ಹಬ್ಬಕ್ಕೆ ಊರಿಗೆ ಹೋಗಿದ್ದೆ… ಹಬ್ಬದ ಹೆಸರು ದೀಪಾವಳಿ.. ಆದ್ರೆ ಊರವರೆಲ್ಲ ಹೊಡೀತಿದ್ದ ಪಟಾಕಿ ಹಾವಳಿ ಬಿಟ್ರೆ ಹಬ್ಬದಲ್ಲಿ ಗತ್ತು ಗಮ್ಮತ್ತು ಏನು ಕಾಣಿಸಲೇ ಇಲ್ಲ. ನಾನು 3-4 ವರ್ಷದಿಂದ ದೀಪಾವಳಿ ಹಬ್ಬಕ್ಕೆ ಊರಿಗೆ ಹೋದವನಲ್ಲ. ನಾನ್ ಯಾವ ಮನೇಲಿ ಬಾಡಿಗೆಗೆ ಇರ್ತೀನೋ ಆ ಓನರ್ ಮನೇಲೆ ನನ್ನ ದೀಪಾವಳಿ ಹಬ್ಬ ಮುಗಿದು ಹೋಗ್ತಿತ್ತು. ಆದ್ರೆ ಈ ಸಲ ಹಾಗಾಗಬಾರದು ಅಂತ ನನ್ನ ತಂಗಿಯ ಕಣ್ಣೀರಿನ ಆಹ್ವಾನಕ್ಕೆ ಕರಗಿ ಊರಿಗೆ ಹೋಗಿದ್ದೆ. ಆದ್ರೆ ನಾನ್ ನೋಡಿದ, ನಾನ್ ನಿರೀಕ್ಷಿಸಿದ್ದ ದೀಪಾವಳಿ ಇದಲ್ಲ ಅಂತ ನಂಗೆ ಹೋದ ಸ್ವಲ್ಪ ಹೊತ್ತಿಗೇ ಗೊತ್ತಾಗಿ ಬಿಡ್ತು.
ಯಾಕೆ ಹೀಗೆ ಅಂದ್ರ..? ಇನ್ನೀನ್ರಿರಿ… ಇನ್ನೂ ನೆನಪಿದೆ ನಂಗೆ ಅಜ್ಜಿ ಮನೆಯ ಆ ದೀಪಾವಳಿ. ಹಬ್ಬದ ಹಿಂದಿನ ದಿನ ಮನೆ ಮನೆಗೆ ಬರ್ತಿದ್ದ ಅಂಟಿಗೆ ಪಿಂಟಿಗೆಯವರು, ಅವರ ಜೊತೆಯಲ್ಲಿ ಬರುತ್ತಿದ್ದ ಹುಲಿ ವೇಷಧಾರಿಗಳು. ಅಮ್ಮನ ಸೆರಗ ಹಿಂದೆ ಅವಿತು ಬೆದರಿದ ಕಂಗಳು ಅವರನ್ನ ನೋಡ್ತಾ ಇದ್ದಿದ್ದು ಈಗೆಲ್ಲಿದೆ? ಹಬ್ಬದ ಹಿಂದಿನ ದಿನ ನಮ್ಮ ಮನೆಯಲ್ಲಂತೂ ಎಲ್ಲರೂ ಗಡದ್ದಾಗಿ ನಿದ್ದೆ ಮಾಡ್ತಿದ್ರು. ನಮ್ಮ ಮನೇಲಿ ಮಾತ್ರ ಅಲ್ಲ, ಎಲ್ಲರ ಮನೇಲೂ ಗೊರಕೆಯದ್ದೇ ಅಟ್ಟಹಾಸ.
ನಂಗೆ ಅಜ್ಜಿ ಮನೆಯಲ್ಲಿ ಮಾಡ್ತಿದ್ದ ಆ ದಿನಗಳ ದೀಪಾವಳಿ ನೆನಪು ಮಾಡ್ಕೊಬೇಕು ಅನ್ನಿಸ್ತು. ಅವತ್ತಿನ ಹಬ್ಬ ಎಲ್ಲ ಕನಿಷ್ಠ 3-4 ದಿನದ ಸಂಭ್ರಮ. ಒಂದೊಂದು ದಿನಕ್ಕೂ ಒಂದೊಂದು ವಿಶೇಷ. ನಮ್ಮ ಫ್ಯಾಮಿಲಿ, ಚಿಕ್ಕಪ್ಪ-ಚಿಕ್ಕಮ್ಮಂದಿರು, ದೊಡ್ಡಪ್ಪ-ದೊಡ್ಡಮ್ಮ, ಅವರ ಮಕ್ಕಳು, ದೂರದ ಬಾಂಬೆಯಿಂದ ಚಾಕಲೇಟು, ಬಿಸ್ಕೆಟ್ಟು, ಹೊಸ ಬಟ್ಟೆ ತರ್ತಿದ್ದ ಮಾವ ಎಲ್ಲರೂ ಸೇರಿ ಹಬ್ಬ ಆಚರಿಸೋ ಆ ಮಜಾನೆ ಬೇರೆ ಇತ್ತು. ಎಲ್ಲರೂ ಸೇರಿ ಎಣ್ಣೆ ಸ್ನಾನ ಮಾಡೋದೇನು, ವರ್ಷದಲ್ಲಿ ನಡೆದಿದ್ದನ್ನೆಲ್ಲಾ ಮೆಲುಕು ಹಾಕೋದೇನು, ಹೋಳಿಗೆ ಹೂರಣ ಕದ್ದು ಅಜ್ಜಿ ಹತ್ರ ಬೈಸಿಕೊಲ್ಲೋ ಮಜಾ, ಮೋಟುದ್ದ ಪಟಾಕಿ ಹಿಡಿದು ಅದನ್ನ ಹಚ್ಚೋಕೆ ನಾವೆಲ್ಲಾ ಒದ್ದಾಡ್ತಾ ಇದ್ದಿದ್ದು, ದೊಡ್ಡಣ್ಣ ಅದನ್ನ ಕಿತ್ಕೊಂಡು ಢಂ ಅನ್ನಿಸಿದಾಗ ಧಾರಾಕಾರವಾಗಿ ಕಂಗಳಿಂದ ಬರ್ತಿದ್ದ ನೀರು… ಅಜ್ಜನಿಗಿಡ್ತಿದ್ದ ಎಡೆ, ತುಳಸಿ ಗಿಡದ ಸುತ್ತಲಿನ ದೀಪಗಳು, ಗದ್ದೆ ಬದಿಯಲ್ಲಿ ನೆಟ್ಟು ಬರ್ತಿದ್ದ ದೀಪದ ದೊಂದಿಗಳು. `ದೀಪ್ ದೀಪೋಳ್ಗೆ’ ಅಂತ ಕೂಗ್ತಿದ್ದ ಕೂಗುಗಳು. ವಾ ವಾ ಆ ತರದ ದೀಪಾವಳಿ ಇನ್ಯಾವತ್ತೂ ನನ್ನ ಜೀವನದಲ್ಲಿ ಮರಳಿ ಬರೋಕೆ ಸಾಧ್ಯಾನೇ ಇಲ್ಲ. ಆ ದಿನಗಳನ್ನ ನಾನ್ಯಾಕೋ ತುಂಬಾ ಮಿಸ್ ಮಾಡ್ಕೊಳ್ತಾ ಇದ್ದೀನಿ ಅನ್ನಿಸ್ತಿದೆ.
ನಂಗೆ ಇನ್ನೂ ನೆನಪಿದೆ, ಅದರ ಹೆಸರು ಗೋ ಪೂಜೆ ಅಂತ. ಮನೇಲಿರೋ ದನ ಕರುಗಳಿಗೆಲ್ಲ ತಿಕ್ಕಿ ಸ್ನಾನ ಮಾಡಿಸಿ ಅರಿಶಿನ ಕುಂಕುಮ ಇಟ್ಟು, ಲೋಟದ ಮೇಲ್ಬಾಗಕ್ಕೆ ಬಣ್ಣ ಅದ್ದಿ ಅವುಗಳ ಮೈ ಮೇಲೆಲ್ಲಾ ಹಚ್ಚಿ, ಕೋಡಿಗೆ ರಿಬ್ಬನ್ ಕಟ್ಟಿ , ಬಾಳೆಹಣ್ಣು ಕುತ್ತಿಗೆಗೆ ಕಟ್ಟಿ ಅವುಗಳ ಎದುರು ಪಟಾಕಿ ಹೊಡೆದು ಬೆದರಿಸಿ ಓಡಿಸೋದಿದ್ಯಲ್ಲ, ಅದರ ಮಜಾನೆ ಬೇರೆ. ಆಮೇಲೆ ಯಾರ್ ಯಾರದೋ ಮನೆಯ ದನದ ಕುತ್ತಿಗೆಯಲ್ಲಿದ್ದ ಬಾಳೆ ಹಣ್ಣು ಕಿತ್ತು ತಿಂದ್ರಂತೂ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಸಂಭ್ರಮ. ಆ ಮಜಾ ಈಗೆಲ್ಲಿದೆ?
ಈ ಸಲದ ದೀಪಾವಳಿ ಕೇಳಿ ಹೇಗಿತ್ತು ಅಂತ. ಮನೆಗೆ ಮಗಾ ಬಂದಿದ್ದು ನಮ್ಮಂಗೆ ಹಬ್ಬಕ್ಕಿಂತ ದೊಡ್ಡ ಸಂಭ್ರಮ. ನನ್ನ ಜೊತೆಗೆ ಈ ಸಲದ ಹಬ್ಬಕ್ಕೆ ನನ್ನ ಗೆಳೆಯ ಮುದ್ದೀನು ಕರ್ಕೊಂಡ್ ಹೋಗಿದ್ದೆ, ಬಾರೋ ನಮ್ಮನೇಲಿ ಹಬ್ಬ ಮಾಡೋಣ ಅಂತ.ಊರಿಗೆ ಹೋದ ದಿನ ಪೂರ್ತಿ ನಾನು ಅವರಿವರ ಮನೆಗೆ ಹೋಗಿ ಮಾತಾಡಿಸ್ಕೊಂಡು ಬರೋದ್ರಲ್ಲೇ ಕಳೆದು ಹೋಯ್ತು. ಸಂಜೆ ಹಬ್ಬ ಬದಿಗಿಟ್ಟು ನಮ್ಮಮ್ಮ ಮಗನಿಗೆ ಇಷ್ಟ ಅಂತ ಕಬಾಬ್, ನೀರ್ ದೋಸೆ, ಚಿಕನ್ ಗ್ರೇವಿ, ಅದೂ ಇದೂ ಅಂತ ಮಾಡಿದ್ರು. ದೇವರ ಕೋಣೆಯಿಂದ ದೇವರು ಇಣುಕಿ ನೋಡಿ ` ಕರ್ಮ ಕರ್ಮ, ಹಬ್ಬದ ದಿನ ನಾನ್ ವೆಜ್ಜಾ?’ ಅಂತ ಕೇಳ್ತಿದ್ದ ಹಾಗಿತ್ತು. ಮಾಡಿದ ಕೆಲವೇ ಕ್ಷಣಗಳಲ್ಲಿ ದೇವರಿಗೆ ಬೇಜಾರ್ಯಾಕೆ ಅಂತ ಕಂಪ್ಲೀಟ್ ಖಾಲಿ ಮಾಡಿದ್ದು ನನ್ನ ಸಾಧನೆ. ಆ ದಿನ ತಂಗಿ ಮನೆ ಸುತ್ತಾ ದೀಪ ಜೋಡಿಸಿಡ್ತಾ ಇದ್ದಿದ್ದು ನೋಡಿ ಜೀವನ ಪಾವನ ಆಗೋಯ್ತು ಅನ್ಕೊಂಡೆ. ಇನ್ನು ನಮ್ಮನೇಲಿ ಪರಿಸರ ಉಳಿಸೋ ದೃಷ್ಟಿಯಿಂದ ಮೂರು ವರ್ಷದಿಂದ ಪಟಾಕಿ ಹೊಡಿಯೋಲ್ಲ ಅನ್ನೋದು ನಮ್ಮ ಹೆಮ್ಮೆ…
ಮಾರನೆ ದಿನ ಎದ್ದು ಸೂರಿ ಮಾಮನ ಮನೆಗೆ ಹೋದೆ, ಅವರ ಮನೇಲಿ ಈಗ್ಲೂ ಸಕತ್ ದನಗಳಿವೆ. ಹಂಗಾಗಿ ಗೋ ಪೂಜೆ ನೋಡೋಣ ಅಂತ. ನೋ ಯೂಸ್ ಸಾಹೇಬರು ಗಂಟೆ ಹತ್ತಾದ್ರು ಶಿವಮೊಗ್ಗಕ್ಕೆ ಹೂ ತರೋಕೆ ಹೋದವರು ಇನ್ನೂ ಬಂದಿರ್ಲಿಲ್ಲ. ಅತ್ತೆ ಕೊಟ್ಟ `ಕೊಟ್ಟೆ ಕಡುಬು’ ನಮಗಾದ ಲಾಭ ಅಷ್ಟೇ. ಅಲ್ಲಿಂದ ಬಂದು ನಾನು ಕೆಲಸ ಕಲಿತಿದ್ದ ಸ್ಟೂಡಿಯೋದಲ್ಲಿ 3 ಗಂಟೆ ತನಕ ಕೂತೆ. ಅಷ್ಟು ಹೊತ್ತಿಗೆ ಅಮ್ಮನ ಕರೆ ಬಂತು. ಮನೆಗೆ ಹೋದ್ರೆ ಪರಮಾಶ್ಚರ್ಯ. ಅಮ್ಮ ವೆರೈಟಿ ವೆರೈಟಿ ಅಡುಗೆ ಮಾಡಿ ಎಡೆ ಇಟ್ಟಿದಾರೆ. ಆಹಾ ಅನ್ನಿಸಿ ಊಟಕ್ಕೆ ಕೂತೆ. ಕೋಸಂಬರಿ, ಕಾಳು ಪಲ್ಯ, ಟೇಸ್ಟಿ ಉಪ್ಪಿನಕಾಯಿ, ಅನ್ನಪೂರ್ಣ ಉಪ್ಪು, ಬೇಳೆ ಹೂರಣದ ಹೋಳಿಗೆ, ಅದಕ್ಕೆ ತುಪ್ಪ, ಶ್ಯಾವಿಗೆ ಪಾಯಸ, ಅದಕ್ಕೆ ಬೂಂದಿ, ಬಿಸಿ ಬಿಸಿ ವಡೆ, ಅನ್ನಕ್ಕೆ ಸಾಂಬಾರ್, ತಿಳಿ ಸಾರು, ಮಜ್ಜಿಗೆ… ಅಬ್ಬಬ್ಬ ಸಕ್ಕತ್ ಊಟ. ಗೆಳೆಯನನ್ನ ಕರ್ಕೊಂಡು ಬಂದಿದ್ದಕ್ಕೆ ಮರ್ಯಾದೆ ಉಳೀತು ಅನ್ಕೊಂಡೆ. ಎಲ್ಲರೂ ಸೇರಿ ಸಕ್ಕತಾಗಿ ಬಾರಿಸಿದ್ವಿ. ಅದಾಗಿ ಮೂರ್ನಾಲ್ಕು ಗಂಟೆಯೊಳಗೆ ನನ್ನ ರಿಸರ್ವೇಶನ್ ಮಾಡಿದ ಬಸ್ಸಿನ ಹಾರನ್ ಸಣ್ಣಗೆ ಕೇಳಿಸಿದ ಹಾಗಾಯ್ತು. ಬಸ್ ಹತ್ತಿ ಕೂತು ಕಣ್ಣು ಮುಚ್ಚಿದ್ವಿ, ಕಣ್ಣು ಬಿಟ್ರೆ ಮತ್ತದೇ ಬೆಂಗಳೂರು. ಅಲ್ಲಿಂದ ಡೈರೆಕ್ಟ್ ಆಫೀಸಿಗೆ ಬಂದವನು ಇನ್ನೂ ರೂಮಿಗೆ ಹೋಗಿಲ್ಲ. ಅಜ್ಜಿ ಮನೆಯ ದೀಪಾವಳಿ ಅಲ್ಲದಿದ್ರೂ ಓಕೆ ಓಕೆ ಅನ್ನೋ ಹಾಗಿದ್ದ ದೀಪಾವಳಿ ನೆನಪ್ಯಾಕೋ ಇನ್ನೂ ಕಾಡ್ತಾ ಇದೆ… ಅಟ್ ದ ಸೇಮ್ ಟೈಮ್ ಕ್ವಿಂಟಾಲ್ ಗಟ್ಲೆ ಕೆಲಸ ಇನ್ನೂ ಬಾಕಿ ಇದೆ… ಅದನ್ನ ಮುಗಿಸದೆ ಇದ್ರೆ ಬಾಸ್ ಮಕ್ಕುಗೀತಾರೆ. ಬಾಯ್ ಬಾಯ್
ನಿಜ ಈಗ ನಾವು ಆಚರಿಸುವ ಹಬ್ಬ ಒಂದರ್ಥದಲ್ಲಿ ಹಬ್ಬವೇ ಅಲ್ಲ. ಎಲ್ಲವೂ ಯಾಂತ್ರೀಕೃತ. ಬಾಲ್ಯದ ದಿನಗಳ ಆ ಸಂಭ್ರಮ, ಖುಷಿ ಯಾವುದೂ ಈಗ ಇಲ್ಲ. ಜೊತೆಗೆ ವೃತ್ತಿ ಜೀವನದ ಬ್ಯೂಸಿಯ ತಲೆಬಿಸಿ. ಆದರೂ ಅದೆಲ್ಲದರ ಮಧ್ಯೆ ಕುಟುಂಬದ ಸದಸ್ಯರೊಡನೆ ಬೆರೆತರೆ ಬಹುಶಃ ಅದೇ ಸಾಧನೆ! ನಿಮ್ಮ ಬರಹ ಓದುತ್ತಾ ಹೀಗನಿಸಿತು.
s, nanagu nammajji iddaga madtidda habba nenapige bantu. keerthi, ur writing flow is gud. style kuda aaptavagutte. keep it up.
some chidw’d memories & festival also.
good writting
good photograpy
ಹೇಯ್ ಕೀರ್ತಿ ಬ್ರದರ್ ಯಾಕ್ ಹೀಗೆಲ್ಲ ಮನಸ್ಸಿಗೆ ಅನ್ಸಿದ್ ಗೀಚಿ ನಮ್ಮ ಹಳೇ ನೆನಪು ನಮಗೆ ಕಾಡೋ ತರಾ ಮಾಡ್ತಿಯಾ. ನಿಜವಾಗ್ಲೂ ಬ್ರದರ್ ನಿನ್ ಬರೆದದ್ದ ಈ ದೀಪಾವಳಿ ಸ್ಪೇಷಲ್ ಸ್ಟೋರಿಗೆ ನನ್ ಮನಸ್ಸ್ ಫುಲ್ ಫೀದಾ ಆಗೋಯ್ತು. ನಂಗೂ ನಮ್ಮ ಅಜ್ಜಿ ಮನೆಯಲ್ಲಿ ದೀಪಾವಳಿಗೆ ನಾವ್ ಮಾಡ್ತಿದ್ದ ಆ ತುಂಟಾಟವೆಲ್ಲ ನೆನಪಾಯ್ತು. ರಿಯಲಿ ಇವಾಗ ಬೆಂಗಳೂರಿಗೆ ಬಂದು ನಾನು ಆ ಹಬ್ಬವನ್ನ ತುಂಬಾ ಮಿಸ್ ಮಾಡ್ಕೋತಿದಿನಿ. ಥ್ಯಾಂಕ್ಸ್ ಬ್ರದರ್ …