚಿಯನ್ ಹುಡುಗನಾದ್ರು ಯಾವತ್ತೂ ನಮ್ಮ ಮನೆಯಲ್ಲಿ ಕೊಟ್ಟ ದೇವರ ಪ್ರಸಾದ ತಿನ್ನಲ್ಲ ಅಂದಿಲ್ಲ. ಅಮ್ಮ ಹಚ್ಚಿದ ಕುಂಕುಮ ಒರೆಸಿಕೊಂಡಿಲ್ಲ. ಇವತ್ತಿಗೂ ಸುಮನ್ ಜಂಟಲ್‍ಮ್ಯಾನ್. ನಮ್ಮ ಮನೆಯ ಎಲ್ಲ ಶುಭ ಸಂದರ್ಭದಲ್ಲೂ ಅವನಿರ್ತಿದ್ದ, ನಾನೂ ಅವರ ಎಲ್ಲ ಕಾರ್ಯಕ್ರಮಗಳಲ್ಲೂ ಹಾಜರ್ ಆಗ್ತಿದ್ದೆ. ನಮ್ಮ ಮನೆಯಲ್ಲಿ ಟಿವಿ ಇಲ್ಲದ ದಿನಗಳಲ್ಲಿ ಸುಮನ-ಪ್ರಕಾಶನ ಮನೆಗೆ ಡಬ್ಲ್ಯೂಡಬ್ಲ್ಯೂಎಫ್ ನೋಡೋಕೆ ಹೋಗ್ತಿದ್ದಿದ್ದನ್ನು ಹೇಗೆ ತಾನೇ ಮರೆಯೋಕೆ ಸಾಧ್ಯ.?

ಆರನೇ ಕ್ಲಾಸ್ ತನಕ ಹಂಗೂ ಹಿಂಗೂ ಇರೋ 25 ಜನರಲ್ಲಿ ನಾನು 10-11ನೇ ರ್ಯಾಂಕ್ ಬರ್ತಿದ್ದೆ. ಸುಮನ ಇಂಗ್ಲೀಷ್ ಮೀಡಿಯಂ ತಗೊಂಡ ಅಂತ ನಮ್ಮಮ್ಮ ನಂಗೂ ಇಂಗ್ಲೀಶ್ ಮೀಡಿಯಮ್‍ಗೆ ಹಾಕುದ್ರು. ತಗಳಪ, ಎಲ್ಲಾ ಟೆಸ್ಟಲ್ಲೂ ಫೇಲ್,ಫೇಲ್,ಫೇಲ್… ನಮ್ಮಮ್ಮ ಹೇಳ್ತಿದ್ದಿದ್ದಿಷ್ಟೆ, ಸುಮನ್ ಏನ್ ಮಾಡ್ತಾನೋ ಅದುನ್ ಮಾಡು.
ಎಲ್ಲಿಗೆ ಹೋಗ್ತೀನಿ ಅಂದ್ರೂ ನಮ್ಮನೇಲೆ ಕಿರಿಕ್ ಮಾಡೋರು, ಅದೇ ಸುಮನ್ ಬಂದು ಕರೆದ್ರೆ ಆಯ್ತು ಅಂತ ಕಳಿಸ್‍ಬಿಡೋರು. ಅವನಿಗಿರೋ ಮರ್ಯಾದೆ ನಮ್ಮನೇಲೆ ನಂಗೇ ಇರ್ಲಿಲ್ಲ ಅಂತೀನಿ..! ಸೈಕಲ್-ಬೈಕ್-ಈಜು ಹೀಗೆ ಜೀವನದಲ್ಲಿ ಸಾಕಷ್ಟನ್ನು ಒಂದೇ ಟೈಮಿಗೆ ಕಲ್ತಿದೀವಿ ನಾವಿಬ್ರೂ. ಅದ್ರಲ್ಲೂ ಈಜು ಕಲಿಯುವಾಗ ಸುಮನ್ ಈಜಿ ಆ ಕಡೆ ದಡಕ್ಕೆ ಹೋದ ಅಂತ ನಾನೂ ನೀರಿಗೆ ಹಾರಿ ಮುಳುಗಿದ್ದು ನನಗಿನ್ನೂ ನೆನಪಿದೆ. ಅವತ್ತು ಸಂತು, ವಿಶ್ವ, ಶಿವು ನನ್ನ ಪ್ರಾಣ ಉಳಿಸಿದ್ರು. ಸುಮನ್ ಅದಕ್ಕೆ ಸಾಕ್ಷಿಯಾಗಿದ್ದ. ಅವತ್ತೆಲ್ಲಾದ್ರೂ ಮುಳುಗಿ ಹೋಗಿದ್ರೆ ಫೋಟೋಗೆ ಹಾರ ಹಾಕಿ 17 ವರ್ಷ ಆಗಿರ್ತಿತ್ತು. ನಂಗೊತ್ತು, ಅವತ್ತು ನಾನೆಲ್ಲಾದ್ರೂ ಸತ್ತು ಹೋಗಿದ್ರೆ ನನ್ನ ಕುಟುಂಬದ ಹೊರತು ಇಲ್ಲೀ ತನಕ ನನ್ನನ್ನು ನೆನಸ್ಕೊಳ್ತಾ ಇದ್ದಿದ್ದು ಒಬ್ಬನೇ. ಅವನೇ ನನ್ನ ಜೀವದ ಗೆಳೆಯ ಸುಮನ್. ಅಂದಹಾಗೆ ಅವನಿಗೊಂದು ಅಡ್ಡ ಹೆಸರಿದೆ `ಬಾಂಗಡೆ’ ಅಂತ. ಅವನು ತುಂಬಾ ಮೀನು ತಿಂತಿದ್ದ ಅನ್ನೋ ಕಾರಣಕ್ಕೆ ಆ ಹೆಸರನ್ನು ಇಟ್ಟಿದ್ವಿ ಅನ್ಸುತ್ತೆ. ಇವತ್ತಿಗೂ ನನ್ನ ಮೊಬೈಲ್‍ನಲ್ಲಿ ಅವನ ಹೆಸರು ಬಾಂಗಡೆ ಅಂತಾನೇ ಸೇವಾಗಿದೆ.
ನಾವಿಬ್ಬರೂ ಒಳ್ಳೇ ಕಾಂಪಿಟೇಟರ್ಸ್. ಅವನಿಗೆ ಸರಿಯಾದ ಪೈಪೋಟಿ ಕೊಡೋದು ನಾನೇ, ನನಗೆ ಒಳ್ಳೇ ಪೈಪೋಟಿ ಕೊಡೋದು ಅವನೇ. ಅವತ್ತು-ಇವತ್ತು-ಯಾವತ್ತೂ. ಆದ್ರೆ ಅದು ಆರೋಗ್ಯಕರ ಫೈಟ್. ನಾವಿಬ್ಬರು ಇಷ್ಟಪಡೋ ಫೈಟ್. ಸ್ಕೂಲಿನ ಗಿತಗಾಯನ ಸ್ಪರ್ಧೆಯಲ್ಲಿ ಒಂದು ಸಲ ಅವನ `ಬಿದ್ದೀಯಬ್ಬೆ ಮುದುಕಿ’ ಹಾಡು ಫಸ್ಟ್ ಪ್ರೈಸ್ ತಗೊಂಡ್ರೆ ಮತ್ತೊಂದ್ ಸಲ ಅದೇ ಹಾಡಿನ ಎದುರು ನನ್ನ ` ಭಲೆಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು’ ಫಸ್ಟ್ ಪ್ರೈಸ್ ತಗೊಂಡಿದೆ. ಆದ್ರೆ ಅವನ ಹ್ಯಾಂಡ್‍ರೈಟಿಂಗ್ ಕಪ್ಪೆಚಿಪ್ಪಿನ ಒಳಗಿರುವ ಮುತ್ತು ಪೋಣಿಸಿದಂತೆ. ನಮ್ಮದು ಮತ್ತಿನ ಹೊರಗಿರುವ ಕಪ್ಪೆ ಚಿಪ್ಪಿನಂತೆ. ಅವನ ಹ್ಯಾಂಡ್‍ರೈಟಿಂಗ್ ತೋರ್ಸಿ ತೋರ್ಸಿ ಜಯಮ್ಮ ಮಿಸ್ ಸ್ಕೂಲ್ ಬಿಡೋ ತನಕ ನನಗೆ ಹೊಡೆದಿದ್ದು ನೆನಸ್ಕೊಂಡ್ರೆ ಈಗ್ಲೂ ಅಂಗೈ ನೋವಾಗುತ್ತೆ..!
ಇದೆಲ್ಲಾ ಅವತ್ತಿನ ಮಾತು. ಎಸ್‍ಎಸ್‍ಎಲ್‍ಸಿ ಮುಗಿದ ಮೇಲೆ ಅವರೆಲ್ಲಾ ಸೈನ್ಸ್ ತಗೊಂಡ್ರು, ನಾವು ಗಣಿತದಲ್ಲಿ 30 ಮಾಕ್ರ್ಸ್ ತಗೊಂಡೋರು ಟ್ರ್ಯಾಕ್ ಚೇಂಜ್ ಮಾಡಿದ್ವಿ. ಅಲ್ಲಿಗೆ ನಾವು ದೂರ ಆದ್ವಿ. ಆದ್ರೆ ನಮ್ಮಿಬ್ಬರ ಸ್ನೇಹ ದೂರ ಆಗ್ಲೇ ಇಲ್ಲ. ಅವನು ಓದ್ತಾ ಇದ್ದ ಸೇಕ್ರೆಡ್ ಹಾರ್ಟ್ ಕಾಲೇಜಿಗೆ ಹೋಗಿ ಅವನನ್ನು ಮೀಟ್ ಬಂದಿದೀನಿ. ಅವನು ಓದ್ತಿದ್ದ ರಾಣೆಬೆನ್ನೂರಿನ ಇಂಜಿನಿಯರಿಂಗ್ ಕಾಲೇಜಿಗೂ 2-3 ಸಲ ಹೋಗಿ ಬಂದಿದ್ದೆ. ಅಷ್ಟರಲ್ಲಿ ನಾನು ಬೆಂಗಳೂರಿಗೆ ಬಿದ್ದೆ. ಆಗಲೇ ನಮ್ಮ ಸ್ನೇಹಕ್ಕೆ ಬ್ರೇಕ್ ಬಿದ್ದಿದ್ದು. ಅದಾದ ಮೇಲೆ 4-5 ವರ್ಷ ನಮ್ಮದು ಅಪರೂಪದ ಸ್ನೇಹ ಆಗಿಬಿಡ್ತು. ಬರ್ತ್‍ಡೇ ವಿಶ್‍ಗೆ ಮಾತ್ರ ನಮ್ಮ ಸ್ನೇಹ ಸೀಮಿತವಾಗಿತ್ತು. ಅವನಿಗೆ ಮದುವೇನೂ ಆಯ್ತು. ಅದಾದ ಮೇಲಂತೂ ನಾವಿಬ್ಬರೂ ದೂರ ದೂರ ದೂರ. ನಾನ್ ಬ್ಯಾಚುಲರ್ರು, ಅವನು ಮ್ಯಾರೀಡ್. ಸ್ನೇಹ ಸಿಂಕ್ ಆಗ್ಲೇ ಇಲ್ಲ. ಅವನ ಮದುವೆಗೆ ಹೋಗಿ ಬಂದ ಮೇಲೆ ಮತ್ತವನನ್ನು ಮೀಟ್ ಮಾಡಿದ್ದೂ ನನಗೆ ನೆನಪಿಲ್ಲ. ಆದ್ರೆ ನನ್ನ ಮದುವೆ ಆದ್ಮೇಲೆ ಪಿಕ್ಚರ್ ಚೇಂಜ್ ಆಗೋಯ್ತು.
ಹೌದು, ಮದುವೆ ಆದ್ಮೇಲೆ ನನ್ನ ಹಳೆಯ ಗೆಳೆಯ ಮತ್ತೆ ನನಗೆ ಸಿಕ್ಕಿದ. ಮತ್ತದೇ ಸುಮನ. ಅವತ್ತು ಜೀವಕ್ಕೆ ಜೀವದ ತರಹ ಇದ್ದವರು ಮತ್ತೆ ಅದೇ ತರ ಆಗೋಕೆ ಜಾಸ್ತಿ ದಿನ ಹಿಡೀಲಿಲ್ಲ. ಹಿಂದೆಂದಿಗಿಂತಲೂ ನಾವು ಈಗ ಕ್ಲೋಸು. ನಮ್ಮಿಬ್ಬರ ಕಷ್ಟ ಸುಖವನ್ನು ಸರಿ ಸಮನಾಗಿ ಹಂಚಿಕೊಂಡು ಖುಷಿಖುಷಿಯಾಗಿದೀವಿ. ಯಾವ ಹೀರೋಗೂ ಕಮ್ಮಿ ಇಲ್ಲ ಇನ್ನೋ ರೇಂಜಿಗೆ ಸ್ಮಾರ್ಟ್‍ಬಾಯ್ ನನ್ನ ಗೆಳೆಯ. ಅವನದು ಇವತ್ತಿಗೂ ದೇವರಂಥಾ ಮನಸ್ಸು. ಅದಕ್ಕೆ ಅವನ ಹೆಂಡತಿಯಾಗಿ ಬಂದವಳೂ ಸಹ ಅಂಥವಳೇ. ಇವತ್ತು ಅವಳೂ ಸಹ ನಂಗೆ ಅವನಷ್ಟೇ ಕ್ಲೋಸ್ ಫ್ರೆಂಡ್. ಅವತ್ತು ಸುಮನನ್ನ ನೋಡಿ ನೋಡಿ ನನ್ನಮ್ಮ ಹೇಳಿದ್ರು `ಸುಮನನ ತರದ್ದೇ ಕ್ರಿಶ್ಚಿಯನ್ ಹುಡುಗೀನ ತಂದು ಮದ್ವೆ ಮಾಡ್ತೀನಿ ನಿಂಗೆ’ ಅಂತ. ಗಂಡಾಗಲಿ, ಹೆಣ್ಣಾಗಲಿ, ಅಂತಹ ಮತ್ತೊಬ್ಬ ಸುಮನ್ ಪ್ರಪಂಚದಲ್ಲಿ ಯಾರೂ ಇಲ್ಲ. ಇರೋದೊಬ್ಬನೇ ಸುವiನ್, ಅವನು ನನ್ನ ಗೆಳೆಯ.
ನಮ್ಮ ಲೈಫಿನ ಕೆಲವು ಸ್ವಾರಸ್ಯ ಹೇಳಿಲ್ಲ ಅಂದ್ರೆ ಅವನ ಬಗ್ಗೆ ಹೇಳಿ ಮಜಾನೇ ಇರಲ್ಲ.
ಸುಮನ್ ಫೋನ್ ತಗೊಂಡಿದ್ದ. ಹೊಸ ಮೊಬೈಲು. ನಂಬರ್ ಕೊಟ್ಟು ಹೋದ. ನನ್ನ ಹತ್ತಿರ ಅಷ್ಟೊತ್ತಿಗಾಗ್ಲೆ ಒಂದು ಜಾಮಿಟ್ರಿ ಬಾಕ್ಸ್ ಮೊಬೈಲ್ ಇತ್ತು. ನಂಬರ್ ಕೊಟ್ಟು ಹೋದ ಮಾರನೇ ದಿನ ನನ್ನ ಮೊಬೈಲಿಗೆ ಒಂದು ಮೆಸೇಜ್ ಬಂತು ಇನ್ನೊಬ್ಬ ಫ್ರೆಂಡ್ ನಂಬರ್‍ನಿಂದ. ` ಒಂದು-ಎರಡು ರೂಮಿಗೆ ಹೊರಡು, ಮೂರು ನಾಲ್ಕು ಚಿಲಕ ಹಾಕು’ ಅಂತ ಶುರುವಾಗೋ ಗಲೀಜು ಮೆಸೇಜ್ ಅದು. ನಿನ್ನೆ ತಾನೇ ಸುಮನ್ ನಂಬರ್ ಕೊಟ್ಟು ಹೋಗಿದ್ದ ಅಂತ ನೆನಪಾಗಿ ಅವನಿಗೆ ಫಾರ್ವರ್ಡ್ ಮಾಡ್ದೆ. ಆ ಕಡೆಯಿಂದ ರಿಪ್ಲೆ ಬರಲೇ ಇಲ್ಲ. ಸಂಜೆ ಸುಮನ್ ಸಿಕ್ಕಿದ. `ಏನ್ ಮಗಾ, ಹೆಂಗಿತ್ತು ಮೆಸೇಜು’ ಅಂದೆ. ಯಾವ್ ಮೆಸೇಜ್ ಮಗಾ ಅಂತ ಸುಮನ್ ಕೇಳ್ದ. ಪಾಪ ಗೊತ್ತೇ ಇಲ್ಲ ಅಂತ ರೇಗಿಸಿ ಮತ್ತೆ ಅದನ್ನ ಜೋರಾಗಿ ಓದಿ ಹೇಳ್ದೆ. `ನಿಜವಾಗ್ಲೂ ಕಳಿಸಿದ್ಯಾ ಮಗಾ ಅಂತ ಕೇಳ್ದ ಸುಮನ್. `ಹೂ ಕಣೋ, ಯಾಕೋ.. ಬರ್ಲಿಲ್ವ..?’ ಅಂತ ನಾನ್ ಕೇಳ್ದೆ. ಅವನು ಉತ್ತರ ಕೊಟ್ಟ ` ಬಂದಿರುತ್ತೆ ಮಗಾ, ಆದ್ರೆ ಫೋನ್ ನಮ್ಮಪ್ಪ ತಗೊಂಡ್ ಹೋಗಿದ್ದಾರೆ’ ಅಂದ. ಕುಸಿದು ಬೀಳೋದ್ ಒಂದೇ ಬಾಕಿ. ಮೊದಲೇ ಅವರಪ್ಪನ ಕಣ್ಣಲ್ಲಿ ನಾನು ಪೋಲಿ-ಪೊರಕಿ. ಅಂತದ್ರಲ್ಲಿ ಇದು ಬೇರೆ. ಅವರಪ್ಪನಿಂದ ಅವತ್ತು ಸಂಜೆ ಸುಮನ್‍ಗೆ ಫುಲ್ ಕ್ಲಾಸ್. ಆದ್ರೆ ಸುಮನ್ `ಅದು ಈ ಕೀರ್ತಿ ಅಲ್ವೇ ಅಲ್ಲ’ ಅಂತ ಅವರಪ್ಪನ ಹತ್ತಿರಾನೇ ವಾದ ಮಾಡಿ, ಸಂಜೇನೆ ನಂಗೆ ಫೋನ್ ಮಾಡಿ. ಇಮಿಡಿಯಟ್ ಆಗಿ ನಂಬರ್ ಚೇಂಜ್ ಮಾಡಿಸಿಬಿಟ್ಟ. ಆ ಹೊಸ ನಂಬರ್‍ನಿಂದ ಅವರಪ್ಪನಿಗೆ ನಾನ್ ಪೋನ್ ಮಾಡಿ ಕಂಪ್ಲೀಟ್ ಡ್ಯಾಮೇಜ್ ಕಂಟ್ರೋಲ್. ನನ್ನನ್ನ ಅವರಪ್ಪನ ದೃಷ್ಟಿಯಲ್ಲಿ ಕೆಟ್ಟವನನ್ನಾಗಿ ಮಾಡ್ಬಾರ್ದು ಅಂತ ಸುಮನ್ ಪಟ್ಟ ಪಾಡು ಅಷ್ಟಿಷ್ಟಲ್ಲ. ಅಂತಾ ಫ್ರೆಂಡ್ ನನ್ನ ಗೆಳೆಯ ಬಾಂಗಡೆ.
ಅವನ ಬಗ್ಗೆ ಹೇಳೋಕೆ ಇಡೀ ಪುಸ್ತಕ ಸಾಲೋದಿಲ್ಲ. ಅವನು ಜೊತೆಗಿದ್ದ ಒಂದೊಂದು ದಿನವೂ ವಂಡರ್‍ಫುಲ್. ಆರನೇ ಕ್ಲಾಸಲ್ಲಿ ನಾಗೇಂದ್ರ ಅನ್ನೋ ಫ್ರೆಂಡು ಫಿಟ್ಟಿಂಗ್ ಇಟ್ಟು ನಮ್ಮಿಬ್ಬರ ನಡುವೆ ಗ್ಯಾಪ್ ತಂದಿದ್ದ. ಅವತ್ತು ಅವನ ಮನೆಯ ಲ್ಯಾಂಡ್‍ಲೈನಿಗೆ ಫೋನ್ ಮಾಡಿ `ಪ್ಲೀಸ್ ಮಾತಾಡು ಮಗಾ’ ಅಂತ ಗೋಗರೆದಿದ್ದು ಇನ್ನೂ ನೆನಪಿದೆ ನಂಗೆ. ಅವನು ನನ್ ಜೊತೆ ಮಾತಾಡಲ್ಲ ಅಂದ್ರೆ ಅದಕ್ಕಿಂತ ಕೆಟ್ಟದು ಪ್ರಪಂಚದಲ್ಲಿ ಇನ್ನೇನೂ ಇಲ್ಲ. ಪ್ರತಿ ವರ್ಷದ ನನ್ನ ಹುಟ್ಟುಹಬ್ಬಕ್ಕೆ ಮಧ್ಯರಾತ್ರಿ 12 ಗಂಟೆಗೆ ನಾನು ಕಾದು ಕೂರೋದು ಅವನ ಫೋನ್‍ಗೆ. ಅವನೂ ಯಾವ ವರ್ಷವೂ ಅದನ್ನು ತಪ್ಪಿಸಿಲ್ಲ. ಯಾಕಂದ್ರೆ ಅವನು ನನ್ನ ಗೆಳೆಯ ಸುಮನ್.
ಸುಮನ್ ಅಣ್ಣ ಕಿರಣ್. ಅವನೂ ನನ್ನ ಸ್ನೇಹಿತನೇ. ಆದ್ರೆ ಅವನ ಮೇಲೆ ನಂಗೊಂಥರಾ ಹೊಟ್ಟೆಕಿಚ್ಚು. ಜೊತೆಗೇ ಹುಟ್ಟಿದ, ಜೊತೆಗೇ ಬೆಳೆದ. ಅವನ ಜೊತೆಗೇ ಇರ್ತಾನೆ ಅಂತ. ನನ್ ಹೆಂಡ್ತೀನೂ ಕೇಳ್ತಿರ್ತಾಳೆ `ನಿಮ್ಮಿಬ್ಬರಲ್ಲಿ ಯಾರಾದ್ರೂ ಒಬ್ಬರು ಹುಡುಗಿ ಆಗಿದ್ದಿದ್ರೆ ಮದುವೆ ಆಗ್ಬಿಡ್ತಿದ್ರಿ ಅಲ್ವಾ.?’ ಅಂತ. ಅದು ನಿಜ ಇದ್ರೂ ಇರ್ಬೋದು. ಕೊನೆಯದಾಗಿ ಅವನು ಪೂಜಿಸೋ ಜೀಸಸ್‍ಗೂ, ನಾನು ಪೂಜಿಸೋ ಬಾಬಾನಿಗೂ ಕೇಳೋದಿಷ್ಟೆ ` ಮುಂದಿನ ಜನ್ಮ ಅಂತಿದ್ರೆ, ನನ್ನೂ ಅವನ್ನೂ ಅಣ್ಣ ತಮ್ಮ ಮಾಡ್ಬಿಡಿ’ ಅಂತ.
ಗೆಳೆಯ ಐ ಆಮ್ ಲಕ್ಕಿ ಟು ಹ್ಯಾವ್ ಯು…

 ಅವತ್ತು ನಾನು ಪಬ್ಲಿಕ್ ಟಿವಿಯಲ್ಲಿ ಸಿನಿಮಾ ಬ್ಯೂರೋ ಚೀಫ್ ಆಗಿ ಕೆಲಸ ಮಾಡ್ತಿದ್ದೆ. ಇದ್ದಕ್ಕಿದ್ದ ಹಾಗೆ ಮುನಿರತ್ನ ಸರ್ ಫೋನ್ ಬಂತು. `ಕೀರ್ತಿ, ಮುತ್ತಪ್ಪ ರೈ ಕಂಠೀರವ ಸ್ಟೂಡಿಯೋದಲ್ಲಿ `ಕಠಾರಿವೀರ ಸುರಸುಂದರಾಂಗಿ’ ಸಿನಿಮಾದ ಡಬ್ಬಿಂಗ್ ಮಾಡ್ತಿದ್ದಾರೆ. ಹೋದ್ರೆ ನಿಂಗೆ ಇಂಟರ್‍ವ್ಯೂ ಕೊಡ್ತಾರೆ’ ಅಂದ್ರು. ಓಕೆ ಅಂದವನೆ ಕಾರ್,ಕ್ಯಾಮರಾ,ಕ್ಯಾಮರಾಮನ್ ಜೊತೆ ಹೊರಟೆ. ಕಂಠೀರವ ಸ್ಟೂಡಿಯೋದಲ್ಲಿ ಹತ್ತಿಪ್ಪತ್ತು ನಿಮಿಷ ಕಾದ ಮೇಲೆ ಮುತ್ತಪ್ಪ ರೈ ದರ್ಶನವಾಯ್ತು. ಮಾತಾಡಿಸಲು ಹೋಗ್ತಿದ್ದಾಗ ಅಲ್ಲಿಗೆ ಒಬ್ಬ ಐದು ಅಡಿ ಒಂಭತ್ತು ಇಂಚು ಎತ್ತರದ, ಸ್ಮಾರ್ಟ್ 26-28 ವರ್ಷದ ಯುವಕ ಬಂದ. ಅವನ ಕೈಯಲ್ಲಿ ಟಿವಿ9 ಲೋಗೋ ಮೈಕ್ ಇತ್ತು. ಅವನ ಬಗ್ಗೆ ಸಾಕಷ್ಟು ಕೇಳಿದ್ದೆ. ಆದ್ರೆ ನೋಡಿದ್ದು ಅದೇ ಮೊದಲು. ಟಿವಿ9 ನಂತಹ ನಂಬರ್ 1 ನ್ಯೂಸ್ ಚ್ಯಾನಲ್‍ನ ಮೆಟ್ರೋ ಬ್ಯೂರೋ ಚೀಫ್ ಅವನು. ಮುತ್ತಪ್ಪ ರೈ ಮೊದಲು ಇಂಟರ್‍ವ್ಯೂ ಕೊಟ್ಟಿದ್ದು ಅವನಿಗೇ. ಅದಾದ ಮೇಲೆ ನನ್ನ ಸರದಿ. ಅವನು ರೈ ಮಾತಾಡಿಸಿ ಹೊರಬರುವಾಗ ಆ ಸ್ಪುರದ್ರೂಪಿಗೆ `ಹಲೋ, ಕೀರ್ತಿ ಶಂಕರಘಟ್ಟ, ಪಬ್ಲಿಕ್ ಟಿವಿ’ ಅಂತ ಕೈ ಕೊಟ್ಟೆ. ಅಷ್ಟೇ ವಿನಯದಿಂದ ಪರಿಚಯ ಮಾಡಿಕೊಂಡ.` ಹಾಯ್, ಸೋಮಣ್ಣ ಮಾಚಿಮಡ, ಟಿವಿ9’.
ಅವತ್ತು ನಂಗೆ ಒಂದು ಸಣ್ಣ ಕ್ಲೂ ಸಹ ಇರಲಿಲ್ಲ. ಇದೇ ಸೋಮಣ್ಣ ಮುಂದೊಂದು ದಿನ ನನ್ನ `ಕುಚಿಕು’ ಆಗ್ತಾನೆ ಅಂತ. ನಮ್ಮಿಬ್ಬರ ಸ್ನೇಹದ ವಯಸ್ಸು ತುಂಬಾ ಚಿಕ್ಕದು. ಅದಕ್ಕೆ ಜಾಸ್ತಿ ಏಜ್ ಆಗಿಲ್ಲ. ಆದ್ರೆ ನಾವೊಂಥರಾ ಕ್ಲೋಸು… ಎಕ್ಸ್‍ಕ್ಯೂಸ್‍ಮಿ, ಅಪಾರ್ಥಕ್ಕೆ ಅವಕಾಶವಿಲ್ಲ.! somanna fb
ಅಂದಹಾಗೆ ಅವನಿಗೂ ನಂಗೂ ಜೀವನದಲ್ಲಿ ಸಾಕಷ್ಟು ಸಾಮ್ಯತೆಗಳಿದೆ. ಅವನ ಮದುವೆ 2012ರ ಮೇ30ಕ್ಕೆ, ನನ್ನದು ಅದರ ಮಾರನೇ ದಿನ. ಅವನು ಟಿವಿ9 ಬಿಟ್ಟ ಟೈಮಲ್ಲೇ ನಾನೂ ಪಬ್ಲಿಕ್ ಟಿವಿ ಬಿಟ್ಟೆ..! ಅವನು `ಸತ್ವ’ ಅಂತ ಕಂಪನಿ ಶುರು ಮಾಡಿಕೊಂಡ. ನಾನು `ವಿಸ್ಮಯ’ ಅಂತ ಕಂಪನಿ ಕಟ್ಟಿಕೊಂಡೆ. ಇಬ್ಬರಿಗೂ ಬಿಸನೆಸ್‍ನ ಸತ್ವ ಹಿಡಿಸಲಿಲ್ಲ. ಅದರಲ್ಲಿ ನಾವಿಬ್ಬರೂ ಅಂತಹ `ವಿಸ್ಮಯ’ವನ್ನೂ ಮಾಡಲಿಲ್ಲ.! ಹಂಗೂ ಹಿಂಗೂ 6-7 ತಿಂಗಳು ತಳ್ಳಿದ ನನಗೆ ಸಮಯ ನ್ಯೂಸ್ ಕೈಬೀಸಿ ಕರೀತು. ನಾನು ಅಲ್ಲಿ ತೂರಿಕೊಂಡ ತಿಂಗಳೊಳಗೆ ಅಲ್ಲಿ ಹಾಜರಾಗಿದ್ದು ಅದೇ ಸೋಮಣ್ಣ ಮಾಚಿಮಡ.
ಸೋಮಣ್ಣ ಮಾಚಿಮಡ ಸಮಯ ನ್ಯೂಸ್‍ನಲ್ಲೂ ಮೆಟ್ರೋ ಬ್ಯೂರೋ ಚೀಫ್. ಅವನ ಬಗ್ಗೆ ಯಾರು ಏನೇ ಹೇಳಬಹುದು, ಆದ್ರೆ ಅವನು ಮುಗ್ದ ಅಂತ ಗೊತ್ತಾಗೋಕೆ ನನಗೆ ಜಾಸ್ತಿ ದಿನ ಬೇಕಾಗಲಿಲ್ಲ. `ಸೋಮಣ್ಣಂಗೆ ಅಲ್ಲಿ ಸೈಟಿದಿಯಂತೆ, ಇಲ್ಲಿ ಮನೆ ಇದಿಯಂತೆ’ ಅನ್ನೋರಿಗೆ ತಲೆ ಸರಿ ಇಲ್ಲ ಅಷ್ಟೆ. ಅವನು ಅಂತವನಲ್ಲ. ಅವನಿಗೆ ಅಷ್ಟೆಲ್ಲಾ ಸೀನಿಲ್ಲ. ಅವನೊಬ್ಬ ಭಾವನಾಜೀವಿ, ಅವನೊಬ್ಬ ಎಮೋಷನಲ್ ಫೂಲ್, ಅವನೊಬ್ಬ ನಿರುಪದ್ರವಿ, ಅವನೊಬ್ಬ ನಿಜವಾದ ಗೆಳೆಯ… ಅಷ್ಟೆ..!
ಒಂದಂತೂ ಸತ್ಯ, ನನ್ನ ಮನಸಲ್ಲಿ ಸೋಮಣ್ಣ ಮಾಚಿಮಡ ಅಂದ್ರೆ ಏನೇನೋ ಬಿಲ್ಡಪ್ ಇತ್ತು. ಟಿವಿ9 ನಂತಹ ಸಂಸ್ಥೆಯಲ್ಲಿ ಕೆಲಸ ಮಾಡಿದವನು ಅಂದ ಮೇಲೆ ಸ್ವಲ್ಪ ಆಟಿಟ್ಯೂಡ್ ಇದ್ದೇ ಇರುತ್ತೆ ಅನ್ಕೊಂಡಿದ್ದೆ, ಅದು ಸುಳ್ಳಾಯ್ತು. ಯಾವತ್ತೂ ಅವನಿಗೆ ಆಟಿಟ್ಯೂಡ್ ಅಂಟಿಕೊಂಡೇ ಇಲ್ಲ..! ಅವನನ್ನು ನೋಡಿದ್ರೆ ಪಕ್ಕಾ ಫ್ರೊಫೆಶನಲ್ ಲುಕ್. ಅವನು ಮೈಕ್ ಹಿಡಿದ್ರೆ ಸ್ಕ್ರೀನ್ ನುಂಗಿಹಾಕೋ ಅಷ್ಟರ ಮಟ್ಟಿಗೆ ಅವನಿಗೆ ಕ್ಯಾಮರಾ ಫ್ರೆಂಡು. ರಿಪೋರ್ಟಿಂಗ್ ವಿಚಾರದಲ್ಲಿ ಸೋಮಣ್ಣ ಯಾವತ್ತಿಗೂ ಹೀರೋನೆ. ಅಂತಹ ಹೀರೋ ನಂಗೆ ಫ್ರೆಂಡ್ ಆಗ್ತಾನಾ ಅಂತ ಯೋಚ್ನೆ ಮಾಡ್ತಿದ್ದೆ. ಇವತ್ತು ನಾನು ಅವನು ಎಷ್ಟು ಕ್ಲೋಸ್ ಅಂದ್ರೆ, ನಮ್ಮಿಬ್ಬರ ಮಾತುಗಳು ಇವತ್ತು ಹೋಗಲೇ-ಬಾರಲೇ…!
ನಾನು ಯಾರನ್ನಾದ್ರೂ ತುಂಬಾ ಬೇಗ ಅರ್ಥ ಮಾಡ್ಕೋತೀನಿ. ತುಂಬಾ ಬೇಗ ಹತ್ತಿರವಾಗ್ತೀನಿ. ಆದ್ರೆ ಇವನು ನಾನು ಹತ್ತಿರವಾಗಿದ್ದು ಮಾತ್ರ ರೆಕಾರ್ಡ್ ಟೈಮ್‍ನಲ್ಲಿ. ಮೊದಲ ದಿನ ಹೇಗಿದ್ದೀರಿ..? ಎರಡನೇ ದಿನ ಹೇಗಿದ್ದೀರಿ ಬಾಸ್..? ಮೂರನೇ ದಿನ ಹೇಗಿದಿಯ..? ನಾಲ್ಕನೇ ದಿನ ಹೇಗಿದಿಯಲೇ..?! ಅದಕ್ಕೆ ಅವನೂ ಓಕೆ.. ನಾನೂ ಓಕೆ.. ಅಷ್ಟಕ್ಕೂ ಫ್ರೆಂಡ್ಸ್ ಅಂದ ಮೇಲೆ ಈ ಮರ್ಯಾದೆ ಯಾಕೆ..?
ಒಂದು ವಿಷ್ಯ ತಿಳಿದಿರಲಿ, ಈ ತುಂಬಾ ಭಾವುಕರನ್ನು ಮೇಂಟೇನ್ ಮಾಡೋದು ಸ್ವಲ್ಪ ಕಷ್ಟ. ಸೋಮಣ್ಣಂಗೆ ಒಂದ್ ಹೇಳಿದ್ರೆ ಕಮ್ಮಿ, ಎರಡ್ ಹೇಳಿದ್ರೆ ಜಾಸ್ತಿ..! ಅವನ ಭಾವನಾಜೀವಿಯ ಗುಣವೇ ಅವನ ಬಲ ಮತ್ತು ವೀಕ್‍ನೆಸ್..! ಎಲ್ಲರನ್ನೂ ನಂಬ್ತಾನೆ, ಎಲ್ಲರೂ ಬೇಕು ಅಂತಾನೆ. ಎಲ್ಲರಲ್ಲಿ ಹಲವರು ಸೋಮಣ್ಣನಿಗೆ ಮರುಭೂಮಿಯಲ್ಲಿ ಜೋಗ್‍ಫಾಲ್ಸ್ ನೋಡೋಕೆ ಟಿಕೆಟ್ ಕೊಟ್ಟವರೆ..! ಆದರೂ ಅವನು ನಂಬ್ತಾನೆ. ಅವನ ಆ ಮುಗ್ಧತೆ ಅವನನ್ನ ನನಗೆ ಇನ್ನಷ್ಟು ಹತ್ತಿರ ಮಾಡಿಬಿಡ್ತು. 8-9 ವರ್ಷ ಟಿವಿ ಮೀಡಿಯಾದಲ್ಲಿರೋ ಅವನಿಗೆ ಒಂದೇ ಒಂದು ಕನಸು. ` ಆ್ಯಂಕರ್ ಆಗ್ಬೇಕು’ ಅಂತ..! ಆ ಕನಸು ನನಸಾದ ದಿನ ಅವನ ಸಂತೋಷಕ್ಕೆ ಪಾರವೇ ಇಲ್ಲ. ಅಷ್ಟಕ್ಕೂ ಅವನ ಫಸ್ಟ್ ಆ್ಯಂಕರಿಂಗ್ ಎಕ್ಸ್‍ಪಿರಿಯೆನ್ಸ್ ಅಷ್ಟು ಅದ್ಬುತವೇನಾಗಿರಲಿಲ್ಲ. ಆದ್ರೆ ಬರ್ತಾಬರ್ತಾ ಅವನು ಅದರಲ್ಲಿ ಕಲಿತಿದ್ದಿದಿಯಲ್ಲ ಅದು ಮಾತ್ರ ಗ್ರೇಟ್. ಎಲ್ಲಾ ಚೀಫ್‍ಗಳಿದ್ದ ಮೀಟಿಂಗ್‍ನಲ್ಲಿ ಸಮಯ ನ್ಯೂಸ್ ಮಾಲೀಕ ವಿಜಯ್ ಟಾಟಾ ` ಸೋಮಣ್ಣನ ಆ್ಯಂಕರಿಂಗ್ ಸೂಪರ್ರಾಗಿರುತ್ತೆ’ ಅಂತ ಹೊಗಳಿಬಿಟ್ರು. ಅಷ್ಟು ಸಾಕು ಅವನ ಸಂತೋಷಕ್ಕೆ..! ಆ ಕ್ಷಣ ನಾನೂ ಸಹ ಸಖತ್ ಖುಷಿ ಪಟ್ಟಿದ್ದೆ… ಗೆಳೆಯ ಖುಷಿಯಾದ ಅನ್ನೋ ಕಾರಣಕ್ಕೆ.
ಇನ್ನು ನಮ್ಮಿಬ್ಬರ ಕಥೆ… ಹತ್ರತ್ರ ಒಂದೇ ವಯಸ್ಸು ನಮ್ಮಿಬ್ಬರದು. ಸೋ ನನ್ನ ಟೇಸ್ಟು, ಅವನ ಟೇಸ್ಟು ಒಂದೇ ತರ. ನಮ್ಮ ಸಂತೋಷ, ನಮ್ಮ ಬೇಸರ, ನಮ್ಮ ಸ್ಟ್ರೆಂಗ್ತ್-ವೀಕ್‍ನೆಸ್ ಎಲ್ಲಾ ಸೇಮ್ ಟು ಸೇಮ್. ನಮ್ಮ ಹೈಟು-ವೆಯ್ಟು, ಶರ್ಟು -ಪ್ಯಾಂಟು ಸೈಜು ಎಲ್ಲಾ ಒಂದೆ. ಒಂದೇ ವ್ಯತ್ಯಾಸ ಅಂದ್ರೆ ನಮ್ಮಿಬ್ಬರ ಕಲರ್. ! ಅವನಿಗೆ ನಾನ್ ಬುದ್ಧಿ ಹೇಳೋದು, ಅವನು ನಂಗ್ ಬುದ್ಧಿ ಹೇಳೋದು ದಿನನಿತ್ಯದ ಕೆಲಸ. ಆದ್ರೆ ಬುದ್ಧಿ ಕಲಿತ ಉದಾಹರಣೆ ಖಂಡಿತ ಇಲ್ಲ..!
ಅವನ ವಿಶೇಷತೆ ಏನ್ ಗೊತ್ತಾ..? ಅವತ್ತು ಅವನ ಕಾರ್ ಕಳ್ಕೊಂಡ ದಿನ ಸಹ ಅವನು ಎಂದಿನಂತೆಯೇ ಸಹಜವಾಗೇ ಇದ್ದ. ಅವನಲ್ಲಿ ಕಳವಳ ಇರ್ಲಿಲ್ಲ. ಸಿಗುತ್ತೆ ಅನ್ನೋ ಕಾನ್ಫಿಡೆನ್ಸ್ ಇತ್ತು. `ಕಷ್ಟಪಟ್ಟು ತಗೊಂಡಿದ್ದು ಮಗಾ, ಇನ್ನೂ ಲೋನ್ ಕಟ್ತಾ ಇದ್ದೀನಿ, ಸಿಗುತ್ತಲ್ವಾ ಮಗಾ..?’ ಅಂತ ಮುಗ್ಧವಾಗಿ ಕೇಳುವಾಗ ನಾನು ಬೇಡಿದ್ದಿಷ್ಟೆ. `ದೇವ್ರೆ, ಇವನ ಕಾರ್ ಸಿಗೋ ಹಾಗೆ ಮಾಡಪ್ಪ’ ಅಂತ. ಆ ಕಾರನ್ನು ಅವನ್ಯಾವತ್ತು ಕಾರ್ ತರ ಟ್ರೀಟ್ ಮಾಡೇ ಇಲ್ಲ. ಅದು ಅವನ ಬೆಸ್ಟ್ ಫ್ರೆಂಡ್ ಅಂತಿದ್ದ. ಅದನ್ನ ಎಮೋಶನಲಿ ಮಿಸ್ ಮಾಡ್ಕೋತಿದ್ದ. `ನನ್ ಕಾರ್ ಎಲ್ಲಿರ್ಬೋದೋ ಏನೋ ಅಲ್ವಾ ಮಗಾ, ಅದಕ್ಕೆ ಜೀವ ಇದ್ದಿದ್ರೆ ಅದು ನನ್ ತರಾನೇ ಮಿಸ್ ಮಾಡ್ಕೋತಿತ್ತು ಅಲ್ವಾ ಮಗಾ’ ಅಂತ ಅದೆಷ್ಟೋ ಸಲ ಕೇಳಿದ್ದ ಅವನು. ಆಫೀಸಿಂದ ಮನೆಗೆ ಹೊರಡುವಾಗ ಆಟೋದವರು ಅವನ ಏರಿಯಾಗೆ ಬರಲ್ಲ ಅಂತ ಹೇಳುವಾಗೆಲ್ಲಾ ತನ್ನ ಕಾರನ್ನು ನೆನಪಿಸ್ಕೊಂಡು ಫೀಲ್ ಆಗ್ತಿದ್ದ. ಮಳೆ ಬಂದ್ರೆ ಮತ್ತದೇ ಕಾರು, ಕಾರು, ಕಾರು. ಬೈದಬೈ, ಕಾರ್ ಕಳೆದು ಹೋಗೋ ಹಿಂದಿನ ದಿನ ಅವನ ಕಾರನ್ನ ನಾನ್ ತಗೊಂಡ್ ಹೋಗಿದ್ದೆ. ಕಳೆದು ಹೋಯ್ತು ಅಂತ ಪೊಲೀಸ್ ಸ್ಟೇಶನ್ನಿಗೆ ಕಂಪ್ಲೇಟ್ ಕೊಡೋಕೆ ಹೋದಾಗ, `ಇತ್ತೀಚೆಗೆ ನಿಮ್ಮ ಕಾರನ್ನ ಯಾರ್ಯಾರ್ ತಗೊಂಡ್ ಹೋಗಿದ್ರೋ ಅವರ ಡಿಟೇಲ್ಸ್ ಕೊಡಿ ಅಂತ ಪೊಲೀಸರು ಕೇಳಿದ್ರು’. ಅವತ್ತು ಸಹ ನನ್ನ ಹೆಸರನ್ನು ಪೊಲೀಸರಿಗೆ ಕೊಡದೇ ಬಂದಿದ್ದ ನನ್ನ ಗೆಳೆಯ. ಕೊನೆಗೊಂದು ದಿನ ಆ ಕಾರು ಸಿಕ್ಕಿಬಿಡ್ತು. ಆ ಕಳ್ಳ ಒಟ್ಟು 34 ಕಾರ್ ಕದ್ದಿದ್ದ. ಅವನು ಕದ್ದ ಕೊನೆಯ ಕಾರು ನನ್ನ ಗೆಳೆಯನದ್ದು. ಈಗವನು ಪೊಲೀಸರ ಅತಿಥಿ. ಆ ಕಾರು ವಾಪಸ್ ಸಿಕ್ಕಿದ್ದು ನಮ್ಮ ಪ್ರಾರ್ಥನೆಗಲ್ಲ, ಸೋಮಣ್ಣನ ಒಳ್ಳೇತನಕ್ಕೆ..! ತನ್ನ ಕಾರು ಕದ್ದವನನ್ನು ಮಾತನಾಡಿಸಿ ಅವನಿಗೆ ಖರ್ಚಿಗೆ ದುಡ್ಡು ಕೊಟ್ಟು ಬಂದ ಮಹಾನುಭಾವ ಇವನು..!
ಸೋಮಣ್ಣನಲ್ಲಿ ಇಷ್ಟವಾಗೋ ಹತ್ತಾರು ಗುಣಗಳಿವೆ. ಅವನ್ಯಾವತ್ತೂ ಯಾರ ಮೇಲೂ ಅವನಾಗೇ ಕಾಲು ಕೆರ್ಕೊಂಡು ಜಗಳಕ್ಕೆ ಹೋಗೋನಲ್ಲ. `ಅವತ್ತು ಆಫೀಸ್‍ನಲ್ಲಿ ಇನ್‍ಪುಟ್ ಚೀಫ್ ಶೋಭಾ ಮೇಡಂ ಜೊತೆ ಜೋರುಜೋರಾಗಿ ಕೆಲಸದ ವಿಚಾರಕ್ಕೆ ಜಗಳ ಆಡಿದ್ದ ಸೋಮಣ್ಣ, ಅದೇ ಶೋಭಾ ಮೇಡಂ ಕೆಲಸ ಬಿಟ್ಟ ದಿನ `ಯಾಕ್ ಮಗಾ ಬಿಟ್ರು. ತುಂಬಾ ಒಳ್ಳೆಯವ್ರು ಮಗಾ. ಅವರಿಗೆ ನನ್ ಮೇಲೇನೂ ಬೇಜಾರಿರಲ್ಲ ಅಲ್ವಾ’ ಅಂತ ನೊಂದುಕೊಂಡಿದ್ದ. ಅದಕ್ಕೇ ಅವನು ಎಲ್ಲರಿಗೂ ಇಷ್ಟ ಆಗೋದು. ಅವನು ಮಾಡದ ತಪ್ಪನ್ನು ಅವನು ಸುತಾರಾಂ ಒಪ್ಪಿಕೊಳ್ಳೋನೂ ಅಲ್ಲ. ಅದೊಂಥರಾ ವಿಚಿತ್ರ ಪ್ರಾಣಿ. ಯಾವಗ್ಲೂ `ಹಂಗ್ ಮಾಡ್ಬೇಕ್ ಮಗಾ, ಹಿಂಗ್ ಮಾಡ್ಬೇಕ್ ಮಗಾ… ನೀನು, ನಾನು ಎಲ್ರೂ ಬೆಳೀಬೇಕು ಮಗಾ..!’ ಇದೇ ಅವನ ಮಂತ್ರ. `ನಾನು ಮಾತ್ರ ಉದ್ಧಾರ ಆಗ್ಬೇಕು ಅನ್ನೋ ಪ್ರಪಂಚದಲ್ಲಿ ಎಲ್ಲರೂ ಬೆಳೀಬೇಕು ಅನ್ನೋ ನಿಷ್ಕಲ್ಮಶ ಮನಸ್ಸಿನವನು ನನ್ನ ಗೆಳೆಯ ಸೋಮಣ್ಣ ಮಾಚಿಮಡ. `ಮಗಾ, ನಿನ್ ತರ ಬರೆಯೋಕ್ ಬಂದಿದ್ರೆ ಮಿನಿಮಮ್ 10 ಬುಕ್ಸ್ ಬರ್ದಿರ್ತಿದ್ದೆ ಅಂತ ನಂಗೆ ಹುಚ್ಚು ಹತ್ತಿಸಿದವನೂ ಇವನೇ..!
ನಾವು ಒಟ್ಟಿಗೆ ಊಟಕ್ಕೆ ಹೋಗ್ತೀವಿ, ಒಟ್ಟಿಗೇ ಕೂತು ಗಂಟೆಗಟ್ಲೆ ಮಾತಾಡ್ತೀವಿ, ಅವನ ಕಂಪನಿಯನ್ನ ನನ್ನ ಫೇಸ್‍ಬುಕ್ ಪ್ರೊಫೈಲ್‍ನಲ್ಲಿ, ನನ್ನ ಕಂಪನಿಯನ್ನ ಅವನ ಫೇಸ್‍ಬುಕ್ ಪ್ರೊಫೈಲ್‍ನಲ್ಲಿ ಪ್ರಮೋಟ್ ಮಾಡ್ಕೋತೀವಿ. ಪರಸ್ಪರ ಬೆನ್ನು ತಟ್ಕೋತೀವಿ. ಪರಸ್ಪರ ಕಿತ್ತಾಡ್ಕೋತೀವಿ. ಅವನ ಪುಮಾ ಜ್ಯಾಕೆಟ್ ನನ್ ಹತ್ರ ಇದೆ. ನನ್ನ ನೈಕ್ ಅವನ ಮೈಮೇಲಿದೆ. ನಮ್ಮಬ್ಬರಲ್ಲಿ ನನ್ನದು ಅವನದು ಅಂತಿಲ್ಲ. ತುಂಬಾ ಕಮ್ಮಿ ಟೈಮಲ್ಲಿ ತುಂಬಾ ಹತ್ತಿರವಾಗಿದೀವಿ. ಇನ್ಯಾವತ್ತಿಗೂ ದೂರ ಆಗಲ್ಲ ಅಂತ ಅನ್ಕೊಂಡಿದೀವಿ. ನನ್ನ ಮಾತುಗಳನ್ನು ತುಂಬಾ ಎಂಜಾಯ್ ಮಾಡೋರಲ್ಲಿ ಸೋಮಣ್ಣನೂ ಒಬ್ಬ. ಮುಂದೊಂದು ದಿನ ನಾವಿಬ್ಬರೂ ವಾಕಿಂಗ್ ಸ್ಟಿಕ್ ಹಿಡ್ಕೊಂಡು ಓಡಾಡೋ ಟೈಮಲ್ಲಿ, ನನ್ನ ಮಾತನ್ನು ಅವತ್ತಿನ ನಮ್ಮ ಏರಿಯಾದ ಪಾರ್ಕಿನ ಕಟ್ಟೆ ಮೇಲೆ ಕೂತು ಅವನು ಎಂಜಾಯ್ ಮಾಡ್ಬೇಕು ಅನ್ನೊದು ನನ್ನಾಸೆ. ಅವನದೂ ಕೂಡ..! ಗೆಳೆಯಾ… ಇರೋ ತನಕ ಜೊತೆಗಿರೋಣ…
ನಾನವನಿಗೆ ಅವತ್ತೊಂದು ದಿನ ವಾಟ್ಸಾಪ್‍ನಲ್ಲಿ ಒಂದು ಮೆಸೇಜ್ ಕಳಿಸಿದ್ದೆ. ಅದನ್ನ ಹೇಳಿ ನನ್ನ ಕುಚಿಕು ಬಗ್ಗೆ ಮಾತು ಮುಗಿಸ್ತೀನಿ…
`ನೀ ನನಗಲ್ಲ ಬರಿಯ ಗೆಳೆಯ… ನೀ ನನಗಲ್ಲ ಬರಿಯ ಗೆಳೆಯ…
ನನಗೇನಾದರೂ ನಿನ್ನ ವಯಸ್ಸಿನ ಮಗಳಿದ್ದಿದ್ದರೆ ನೀನೇ ನನ್ನಳಿಯ..!

ಯಾವತ್ತೂ ರವಿಚಂದ್ರನ್ ಸರ್ ಸಿನಿಮಾನ ಮನdrishyaಸಾರೆ ಮೆಚ್ಚಿದವನಲ್ಲ ನಾನು. ಆಗಾಗ ಟಿವಿಯಲ್ಲಿ ನೋಡೋ ಅವರ ಅವತ್ತಿನ ಸಿನಿಮಾ ಬಿಟ್ರೆ ನನಗೆ ಬುದ್ದಿ ಬಂದ ಮೇಲೆ ಅವರ ಸಿನಿಮಾಗಳನ್ನ ಥಿಯೇಟರ್ ನಲ್ಲಿ ನೋಡಿ ವಾರೆವ್ಹಾ ಅಂತ ನನ್ನ ಬಾಯಲ್ಲಿ ಯಾವತ್ತೂ ಬಂದಿಲ್ಲ. ಆದ್ರೆ ಇವತ್ತು ಘಂಟಾಘೋ‍ಷವಾಗಿ ಹೇಳುತ್ತೇನೆ. ನಾನು ರವಿ ಸರ್ ಫ್ಯಾನ್..! ಅವರಿಗೆ ಅವರು ಮಾತ್ರ ಸಾಟಿ. ಈಗ ತಾನೇ ಅವರ `ದೃಶ್ಯ’ ನೋಡಿ ಬಂದೆ. ದೃಶ್ಯದ ಒಂದೊಂದು ದೃಶ್ಯವೂ ಸೂಪರ್ ಸೂಪರ್..!

ಪ್ರತಿ ಕ್ಷಣವೂ ನಿಮ್ಮನ್ನು ನೋಡಿಸಿಕೊಂಡು ಹೋಗುವ ಸಿನಿಮಾ, ಪ್ರತಿ ಪಾತ್ರಗಳೂ ಮನಸ್ಸಲ್ಲಿ ಉಳಿಯೋ ಸಿನಿಮಾ, ಎಲ್ಲೂ ಬಂಡಲ್ ಅಂತ ಅನ್ನಿಸದೇ ಇರೋ ಸಿನಿಮಾ, ಸಿನಿಮಾ ಮುಗಿದಾಗ ಇಷ್ಟು ಬೇಗ ಮುಗೀತಾ ಅಂತ ಅನ್ನಿಸೋ ಸಿನಿಮಾ… ಅದು `ದೃಶ್ಯ’.. ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ. ರೀಮೇಕ್ ಇರಬಹುದು ಆದ್ರೆ ರವಿ ಸರ್ ಅಭಿನಯ ಸಿನಿಮಾ ನಮ್ಮದೇ ಸ್ವಂತದ್ದು ಅನ್ನುವಷ್ಟರ ಮಟ್ಟಿಗೆ ನಿಮ್ಮ ಮನಸ್ಸಲ್ಲಿ ಕೂತು ಬಿಡುತ್ತೆ. ಕಥೆ ಬರೆದವರಿಗೆ ನೂರು ಸಲಾಂ, ಕನ್ನಡಕ್ಕೆ ತಂದ ಪಿ.ವಾಸುರವರಿಗೆ ಸಾವಿರ ಸಲಾಂ, ಆರಂಭದಿಂದ ಅಂತ್ಯದವರೆಗೂ ನಮ್ಮನ್ನು ಕಾಡುವಂತೆ ಅಭಿನಯಿಸಿ ಹಿಂದಿನ ಎಲ್ಲ ರವಿಚಂದ್ರನ್ ಮರೆಯೋ ಹಾಗೆ ಮಾಡಿದ ರವಿ ಸರ್ ಗೆ ಕೋಟಿ ಕೋಟಿ ಸಲಾಂ…

ಕನ್ನಡದಲ್ಲಿ ರವಿಚಂದ್ರನ್ ಮಾಡಲಿ ಅಂತಾನೇ ಮಲಯಾಳಂನಲ್ಲಿ ಈ ಸಿನಿಮಾ ಬಂದಿದೆ ಅಂತ ಹೇಳಿದ್ರೆ ಅದು ಅತಿಶಯೋಕ್ತಿ ಅಲ್ಲ.! ಕನ್ನಡದಲ್ಲಿ ಒಳ್ಳೆ ಸಿನಿಮಾ ಬರಲ್ಲ ಅಂತಾ ಹೇಳೋ ಕನ್ನಡ ಚಿತ್ರ ವಿರೋಧಿ ಮೂದೇವಿಗಳೇ ಹೋಗಿ `ದೃಶ್ಯ’ ನೋಡಿಬನ್ನಿ. ಇಲ್ಲೂ ತಪ್ಪು ಕಂಡ್ರೆ ಮೊಸರಲ್ಲಿ ಕಲ್ಲು ಹುಡುಕೋರು ನೀವು. ರವಿ ಸರ್ ನಮ್ಮ ಚಾನಲ್ ಸ್ಟೂಡಿಯೋಗೆ ಬಂದಾಗ 3-4 ಸಲ ನೋಡಿದೀನಿ. ಯಾವತ್ತೂ ಜೊತೇಲಿ ಫೋಟೋ ಹೊಡಿಸ್ಕೋಬೇಕು ಅಂತ ಅನ್ಸಿರ್ಲಿಲ್ಲ. ಆದ್ರೆ ಈಗ ಇಂತಹ ಫೆಂಟಾಸ್ಟಿಕ್ ನಟನ ಜೊತೆ ಒಂದು ಫೋಟೋ ತೆಗೆಸಿಕೊಳ್ಳೋ ಮನಸಾಗಿದೆ. ಅದ್ಯಾವತ್ತಾದ್ರೂ ಒಂದು ದಿನ ಆಗುತ್ತೆ ಬಿಡಿ…!

ರವಿ ಸರ್, ಪ್ರೇಮಲೋಕ ಆ ಕಾಲಕ್ಕೆ, ರಣಧೀರ ಮುಗಿದ ಕಥೆ, ಇನ್ಯಾವತ್ತೂ ಪ್ರೀತ್ಸೋದ್ ತಪ್ಪಾ ಅಂತ ಕೇಳಬೇಡಿ. ಇಂತಹ ಸ್ಕ್ರಿಪ್ಟ್ ಓಕೆ ಮಾಡಿ ಆಕ್ಟ್ ಮಾಡಿ… ನೀವು ನಂಗೆ ಕ್ರೇಜಿ ಸ್ಟಾರ್ ಆಗಿ ಇಷ್ಟ ಆಗಿರ್ಲಿಲ್ಲ. ಆದ್ರೆ ಫ್ಯಾಮಿಲಿ ಸ್ಟಾರ್ ಆಗಿ ಸಖತ್ ಇಷ್ಟ ಆಗಿದ್ದೀರಿ. ಸ್ನೇಹಿತರೇ, ರವಿ ಸರ್ ಈ ಸಿನಿಮಾದಲ್ಲಿ ದ್ರಾಕ್ಷಿ ಹಣ್ಣನ್ನು ಹೊಕ್ಕಳ ಮೇಲೆ ಆಡಿಸಿಲ್ಲ, ಹೂವಿನ ಹಾಸಿಗೆ ಮೇಲೆ ಹಾರಿಲ್ಲ, ಹೀರೋಯಿನ್ ಜೊತೆ ಫಾರಿನ್ ಹಾಡಲ್ಲಿ ಕುಣಿದಿಲ್ಲ… ನೀವು ಕೊಟ್ಟ ಕಾಸಿಗೆ ನೂರಕ್ಕೆ ಇನ್ನೂರು ಪರ್ಸೆಂಟ್ ನಾನು ಗ್ಯಾರಂಟಿ… ಇವತ್ತೇ ದೃಶ್ಯ ಸಿನಿಮಾ ನೋಡಿ. ನೀವೂ ರವಿ ಸರ್ ಫ್ಯಾನ್ ಆಗ್ತೀರ…!

ಇದನ್ನು ಬರೀಬೇಕೋ ಬೇಡ್ವೋ ನಂಗೊತ್ತಿಲ್ಲ. ಆದ್ರೆ ಮನಸ್ಸು ಸಮಾಧಾನ ಆಗೋಕೆ ಇದಕ್ಕಿಂತ ಒಳ್ಳೆಯ ಪರಿಹಾರ ನಂಗೊತ್ತಿಲ್ಲ. ಆ ಶಕ್ತಿ ಬರಹಕ್ಕಿದೆ. ಅದಕ್ಕೇ ಬರೆಯಲು ಕೂತಿದ್ದೇನೆ. ಇದನ್ನ ಆರಂಭಿಸುವ ಮುನ್ನ ನನ್ನ ಕಣ್ಣಲ್ಲಿ ನೀರು ಆವರಿಸಿದೆ. ಇದನ್ನು ಬರೆದು ಮುಗಿಸುವ ಹೊತ್ತಿಗೆ ನನಗೇ ಗೊತ್ತಿರದೇ ನನ್ನ ಕೆನ್ನೆಯ ಮೇಲಿಂದ ತಾಯಿ ಕಳೆದುಕೊಂಡ ಮಗ ಅಳುವ ಹಾಗೆ ಕಣ್ಣೀರು ಹಾದು ಹೋಗಿರುತ್ತೆ. ನಿಮಗೂ ಹಾಗೇ ಆದ್ರೆ ಪ್ಲೀಸ್ ಅತ್ತುಬಿಡಿ. ಕಣ್ಣೀರ ಶಾಪ ಆ ದೇವರಿಗೆ ತಟ್ಟಲೇಬೇಕು.
ಪ್ರಕಾಶ್-ಸಿಂಚನ, ನಾನು ನನ್ನ ಜೀವನದಲ್ಲಿ ಕಂಡ ಆದರ್ಶ ದಂಪತಿಗಳಲ್ಲೊಂದು ಜೋಡಿ. ಪರಸ್ಪರ ಬಹಳ ಪ್ರೀತಿಸಿಕೊಳ್ತಾರೆ.ಅವನು ಅಂದ್ರೆ ಅವಳಿಗೆ ಪ್ರೀತಿ, ಅವನಿಗಂತೂ ಅವಳು ಅಂದ್ರೆ ಪ್ರೀತಿ-ಪ್ರೀತಿ-ಪ್ರೀತಿ.ಅವನು ಅವಳನ್ನು ಪ್ರೀತಿಸಿವುದನ್ನು ನೋಡಿ ನಾನಂತೂ ನನ್ನ ಹೆಂಡತಿ ಬಾಯಿಂದ ಸಾವಿರ ಸಲ ಬೈಸಿಕೊಂಡಿದ್ದೇನೆ. `ಪ್ರಕಾಶಣ್ಣನ್ನ ನೋಡಿ ಕಲಿ’ ಅಂತ ಹೇಳಿರೋದು ಎಷ್ಟೋ ಸಲ. ಯಸ್, ಅನುಮಾನವೇ ಬೇಡ… ಅವರಿಬ್ಬರದು ರಬ್ ನೇ ಬನಾದಿ ಜೋಡಿ…
ಅವರಿಬ್ಬರ ಮದುವೆಯಾಗಿ ೩-೪ ವರ್ಷ ಆಗಿದೆ. ನಮ್ಮ ಫ್ರೆಂಡ್ ಸರ್ಕಲ್ ನಲ್ಲಿ ಮೊದಲು ಮದುವೆಯಾಗಿದ್ದು ಅವನೇ. ಎಲ್ಲರನ್ನೂ ಪ್ರೀತಿಸುವ ನಮ್ಮ ಟೀಮಿನ ಹುಡುಗಿಯರ ಅಣ್ಣ ಅವನು. 
ಇನ್ನು ಸಿಂಚು ನಮ್ಮ ಟೀಮಿನ ಲೇಡಿ ಡಾನ್. ಅವಳ ಮೆಚ್ಯುರಿಟಿಗೆ ಅವಳೇ ಸಾಟಿ. ಅವಳು ಮಾತಾಡಿದ್ರೆ ಅದಕ್ಕೊಂದು ಅರ್ಥ ಇದ್ದೇ ಇರುತ್ತೆ. ಯೋಚನೆ ಮಾಡದೇ ಅವಳು ಯಾವತ್ತೂ ಮಾತಾಡಲ್ಲ. ಅವಳಂಥ ಗಟ್ಟಿ ಹೆಣ್ಣು ಜೀವ ಈ ಕಾಲದಲ್ಲಿ ಸಿಗೋಕೆ ಚಾನ್ಸೇ ಇಲ್ಲ. ಒಟ್ಟಾರೆ ಸಿಂಚು ಅಂದ್ರೆ ಅವಳೊಂದು ಸಿಸ್ಟಮ್ಯಾಟಿಕ್ ಹುಡುಗಿ. ಜವಬ್ದಾರಿಯುತ ಗೃಹಿಣಿ.
ಈಗಿನ ಎಲ್ಲ ದಂಪತಿಗಳ ಹಾಗೆ ಇವರೂ ಸಹ ಒಂದೆರೆಡು ವರ್ಷ ಫ್ಯಾಮಿಲಿ ಪ್ಲ್ಯಾನಿಂಗ್ ಮಾಡಿದ್ರು. ಆದ್ರೆ ಅದಾದ ಮೇಲೆ ಮಕ್ಕಳಾಗಬೇಕು ಅನ್ಕೊಂಡಾಗ ಅದೇನೇನೋ ವೈದ್ಯಕೀಯ ಸಮಸ್ಯೆಗಳು ಅವಳನ್ನ ಕಾಡಿದ್ವು. ಅದ್ಯಾವುದಕ್ಕೂ ಧೃತಿಗೆಟ್ಟವಳಲ್ಲ ಅವಳು. ಪ್ರತೀ ಗುರುವಾರ ಗಂಡ ಹೆಂಡತಿ ತಪ್ಪದೇ ಸಾಯಿಬಾಬಾನ ದೇವಸ್ಟಾನಕ್ಕೆ ಹೋಗಿ ಕೈಜೋಡಿಸಿದ್ದಾರೆ. ಅವತ್ತೊಂದು ದಿನ ರಾತ್ರಿ ಸ್ನೇಹಿತರೆಲ್ಲಾ ಸೇರಿದ್ದಾಗ ನಾವಿಬ್ಬರೂ ರಾತ್ರಿ ೨-೩ ಗಂಟೆಯ ಹೊತ್ತಲ್ಲಿ ಆಡಿದ ಮಾತು ನೆನಪಿದೆ ನನಗೆ. ತಾಯ್ತನದ ಬಗ್ಗೆ ತನ್ನ ಕನಸುಗಳನ್ನ ಹೇಳಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ಲು ಸಿಂಚು. ಅವತ್ತೇ ದೇವರಿಗೆ ಬೇಡಿಕೆ ಇಟ್ಟಿದ್ದೆ. ದೇವರೇ ಇವಳ ಮಗು ಇವಳನ್ನ ಅಮ್ಮ ಅಂತ ಕರೆಯೋ ದಿನ ಬೇಗ ಬರ್ಲಪ್ಪಾ ಅಂತ. ಅದೇನೋ ಹಂಗೂ ಹಿಂಗೂ ೫-೬ ತಿಂಗಳು ಕಳೀತು. ಅವರಿಬ್ಬರ ಮನಸ್ಸಲ್ಲಿ ಅವರಿಗೆ ಇನ್ನು ಮಕ್ಕಳಾಗಲ್ಲ ಅನ್ನೋ ಮನಸ್ಥಿತಿ ಬಂದಿತ್ತು. ಅದ್ಯಾವ್ನೋ ಡಾಕ್ಟರ್ ಸಹ ಹಾಗೇ ಹೇಳಿದ್ನಂತೆ. ಹಾಗಾಗಿ ಅವರಿಗೂ ಅದರ ಬಗ್ಗೆ ಭರವಸೆ ಹೋದ ಹಾಗಾಗಿತ್ತು. ಆದ್ರೆ ಅದ್ಯಾವತ್ತೋ ಒಂದು ದಿನ ಅವರಿಬ್ಬರೂ ಯಾವುದೋ ಕಾರಣಕ್ಕೆ ಆಸ್ಪತ್ರೆಗೆ ಹೋದ್ರು. ಅದೇನೇನೋ ಪರೀಕ್ಷೆ ಮಾಡಿ ಆ ಡಾಕ್ಟರ್ ಹೇಳಿದ್ದೇನು ಗೊತ್ತಾ..? `ಮಿಸಸ್ ಸಿಂಚನ, ನೀವು ೫ ತಿಂಗಳ ಗರ್ಭಿಣಿ’ ಅಂತ. ಅದು ಅವರಿಬ್ಬರ ಪಾಲಿನ ಬಹುದೊಡ್ಡ ದಿನ. ಅವತ್ತು ಅವರಿಬ್ಬರೂ ಅದೆಷ್ಟು ಖುಷಿ ಪಟ್ಟಿರಬಹುದು ಎಂಬುದನ್ನು ನಾನು ಊಹಿಸಬಲ್ಲೆ. ನಂಗೆ ನನ್ನ ಹೆಂಡತಿ ಈ ವಿಷ್ಯ ಹೇಳಿದಾಗ ಮನಸಲ್ಲೇ ಬಾಬಾಗೆ ಥ್ಯಾಂಕ್ಸ್ ಹೇಳಿದ್ದೆ. ಆ ನಂತರ ಸ್ಕ್ಯಾನಿಂಗ್, ಅದೂ ಇದೂ ಅಂತ ಅವರಿಬ್ಬರೂ ಅವರದ್ದೇ ಪ್ರಪಂಚದಲ್ಲಿ ತೇಲ್ತಾ ಇದ್ರು. ನಾನು ನನ್ನ ಹೆಂಡತಿಗೆ ಹೇಳ್ತಿದ್ದೆ ` ಈಗಂತೂ ಪ್ರಕಾಶ, ಸಿಂಚನಾಳ ಹೊಟ್ಟೆ ಇಟ್ಕೊಂಡೇ ಓಡಾಡ್ತಾ ಇರ್ತಾನೆ’ ಅಂತ. ಅವನು ಅವಳನ್ನ ಅಷ್ಟು ಪ್ರೀತಿಸ್ತಾನೆ ಅದರಲ್ಲಿ ಅನುಮಾನವೇ ಇಲ್ಲ…

Image
ಕೆಲಸಕ್ಕೇ ಹೋಗ್ತಿದ್ದ ಸಿಂಚು ಕೆಲಸ ಬಿಟ್ಟು ಅವಳ ಮಗುವಿನ ಆರೈಕೆ ಶುರು ಮಾಡಿದ್ಲು. ಬೇಕಾಬಿಟ್ಟಿ ಮನಸ್ಸಿಗೆ ಬಂದಿದ್ದೆಲ್ಲಾ ತಿಂತಾ ಇದ್ದವಳು ಹೊಟ್ಟೆಯಲ್ಲಿರೋ ಅವಳ ಮಗುವಿಗೋಸ್ಕರ ಎಲ್ಲವನ್ನು ಬಿಟ್ಲು. ಮಗುವಿಗೆ ಏನ್ ಒಳ್ಳೇದೋ ಅದನ್ನ ಮಾತ್ರ ತಿನ್ನೋಕೆ ಶುರು ಮಾಡಿದ್ಲು. ಅವನಂತೂ ಅವಳಿಗೆ ಹಣ್ಣು ಬಿಡಿಸಿಕೊಡೋದೇ ತನ್ನ ಜೀವನದ ಪ್ರಮುಖ ಕೆಲಸ ಅನ್ನೋ ಹಾಗೆ ಅವಳ ಆರೈಕೆ ಮಾಡಿದ. ಮೊನ್ನೆ ಮೊನ್ನೆ ಎರಡು ವಾರದ ಕೆಳಗೆ ಎಲ್ಲರೂ ಗೆಟ್ ಟುಗೆದರ್ ಪ್ಲ್ಯಾನ್ ಮಾಡಿದ್ವಿ. ಸುಮನ್-ಕಿರಣ್ ಮನೆಯಲ್ಲಿ ಎಲ್ಲರೂ ಸೇರಿದ್ವಿ. ಅವತ್ತು ಪ್ರಕಾಶ್-ಸಿಂಚನಾಗೆ ಗೊತ್ತಿಲ್ಲದ ಹಾಗೆ ಒಂದು ಪ್ಲ್ಯಾನ್ ಮಾಡಿದ್ವಿ. ಸರ್ ಪ್ರೈಸ್ ಕೇಕ್ ಕಟ್ ಮಾಡಿಸಿ ಅವರಿಬ್ಬರಿಗೂ ಶುಭ ಹಾರೈಸಿದ್ವಿ. ದುರಾದೃಷ್ಟಕ್ಕೆ ಆ ಟೈಮಿಗೆ ನಾನು ನನ್ನ ಹೆಂಡತಿ ರೀಚ್ ಆಗೋಕೆ ಸಾಧ್ಯ ಆಗ್ಲಿಲ್ಲ. ಆದ್ರೆ ಉಳಿದ ಸ್ನೇಕಿತರೆಲ್ಲಾ ಸೇರಿ ಅವರಿಬ್ಬರನ್ನೂ ಖುಷಿ ಪಡಿಸಿದ್ರು, ಅದಾಗಿ ಸ್ವಲ್ಪ ಹೊತ್ತಿಗೆ ನಾವು ಅಲ್ಲಿಗೆ ಹೋದ್ವಿ. ಎಲ್ಲರೂ ಒಟ್ಟಿಗೆ ತುಂಬಾ ಟೈಂ ಕಳೆದ್ವಿ. ಮಾರನೇ ದಿನ ಇಡೀ ದಿನ ರೆಸಾರ್ಟ್ ನಲ್ಲಿದ್ವಿ. ಸಿಂಚು ಯಾವಾಗ್ಲೂ ಆಕ್ಟಿವ್ ಪಾರ್ಟಿಸಿಪೆಂಟ್. ಆದ್ರೆ ಈ ಸಲ ಅವಳು ಹೊಟ್ಟೆಯ ಮೇಲೆ ಕೈ ಇಟ್ಕೊಂಡು ಎಲ್ಲವನ್ನೂ ನೋಡ್ತಾ ಇದ್ಲು. ಕ್ರಿಕೆಟ್ ಆಡುವಾಗ ತನ್ನ ಹೆಂಡತಿಯ ಹೊಟ್ಟೆಗೆ ಎಲ್ಲಿ ಬಾಲ್ ಬೀಳುತ್ತೋ ಅಂತ ಪ್ರಕಾಶ ಅವಳಿಗೆ ಕಾವಲು ಕಾದಿದ್ದು ಇನ್ನೂ ಕಣ್ಣ ಮುಂದಿದೆ. ನನ್ನ ಹೆಂಡತಿ ಅವಳ ಹೊಟ್ಟೆ ಮುಟ್ಟಿ ಮುಟ್ಟಿ ಸಂಭ್ರಮಿಸ್ತಾ ಇದ್ಲು. ನಾನು ಸಹ ಮುಟ್ಟಿ`ಆಲ್ ಈಸ್ ವೆಲ್- ಆಲ್ ಈಸ್ ವೆಲ್’ ಅಂತ ರೇಗಿಸ್ತಾ ಇದ್ದೆ. ಸಿಂಚು ಕಂಗಳಲ್ಲಿ ಆ ಸಂತುಷ್ಟತೆ ಎದ್ದು ಕಾಣ್ತಿತ್ತು. ತಾಯ್ತನದ ಸಂಭ್ರಮ ಅವಳ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸ್ತಿತ್ತು. ಆ ಮಗು ನಮ್ಮನ್ನೆಲ್ಲಾ `ಮಾಮ’ ಅಂತ ಕರೆಯೋ ದಿನ ಹತ್ತಿರ ಇದೆ ಅಂತ ನನಗೂ ಖುಷಿಯಾಗ್ತಿತ್ತು. ಆ ಎರಡೂ ದಿನ ನಮ್ಮ ಟೀಮಿಗೆ ಬೆಸ್ಟ್ ದಿನಗಳು. 
ಸಿಂಚನಾಗೆ ೮ನೇ ತಿಂಗಳು ನಡೀತಿದೆ. ಇನ್ನೇನು ತಿಂಗಳಲ್ಲಿ ಪ್ರಕಾಶನ ಮಗಳು ಪ್ರಪಂಚ ನೋಡ್ತಾಳೆ. ಮಗು ಅವನ ಹಾಗಾ- ಅವಳ ಹಾಗಾ ಅನ್ನೋ ಪ್ರಶ್ನೆಗಳು ನಮ್ಮಲ್ಲೇ ಇದ್ದವು. ಪ್ರಕಾಶನಿಗೆ ಮಗ ಹುಟ್ಟಿದ್ರೆ ಹೇಗೆ ಮಾಡಬಹುದು ಎಂಬುದರ ಬಗ್ಗೆಯೇ ಗಂಟೆಗಟ್ಟಲೇ ಚರ್ಚೆ ಮಾಡಿದ್ದೇವೆ ನಾವು. ಅವನ ಚಿಟಿಕೆ ಮಾತಾಡೋ ಸ್ಟೈಲನ್ನ ಎಲ್ಲರೂ ಇಮಿಟೇಟ್ ಮಾಡಿ ತೋರಿಸಿದ್ದೇವೆ. ಅವಳೂ ಸಹ ಅದನ್ನೆಲ್ಲಾ ಕೂತಲ್ಲೇ ಎಂಜಾಯ್ ಮಾಡ್ತಿದ್ಲು. ಅವಳಿಗೆ ಅವಳು ಅಮ್ಮ ಆಗ್ತಿದ್ದಾಳೆ ಅನ್ನೋ ಸಂಭ್ರಮ.. ಅಷ್ಟೆ..!
ಪ್ರತೀ ಗುರುವಾರ ಬಾಬಾಗೆ ನಮಸ್ಕಾರ ಹಾಕಿದ್ದಕ್ಕೆ ಇದಕ್ಕಿಂತ ದೊಡ್ಡ ಉಡುಗೊರೆ ಅವನು ಕೊಡೋಕೆ ಛಾನ್ಸೇ ಇಲ್ಲ. ಆದ್ರೆ ಬಾಬಾ ಎಂತಹ ಕ್ರೂರಿ ಅಂತ ಇವತ್ತು ಪ್ರೂವ್ ಆಗಿಬಿಡ್ತು. ಸಂಜೆ ೭.೪೫ಕ್ಕೆ ಒಂದು ಮೆಸೇಜ್ ಬಂತು. ಅದು ಪ್ರಕಾಶ್ ಕಳ್ಸಿದ್ದು. `ವಿಧಿಯಾಟಕ್ಕೆ ನನ್ನ ಮಗು ಬಲಿಯಾಯ್ತು. ಇವತ್ತು ಸ್ಕ್ಯಾನಿಂಗ್ ರಿಪೋರ್ಟ್ ಬಂತು. ಅದರ ಪ್ರಕಾರ ನಮ್ಮ ಮಗುವಿನ ಹೃದಯ ಬಡಿತ ನಿಂತು ಹೋಗಿದೆ’ ಅಂತ. ನನ್ನ ಕಣ್ಣಿಂದ ಆ ಕ್ಷಣಕ್ಕೆ ಅದೆಷ್ಟು ಕಣ್ಣೀರು ಹೋಯ್ತೋ ಗೊತ್ತಿಲ್ಲ. ಆದ್ರೆ ಎಷ್ಟೇ ಪ್ರಯತ್ನ ಪಟ್ಟರೂ ಕಂಟ್ರೋಲ್ ಆಗಲೇ ಇಲ್ಲ. ಅಷ್ಟರಲ್ಲಿ ನನ್ನ ಹೆಂಡತಿಯ ಫೋನ್ ಬಂತು ರಿಸೀವ್ ಮಾಡಿದ್ರೆ ಆ ಕಡೆಯಿಂದ ಅವಳೂ ಬಿಕ್ಕಿ ಬಿಕ್ಕಿ ಅಳ್ತಿದ್ದಾಳೆ. ಕಾರಣ ಪ್ರಕಾಶ್-ಸಿಂಚುಗೆ ದೇವರು ಮಾಡಿದ ಅನ್ಯಾಯ. ಕೊಡದಿದ್ರೂ ಪರವಾಗಿರ್ಲಿಲ್ಲ. ಆದ್ರೆ ಈ ತರ ಕೊಟ್ಟು ಕಿತ್ಕೊಂಡಿದ್ದು ಯಾವ ನ್ಯಾಯ ಅನ್ನೋದು ನನ್ನ ಹೆಂಡತಿಯ ಪ್ರಶ್ನೆ. ನಂಗೆ ಸಂಕಟ ತಡ್ಕೊಳೋಕ್ ಆಗ್ಲಿಲ್ಲ. ಆಮೇಲ್ ಮಾಡ್ತೀನಿ ಅಂತ ಫೋನಿಟ್ಟು ಸಮಾಧಾನ ಆಗೋ ಆಷ್ಟು ಅತ್ತು ಸುಮ್ಮನಾದೆ. ಪ್ರಕಾಶನಿಗೆ ಸಮಾಧಾನ ಆಗೋ ಹಾಗೆ ಒಂದಷ್ಟು ಮೆಸೇಜ್ ಕಳಿಸಿದೆ. ಆದ್ರೂ ಅವನ ಸಂಕಟ ಅವನ ಮೆಸೇಜ್ ನಲ್ಲೇ ಗೊತ್ತಾಗ್ತಿತ್ತು. ಇನ್ನು, ೮ ತಿಂಗಳು ಕನಸಿನಂತೆ ಹೊತ್ತ ಸಿಂಚು ಪರಿಸ್ಥಿತಿ ನೆನೆಸಿಕೊಂಡ್ರೆ ಕರಳು ಕಿತ್ತು ಬರುತ್ತೆ. ದೇವರ ಹತ್ತಿರ ಪ್ರತೀ ಗುರುವಾರ ಹೋಗಿ ಬೇಡಿದ್ದಕ್ಕೆ ಇಷ್ಟು ದೊಡ್ಡ ಶಿಕ್ಷೇನಾ..? ನಾನೂ ಬಾಬಾ ಭಕ್ತ. ಅವರಿಗೆ ಅದೇನೇನೊ ಬೇಡಿಕೆ ಇಟ್ಟಿದ್ದೇನೆ. ಅದ್ಯಾವುದೂ ಈಡೇರಿಸೋದು ಬೇಡ. ನನ್ನ ಗೆಳೆಯನಿಗೆ ಮತ್ತೆ ಆ ಖುಶಿ ಕೊಡು. ಸಿಂಚು ಮುಖದಲ್ಲಿ ಮತ್ತೆ ಆ ಸಂಭ್ರಮ ನೋಡೋ ಹಾಗೆ ಮಾಡು. ನನ್ನನ್ನ ಅವರಿಬ್ಬರಮಗು `ಮಾಮ’ ` ಅಂತ ಕರೆಯೋ ಹಾಗೆ ಮಾಡು. ಅಲ್ಲಿಯ ತನಕ ಇನ್ಯಾವತ್ತೂ ಯಾವ ದೇವರಿಗೂ ನಾನು ಕೈ ಮುಗಿಯಲ್ಲ. ಪ್ರೀತಿಯ ಪ್ರಕಾಶ್-ಸಿಂಚು ದೇವರು ಇರೊದೇ ನಿಜವಾದ್ರೆ ನಿಮ್ಮ ಜೀವನದ ಅದ್ಭುತ ದಿನಗಳು ಇನ್ನು ಮುಂದೆ ಆರಂಭವಾಗುತ್ತೆ. ಜಗತ್ತು ನೋಡುವ ಮುಂಚೆ ನಮ್ಮಿಂದ ದೂರಾದ ಅವಳು `ಮೌನ’.. ಮತ್ತೆ ನಿಮ್ಮ ಮಗಳಾಗಿ ಹುಟ್ಟೇ ಹುಟ್ತಾಳೆ..! ಅವಳ ನಾಮಕರಣಕ್ಕೆ ನನ್ನ ಕಡೆಯಿಂದ ಚಿನ್ನದ ಚೈನು. ಎಷ್ಟೇ ಆಗಲಿ ಅವಳು ನನ್ನ ಸೊಸೆ. ನಿಮಗೆ ಆ ಇಲ್ಲದ ದೇವರು ಸಮಾಧಾನ ಮಾಡಿಕೊಳ್ಳೋ ಶಕ್ತಿ ಕೊಡಲಿ.. ನಾವೆಲ್ಲ ನಿಮ್ಮ ಜೊತೆಗಿದೀವಿ, ಮರೀಬೇಡಿ. ವಿ ಲವ್ ಯೂ ಲೋಡ್ಸ್…

ಥ್ಯಾಂಕ್ಯೂ ಮಣಿ ಸರ್…

ನನ್ನೂರಿಗೆ ಹೋಗೋದೇ ಒಂದು ಖು‍ಷಿ. ಕಳೆದ ಸಲ ಊರಿಗೆ ಹೋಗಿದ್ದು ಒಂದು ವರ್ಷದ ಹಿಂದೆ. ಈ ಸಲ ಎಲೆಕ್ಷನ್ ಸಲುವಾಗಿ ಪ್ರೋಗ್ರಾಂ ಮಾಡೋಕೆ ೨ ದಿನಗಳ ಮಟ್ಟಿಗೆ ಶಿವಮೊಗ್ಗ ಬಂದಿದ್ದೆ. ಬಂದ ಎರಡನೇ ದಿನ ಸಂಜೆ ಹೊತ್ತಿಗೆ ನನ್ನ ಕೆಲಸ ಮುಗೀತು. ಸಂಜೆ ಫ್ರೀ ಇದ್ವಿ ಅಂತ ಹಂಗೇ ಊರು ಸುತ್ತೊಕೆ ಹೊರಟ್ವಿ ನಾನು ರಾಘವ್ ಸೂರ್ಯ ಹಾಗೂ ಕಿರಣ್. ನಾವಿದ್ದ ಮಥುರಾ ಪ್ಯಾರಡೈಸ್ ಹೋಟೆಲ್ ನಿಂದ 200-300 ಮೀಟರ್ ದೂರದಲ್ಲಿ ನನಗೆ ಬಹಳಾ ಆತ್ಮೀಯರ ಮೊಬೈಲ್ ರಿಪೇರಿ ಅಂಗಡಿ ಇದೆ. ಹೋಗಿ ಅವರನ್ನ ಮೀಟ್ ಮಾಡಿ ಬರೋಣ ಅನ್ಕೊಂಡು ದುರ್ಗಿಗುಡಿ ಕಡೆ ಹೊರಟ್ವಿ.

ಅರೆ.. 8 ವರ್ಷದ ಹಿಂದಿನ ದುರ್ಗಿಗುಡಿಗೂ ಈಗಿರೋ ದುರ್ಗಿಗುಡಿಗೂ ಅಜಗಜಾಂತರ ವ್ಯತ್ಯಾಸ. ಅವರ ಶಾಪ್ ಹೆಸರು ಸಹ ನನಗೆ ಗೊತ್ತಿಲ್ಲ. ಆದ್ರೆ ಅದೊಂದು ಹಳೆಯ ಬಿಲ್ಡಿಂಗ್. ಅದ್ರಲ್ಲಿ ಮೊದಲ ಮಹಡಿಯಲ್ಲಿ ಅವರ ಅಂಗಡಿ ಇತ್ತು. ಹಂಗೇ ತಲೆಯನ್ನ 60 ಡಿಗ್ರಿ ಬಲಕ್ಕೆಎತ್ತಿಕೊಂಡು ಎರಡು ಸಲ ಅದೇ ರೋಡ್ ಸುತ್ತಿದ್ರೂ ಸಹ ಅವರ ಅಂಗಡಿ ಸಿಗಲಿಲ್ಲ. ಜೊತೆಗಿದ್ದ ರಾಘವ್ ಹಾಗೂ ಕಿರಣ್ ಅನ್ಕೊಂಡಿರ್ತಾರೆ, ಇವನ್ಯಾಕೆ ಈ ತರ ಹುಡುಕ್ತಾ ಇದಾನೆ. ಅವರೇನು ಅಷ್ಟು ಆತ್ಮೀಯರಾ ಅಂತ. ಅವರ ಬಗ್ಗೆ ಹೇಳೋಕೆ ತುಂಬಾ ಇದೆ. ಅವರ ಹೆಸರು ಮಣಿ. ೮ ವರ್ಷದ ಹಿಂದೆ ನನ್ನದೊಂದು ಮೊಬೈಲ್ ಶಾಪ್ ಇತ್ತು. ಕಾಲೇಜಿಗೆ ಹೋಗ್ತಿದ್ದ ದಿನಗಳು ಅವು. ಆಗ ಶಂಕರಘಟ್ಟದಲ್ಲಿ ಯಾವುದೇ ಮೊಬೈಲ್ ಹಾಳಾದ್ತ್ರೂ ನನ್ನ ಹತ್ತಿರಾನೇ ರಿಪೇರಿಗೆ ಬರ್ತಿದ್ದಿದ್ದು. ಆ ಮೊಬೈಲ್ ಗಳು ನನ್ನಿಂದ ಬಂದು ಸೇರ್ತಿದ್ದಿದ್ದು ಇದೇ ಮಣಿ ಸರ್ ಅಂಗಡಿಗೆ. ಮೊಬೈಲ್ ರಿಪೇರಿ ವಿಚಾರದಲ್ಲಿ ಅವರು ಮ್ಯಾಜಿಶಿಯನ್. ಎಂಥದ್ದೇ ಮೊಬೈಲ್ ಯಾವುದೇ ಕಂಡೀಶನ್ ನಲ್ಲಿ ಬಂದ್ರೂ ಅದಕ್ಕೇ ಗ್ಯಾರಂಟಿ ಜೀವ ಕೊಡ್ತಿದ್ರು ಮಣಿ ಸರ್. ಅವರ ಅಂಗಡಿ ನೋಡಿದ್ರೆ ಯಾವುದೋ ಹಳೇ ಅಂಗಡಿ ತರ ಕಾಣುತ್ತೆ. ಆದ್ರೆ ಅಲ್ಲಿ ಹಾಳಾದ ಮೊಬೈಲ್ ಹಿಡ್ಕೊಂಡು ಬಂದು ನಿಲ್ಲೋರ ದೊಡ್ಡ ಕ್ಯೂ ಯಾವಾಗಲೂ ಇರುತ್ತೆ. ಶಿವಮೊಗ್ಗದಂಥ ಶಿವಮೊಗ್ಗಕ್ಕೆ ಅವರೇ ನಂಬರ್ ವನ್. ಅವತ್ತೂ , ಇವತ್ತೂ…
ನಾನು ಅವರಿಗೆ ಆ ಕಾಲಕ್ಕೆ ಸಿಕ್ಕಾಪಟ್ಟೆ ತಲೆ ತಿಂದಿದೀನಿ. ಕಾಟ ಕೊಟ್ಟಿದೀನಿ. ಎಂತಂಥದ್ದೋ ಮೊಬೈಲ್ ತಂದು ಕೊಟ್ಟು ಸರಿ ಮಾಡಿ ಕೊಡಿ ಅಂತ ಕಾಡಿದೀನಿ. ಬೈದು, ಗೊಣ್ಗಿಕೊಂಡು, ಬೇಜಾರ್ ಮಾಡ್ಕೊಂಡು ನಾನು ಕೊಟ್ಟ ಎಲ್ಲ ಮೊಬೈಲನ್ನೂ ಸರಿ ಮಾಡಿ ಕೊಟ್ಟಿದ್ದಾರೆ ಮಣಿ ಸರ್. ಹಂಗೂ ಹಿಂಗೂ ಲೆಕ್ಕ ಹಾಕಿದ್ರೆ ಈಗಲೂ ನಾನು ಅವರಿಗೆ 800-900 ರೂಪಾಯಿ ಬ್ಯಾಲೆನ್ಸ್ ಕೊಡ್ಬೇಕಾಗಿ ಬರಬಹುದು. ಅವರೂ ಕೇಳಿಲ್ಲ, ನಾನೂ ಕೊಟ್ಟಿಲ್ಲ. ಅವರು ರಿಪೇರಿ ಮಾಡಿಕೊಟ್ಟ ಮೊಬೈಲ್ ನಲ್ಲೇ 50-100 ಮಾರ್ಜಿನ್ ಇಟ್ಕೊಂಡು ಲಾಭ ಮಾಡ್ಕೋತಿದ್ದೆ ನಾನು. ಆ ಕಾಲಕ್ಕೆ ನನ್ನ ಕಾಲೇಜು ಖರ್ಚಿಗೆ ಪರೋಕ್ಷವಾಗಿ ಹೆಲ್ಪ್ ಮಾಡಿದವರು ಮಣಿ ಸರ್. ಹಾಗಾಗಿಯೇ ಅವರನ್ನ ಇಷ್ಟು ವರ್ಷದ ನಂತರ ಮೀಟ್ ಮಾಡಿ ಬರೋಣ ಅಂತ ರಾಘವ್ ಹಾಗೂ ಕಿರಣ್ ಕರ್ಕೊಂಡು ಹೋಗಿದ್ದೆ. ಕೊನೆಗೂ ಅವರ ಅಂಗಡಿಯ ಬೋರ್ಡ್ ಕಾಣಿಸ್ತು.

ಯೂನಿವರ್ಸಲ್ ಎಲೆಕ್ಟ್ರಾನಿಕ್ಸ್. ಯಸ್, ಇದೇ ಮಣಿ ಸರ್ ಶಾಪ್. ಅದೇ ಹಳೆಯ ಬಿಲ್ದಿಂಗ್. ಮೇಲೆ ಹೋದ್ರೆ ಅವರು ಅಲ್ಲೇ ಕೂತಿದ್ರು. ನೋಡಿದ ಕೂಡ್ಲೇ ಅಂಗಡಿಗೆ ಬರುವ ಎಲ್ಲರಿಗೂ ಹೇಳುವಂತೆ ನಮಗೂ ನಮಸ್ಕಾರ ಹೇಳಿದ್ರು. ತಕ್ಷಣ, ಅರೆ ಕೀರ್ತಿ, ಬನ್ನಿ ಬನ್ನಿ ಅಂತ ತುಂಬು ಹೃದಯದಿಂದ ಸ್ವಾಗತ ಮಾಡಿದ್ರು. ರಾಘವ್ ಸೂರ್ಯನ್ನ ನೋಡಿ ಸಾರ್ ನಿಮ್ಮ ಶೋನ ಟಿವಿಯಲ್ಲಿ ನೋಡ್ತಿರ್ತೀನಿ ಅಂತ ವೆಲ್ ಕಮ್ ಮಾಡಿದ್ರು. ಕಿರಣ್ ಸಹ ಅವರ ಸ್ವಾಗತಕ್ಕೆ ಖು‍ಷ್. ಅದಾಗಿ 10-12 ನಿಮಿಷಗಳ ಕಾಲ ಅವರ ಸಂತೋಷಕ್ಕೆ ಪಾರವೇ ಇಲ್ಲ. `ನನ್ನ ನೆನಪು ಮಾಡ್ಕೊಂಡು ನನ್ನ ಅಂಗಡಿಗೆ ಬಂದಿದ್ದು ಸಖತ್ ಖುಷಿ ಆಯ್ತು ಅನ್ನೋದನ್ನೇ ೫-೬ ಸಲ ಹೇಳಿದ್ರು. ಅವರ ಜೊತೆಗಿದ್ದ ಅವರ ಊರಿನ ಹುಡುಗನೊಬ್ಬ ಇವತ್ತು ಮಾಧ್ಯಮದಲ್ಲಿ ಬೆಳೀತಾ ಇದಾನೆ ಅನ್ನೋದೇ ಅವರಿಗೆ ಖುಷಿ. ಅಲ್ಲಿದ್ದ ಅವರ ಕಸ್ಟಮರ್ ಗಳಿಗೆ ನಮ್ಮನ್ನ ಪರಿಚಯಿಸಿ ಕೊಟ್ಟರು. ನಮ್ಮ ಹುಡುಗ ನಮ್ಮ ಹುಡುಗ ಅಂತ ಅವರು ಹೇಳಿದಾಗಲೆಲ್ಲಾ ನಂಗೆ ಅದೇನೋ ಹೆಮ್ಮೆ. ನಂಗೇ ಯಾವಾಗಲೂ ಒಳ್ಳೆಯದನ್ನು ಹಾರೈಸುವವರಲ್ಲಿ ಮಣಿ ಸರ್ ಸಹ ಒಬ್ಬರು. `ಸರ್, ನಿಮ್ಮ ಹಾರೈಕೆಗಳಿಂದಾನೇ ನಾನಿವತ್ತು ಏನೋ ಒಂದು ಆಗಿದೀನಿ’ ಅಂದೆ. ಛೆಛೆಛೆ, ಅದೆಲ್ಲಾ ಏನಿಲ್ಲ, ಕಷ್ಟ ಪಟ್ರೆ ಏನಾದ್ರೂ ಸಾಡಿಸ್ಬೋದು ಅನ್ನೋಕೆ ನೀನು ಸಾಕ್ಷಿ ಅಂತೆಲ್ಲಾ ಹೇಳಿ ನನ್ನನ್ನೇ ಸಮಾಧಾನ ಮಾಡಿಬಿಟ್ರು. `ಗಾಡ್ ಫಾದರ್ ಇಲ್ಲದೇ ಬೆಳೆದವನು ನಮ್ಮ ಹುಡುಗ ಅಂತ ರಾಘವ್ ಗೆ ನನ್ನ ಬಗ್ಗೆ ಹೇಳಿದ್ರು. ನಮ್ಮ ಜೊತೆ ಫೋಟೋ ಹೊಡೆಸ್ಕೊಂಡ್ರು. ಅವರ ಖುಷಿ ನೋಡಿ ನಾನೆದೆಷ್ಟು ಖುಷಿ ಪಟ್ಟೆ ಅಂತ ನನಗೇ ಗೊತ್ತು. ಅಲ್ಲಿಂದ ಹೊರಗೆ ಬಂದಾಗ ಅದೇನೋ ಸಾರ್ಥಕತೆ. ಈ ಸಲ ಶಿವಮೊಗ್ಗಕ್ಕೆ ಬಂದಾಗಲಾದ್ರೂ ಇಷ್ಟು ಪ್ರೀತಿಸೋ ಮಣಿ ಸರ್ ಮೀಟ್ ಮಾಡಿದ್ನಲ್ಲಾ ಅಂತ. ಅಲ್ಲಿಂದ ಬರುವಾಗ ಇಂತಹ ಪ್ರೀತಿಸೋರನ್ನ ಸಂಪಾದಿಸಿದ್ದೀಯ ಅನ್ನೋ ಅರ್ಥ ಬರುವಂತೆ ರಾಘವ್ ನನ್ನ ಬೆನ್ನು ತಟ್ಟಿದ್ದ. ನನಗೂ ನನ್ನ ಬಗ್ಗೆ ಖುಷಿ ಅನ್ನಿಸ್ತು.Image

ಅದಾಗಿ ಒಂದು ಗಂಟೆಯಲ್ಲಿ ಮತ್ತೆ ಮಣಿ ಸರ್ ಫೋನ್ ಬಂತು. `ಎಲ್ಲಿದೀರಿ..? ಹೋಟೆಲ್ ಹತ್ತಿರ ಎಷ್ತು ಹೊತ್ತಿಗೆ ಬರ್ತೀರಿ’ ಅಂತ. ಈಗ ಲೇಟ್ ಆಗುತ್ತೆ ಬೆಳಗ್ಗೆ ಸಿಗ್ತೀನಿ ಅಂದೆ. ರಾತ್ರಿ ಮಲಗಿ ಬೆಳಗ್ಗೆ ೮ ಗಂಟೆ ಹೊತ್ತಿಗೆ ನಮ್ಮ ರೂಮಿನ ಬೆಲ್ ಆಯ್ತು. ಬಂದಿದ್ದಿದ್ದು ಮಣಿ ಸರ್. ಕೈಯಲ್ಲಿ ಒಂದು ಬ್ಯಾಗ್ ಇತ್ತು. ಅದರಲ್ಲಿ 2 ಬಾಕ್ಸ್ ಗಳಲ್ಲಿ ಆಲೆಮನೆಯ ಜೋನಿ ಬೆಲ್ಲದ ಸ್ವೀಟ್ ತಗೊಂಡ್ ಬಂದಿದ್ರು. ಏನಾದ್ರೂ ವಿಶೇ‍ಷವಾಗಿದ್ದು ಕೊಡಬೇಕು ಅನ್ನಿಸ್ತು. ಅದಕ್ಕೇ ನನಗೆ ಅಂತ ತಂದಿದ್ದ ಇದನ್ನ ಕೊಡ್ತಿದೀನಿ ಅಂತ ಕೊಟ್ಟು ಹೋದ್ರು. ಅವರ ಪ್ರೀತಿಯಲ್ಲಿ ನಾವು ಕರಗಿ ಹೋಗಿದ್ವಿ. ಅಷ್ಟು ದೊಡ್ಡವರು, ತಾವು ನೋಡಿದ ಹುಡುಗನ ಬಗ್ಗೆ ಇಟ್ಟಿರೋ ಪ್ರೀತಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಕಮ್ಮೀನೆ… ಮಣಿ ಸರ್, ನಿಮ್ಮ ಹಾರೈಕೆ-ಪ್ರೀತಿ ಹೀಗೇ ಇರಲಿ… ಎಂದೆಂದಿಗೂ…

ಬೇಡ ಬೇಡ ಅಂದ್ರೂ ಅವೆಲ್ಲಾ ಮತ್ತೆ ಮತ್ತೆ ನೆನಪಾಗ್ತಾನೇ ಇರುತ್ತೆ. ಅದು ನನ್ನ ಬಾಲ್ಯದ ದಿನಗಳು. ನನ್ನ ಜೀವನದ ಬಹಳಾ ನೋವಿನ ದಿನಗಳು ಅಂತಾನೇ ಹೇಳ್ಬೋದು. ಅಮ್ಮ ನನ್ನನ್ನ ತುಂಬಾ ಕಫ್ಟಪಟ್ಟು ಸಾಕಿದ್ರು. ಎಂಥಾ ಟೈಂನಲ್ಲೂ ನನ್ನ ವಿದ್ಯಾಭ್ಯಾಸಕ್ಕೆ ತೊಂದರೆ ಮಾಡ್ಲಿಲ್ಲ. ಅದಕ್ಕೆ ನಾನಿವತ್ತು ಏನೋ ಒಂದು ಸಾಧಿಸೋಕೆ ಸಾಧ್ಯವಾಗಿರೋದು. ಅಮ್ಮನಿಗೆ ಕೋಟಿ ಥ್ಯಾಂಕ್ಸ್.. ಆದ್ರೆ ಎಲ್ಲರೂ ನನ್ನಮ್ಮ ಆಗಿರಬೇಕು ಅಂತ ರೂಲ್ಸ್ ಇಲ್ಲ. ಅವರಿಗೆ ಅವರದ್ದೇ ಆದ ನೋವುಗಳಿರುತ್ತೆ. ಹಾಗಾಗಿ ಸಾವಿರಾರು ಮಕ್ಕಳು ನಮ್ಮೂರ ಬೀದಿಗಳಲ್ಲಿ ತುತ್ತು ಅನ್ನಕ್ಕಾಗಿ ಗೋಗರಿಯೋದು.

ನನ್ನ ಜೀವನ ಹಾಗಿರಲಿಲ್ಲ ನಿಜ, ಆದ್ರೆ ಅಲ್ಲಿ ನೋವಿತ್ತು. ಬುಧವಾರದ ಕಲರ್ ಡ್ರೆಸ್ ಗೆ ಕಣ್ಣೀರು ಹಾಕಿದ್ದು ನೆನಪಿದೆ. ಕಾಲಲ್ಲಿ ಶೂ ಇಲ್ಲ ಅಂತ ಸ್ಕೂಲಲ್ಲಿ ಹೊಡೆತ ತಿಂದಿದ್ದು ಮರೆತಿಲ್ಲ. ಫೀಸ್ ಕಟ್ಟಿಲ್ಲ ಅಂತ ಮನೆಗೆ ಎಕ್ಸಾಮ್ ಬರೀದೇ ಮನೆಗೆ ಬಂದಿದ್ದೂ ಕಾಡ್ತಾ ಇದೆ. ನನ್ನ ಕ್ಲಾಸ್ ಮೇಟ್ ಗಳ ಮನೆಗೆ ಅವರು ಏಳೋಕೆ ಮುಂಚೆ ಹೋಗಿ ಪೇಪರ್ ಹಾಕಿ ಬರ್ತಿದ್ದೆ ನಾನು. ಯಾವತ್ತಾದ್ರೂ ಪೇಪರ್ ಬಂಡಲ್ ಲೇಟಾಗಿ  ಬಂದ್ರೆ ಏನಾದ್ರೂ ಸುಳ್ಳು ಹೇಳಿ ತಪ್ಪಿಸಿಕೊಳ್ತಿದ್ದೆ. ಸ್ಕೂಲ್ ಗೆ ಹೋಗೋಕೆ ಮುಂಚೆ ಅಮ್ಮನಿಗೆ ಹೋಟೆಲ್ ನಲ್ಲಿ ಸಹಾಯ ಮಾಡ್ತಿದ್ದೆ. ಮಳೆ ಬಂದಾಗ ಸೋರುತ್ತಿದ್ದ ಜಾಗದಲ್ಲಿ ಪಾತ್ರೆ ಇಟ್ಟು ನೀರು ತುಂಬಿಸಿದ್ದು, ಅವತ್ತೊಂದು ದಿನ ಮಳೆಯ ರಭಸಕ್ಕೆ ಮನೆಯ ಮಣ್ಣಿನ ಗೋಡೆ ನೆಲಕಚ್ಚಿದ್ದು, ಆ ಗೋಡೆ ಬಿದ್ದಿದ್ದಕ್ಕೆ ನಮ್ಮ ಎಮ್.ಎಲ್.ಎ ೪೦೦ ರೂಪಾಯಿ ಪರಿಹಾರ ಕೊಟ್ಟಿದ್ದು, ಇವೆಲ್ಲಾ ಈಗ ಇತಿಹಾಸ. ಈಗ ನನ್ನ ಕಾಲಲ್ಲಿ ನೈಕಿ ಶೂ ಇದೆ. ಕೀ ಬೋರ್ಡ್ ಕುಟ್ಟುತ್ತಿರೋ ಕೈಯಲ್ಲಿ ಚಿನ್ನದ ಉಂಗುರ ಇದೆ. ಲ್ಯಾಪ್ ಟಾಪ್ ಸ್ಕ್ರೀನ್ ಮೇಲೆ ನನ್ನ ಕುತ್ತಿಗೆಯಲ್ಲಿರೋ ಚೈನ್ ಪ್ರತಿಬಿಂಬ ಕಾಣ್ತಿದೆ. ಇದಕ್ಕೆಲ್ಲಾ ಕಾರಣ ನನ್ನಮ್ಮ. ಬಡತನದಲ್ಲೂ ದೃತಿಗೆಡದ ಅವರ ಮನೋಸ್ಥೈರ್ಯ, ನನ್ನ ಮಗ ಚೆನ್ನಾಗಿ ಓದಬೇಕು ಅನ್ನೋ ಆಸೆ ನನ್ನನ್ನ ಇವತ್ತು ಇಲ್ಲಿ ನಿಲ್ಲಿಸಿದೆ. ಆದ್ರೆ ನಮ್ಮ ಸುತ್ತ ಇರೋ ಸಾವಿರಾರು ಮಕ್ಕಳಿಗೆ ಆ ಯೋಗ ಇಲ್ಲ. ನನ್ನಮ್ಮನಂಥ ಅಮ್ಮ ಇಲ್ಲ. ಹಾಗಾಗಿ ಅಂತಹ ಮಕ್ಕಳಿಗೆ ತಾಯಿಯ ಸ್ಥಾನದಲ್ಲಿ ನಮ್ಮಂತವ್ರು ನಿಂತರೆ ಅವರು ಸಹ ಮುಂದೊಂದು ದಿನ ನಮ್ಮ ಹಾಗೆ ಆಗಬಹುದು ಅನ್ನಿಸ್ತು.  ಅಂತಹ ಮಕ್ಕಳಿಗೋಸ್ಕರ ಏನಾದ್ರೂ ಮಾಡ್ಬೇಕು ಅನ್ನಿಸ್ತು. ಅದಕ್ಕೆ ಅದನ್ನ ನಿಮ್ಮ ಮುಂದಿಡ್ತಾ ಇದೀನಿ.

ಕರ್ನಾಟಕದಲ್ಲಿ ೩,೦೦,೦೦೦ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಹೋಗ್ತಿಲ್ಲ, ಆಥವಾ ಶಾಲೆ ಬಿಟ್ಟಿದಾರೆ. ಅವರಲ್ಲಿ ತುಂಬಾ ಮಕ್ಕಳಿಗೆ ಶಾಲೆಗೆ ಹೋಗೋ ಆಸೆ ಇದೆ. ಆದ್ರೆ ಸಾಧ್ಯವಾಗ್ತಿಲ್ಲ. ಅವರ ಆಸೆಯನ್ನು ನಾವು ನೀವೆಲ್ಲ ಸೇರಿ ಈಡೇರಿಸಿದ್ರೆ ನಾಳೆ ನಾವು ನೀವು ಇರೋ ತರ ಆ ಮಕ್ಕಳೂ ಇರಬಹುದು. ಒಂದು ಮನೆ ಬಾಡಿಗೆ ಪಡೆದು ೧೫-೨೦ ಅನಾಥ ಮಕ್ಕಳನ್ನು ಅಲ್ಲಿರಿಸಿ, ಅವರಿಗೆ ಊಟ, ಬಟ್ಟೆ, ವಿಧ್ಯಾಭ್ಯಾಸ ಕೊಡೋಣ ಅನ್ನಿಸ್ತಿದೆ. ಆ ಮಕ್ಕಳು ನಾಳೆ ಸಮಾಜ ಘಾತುಕರಾಗದೇ, ಸಮಾಜ ಪಾಲಕರಾಗ್ಲಿ. ಪ್ರಯತ್ನ ನಮ್ಮದು ಫಲ ದೇವರದು.

ನಮ್ಮಿಂದ ಎಲ್ಲಾ ಸರಿ ಹೋಗುತ್ತೆ ಅಂತಲ್ಲ. ನಮ್ಮ ಕೈಲಾದ ಪ್ರಯತ್ನ ನಾವು ಮಾಡೋಣ. ಒಂದು ತಿಂಗಳ ನಮ್ಮ ನಿಮ್ಮ ಫಿಜಾ಼, ಬರ್ಗರ್ ಖರ್ಚು ಆ ಮಕ್ಕಳಿಗೆ ಒಂದು ತಿಂಗಳ ಊಟದ ಖರ್ಚು. ನಿಮ್ಮಿಂದ ಸಾಧ್ಯವಿದ್ದಶ್ಟು ಸಹಾಯ ಮಾಡಿ. ಅವರ ಫ್ಯೂಚರ್  ಬ್ರೈಟ್ ಆಗಿರುತ್ತೆ. ನಾವು ಬೆಳೆಸೋ ೨೦ ಜನ ನಾಳೆ ೨೦೦ ಅನಾಥ ಮಕ್ಕಳಿಗೆ ಆಶ್ರಯ ಕೊಡಬಹುದು. ಇದು ಉತ್ತಮ ಭಾರತಕ್ಕೆ ನಮ್ಮ ಪುಟ್ಟ ಕೊಡುಗೆ. ನಿಮಗೆ ಏನನ್ಸುತ್ತೋ ಅದನ್ನ ಹೇಳಿ. ಮಾಡೋಣ.

ಸದ್ಯದಲ್ಲೇ ‘ವಿಸ್ಮಯ’ ಅನ್ನೋ ಹೆಸರಲ್ಲಿ ಒಂದು ಟ್ರಸ್ಟ್ ರಿಜಿಸ್ಟರ್ ಮಾಡಿಸ್ತೀನಿ. ನೀವೆಲ್ಲಾ ನನ್ನ ಜೊತೆಗಿದ್ದು ಒಂದು ವಿಸ್ಮಯಕಾರಿ ಕೆಲಸಕ್ಕೆ ಕೈ ಜೋಡಿಸ್ತೀರಿ ಅಂತ ನಂಬಿದೀನಿ.

ನಿಮ್ಮ

ಕೀರ್ತಿ ಶಂಕರಘಟ್ಟ

        ಬೆಳಗ್ಗೆ ಅಷ್ಟು ಬೇಗ ಏಳೋದೇ ದೊಡ್ಡ ವಿಷ್ಯ. ಅಂತದ್ರಲ್ಲಿ ಬೆಳಗ್ಗೆ ಬೆಳಗ್ಗೆ ಮೈ ನೋವು ಮಾಡ್ಕೊಂಡು ಅರ್ಧಂಬರ್ಧ ಅರ್ಥ ಆಗೋ ಭಾಷೆಯ ಹಾಡು ಕೇಳಬೇಕು ಅಂದ್ರೆ ಅದೆಷ್ಟು ಉರೀಬೇಡ. ನಂಗೂ ದಿನಾ ಇದೇ ಆಗ್ತಿತ್ತು.. ಐದೂವರೆಗೆ ಎದ್ದು ಅಮ್ಮ ಕೊಡೊ ಬಿಸಿ ಬಿಸಿ ಬ್ರೆಡ್ಡು, ಬೂಸ್ಟ್ ಕುಡ್ಕೊಂಡು ಗಡ ಗಡ ನಡುಗ್ತಾ ಚಳೀಲಿ ಜಿಮ್ ಗೆ ಹೋದ್ರೆ ಅಲ್ಲಿ ಅದ್ಯಾವ್ದೋ ಏಳು ಸಮುದ್ರದ ಆಚೆ ಇರೋ ದೇಶದ ಇಂಗ್ಲಿಶ್ ಹಾಡುಗಳು ನನ್ನ ಕಿವೀಗೆ ಕರ್ಕಶವಾಗಿ ಕೇಳೋದು. ಎಲ್ಲೋ ಅಲ್ಲೊಂದು, ಇಲ್ಲೊಂದು ವಾಕ ವಾಕ, ವೆಂಗ ಬಾಯ್ಸ್ ಹಾಡು ಬಂದ್ರೆ ಮಾತ್ರ ನಾನು ಸ್ವಲ್ಪ ಬಾಯ್ ಆಡಿಸ್ಬೋದು. ಇಲ್ಲದೇ ಇದ್ರೆ ಜಿಮ್ಮಿಗೆ ಬರೋ ಸಾಕಷ್ಟು ಜನ ಅವ್ರೇ ಹಾಡಿರೋ ಹಾಡು ಅನ್ನೋ ತರ ಹಾಡ್ತಿರ್ತಾರಲ್ಲ, ಅವರ ಮುಖ ಮುಖ ನೋಡೋದಷ್ಟೇ ನನ್ನ ಕಾಯಕ. ಒಂದು ಕಡೆ ನಮ್ಮ ಟ್ರೈನೆರ್ ಜಾಸ್ತಿ ವೇಯ್ಟ್ ಎತ್ತಿ ಅಂತ ಕೊಡೋ ಟಾರ್ಚರ್, ಇನ್ನೊಂದು ಕಡೆ ಈ ದರಿದ್ರ ಇಂಗ್ಲಿಷ್ ಹಾಡು.  ಈ ಕಿತ್ತೋಗಿರೋ ಹಾಡು ನಿಲ್ಸಿ ಅಂತ ಹೇಳೋಣ ಅಂದ್ರೆ, ` ಮೊನ್ನೆ ಮೊನ್ನೆ ಸೇರ್ಕೊಂಡಿರೋ ನನ್ ಮಗ ಎಷ್ಟು ಗಾಂಚಲಿ ಮಾಡ್ತಾನೆ’ ಅಂತ ಅನ್ಕೊತಾರೆ ಅನ್ನೋ ಲಾಜಿಕ್ಕು. ಏನಾದ್ರು ಆಗ್ಲಿ ಅಂತ ಕಷ್ಟ ಪಟ್ಟು ಕೈಲಿದ್ದ 25 ಕೆಜಿ ಡಂಬಲ್ ಎತ್ತುತಾ ಆ ಹಾಡನ್ನ ಅರಗಿಸಿ ಕೊಳ್ತಾ ಇದ್ದೆ. ಅವಳ್ಯಾರೋ ನಮ್ ಏರಿಯಾ ಕಾಗೆ ತರ ಕಿರುಚ್ತಾ ಇದ್ರೆ, ಟ್ರೆಡ್ ಮಿಲ್ ಮೇಲೆ ಓಡ್ತಾ ಇದ್ದ ಆ ಕಪ್ಪು ಟಿ ಶರ್ಟಿನ ಹುಡುಗ ಫುಲ್ ಆ ಹಾಡನ್ನ ಎಂಜಾಯ್ ಮಾಡ್ತಾ ಇದ್ದ. ನೀವೋ, ನಿಮ್ ಹಾಡೋ ಅಂತ ಮನಸಲ್ಲೇ ಉಗೀತಾ, ಮತ್ತೆ ಇರೋ ಬರೋ ಶಕ್ತಿ ಬಿಟ್ಟು ಡಂಬಲ್  ಎತ್ತುತಾ ಇದ್ದೆ. ಅವತ್ತು ಮನೆಗೆ ಹೋದ ಮೇಲೂ ಆ ಇಂಗ್ಲಿಶ್ ಹಾಡುಗಳು ನಮ್ಮ ಮನೆಯ ಗಾಯತ್ರಿ ಮಂತ್ರವನ್ನ ಓವರ್ ಟೇಕ್ ಮಾಡಿ ಕಾಟ ಕೊಡ್ತಾ ಇದ್ವು. ಅವರೆಲ್ಲಾ ಆ ಇಂಗ್ಲಿಷ್ ಹಾಡುಗಳನ್ನ ಅದ್ ಹೇಗೆ ಅಷ್ಟು ಚೆನ್ನಾಗಿ ಹಾಡ್ತಾರೆ ಅನ್ನೋದೇ ನನ್ನ ಕಾಡ್ತಿದ್ದ ಪ್ರಶ್ನೆ. ಅವರ ಬಗ್ಗೆ ಒಂದು ಕಡೆ ಹೆಮ್ಮೆ, ಇನ್ನೊಂದ್ ಕಡೆ ಹೊಟ್ಟೆ ಉರಿ.

ಆದ್ರೆ ಮರುದಿನ ಜಿಮ್ ಗೆ ಹೋದವನಿಗೆ ಸಿಕ್ಕಾಪಟ್ಟೆ ಆಶ್ಚರ್ಯ. ಅವನು ಹಾಕೋ ಎಲ್ಲಾ ಹಾಡುಗಳನ್ನ ನಾನು ಆರಾಮಾಗಿ ಹಾಡ್ತಾ ಇದ್ದೀನಿ. ಇಷ್ಟು ದಿನ ಎಲ್ಲರ ಬಾಯನ್ನ ನಾನು ಬಾಯ್ ಬಾಯ್ ಬಿಡ್ಕೊಂಡು ನೋಡ್ತಾ ಇದ್ದೆ. ಆದ್ರೆ ಅವತ್ತು ಎಲ್ಲರೂ ನನ್ನನ್ನ ಬಾಯ್ ಬಾಯ್ ಬಿಡ್ಕೊಂಡು ನೋಡ್ತಾ ಇದ್ರೂ. ಇಷ್ಟು ದಿನ ನನ್ನ ಮನಸ್ಸಿಗೆ ಬರ್ತಾ ಇದ್ದ ಪ್ರಶ್ನೆಗಳು ಇವತ್ತು ಅವರನ್ನ ಕಾಡ್ತಾ ಇದ್ವು. ನಿಮಗೂ ಆಶ್ಚರ್ಯ ಆಗ್ಬೋದು, ಅದ್ ಹೇಗೆ ಇದ್ದಕ್ಕಿದ್ದ ಹಾಗೇ ಎಲ್ಲ ಹಾಡುಗಳನ್ನ ನಾನು ಹಾಡ್ತಾ ಇದ್ದೆ ಅಂತ. ಉತ್ತರ ಸಿಂಪಲ್ಲು, ಅವತ್ತು ಜಿಮ್ಮಲ್ಲಿ ಹಾಕಿದ್ದಿದ್ದು ಅದೇ ಕಿತ್ತೋಗಿರೋ ಕರ್ಕಶ ಇಂಗ್ಲಿಷ್ ಹಾಡಲ್ಲ. ಇಂಪಾದ ಕನ್ನಡ ಹಾಡುಗಳು. ಅದಕ್ಕೆ ನನ್ನ ಬಾಯಲ್ಲಿ ಎಲ್ಲಾ ಹಾಡುಗಳನ್ನ ನಾನು ಆರಾಮಾಗಿ ಹಾಡ್ತಾ ಇದ್ದೆ. ಕನ್ನಡ ಹಾಡುಗಳನ್ನ ಕೇಳಿದ ಕುಶೀಲಿ ಡಂಬಲ್ ನ ಎರಡು ಮೂರು ಸಲ ಜಾಸ್ತೀನೆ ಎತ್ತುತಾ ಇದ್ದೆ. ದಿನಾ ಹಿಂಗೆ ಇರಬಾರದಿತ್ತ ಅಂತ ಅನ್ನಿಸ್ತು. ಅಷ್ಟಕ್ಕೂ ಅಲ್ಲಿ ಹಾಕಿದ್ದ ಹಾಡುಗಳನ್ನ ಈ ಹೊತ್ತಲ್ಲಿ ನೆನಪಿಸ್ಕೊಳ್ಳೆ ಬೇಕಪ್ಪ.
ಅಲ್ಲಿ ಹಾಕಿದ್ದಿದ್ದು ಇತ್ತೀಚಿನ ಹೊಸ ಕನ್ನಡ ಹಾಡಲ್ಲ, ೬೦-೭೦ರ ದಶಕದ ಸ್ಲೋ ಮೋಶನ್ ಹಾಡುಗಳೂ ಅಲ್ಲ. ಅದೆಲ್ಲ 80-90’s ಹಿಟ್ಸ್. `ಜೀವ ಹೂವಾಗಿದೆ, ಭಾವ ಜೇನಾಗಿದೆ’ ಅಂತ ಹಾಡು ಬರ್ತಾ ಇತ್ತು. ನನ್ನ ಜೀವದಲ್ಲಿ ಶಕ್ತಿ ಏರ್ತಾ ಇತ್ತು. ಅಣ್ಣಾವ್ರ ವಾಯ್ಸು ಹಂಗೆ ವರ್ಕ್ ಔಟ್ ಮಾಡೋಕೆ ಇನ್ಪಿರೆಶನ್ ಅನ್ನೋ ಹಾಗಿತ್ತು. ಅದು ಮುಗೀತ ಇದ್ದ ಹಾಗೇ` ಬಾ ನಲ್ಲೆ ಬಾ ನಲ್ಲೆ ಮಧು ಚಂದ್ರಕೆ’. ಹನಿಮೂನ್ ಮಾತ್ರ ಗೊತ್ತಿರೋ ಇಂಗ್ಲಿಶ್ ಪುತ್ರರಿಗೆ ನಮ್ಮ ಮಧುಚಂದ್ರದ ಹಾಡು ಅಷ್ಟು ರುಚಿಸಿಲ್ಲ ಅಂತ ಗೊತ್ತಾಗ್ತಾ ಇತ್ತು. ನಾನು ಮಾತ್ರ ದೂರದಲ್ಲಿ ಟ್ರೆಡ್ ಮಿಲ್ ಮೇಲೆ ಓಡ್ತಾ ಇದ್ದ ಪಿಂಕ್ ಟಿಶರ್ಟ್ ಹುಡುಗಿ ನೋಡಿ ಮಧುಚಂದ್ರವನ್ನ ಎಂಜಾಯ್ ಮಾಡ್ತಾ ಇದ್ದೆ. ಅದು ಮುಗೀತಾ ಇದ್ದಂಗೆ ಶುರುವಾಗಿದ್ದೆ `ಚೆಲುವೆ ಒಂದು ಕೇಳ್ತೀನಿ’.. ವಾ ವಾ ಹಂಸಲೇಖ ಮ್ಯುಸಿಕ್ ನ ಆ ಜಾಗದಲ್ಲಿ ಎಂಜಾಯ್ ಮಾಡ್ತಾ ಇದ್ದಿದ್ದು ನಾನು ಮತ್ತು ಕಷ್ಟ ಪಟ್ಟು ಡಿಬ್ಸ್ ಹೊಡೀತ ಇದ್ದ ಆ ದಾವಣಗೆರೆ ಹುಡುಗ ಮಾತ್ರ. ಇನ್ನೆಲ್ಲರೂ ಅವತ್ತು ಮೂಕ ಪ್ರೇಕ್ಷಕರು. ನಾನು ಎಷ್ಟೋ ಸಲ ಅರ್ಥ ಆಗದೆ ಇದ್ರೂ ಇಂಗ್ಲಿಶ್ ಹಾಡು ಕೇಳ್ತಾ ಇರ್ತೀನಿ. ಆದ್ರೆ ಎಲ್ಲ ಇಂಗ್ಲಿಶ್ ಹಾಡಿನ ಪ್ರೇಮಿಗಳ ಮಧ್ಯೆ ಕನ್ನಡಿಗನಾಗಿ ಕನ್ನಡ ಹಾಡನ್ನ ಎಂಜಾಯ್ ಮಾಡೋದ್ ಇದ್ಯಲ್ಲ, ಅದರ ಮಜಾನೆ ಬೇರೆ. ಇನ್ನೇನ್ ನಾನ್ ಜಿಮ್ಮಿಂದ ಹೊರಡಬೇಕು, ಅಷ್ಟರಲ್ಲಿ ಶುರು ಆಯ್ತು` ಚೆಲುವೆಯೇ ನಿನ್ನ ನೋಡಲು ಮಾತುಗಳು ಬರದವನು… ‘ ಹಾಡು ಕೇಳಿ, ಮಾತು ಬಾರದಂತೆ ನಿಂತಿದ್ದ ಉಳಿದವರನ್ನ ನೋಡಿ, ಸಿರಿಗನ್ನಡಂ ಗೆಲ್ಗೆ ಅಂತ ಮನಸಲ್ಲಿ ಅನ್ಕೊಂಡು, ಹಾಡು ಮುಗಿಯೋ ತನಕ ಅಲ್ಲೇ ಇದ್ದು, ೪ ವರ್ಕ್ ಔಟ್ ಜಾಸ್ತಿ ಮಾಡಿ ಬಂದೆ. ನಂಗೊತ್ತು ನಾಳೆ ಬೆಳಿಗ್ಗೆ ಮತ್ತದೇ ಅರಚುವ ಸಂಗೀತ ನನ್ನ ಕಿವಿಗೆ ಹಿಂಸೆ ಕೊಡುತ್ತೆ ಅಂತ. ಆದ್ರೂ ಅವತ್ತು ಒಂದು ದಿನ ಕನ್ನಡ ಹಾಡುಗಳ ಮಧ್ಯೆ ನಾನೊಬ್ಬನೇ ಹೀರೋ ಆಗಿದ್ದೆ ಅನ್ನೋ ಸಮಾಧಾನ ನಂಗೆ.
ನಾವಾಡುವ ನುಡಿಯೇ ಕನ್ನಡ ನುಡಿ…

                      ತ್ತೆ ಬರೀತಿದೀನಿ… ಇನ್ನು ಮುಂದೆ ಬರೀತಾ ಇರ್ತೀನಿ.. ಈ ಹಿಂದೆ ಬರೆದಿದ್ದರಲ್ಲಿ ಎಷ್ಟೋ ಹೊಗೆ ಹಾಕಿಸ್ಕೊಂಡು ಬಿಡ್ತು.. ಕಳೆದ ೪-೫ ತಿಂಗಳು ನನ್ನ ಜೀವನದ ಅತ್ಯಂತ ಕೆಟ್ಟ ಕೆಟ್ಟ ದಿನಗಳು. ಆದ್ರೂ ಆತ್ಮ ವಿಶ್ವಾಸ ಕುಗ್ಗಿಲ್ಲ.. ನಾನು ನನ್ನನ್ನ ನಂಬಿದವನು. ಜೀವಕ್ಕೆ ಜೀವದಂತಿದ್ದ ತಂಗಿ ನನ್ನ ಅರ್ಧ ಕುಗ್ಗಿಸಿ ಹೋಗಿಬಿಟ್ಟಳು… ಜೀವಕ್ಕೆ ಜೀವದಂತಿದ್ದ ನನ್ನ `ಅಪ್ಪಿ’ಗೆ ನಾನು ಬೇಡವೇ ಬೇಡ ಅನ್ನಿಸಿ ಬಿಟ್ಟಿದೆ. ಅಲ್ಲಿಗೆ ಅರ್ಧ ಸತ್ತು ಹೋದೆ ಅಂದುಕೊಂಡೆ.. ಆದ್ರೂ ಮನಸ್ಸು ಗಟ್ಟಿ ಮಾಡಿಕೊಂಡು ಮೇಲೆದ್ದೆ. ನನ್ನ ಜೀವನವೇ ಆಗಿ ಹೋಗಿದ್ದ ಸುವರ್ಣ ನ್ಯೂಸ್  ಬಿತ್ತು ಬಂದು ಬೇರೆ ಸಂಸ್ಥೆಯಲ್ಲಿ ಕೆಲಸ ಮಾಡ್ತಿದೀನಿ. ಕೆಲಸ ಗೊತ್ತಿದೆ. ಎಲ್ಲೇ ಇದ್ರೂ ಬದುಕ್ತೀನಿ, ಅದೂ ಯಶಸ್ವಿಯಾಗಿ ಬದುಕ್ತೀನಿ ಅನ್ನೋ ನಂಬಿಕೆ ಇದೆ. ಅದೇ ನಂಗೆ ಅನ್ನ ಹಾಕ್ತಾ ಇರೋದು.
ಬರೆಯೋಕೆ ತುಂಬಾ ಇದೆ… ಇನ್ನು ಮುಂದೆ ನಿರಂತರವಾಗಿ ಬರೀತಾ ಇರ್ತೀನಿ. ನೀವು ಓದಿ, ತಿದ್ದಿ, ಬುದ್ದಿ ಹೇಳಿ…

ಮತ್ತೆ ಬಂದೆ….

ತ್ತತ್ರ 2 ತಿಂಗಳೇ ಕಳೀತು, ನಾನು ನನ್ನ ಬ್ಲಾಗ್ ನಲ್ಲಿ ಏನಾದರೂ ಗೀಚಿ. ಇತ್ತೀಚಿಗೆ ಸ್ವಲ್ಪ ಬ್ಯುಸಿ ಆಗ್ಬಿಟ್ಟಿದೆ ಜೀವನ. ಈ ಮೀಡಿಯಾನೇ ಹಿಂಗೆ ಬಿಡಿ. ಎಷ್ಟು  ಮಾಡಿದರೂ ಮುಗಿಯದ ಕೆಲಸ, ತೀರದ ಹಸಿವು. ಸರಿ ಸರಿ ಈ ಎರಡು ತಿಂಗಳಲ್ಲಿ ಏನೆಲ್ಲಾ ಆಗೋಯ್ತು ಅಲ್ವ? ಸಕ್ಕತ್ತಾಗಿ ಗೋಳಾಡಿಸಿದ ವರ್ಷ ಕಳೆದೆ ಹೋಯ್ತು. ಹೊಸ ವರ್ಷಾಚರಣೆ ಈ ಸಲ ಆಫೀಸ್ ನಲ್ಲೆ ಕಳೆದು ಹೋಯ್ತು. ಎಲ್ಲಾ ಸಂಭ್ರಮದಿಂದ ಕುಣೀತಾ ಇದ್ರೆ ನಾನು ಸ್ಪೆಷಲ್ ಪ್ರೋಗ್ರಾಮ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗ್ಬಿಟ್ಟಿದ್ದೆ… ಆದ್ರೂ ಚೆನ್ನಾಗಿತ್ತು ಬಿಡಿ. . ಅಂದ ಹಾಗೆ ಹೊಸ ವರ್ಷದಲ್ಲಿ ಏನೇನೋ ಅನ್ಕೊಂಡಿದಿನಿ. ಆಗುತ್ತೋ ಬಿಡುತ್ತೋ ಸೆಕೆಂಡರಿ, ಆದ್ರೂ ಪ್ರಯತ್ನ ಅಂತೂ ಮಾಡಲೇ ಬೇಕಲ್ವ..? ನನ್ನ ಮುಂದಿರೋ ಮೊದಲ ಕನಸು ಅಪ್ಪ ಅಮ್ಮನ್ನ ಬೆಂಗಳೂರಿಗೆ ಕರ್ಕೊಂಡು ಬಂದು ನಂ ಜೊತೇಲೆ ಇಟ್ಕೋಳೋದು. ಇನ್ನೇನು ತಂಗಿಯ ಮದುವೆ ದಿನಗಳು ಹತ್ತಿರ ಆಗ್ತಿವೆ. ಅವಳಿಗೂ ನಂ ಜೊತೆ ಒಂದಷ್ಟು ದಿನ ಖುಶಿಕ್ಹುಸಿಯಾಗಿ ಇರ್ಬೇಕು ಅನ್ನೋ ಆಸೆ. ನಂಗೂ ೩ ಹೊತ್ತೂ ಹೋಟೆಲ್ ಊಟ ಮಾಡಿ ಸಾಕಾಗಿ ಹೋಗಿದೆ. ನಿಸರ್ಗ, ಪರಿಸರ ಅಂದ್ರೆ ವಾವ್ ಅಂತಿದ್ದೆ. ಈಗ ನಿಸರ್ಗ ಅಂದ್ರೆ ವ್ಯಾಕ್ ಅನ್ನೋ ಹಾಗಾಗಿದೆ. ಯಾಕೆ ಅಂದ್ರ..? ನಮ್ ಆಫೀಸ್ ಪಕ್ಕದಲ್ಲಿರೋ ಹೋಟೆಲ್ ಹೆಸರು ನಿಸರ್ಗ. 3 ವರ್ಷದಲ್ಲಿ ಕನಿಷ್ಠ 2 ಕ್ವಿಂಟಾಲ್ ಫುಡ್ ಆ ಹೋಟೆಲ್ಲಲ್ಲೇ ತಿಂದಿರೋದು. ಸಕತ್ ಕಾಸ್ಟ್ಲಿ, ಆದ್ರೂ ಅನಿವಾರ್ಯ. ದಿನಕ್ಕೆ 100 ರುಪಾಯ್ ಅನ್ಕೊಂಡ್ರೂ  3 ವರ್ಷದಲ್ಲಿ 1 ಲಕ್ಷ ರುಪಾಯ್ ಊಟಕ್ಕೆ ಹಾಕಿದಿನಿ. ಅದೇ ದುದ್ದಿದ್ದಿದ್ರೆ ನ್ಯಾನೋ ಕಾರ್ ಆದ್ರೂ ತಗೊಬಹುದಿತ್ತು… 😦 ಪುಕ್ಷಟ್ಟೆ ಕೊಟ್ರೂ ನಾನದನ್ನ ತಗೋಳಲ್ಲ ಬಿಡಿ… )ಎನಿವೇ ಹಸಿದಾಗ ಅನ್ನ ಹಾಕಿದ ಆ ನಿಸರ್ಗಕ್ಕೂ ನನ್ನದೊಂದು ಥ್ಯಾಂಕ್ಸ್…

ಕೆಲವು ಗೆಳೆಯರು ಕಾಮೆಂಟ್ ಹಾಕ್ತ ಇರ್ತಾರೆ, ಏನಾದ್ರೂ ಬರಿ ಗುರು ಅಂತ. ಬರೀಬೇಕು ಅನ್ಕೊಂಡು ಕೂರ್ತೀನಿ, ಬರುದ್ರಾಯ್ತು ಬಿಡು ಅಂತ ಸುಮ್ನಾಗ್ತಿನಿ. ಕೆಲಸದಲ್ಲಿರೋ ಹುರುಪು ಈ ಬರೆಯೋದರಲ್ಲಿ ಯಾಕ್ ಬರಲ್ಲ ಅಂತ. ನನ್ನ ಹುಡುಗಿ ಕೈ ಕೊಟ್ಟು ಹೋದಾಗ ದಿನಾ ಕೂತ್ಕೊಂಡು ಪೇಜ್ ಗಟ್ಟಲೆ ಬರೀತಿದ್ದೆ. ಈಗ ನಾನ್ನದೆ ಸೂಪರ್ ಅನುಭವಗಳನ್ನ ಬರೆಯೋಣ ಅಂದ್ರೆ ಅದನ್ನ ಎಂಜಾಯ್ ಮಾಡೋಕೆ ಟೈಮ್ ಇಲ್ಲ, ಇನ್ನು ಬರೆದು ಗುಡ್ಡೆ ಹಾಕೋದು ಯಾವಾಗ…? ಎನಿವೇ.. ಹೊಸ ವರ್ಷದ ಪ್ಲಾನ್ ಗಳ ಬಗ್ಗೆ ಹೇಳ್ತಿದ್ದೆ ಅಲ್ವ…? ನಂಗೆ ಒಂದು ವಿಚಿತ್ರ ಚಟ ಇದೆ, ಈ ಬೆಸ್ಟ್ ದಿನಾಂಕಗಳ ದಿನ ಏನಾದ್ರೂ ಮಾಡೋದು, ಏನಾದ್ರೂ ತಗೋಳೋದು.. ಹೀಗೆ… ನಾನ್ ಹುಟ್ಟಿದ್ದು, 8-6-86, ಮನೆ ಕಟ್ಟಿದ್ದು ೦08-08-08, 09-09-09  ಗೆ ಜೀವನ ಬರ್ಬಾದಾಗಿತ್ತು, 10-10-10 ಕ್ಕೆ ಏನೂ ಮಾಡಕ್ಕಾಗಿಲ್ಲ, ಸೋ 11-11-11 ಕ್ಕೆ ಮೂರು ಪ್ಲ್ಯಾನ್ ಇದೆ. ತಂಗಿ ಮದುವೆ ಮಾಡೋದು, ಪುಟ್ಟದೊಂದು ಕಾರ್ ತಗೋಳೋದು ( ನ್ಯಾನೋ ಅಲ್ಲ), ನನ್ ಹುಡುಗಿ ಮನೇಲಿ ಕಿರಿಕ್ ಆದ್ರೆ ರಿಜಿಸ್ಟರ್ ಮ್ಯಾರೇಜ್ ಆಗೋದು.!!! ಇವೆಲ್ಲಾ ಆಗ್ಲಿ ಅಂತ ಪ್ಲೀಸ್ ಬೇಡ್ಕೊಬೇಕು ನೀವೆಲ್ಲ… ಪ್ಲಾನ್ಸ್ ಹೇಳಿದೀನಿ. .. ನಿಮಗೆ ಏನನ್ಸುತ್ತೋ ಹೇಳ್ರಪ್ಪ… ಯಾರು ಮಕ್ಕುಗೀಬೇಡಿ, ಆಡೋ ವಯಸ್ಸು ಮದುವೆ ಯಾಕೋ ಅಂತ… ಅದು ನಂಗೂ ಅರ್ಥ ಆಗುತ್ತೆ, ನನ್ನಮ್ಮ, ನನ್ ಹುಡುಗಿ ಇಬ್ರಿಗೂ ಅರ್ಥ ಆಗಲ್ಲ. ಯಾವತ್ತೋ ಆಗೋದು, ಆಗಿ ಹೋಗ್ಲಿ ಬಿಡಿ… ನಮಗೆ ಮದುವೆ ಆದ್ರೂ ಒಂದೇ, ಆಗದೆ ಇದ್ರೂ ಒಂದೇ… ಜೀವನ, ಜೀವನ ಶೈಲಿ ಸ್ವಲ್ಪಾನೂ ಬದಲಾಗಲ್ಲ… ನಾಯಿ ಬಾಲಕ್ಕೆ ದೆಬ್ಬೆ ಕಟ್ಟಿದ್ರೆ ಬಾಲ ನೆಟ್ಟಗಾಗುತ್ತಾ.? ನೋ ಚಾನ್ಸ್.. ನಿಮಗೂ ನಾನ್ ಹೇಳೋದಿಷ್ಟೇ… ಇರೋ ಅಷ್ಟು ದಿನ ಲೈಫ್ ಎಂಜಾಯ್ ಮಾಡಿ… ನಾಳೆ ಹೇಗಿರುತ್ತೋ ಯಾವನಿಗ್ ಗೊತ್ತು… ಬಿ ಹ್ಯಾಪಿ…