ನನ್ನೂರಿಗೆ ಹೋಗೋದೇ ಒಂದು ಖುಷಿ. ಕಳೆದ ಸಲ ಊರಿಗೆ ಹೋಗಿದ್ದು ಒಂದು ವರ್ಷದ ಹಿಂದೆ. ಈ ಸಲ ಎಲೆಕ್ಷನ್ ಸಲುವಾಗಿ ಪ್ರೋಗ್ರಾಂ ಮಾಡೋಕೆ ೨ ದಿನಗಳ ಮಟ್ಟಿಗೆ ಶಿವಮೊಗ್ಗ ಬಂದಿದ್ದೆ. ಬಂದ ಎರಡನೇ ದಿನ ಸಂಜೆ ಹೊತ್ತಿಗೆ ನನ್ನ ಕೆಲಸ ಮುಗೀತು. ಸಂಜೆ ಫ್ರೀ ಇದ್ವಿ ಅಂತ ಹಂಗೇ ಊರು ಸುತ್ತೊಕೆ ಹೊರಟ್ವಿ ನಾನು ರಾಘವ್ ಸೂರ್ಯ ಹಾಗೂ ಕಿರಣ್. ನಾವಿದ್ದ ಮಥುರಾ ಪ್ಯಾರಡೈಸ್ ಹೋಟೆಲ್ ನಿಂದ 200-300 ಮೀಟರ್ ದೂರದಲ್ಲಿ ನನಗೆ ಬಹಳಾ ಆತ್ಮೀಯರ ಮೊಬೈಲ್ ರಿಪೇರಿ ಅಂಗಡಿ ಇದೆ. ಹೋಗಿ ಅವರನ್ನ ಮೀಟ್ ಮಾಡಿ ಬರೋಣ ಅನ್ಕೊಂಡು ದುರ್ಗಿಗುಡಿ ಕಡೆ ಹೊರಟ್ವಿ.
ಅರೆ.. 8 ವರ್ಷದ ಹಿಂದಿನ ದುರ್ಗಿಗುಡಿಗೂ ಈಗಿರೋ ದುರ್ಗಿಗುಡಿಗೂ ಅಜಗಜಾಂತರ ವ್ಯತ್ಯಾಸ. ಅವರ ಶಾಪ್ ಹೆಸರು ಸಹ ನನಗೆ ಗೊತ್ತಿಲ್ಲ. ಆದ್ರೆ ಅದೊಂದು ಹಳೆಯ ಬಿಲ್ಡಿಂಗ್. ಅದ್ರಲ್ಲಿ ಮೊದಲ ಮಹಡಿಯಲ್ಲಿ ಅವರ ಅಂಗಡಿ ಇತ್ತು. ಹಂಗೇ ತಲೆಯನ್ನ 60 ಡಿಗ್ರಿ ಬಲಕ್ಕೆಎತ್ತಿಕೊಂಡು ಎರಡು ಸಲ ಅದೇ ರೋಡ್ ಸುತ್ತಿದ್ರೂ ಸಹ ಅವರ ಅಂಗಡಿ ಸಿಗಲಿಲ್ಲ. ಜೊತೆಗಿದ್ದ ರಾಘವ್ ಹಾಗೂ ಕಿರಣ್ ಅನ್ಕೊಂಡಿರ್ತಾರೆ, ಇವನ್ಯಾಕೆ ಈ ತರ ಹುಡುಕ್ತಾ ಇದಾನೆ. ಅವರೇನು ಅಷ್ಟು ಆತ್ಮೀಯರಾ ಅಂತ. ಅವರ ಬಗ್ಗೆ ಹೇಳೋಕೆ ತುಂಬಾ ಇದೆ. ಅವರ ಹೆಸರು ಮಣಿ. ೮ ವರ್ಷದ ಹಿಂದೆ ನನ್ನದೊಂದು ಮೊಬೈಲ್ ಶಾಪ್ ಇತ್ತು. ಕಾಲೇಜಿಗೆ ಹೋಗ್ತಿದ್ದ ದಿನಗಳು ಅವು. ಆಗ ಶಂಕರಘಟ್ಟದಲ್ಲಿ ಯಾವುದೇ ಮೊಬೈಲ್ ಹಾಳಾದ್ತ್ರೂ ನನ್ನ ಹತ್ತಿರಾನೇ ರಿಪೇರಿಗೆ ಬರ್ತಿದ್ದಿದ್ದು. ಆ ಮೊಬೈಲ್ ಗಳು ನನ್ನಿಂದ ಬಂದು ಸೇರ್ತಿದ್ದಿದ್ದು ಇದೇ ಮಣಿ ಸರ್ ಅಂಗಡಿಗೆ. ಮೊಬೈಲ್ ರಿಪೇರಿ ವಿಚಾರದಲ್ಲಿ ಅವರು ಮ್ಯಾಜಿಶಿಯನ್. ಎಂಥದ್ದೇ ಮೊಬೈಲ್ ಯಾವುದೇ ಕಂಡೀಶನ್ ನಲ್ಲಿ ಬಂದ್ರೂ ಅದಕ್ಕೇ ಗ್ಯಾರಂಟಿ ಜೀವ ಕೊಡ್ತಿದ್ರು ಮಣಿ ಸರ್. ಅವರ ಅಂಗಡಿ ನೋಡಿದ್ರೆ ಯಾವುದೋ ಹಳೇ ಅಂಗಡಿ ತರ ಕಾಣುತ್ತೆ. ಆದ್ರೆ ಅಲ್ಲಿ ಹಾಳಾದ ಮೊಬೈಲ್ ಹಿಡ್ಕೊಂಡು ಬಂದು ನಿಲ್ಲೋರ ದೊಡ್ಡ ಕ್ಯೂ ಯಾವಾಗಲೂ ಇರುತ್ತೆ. ಶಿವಮೊಗ್ಗದಂಥ ಶಿವಮೊಗ್ಗಕ್ಕೆ ಅವರೇ ನಂಬರ್ ವನ್. ಅವತ್ತೂ , ಇವತ್ತೂ…
ನಾನು ಅವರಿಗೆ ಆ ಕಾಲಕ್ಕೆ ಸಿಕ್ಕಾಪಟ್ಟೆ ತಲೆ ತಿಂದಿದೀನಿ. ಕಾಟ ಕೊಟ್ಟಿದೀನಿ. ಎಂತಂಥದ್ದೋ ಮೊಬೈಲ್ ತಂದು ಕೊಟ್ಟು ಸರಿ ಮಾಡಿ ಕೊಡಿ ಅಂತ ಕಾಡಿದೀನಿ. ಬೈದು, ಗೊಣ್ಗಿಕೊಂಡು, ಬೇಜಾರ್ ಮಾಡ್ಕೊಂಡು ನಾನು ಕೊಟ್ಟ ಎಲ್ಲ ಮೊಬೈಲನ್ನೂ ಸರಿ ಮಾಡಿ ಕೊಟ್ಟಿದ್ದಾರೆ ಮಣಿ ಸರ್. ಹಂಗೂ ಹಿಂಗೂ ಲೆಕ್ಕ ಹಾಕಿದ್ರೆ ಈಗಲೂ ನಾನು ಅವರಿಗೆ 800-900 ರೂಪಾಯಿ ಬ್ಯಾಲೆನ್ಸ್ ಕೊಡ್ಬೇಕಾಗಿ ಬರಬಹುದು. ಅವರೂ ಕೇಳಿಲ್ಲ, ನಾನೂ ಕೊಟ್ಟಿಲ್ಲ. ಅವರು ರಿಪೇರಿ ಮಾಡಿಕೊಟ್ಟ ಮೊಬೈಲ್ ನಲ್ಲೇ 50-100 ಮಾರ್ಜಿನ್ ಇಟ್ಕೊಂಡು ಲಾಭ ಮಾಡ್ಕೋತಿದ್ದೆ ನಾನು. ಆ ಕಾಲಕ್ಕೆ ನನ್ನ ಕಾಲೇಜು ಖರ್ಚಿಗೆ ಪರೋಕ್ಷವಾಗಿ ಹೆಲ್ಪ್ ಮಾಡಿದವರು ಮಣಿ ಸರ್. ಹಾಗಾಗಿಯೇ ಅವರನ್ನ ಇಷ್ಟು ವರ್ಷದ ನಂತರ ಮೀಟ್ ಮಾಡಿ ಬರೋಣ ಅಂತ ರಾಘವ್ ಹಾಗೂ ಕಿರಣ್ ಕರ್ಕೊಂಡು ಹೋಗಿದ್ದೆ. ಕೊನೆಗೂ ಅವರ ಅಂಗಡಿಯ ಬೋರ್ಡ್ ಕಾಣಿಸ್ತು.
ಯೂನಿವರ್ಸಲ್ ಎಲೆಕ್ಟ್ರಾನಿಕ್ಸ್. ಯಸ್, ಇದೇ ಮಣಿ ಸರ್ ಶಾಪ್. ಅದೇ ಹಳೆಯ ಬಿಲ್ದಿಂಗ್. ಮೇಲೆ ಹೋದ್ರೆ ಅವರು ಅಲ್ಲೇ ಕೂತಿದ್ರು. ನೋಡಿದ ಕೂಡ್ಲೇ ಅಂಗಡಿಗೆ ಬರುವ ಎಲ್ಲರಿಗೂ ಹೇಳುವಂತೆ ನಮಗೂ ನಮಸ್ಕಾರ ಹೇಳಿದ್ರು. ತಕ್ಷಣ, ಅರೆ ಕೀರ್ತಿ, ಬನ್ನಿ ಬನ್ನಿ ಅಂತ ತುಂಬು ಹೃದಯದಿಂದ ಸ್ವಾಗತ ಮಾಡಿದ್ರು. ರಾಘವ್ ಸೂರ್ಯನ್ನ ನೋಡಿ ಸಾರ್ ನಿಮ್ಮ ಶೋನ ಟಿವಿಯಲ್ಲಿ ನೋಡ್ತಿರ್ತೀನಿ ಅಂತ ವೆಲ್ ಕಮ್ ಮಾಡಿದ್ರು. ಕಿರಣ್ ಸಹ ಅವರ ಸ್ವಾಗತಕ್ಕೆ ಖುಷ್. ಅದಾಗಿ 10-12 ನಿಮಿಷಗಳ ಕಾಲ ಅವರ ಸಂತೋಷಕ್ಕೆ ಪಾರವೇ ಇಲ್ಲ. `ನನ್ನ ನೆನಪು ಮಾಡ್ಕೊಂಡು ನನ್ನ ಅಂಗಡಿಗೆ ಬಂದಿದ್ದು ಸಖತ್ ಖುಷಿ ಆಯ್ತು ಅನ್ನೋದನ್ನೇ ೫-೬ ಸಲ ಹೇಳಿದ್ರು. ಅವರ ಜೊತೆಗಿದ್ದ ಅವರ ಊರಿನ ಹುಡುಗನೊಬ್ಬ ಇವತ್ತು ಮಾಧ್ಯಮದಲ್ಲಿ ಬೆಳೀತಾ ಇದಾನೆ ಅನ್ನೋದೇ ಅವರಿಗೆ ಖುಷಿ. ಅಲ್ಲಿದ್ದ ಅವರ ಕಸ್ಟಮರ್ ಗಳಿಗೆ ನಮ್ಮನ್ನ ಪರಿಚಯಿಸಿ ಕೊಟ್ಟರು. ನಮ್ಮ ಹುಡುಗ ನಮ್ಮ ಹುಡುಗ ಅಂತ ಅವರು ಹೇಳಿದಾಗಲೆಲ್ಲಾ ನಂಗೆ ಅದೇನೋ ಹೆಮ್ಮೆ. ನಂಗೇ ಯಾವಾಗಲೂ ಒಳ್ಳೆಯದನ್ನು ಹಾರೈಸುವವರಲ್ಲಿ ಮಣಿ ಸರ್ ಸಹ ಒಬ್ಬರು. `ಸರ್, ನಿಮ್ಮ ಹಾರೈಕೆಗಳಿಂದಾನೇ ನಾನಿವತ್ತು ಏನೋ ಒಂದು ಆಗಿದೀನಿ’ ಅಂದೆ. ಛೆಛೆಛೆ, ಅದೆಲ್ಲಾ ಏನಿಲ್ಲ, ಕಷ್ಟ ಪಟ್ರೆ ಏನಾದ್ರೂ ಸಾಡಿಸ್ಬೋದು ಅನ್ನೋಕೆ ನೀನು ಸಾಕ್ಷಿ ಅಂತೆಲ್ಲಾ ಹೇಳಿ ನನ್ನನ್ನೇ ಸಮಾಧಾನ ಮಾಡಿಬಿಟ್ರು. `ಗಾಡ್ ಫಾದರ್ ಇಲ್ಲದೇ ಬೆಳೆದವನು ನಮ್ಮ ಹುಡುಗ ಅಂತ ರಾಘವ್ ಗೆ ನನ್ನ ಬಗ್ಗೆ ಹೇಳಿದ್ರು. ನಮ್ಮ ಜೊತೆ ಫೋಟೋ ಹೊಡೆಸ್ಕೊಂಡ್ರು. ಅವರ ಖುಷಿ ನೋಡಿ ನಾನೆದೆಷ್ಟು ಖುಷಿ ಪಟ್ಟೆ ಅಂತ ನನಗೇ ಗೊತ್ತು. ಅಲ್ಲಿಂದ ಹೊರಗೆ ಬಂದಾಗ ಅದೇನೋ ಸಾರ್ಥಕತೆ. ಈ ಸಲ ಶಿವಮೊಗ್ಗಕ್ಕೆ ಬಂದಾಗಲಾದ್ರೂ ಇಷ್ಟು ಪ್ರೀತಿಸೋ ಮಣಿ ಸರ್ ಮೀಟ್ ಮಾಡಿದ್ನಲ್ಲಾ ಅಂತ. ಅಲ್ಲಿಂದ ಬರುವಾಗ ಇಂತಹ ಪ್ರೀತಿಸೋರನ್ನ ಸಂಪಾದಿಸಿದ್ದೀಯ ಅನ್ನೋ ಅರ್ಥ ಬರುವಂತೆ ರಾಘವ್ ನನ್ನ ಬೆನ್ನು ತಟ್ಟಿದ್ದ. ನನಗೂ ನನ್ನ ಬಗ್ಗೆ ಖುಷಿ ಅನ್ನಿಸ್ತು.
ಅದಾಗಿ ಒಂದು ಗಂಟೆಯಲ್ಲಿ ಮತ್ತೆ ಮಣಿ ಸರ್ ಫೋನ್ ಬಂತು. `ಎಲ್ಲಿದೀರಿ..? ಹೋಟೆಲ್ ಹತ್ತಿರ ಎಷ್ತು ಹೊತ್ತಿಗೆ ಬರ್ತೀರಿ’ ಅಂತ. ಈಗ ಲೇಟ್ ಆಗುತ್ತೆ ಬೆಳಗ್ಗೆ ಸಿಗ್ತೀನಿ ಅಂದೆ. ರಾತ್ರಿ ಮಲಗಿ ಬೆಳಗ್ಗೆ ೮ ಗಂಟೆ ಹೊತ್ತಿಗೆ ನಮ್ಮ ರೂಮಿನ ಬೆಲ್ ಆಯ್ತು. ಬಂದಿದ್ದಿದ್ದು ಮಣಿ ಸರ್. ಕೈಯಲ್ಲಿ ಒಂದು ಬ್ಯಾಗ್ ಇತ್ತು. ಅದರಲ್ಲಿ 2 ಬಾಕ್ಸ್ ಗಳಲ್ಲಿ ಆಲೆಮನೆಯ ಜೋನಿ ಬೆಲ್ಲದ ಸ್ವೀಟ್ ತಗೊಂಡ್ ಬಂದಿದ್ರು. ಏನಾದ್ರೂ ವಿಶೇಷವಾಗಿದ್ದು ಕೊಡಬೇಕು ಅನ್ನಿಸ್ತು. ಅದಕ್ಕೇ ನನಗೆ ಅಂತ ತಂದಿದ್ದ ಇದನ್ನ ಕೊಡ್ತಿದೀನಿ ಅಂತ ಕೊಟ್ಟು ಹೋದ್ರು. ಅವರ ಪ್ರೀತಿಯಲ್ಲಿ ನಾವು ಕರಗಿ ಹೋಗಿದ್ವಿ. ಅಷ್ಟು ದೊಡ್ಡವರು, ತಾವು ನೋಡಿದ ಹುಡುಗನ ಬಗ್ಗೆ ಇಟ್ಟಿರೋ ಪ್ರೀತಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಕಮ್ಮೀನೆ… ಮಣಿ ಸರ್, ನಿಮ್ಮ ಹಾರೈಕೆ-ಪ್ರೀತಿ ಹೀಗೇ ಇರಲಿ… ಎಂದೆಂದಿಗೂ…
Touched 🙂
Superrr!!
ನಮ್ ಮಣಿ ನೇ ಹಾಗೇ ನಾನೂ ಸಣ್ಣವನಿಂದ ಅವರ ಜೊತೆಗೆ ಇದ್ದೇನೆ. ಒಂದು ಚೂರು ಗರ್ವವಿಲ್ಲದ ನಿರ್ಗರ್ವಿ ಮನುಷ್ಯ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ಜೊತೆಗೂ ಒಂದೇ ರೀತಿಯ ಒಡನಾಟ. ನಮ್ಮ ಶಿವಮೊಗ್ಗದ ಹೆಮ್ಮೆಯ ಮನುಷ್ಯ ಮಣಿಯಣ್ಣ. — ನಾಡಿಗ್.