ಬೇಡ ಬೇಡ ಅಂದ್ರೂ ಅವೆಲ್ಲಾ ಮತ್ತೆ ಮತ್ತೆ ನೆನಪಾಗ್ತಾನೇ ಇರುತ್ತೆ. ಅದು ನನ್ನ ಬಾಲ್ಯದ ದಿನಗಳು. ನನ್ನ ಜೀವನದ ಬಹಳಾ ನೋವಿನ ದಿನಗಳು ಅಂತಾನೇ ಹೇಳ್ಬೋದು. ಅಮ್ಮ ನನ್ನನ್ನ ತುಂಬಾ ಕಫ್ಟಪಟ್ಟು ಸಾಕಿದ್ರು. ಎಂಥಾ ಟೈಂನಲ್ಲೂ ನನ್ನ ವಿದ್ಯಾಭ್ಯಾಸಕ್ಕೆ ತೊಂದರೆ ಮಾಡ್ಲಿಲ್ಲ. ಅದಕ್ಕೆ ನಾನಿವತ್ತು ಏನೋ ಒಂದು ಸಾಧಿಸೋಕೆ ಸಾಧ್ಯವಾಗಿರೋದು. ಅಮ್ಮನಿಗೆ ಕೋಟಿ ಥ್ಯಾಂಕ್ಸ್.. ಆದ್ರೆ ಎಲ್ಲರೂ ನನ್ನಮ್ಮ ಆಗಿರಬೇಕು ಅಂತ ರೂಲ್ಸ್ ಇಲ್ಲ. ಅವರಿಗೆ ಅವರದ್ದೇ ಆದ ನೋವುಗಳಿರುತ್ತೆ. ಹಾಗಾಗಿ ಸಾವಿರಾರು ಮಕ್ಕಳು ನಮ್ಮೂರ ಬೀದಿಗಳಲ್ಲಿ ತುತ್ತು ಅನ್ನಕ್ಕಾಗಿ ಗೋಗರಿಯೋದು.
ನನ್ನ ಜೀವನ ಹಾಗಿರಲಿಲ್ಲ ನಿಜ, ಆದ್ರೆ ಅಲ್ಲಿ ನೋವಿತ್ತು. ಬುಧವಾರದ ಕಲರ್ ಡ್ರೆಸ್ ಗೆ ಕಣ್ಣೀರು ಹಾಕಿದ್ದು ನೆನಪಿದೆ. ಕಾಲಲ್ಲಿ ಶೂ ಇಲ್ಲ ಅಂತ ಸ್ಕೂಲಲ್ಲಿ ಹೊಡೆತ ತಿಂದಿದ್ದು ಮರೆತಿಲ್ಲ. ಫೀಸ್ ಕಟ್ಟಿಲ್ಲ ಅಂತ ಮನೆಗೆ ಎಕ್ಸಾಮ್ ಬರೀದೇ ಮನೆಗೆ ಬಂದಿದ್ದೂ ಕಾಡ್ತಾ ಇದೆ. ನನ್ನ ಕ್ಲಾಸ್ ಮೇಟ್ ಗಳ ಮನೆಗೆ ಅವರು ಏಳೋಕೆ ಮುಂಚೆ ಹೋಗಿ ಪೇಪರ್ ಹಾಕಿ ಬರ್ತಿದ್ದೆ ನಾನು. ಯಾವತ್ತಾದ್ರೂ ಪೇಪರ್ ಬಂಡಲ್ ಲೇಟಾಗಿ ಬಂದ್ರೆ ಏನಾದ್ರೂ ಸುಳ್ಳು ಹೇಳಿ ತಪ್ಪಿಸಿಕೊಳ್ತಿದ್ದೆ. ಸ್ಕೂಲ್ ಗೆ ಹೋಗೋಕೆ ಮುಂಚೆ ಅಮ್ಮನಿಗೆ ಹೋಟೆಲ್ ನಲ್ಲಿ ಸಹಾಯ ಮಾಡ್ತಿದ್ದೆ. ಮಳೆ ಬಂದಾಗ ಸೋರುತ್ತಿದ್ದ ಜಾಗದಲ್ಲಿ ಪಾತ್ರೆ ಇಟ್ಟು ನೀರು ತುಂಬಿಸಿದ್ದು, ಅವತ್ತೊಂದು ದಿನ ಮಳೆಯ ರಭಸಕ್ಕೆ ಮನೆಯ ಮಣ್ಣಿನ ಗೋಡೆ ನೆಲಕಚ್ಚಿದ್ದು, ಆ ಗೋಡೆ ಬಿದ್ದಿದ್ದಕ್ಕೆ ನಮ್ಮ ಎಮ್.ಎಲ್.ಎ ೪೦೦ ರೂಪಾಯಿ ಪರಿಹಾರ ಕೊಟ್ಟಿದ್ದು, ಇವೆಲ್ಲಾ ಈಗ ಇತಿಹಾಸ. ಈಗ ನನ್ನ ಕಾಲಲ್ಲಿ ನೈಕಿ ಶೂ ಇದೆ. ಕೀ ಬೋರ್ಡ್ ಕುಟ್ಟುತ್ತಿರೋ ಕೈಯಲ್ಲಿ ಚಿನ್ನದ ಉಂಗುರ ಇದೆ. ಲ್ಯಾಪ್ ಟಾಪ್ ಸ್ಕ್ರೀನ್ ಮೇಲೆ ನನ್ನ ಕುತ್ತಿಗೆಯಲ್ಲಿರೋ ಚೈನ್ ಪ್ರತಿಬಿಂಬ ಕಾಣ್ತಿದೆ. ಇದಕ್ಕೆಲ್ಲಾ ಕಾರಣ ನನ್ನಮ್ಮ. ಬಡತನದಲ್ಲೂ ದೃತಿಗೆಡದ ಅವರ ಮನೋಸ್ಥೈರ್ಯ, ನನ್ನ ಮಗ ಚೆನ್ನಾಗಿ ಓದಬೇಕು ಅನ್ನೋ ಆಸೆ ನನ್ನನ್ನ ಇವತ್ತು ಇಲ್ಲಿ ನಿಲ್ಲಿಸಿದೆ. ಆದ್ರೆ ನಮ್ಮ ಸುತ್ತ ಇರೋ ಸಾವಿರಾರು ಮಕ್ಕಳಿಗೆ ಆ ಯೋಗ ಇಲ್ಲ. ನನ್ನಮ್ಮನಂಥ ಅಮ್ಮ ಇಲ್ಲ. ಹಾಗಾಗಿ ಅಂತಹ ಮಕ್ಕಳಿಗೆ ತಾಯಿಯ ಸ್ಥಾನದಲ್ಲಿ ನಮ್ಮಂತವ್ರು ನಿಂತರೆ ಅವರು ಸಹ ಮುಂದೊಂದು ದಿನ ನಮ್ಮ ಹಾಗೆ ಆಗಬಹುದು ಅನ್ನಿಸ್ತು. ಅಂತಹ ಮಕ್ಕಳಿಗೋಸ್ಕರ ಏನಾದ್ರೂ ಮಾಡ್ಬೇಕು ಅನ್ನಿಸ್ತು. ಅದಕ್ಕೆ ಅದನ್ನ ನಿಮ್ಮ ಮುಂದಿಡ್ತಾ ಇದೀನಿ.
ಕರ್ನಾಟಕದಲ್ಲಿ ೩,೦೦,೦೦೦ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಹೋಗ್ತಿಲ್ಲ, ಆಥವಾ ಶಾಲೆ ಬಿಟ್ಟಿದಾರೆ. ಅವರಲ್ಲಿ ತುಂಬಾ ಮಕ್ಕಳಿಗೆ ಶಾಲೆಗೆ ಹೋಗೋ ಆಸೆ ಇದೆ. ಆದ್ರೆ ಸಾಧ್ಯವಾಗ್ತಿಲ್ಲ. ಅವರ ಆಸೆಯನ್ನು ನಾವು ನೀವೆಲ್ಲ ಸೇರಿ ಈಡೇರಿಸಿದ್ರೆ ನಾಳೆ ನಾವು ನೀವು ಇರೋ ತರ ಆ ಮಕ್ಕಳೂ ಇರಬಹುದು. ಒಂದು ಮನೆ ಬಾಡಿಗೆ ಪಡೆದು ೧೫-೨೦ ಅನಾಥ ಮಕ್ಕಳನ್ನು ಅಲ್ಲಿರಿಸಿ, ಅವರಿಗೆ ಊಟ, ಬಟ್ಟೆ, ವಿಧ್ಯಾಭ್ಯಾಸ ಕೊಡೋಣ ಅನ್ನಿಸ್ತಿದೆ. ಆ ಮಕ್ಕಳು ನಾಳೆ ಸಮಾಜ ಘಾತುಕರಾಗದೇ, ಸಮಾಜ ಪಾಲಕರಾಗ್ಲಿ. ಪ್ರಯತ್ನ ನಮ್ಮದು ಫಲ ದೇವರದು.
ನಮ್ಮಿಂದ ಎಲ್ಲಾ ಸರಿ ಹೋಗುತ್ತೆ ಅಂತಲ್ಲ. ನಮ್ಮ ಕೈಲಾದ ಪ್ರಯತ್ನ ನಾವು ಮಾಡೋಣ. ಒಂದು ತಿಂಗಳ ನಮ್ಮ ನಿಮ್ಮ ಫಿಜಾ಼, ಬರ್ಗರ್ ಖರ್ಚು ಆ ಮಕ್ಕಳಿಗೆ ಒಂದು ತಿಂಗಳ ಊಟದ ಖರ್ಚು. ನಿಮ್ಮಿಂದ ಸಾಧ್ಯವಿದ್ದಶ್ಟು ಸಹಾಯ ಮಾಡಿ. ಅವರ ಫ್ಯೂಚರ್ ಬ್ರೈಟ್ ಆಗಿರುತ್ತೆ. ನಾವು ಬೆಳೆಸೋ ೨೦ ಜನ ನಾಳೆ ೨೦೦ ಅನಾಥ ಮಕ್ಕಳಿಗೆ ಆಶ್ರಯ ಕೊಡಬಹುದು. ಇದು ಉತ್ತಮ ಭಾರತಕ್ಕೆ ನಮ್ಮ ಪುಟ್ಟ ಕೊಡುಗೆ. ನಿಮಗೆ ಏನನ್ಸುತ್ತೋ ಅದನ್ನ ಹೇಳಿ. ಮಾಡೋಣ.
ಸದ್ಯದಲ್ಲೇ ‘ವಿಸ್ಮಯ’ ಅನ್ನೋ ಹೆಸರಲ್ಲಿ ಒಂದು ಟ್ರಸ್ಟ್ ರಿಜಿಸ್ಟರ್ ಮಾಡಿಸ್ತೀನಿ. ನೀವೆಲ್ಲಾ ನನ್ನ ಜೊತೆಗಿದ್ದು ಒಂದು ವಿಸ್ಮಯಕಾರಿ ಕೆಲಸಕ್ಕೆ ಕೈ ಜೋಡಿಸ್ತೀರಿ ಅಂತ ನಂಬಿದೀನಿ.
ನಿಮ್ಮ
ಕೀರ್ತಿ ಶಂಕರಘಟ್ಟ
we are with u bro.
-nimma Nandi
hoovinahole foundation
mob:8088081008
Sir, i am with you,
Nannandh yestu agotthu, astu, sahaya madtheni
ಉತ್ತಮ ಕೆಲಸ ಕೀರ್ತಿ…
ನಿಮ್ಮ ಕೆಲಸಕ್ಕೆ ಯಶಸ್ಸು ಲಭಿಸಲಿ..
ಅಚ್ಯುತಕುಮಾರ ಯಲ್ಲಾಪುರ
(9844206314)