ಕುಚಿಕು ಕುಚಿಕು ಕುಚಿಕು… ನೀನು ಚಡ್ಡಿ ದೋಸ್ತು ಕಣೋ ಕುಚಿಕು…
ಎಲ್ಲಾ ಸ್ನೇಹಿತರಿಗೂ ಈ ಹಾಡು ಹೇಳೋಕಾಗಲ್ಲ. ಚಡ್ಡಿ ಅಂದ್ರೆ ಚಡ್ಡಿ ದೋಸ್ತೇ ಆಗಿರಬೇಕು. ಚಡ್ಡಿ ಹಾಕೋ ಟೈಮಲ್ಲಿ ಚಡ್ಡಿಯೊಳಗೆ ಚಡ್ಡಿ ಹಾಕೋಕಿನ್ನೂ ಶುರು ಮಾಡಿರಲ್ವಲ್ಲ, ಅವಾಗಿಂದ ಜೊತೇಗಿರೋನೇ ಚಡ್ಡಿ ದೋಸ್ತ್. ಅಂತಹ ಕೆಲವರು ನನ್ನ ಜೊತೆಗೆ ಈಗ್ಲೂ ಇದ್ದಾರೆ. ಅದರಲ್ಲಿ ಒಂದು ಎಕ್ಸ್ಟ್ರಾ ಆರ್ಡಿನರಿ ಕ್ಯಾಂಡಿಡೇಟ್ ಇದೆ. ಅದು ನನ್ನ ಜೀವನದ ಬೆಸ್ಟ್ಫ್ರೆಂಡ್ ಅಂದ ತಕ್ಷಣ ನನ್ನ ಮನಸ್ಸಿಗೆ ಹಾಗೂ ಕಣ್ಣ ಮುಂದೆ ಬರೋ ಫೇಸ್ಕಟ್. ಹೆಂಗೇ ಲೆಕ್ಕ ಹಾಕಿದ್ರೂ ನಮ್ಮಿಬ್ಬರ ಸ್ನೇಹಕ್ಕೆ ಸಿಲ್ವರ್ ಜ್ಯೂಬಿಲಿ ಆಗಿದೆ. ಆದ್ರೂ ಒಂದೇ ಒಂದು ಸಲ ನಾವಿಬ್ರೂ ಕಿತ್ತಾಡಿರೋ ನೆನಪಿಲ್ಲ. ನಮ್ಮಿಬ್ಬರದೂ ವಿಷ್ಣುವರ್ಧನ್-ಅಂಬರೀಶ್ಗಿಂತ ಸ್ವಲ್ಪ ಜಾಸ್ತೀನೇ ಫ್ರೆಂಡ್ಶಿಪ್ಪು… ಎಲ್ಲರ ಲೈಫಲ್ಲೂ ಇಂತವನೊಬ್ಬ ಇರ್ಬೇಕು ಅನ್ನಿಸೋ ಲೆವೆಲ್ಲಿಗೆ ಭಲೇ ಫ್ರೆಂಡು ಈ ನನ್ ಚಡ್ಡಿದೋಸ್ತು. ಹೆಸರು ಸುಮನ್… ಸುಮನ್ ಜಾನ್ ಫರ್ನಾಂಡಿಸ್.
ನಮ್ ಸ್ಕೂಲ್ ಹೆಸರು ಅರವಿಂದ ಸ್ಕೂಲ್ ಅಂತ. ಆ ಕಾಲಕ್ಕೆ ನಮ್ಮೂರ್ ಸುತ್ತಮುತ್ತ ಇದ್ದ ಬೆಸ್ಟ್ ಸ್ಕೂಲು. ನಮ್ ಕ್ಲಾಸಲ್ಲಿ 25-30 ಜನ. ಅದ್ರಲ್ಲಿ 4-5 ಪ್ರಚಂಡರು. ಆ ಗುಂಪಲ್ಲಿ ನಾನು ಅವನು ಸಹ ಇದ್ವಿ. ಒಂದನೇ ಕ್ಲಾಸಿನಲ್ಲಿ ಪಾಠ ಮಾಡ್ತಿದ್ದ ಲೂಸಿ ಮಿಸ್ನಿಂದ ಹಿಡಿದು, 4ನೇ ಕ್ಲಾಸಲ್ಲಿ ಪಾಠ ಮಾಡಿದ ಶೈನಿ ಮಿಸ್ಗೂ ನಾವೇ ಟಾರ್ಗೆಟ್ಟು. ಐದನೇ ಕ್ಲಾಸಲ್ಲಿ ಗಣಿತ ಪಾಠ ಮಾಡಿದ ನಿರ್ಮಲ ಮಿಸ್ನಿಂದ ಹಿಡಿದು 10 ಕ್ಲಾಸ್ನಲ್ಲಿ ಕನ್ನಡ ಕಲಿಸಿದ ಜಯಮ್ಮ ಮಿಸ್ ತನಕ ಸುಮನ್-ಕೀರ್ತಿ ಅಂದ್ರೆ ತರ್ಲೆಗಳು ಅಂತಾನೇ ಫೇಮಸ್ಸು. ನಮಗದು ಅರವಿಂದ ಸ್ಕೂಲಲ್ಲಿ ಕೊಟ್ಟ ಐಎಸ್ಐ ಮಾರ್ಕ್. ನಮ್ ಜೊತೆ ಪ್ರಕಾಶ್ ಅಲಿಯಾಸ್ ಪುಕ್ಕಿ, ಪುನೀತ್ ಅಲಿಯಾಸ್ ಡೋರ, ತೋಪೆ ಅಲಿಯಾಸ್ ಕಿಶೋರ್ ಇದ್ರೂ ಸಹ. ನಮಗೆ ನಮ್ಮದೇ ಆದ `ಐಡೆಂಟಿಟಿ’ ಇತ್ತು. ನಾವಿಬ್ಬರೂ ಏನಿಲ್ಲ ಅಂದ್ರು 10 ವರ್ಷದ ಸ್ಕೂಲಲ್ಲಿ ಕನಿಷ್ಟ 10 ವರ್ಷ ಒಟ್ಟಿಗೇ, ಒಂದೇ ಬೆಂಚಲ್ಲಿ ಕೂತು ತರ್ಲೆ ಮಾಡಿದೀವಿ. ಅಂದ ಹಾಗೆ ನಾವು ಕ್ಲಾಸಿನ ಲಾಸ್ಟ್ ಬೆಂಚ್ ಬಾಯ್ಸ್..!
ನಮ್ಮಿಬ್ಬರದು ಒಂದು ಪ್ರಾಬ್ಲಮ್ಮು. ಸ್ಕೂಲಲ್ಲಿದ್ದ ಅಷ್ಟೂ ದಿನ ಇಬ್ಬರಿಗೂ ಒಂದೇ ಟೈಮಲ್ಲಿ ಒಂದು ಮತ್ತು ಎರಡು ಬರ್ತಿತ್ತು. ಅವನಿಗೆ ಬಂತು ಅನ್ನೋ ಕಾರಣಕ್ಕೆ ನಂಗೂ ಬರ್ತಿತ್ತೋ, ಅಥವಾ ನಂಗೆ ಬಂತು ಅಂತ ಅವನಿಗೂ ಬರ್ತಿತ್ತೋ ಗೊತ್ತಿಲ್ಲ. ಆದ್ರೆ ಇಬ್ಬರೂ ಒಟ್ಟಿಗೇ ಕಿರುಬೆರಳು ತೋರ್ಸಿ ಸುಸ್ಸು ಮಾಡೋಕೆ ಪರ್ಮಿಶನ್ ಕೇಳಿದ್ದಕ್ಕೆ ಲೆಕ್ಕವೇ ಇಲ್ಲ. ನಮ್ ಬ್ಯಾಚ್ ಒಂಥರಾ ಸಖತ್ತಾಗಿತ್ತು, ಒಬ್ಬಬ್ಬರು ಒಂದೊಂದರಲ್ಲಿ ಪಂಟರ್. ಇಲ್ಲಿ ನನ್ನದೂ ಸುಮನ್ದು ಕಾಂಪಿಟೇಶನ್. ನಮ್ಮಿಬ್ಬರ ಟ್ಯಾಲೆಂಟು ಸೇಮ್ ಟು ಸೇಮ್. ಅವನೂ ರನ್ನಿಂಗ್ ರೇಸು, ನಾನೂ ರನ್ನಿಂಗ್ ರೇಸು. ನಾನೂ ಸಿಂಗರ್, ಅವನೂ ಸಿಂಗರ್. ಯಾವುದೇ ಕಾಂಪಿಟೇಶನ್ಗಳಲ್ಲಿ ಅವನು ಫಸ್ಟ್ ಬಂದಿದ್ರೆ ನಾನ್ ಸೆಕೆಂಡ್, ನಾನ್ ಫಸ್ಟ್ ಬಂದಿದ್ರೆ ಅವನು ಸೆಕೆಂಡ್. ಆದ್ರೆ ಓದೋ ವಿಚಾರಕ್ಕೆ ಬಂದ್ರೆ ಅವನು ಬುದ್ಧಿವಂತ ಬಾಲಕ. ಆದ್ರೆ ನಮಗೂ ಪುಸ್ತಕಕ್ಕೂ ಎಣ್ಣೆ ಸಿಗೇಕಾಯಿ ಇದ್ದಹಾಗೆ. ಹಾಗಾಗಿ ಆ ವಿಚಾರದಲ್ಲಿ ನಾವು ವೀಕು. `ಸುಮನನ್ ಜೊತೆಗೇ ಇರ್ತೀಯ, ತರ್ಲೆ ಕೆಲಸ ಮಾಡೋಕಾಗುತ್ತೆ, ಅವನ ತರ ಕೂತು ಓದೋಕೆ ಏನ್ ರೋಗ’ ಅಂತ 10 ವರ್ಷ ನಿರಂತರವಾಗಿ ಉಗಿಸಿಕೊಂಡ ಖ್ಯಾತಿ ನಮ್ಮದು. ನಾವ್ ಏನ್ ಮಾಡೋದ್ ಸ್ವಾಮಿ, ಗುರುಪ್ರಸಾದ್ ಸ್ಟೈಲಲ್ಲಿ ಹೇಳೋದಾದ್ರೆ ನಮ್ಮ ವಿಚಾರದಲ್ಲಿ `ವಿದ್ಯೆ ನೈವೇದ್ಯ’
ಅಂದ ಕಾಲತ್ತಿಲ್ ನಮ್ ಸುಮನ ಗುಂಡುಗುಂಡುಗೆ ಮುದ್ದು ಮುದ್ದಾಗಿದ್ದ. ಪೌಡರ್ ಹಾಕ್ಕೊಂಡು, ನೀಟಾಗಿ ತಲೆ ಬಾಚ್ಕೊಂಡು, ಕರ್ಚಿಫ್ ಇಟ್ಕೊಂಡು, ಐರನ್ ಮಾಡಿರೋ ಬಟ್ಟೆ ಹಾಕ್ಕೊಂಡು ಬಂದ್ರೆ ಸಂಜೆ ಹೋಗೋ ತನಕ ಹಂಗೇ ಇರೋನು. ಇನ್ನು ನಮಗೆ ಆ ಕಾಲದಲ್ಲಿ ಕರೀತಿದ್ದಿದ್ದು `ವಡ್ಡ’ ಅಂತ. ನೀವೇ ಊಹಿಸಿ ನಾನು ಹೇಗಿದ್ದೆ ಅಂತ. ಅದು ಬರ್ತಾ ಬರ್ತಾ `ಮಿಸ್ಟರ್ ವಿ’ ಅಂತ ಬದಲಾಗಿದ್ದು ಸಮಾಧಾನಕರ ವಿಚಾರ. ಅಂತಹ ನೀಟ್-ಕ್ಯೂಟ್ ಹುಡುಗ ಸ್ಕೂಲಲ್ಲಿ ಎಲ್ಲರ ಫೇವರೇಟ್. ನಮಗೆ ಅಷ್ಟೆಲ್ಲಾ ಸೀನಿಲ್ಲ. ಆದ್ರೂ ಅವನು ನಾನು ವೆರಿ ವೆರಿ ಕ್ಲೋಸ್. ಅವನಿಗೆ ನಾನಿಷ್ಟ, ನನಗೆ ಅವನಿಷ್ಟ. ಕ್ರಿಶ್ಚಿಯನ್ ಹುಡುಗನಾದ್ರು ಯಾವತ್ತೂ ನಮ್ಮ ಮನೆಯಲ್ಲಿ ಕೊಟ್ಟ ದೇವರ ಪ್ರಸಾದ ತಿನ್ನಲ್ಲ ಅಂದಿಲ್ಲ. ಅಮ್ಮ ಹಚ್ಚಿದ ಕುಂಕುಮ ಒರೆಸಿಕೊಂಡಿಲ್ಲ. ಇವತ್ತಿಗೂ ಸುಮನ್ ಜಂಟಲ್ಮ್ಯಾನ್. ನಮ್ಮ ಮನೆಯ ಎಲ್ಲ ಶುಭ ಸಂದರ್ಭದಲ್ಲೂ ಅವನಿರ್ತಿದ್ದ, ನಾನೂ ಅವರ ಎಲ್ಲ ಕಾರ್ಯಕ್ರಮಗಳಲ್ಲೂ ಹಾಜರ್ ಆಗ್ತಿದ್ದೆ. ನಮ್ಮ ಮನೆಯಲ್ಲಿ ಟಿವಿ ಇಲ್ಲದ ದಿನಗಳಲ್ಲಿ ಸುಮನ-ಪ್ರಕಾಶನ ಮನೆಗೆ ಡಬ್ಲ್ಯೂಡಬ್ಲ್ಯೂಎಫ್ ನೋಡೋಕೆ ಹೋಗ್ತಿದ್ದಿದ್ದನ್ನು ಹೇಗೆ ತಾನೇ ಮರೆಯೋಕೆ ಸಾಧ್ಯ.?
ಆರನೇ ಕ್ಲಾಸ್ ತನಕ ಹಂಗೂ ಹಿಂಗೂ ಇರೋ 25 ಜನರಲ್ಲಿ ನಾನು 10-11ನೇ ರ್ಯಾಂಕ್ ಬರ್ತಿದ್ದೆ. ಸುಮನ ಇಂಗ್ಲೀಷ್ ಮೀಡಿಯಂ ತಗೊಂಡ ಅಂತ ನಮ್ಮಮ್ಮ ನಂಗೂ ಇಂಗ್ಲೀಶ್ ಮೀಡಿಯಮ್ಗೆ ಹಾಕುದ್ರು. ತಗಳಪ, ಎಲ್ಲಾ ಟೆಸ್ಟಲ್ಲೂ ಫೇಲ್,ಫೇಲ್,ಫೇಲ್… ನಮ್ಮಮ್ಮ ಹೇಳ್ತಿದ್ದಿದ್ದಿಷ್ಟೆ, ಸುಮನ್ ಏನ್ ಮಾಡ್ತಾನೋ ಅದುನ್ ಮಾಡು.
ಎಲ್ಲಿಗೆ ಹೋಗ್ತೀನಿ ಅಂದ್ರೂ ನಮ್ಮನೇಲೆ ಕಿರಿಕ್ ಮಾಡೋರು, ಅದೇ ಸುಮನ್ ಬಂದು ಕರೆದ್ರೆ ಆಯ್ತು ಅಂತ ಕಳಿಸ್ಬಿಡೋರು. ಅವನಿಗಿರೋ ಮರ್ಯಾದೆ ನಮ್ಮನೇಲೆ ನಂಗೇ ಇರ್ಲಿಲ್ಲ ಅಂತೀನಿ..! ಸೈಕಲ್-ಬೈಕ್-ಈಜು ಹೀಗೆ ಜೀವನದಲ್ಲಿ ಸಾಕಷ್ಟನ್ನು ಒಂದೇ ಟೈಮಿಗೆ ಕಲ್ತಿದೀವಿ ನಾವಿಬ್ರೂ. ಅದ್ರಲ್ಲೂ ಈಜು ಕಲಿಯುವಾಗ ಸುಮನ್ ಈಜಿ ಆ ಕಡೆ ದಡಕ್ಕೆ ಹೋದ ಅಂತ ನಾನೂ ನೀರಿಗೆ ಹಾರಿ ಮುಳುಗಿದ್ದು ನನಗಿನ್ನೂ ನೆನಪಿದೆ. ಅವತ್ತು ಸಂತು, ವಿಶ್ವ, ಶಿವು ನನ್ನ ಪ್ರಾಣ ಉಳಿಸಿದ್ರು. ಸುಮನ್ ಅದಕ್ಕೆ ಸಾಕ್ಷಿಯಾಗಿದ್ದ. ಅವತ್ತೆಲ್ಲಾದ್ರೂ ಮುಳುಗಿ ಹೋಗಿದ್ರೆ ಫೋಟೋಗೆ ಹಾರ ಹಾಕಿ 17 ವರ್ಷ ಆಗಿರ್ತಿತ್ತು. ನಂಗೊತ್ತು, ಅವತ್ತು ನಾನೆಲ್ಲಾದ್ರೂ ಸತ್ತು ಹೋಗಿದ್ರೆ ನನ್ನ ಕುಟುಂಬದ ಹೊರತು ಇಲ್ಲೀ ತನಕ ನನ್ನನ್ನು ನೆನಸ್ಕೊಳ್ತಾ ಇದ್ದಿದ್ದು ಒಬ್ಬನೇ. ಅವನೇ ನನ್ನ ಜೀವದ ಗೆಳೆಯ ಸುಮನ್. ಅಂದಹಾಗೆ ಅವನಿಗೊಂದು ಅಡ್ಡ ಹೆಸರಿದೆ `ಬಾಂಗಡೆ’ ಅಂತ. ಅವನು ತುಂಬಾ ಮೀನು ತಿಂತಿದ್ದ ಅನ್ನೋ ಕಾರಣಕ್ಕೆ ಆ ಹೆಸರನ್ನು ಇಟ್ಟಿದ್ವಿ ಅನ್ಸುತ್ತೆ. ಇವತ್ತಿಗೂ ನನ್ನ ಮೊಬೈಲ್ನಲ್ಲಿ ಅವನ ಹೆಸರು ಬಾಂಗಡೆ ಅಂತಾನೇ ಸೇವಾಗಿದೆ.
ನಾವಿಬ್ಬರೂ ಒಳ್ಳೇ ಕಾಂಪಿಟೇಟರ್ಸ್. ಅವನಿಗೆ ಸರಿಯಾದ ಪೈಪೋಟಿ ಕೊಡೋದು ನಾನೇ, ನನಗೆ ಒಳ್ಳೇ ಪೈಪೋಟಿ ಕೊಡೋದು ಅವನೇ. ಅವತ್ತು-ಇವತ್ತು-ಯಾವತ್ತೂ. ಆದ್ರೆ ಅದು ಆರೋಗ್ಯಕರ ಫೈಟ್. ನಾವಿಬ್ಬರು ಇಷ್ಟಪಡೋ ಫೈಟ್. ಸ್ಕೂಲಿನ ಗಿತಗಾಯನ ಸ್ಪರ್ಧೆಯಲ್ಲಿ ಒಂದು ಸಲ ಅವನ `ಬಿದ್ದೀಯಬ್ಬೆ ಮುದುಕಿ’ ಹಾಡು ಫಸ್ಟ್ ಪ್ರೈಸ್ ತಗೊಂಡ್ರೆ ಮತ್ತೊಂದ್ ಸಲ ಅದೇ ಹಾಡಿನ ಎದುರು ನನ್ನ ` ಭಲೆಭಲೆ ಚೆಂದದ ಚೆಂದುಳ್ಳಿ ಹೆಣ್ಣು ನೀನು’ ಫಸ್ಟ್ ಪ್ರೈಸ್ ತಗೊಂಡಿದೆ. ಆದ್ರೆ ಅವನ ಹ್ಯಾಂಡ್ರೈಟಿಂಗ್ ಕಪ್ಪೆಚಿಪ್ಪಿನ ಒಳಗಿರುವ ಮುತ್ತು ಪೋಣಿಸಿದಂತೆ. ನಮ್ಮದು ಮತ್ತಿನ ಹೊರಗಿರುವ ಕಪ್ಪೆ ಚಿಪ್ಪಿನಂತೆ. ಅವನ ಹ್ಯಾಂಡ್ರೈಟಿಂಗ್ ತೋರ್ಸಿ ತೋರ್ಸಿ ಜಯಮ್ಮ ಮಿಸ್ ಸ್ಕೂಲ್ ಬಿಡೋ ತನಕ ನನಗೆ ಹೊಡೆದಿದ್ದು ನೆನಸ್ಕೊಂಡ್ರೆ ಈಗ್ಲೂ ಅಂಗೈ ನೋವಾಗುತ್ತೆ..!
ಇದೆಲ್ಲಾ ಅವತ್ತಿನ ಮಾತು. ಎಸ್ಎಸ್ಎಲ್ಸಿ ಮುಗಿದ ಮೇಲೆ ಅವರೆಲ್ಲಾ ಸೈನ್ಸ್ ತಗೊಂಡ್ರು, ನಾವು ಗಣಿತದಲ್ಲಿ 30 ಮಾಕ್ರ್ಸ್ ತಗೊಂಡೋರು ಟ್ರ್ಯಾಕ್ ಚೇಂಜ್ ಮಾಡಿದ್ವಿ. ಅಲ್ಲಿಗೆ ನಾವು ದೂರ ಆದ್ವಿ. ಆದ್ರೆ ನಮ್ಮಿಬ್ಬರ ಸ್ನೇಹ ದೂರ ಆಗ್ಲೇ ಇಲ್ಲ. ಅವನು ಓದ್ತಾ ಇದ್ದ ಸೇಕ್ರೆಡ್ ಹಾರ್ಟ್ ಕಾಲೇಜಿಗೆ ಹೋಗಿ ಅವನನ್ನು ಮೀಟ್ ಬಂದಿದೀನಿ. ಅವನು ಓದ್ತಿದ್ದ ರಾಣೆಬೆನ್ನೂರಿನ ಇಂಜಿನಿಯರಿಂಗ್ ಕಾಲೇಜಿಗೂ 2-3 ಸಲ ಹೋಗಿ ಬಂದಿದ್ದೆ. ಅಷ್ಟರಲ್ಲಿ ನಾನು ಬೆಂಗಳೂರಿಗೆ ಬಿದ್ದೆ. ಆಗಲೇ ನಮ್ಮ ಸ್ನೇಹಕ್ಕೆ ಬ್ರೇಕ್ ಬಿದ್ದಿದ್ದು. ಅದಾದ ಮೇಲೆ 4-5 ವರ್ಷ ನಮ್ಮದು ಅಪರೂಪದ ಸ್ನೇಹ ಆಗಿಬಿಡ್ತು. ಬರ್ತ್ಡೇ ವಿಶ್ಗೆ ಮಾತ್ರ ನಮ್ಮ ಸ್ನೇಹ ಸೀಮಿತವಾಗಿತ್ತು. ಅವನಿಗೆ ಮದುವೇನೂ ಆಯ್ತು. ಅದಾದ ಮೇಲಂತೂ ನಾವಿಬ್ಬರೂ ದೂರ ದೂರ ದೂರ. ನಾನ್ ಬ್ಯಾಚುಲರ್ರು, ಅವನು ಮ್ಯಾರೀಡ್. ಸ್ನೇಹ ಸಿಂಕ್ ಆಗ್ಲೇ ಇಲ್ಲ. ಅವನ ಮದುವೆಗೆ ಹೋಗಿ ಬಂದ ಮೇಲೆ ಮತ್ತವನನ್ನು ಮೀಟ್ ಮಾಡಿದ್ದೂ ನನಗೆ ನೆನಪಿಲ್ಲ. ಆದ್ರೆ ನನ್ನ ಮದುವೆ ಆದ್ಮೇಲೆ ಪಿಕ್ಚರ್ ಚೇಂಜ್ ಆಗೋಯ್ತು.
ಹೌದು, ಮದುವೆ ಆದ್ಮೇಲೆ ನನ್ನ ಹಳೆಯ ಗೆಳೆಯ ಮತ್ತೆ ನನಗೆ ಸಿಕ್ಕಿದ. ಮತ್ತದೇ ಸುಮನ. ಅವತ್ತು ಜೀವಕ್ಕೆ ಜೀವದ ತರಹ ಇದ್ದವರು ಮತ್ತೆ ಅದೇ ತರ ಆಗೋಕೆ ಜಾಸ್ತಿ ದಿನ ಹಿಡೀಲಿಲ್ಲ. ಹಿಂದೆಂದಿಗಿಂತಲೂ ನಾವು ಈಗ ಕ್ಲೋಸು. ನಮ್ಮಿಬ್ಬರ ಕಷ್ಟ ಸುಖವನ್ನು ಸರಿ ಸಮನಾಗಿ ಹಂಚಿಕೊಂಡು ಖುಷಿಖುಷಿಯಾಗಿದೀವಿ. ಯಾವ ಹೀರೋಗೂ ಕಮ್ಮಿ ಇಲ್ಲ ಇನ್ನೋ ರೇಂಜಿಗೆ ಸ್ಮಾರ್ಟ್ಬಾಯ್ ನನ್ನ ಗೆಳೆಯ. ಅವನದು ಇವತ್ತಿಗೂ ದೇವರಂಥಾ ಮನಸ್ಸು. ಅದಕ್ಕೆ ಅವನ ಹೆಂಡತಿಯಾಗಿ ಬಂದವಳೂ ಸಹ ಅಂಥವಳೇ. ಇವತ್ತು ಅವಳೂ ಸಹ ನಂಗೆ ಅವನಷ್ಟೇ ಕ್ಲೋಸ್ ಫ್ರೆಂಡ್. ಅವತ್ತು ಸುಮನನ್ನ ನೋಡಿ ನೋಡಿ ನನ್ನಮ್ಮ ಹೇಳಿದ್ರು `ಸುಮನನ ತರದ್ದೇ ಕ್ರಿಶ್ಚಿಯನ್ ಹುಡುಗೀನ ತಂದು ಮದ್ವೆ ಮಾಡ್ತೀನಿ ನಿಂಗೆ’ ಅಂತ. ಗಂಡಾಗಲಿ, ಹೆಣ್ಣಾಗಲಿ, ಅಂತಹ ಮತ್ತೊಬ್ಬ ಸುಮನ್ ಪ್ರಪಂಚದಲ್ಲಿ ಯಾರೂ ಇಲ್ಲ. ಇರೋದೊಬ್ಬನೇ ಸುವiನ್, ಅವನು ನನ್ನ ಗೆಳೆಯ.
ನಮ್ಮ ಲೈಫಿನ ಕೆಲವು ಸ್ವಾರಸ್ಯ ಹೇಳಿಲ್ಲ ಅಂದ್ರೆ ಅವನ ಬಗ್ಗೆ ಹೇಳಿ ಮಜಾನೇ ಇರಲ್ಲ.
ಸುಮನ್ ಫೋನ್ ತಗೊಂಡಿದ್ದ. ಹೊಸ ಮೊಬೈಲು. ನಂಬರ್ ಕೊಟ್ಟು ಹೋದ. ನನ್ನ ಹತ್ತಿರ ಅಷ್ಟೊತ್ತಿಗಾಗ್ಲೆ ಒಂದು ಜಾಮಿಟ್ರಿ ಬಾಕ್ಸ್ ಮೊಬೈಲ್ ಇತ್ತು. ನಂಬರ್ ಕೊಟ್ಟು ಹೋದ ಮಾರನೇ ದಿನ ನನ್ನ ಮೊಬೈಲಿಗೆ ಒಂದು ಮೆಸೇಜ್ ಬಂತು ಇನ್ನೊಬ್ಬ ಫ್ರೆಂಡ್ ನಂಬರ್ನಿಂದ. ` ಒಂದು-ಎರಡು ರೂಮಿಗೆ ಹೊರಡು, ಮೂರು ನಾಲ್ಕು ಚಿಲಕ ಹಾಕು’ ಅಂತ ಶುರುವಾಗೋ ಗಲೀಜು ಮೆಸೇಜ್ ಅದು. ನಿನ್ನೆ ತಾನೇ ಸುಮನ್ ನಂಬರ್ ಕೊಟ್ಟು ಹೋಗಿದ್ದ ಅಂತ ನೆನಪಾಗಿ ಅವನಿಗೆ ಫಾರ್ವರ್ಡ್ ಮಾಡ್ದೆ. ಆ ಕಡೆಯಿಂದ ರಿಪ್ಲೆ ಬರಲೇ ಇಲ್ಲ. ಸಂಜೆ ಸುಮನ್ ಸಿಕ್ಕಿದ. `ಏನ್ ಮಗಾ, ಹೆಂಗಿತ್ತು ಮೆಸೇಜು’ ಅಂದೆ. ಯಾವ್ ಮೆಸೇಜ್ ಮಗಾ ಅಂತ ಸುಮನ್ ಕೇಳ್ದ. ಪಾಪ ಗೊತ್ತೇ ಇಲ್ಲ ಅಂತ ರೇಗಿಸಿ ಮತ್ತೆ ಅದನ್ನ ಜೋರಾಗಿ ಓದಿ ಹೇಳ್ದೆ. `ನಿಜವಾಗ್ಲೂ ಕಳಿಸಿದ್ಯಾ ಮಗಾ ಅಂತ ಕೇಳ್ದ ಸುಮನ್. `ಹೂ ಕಣೋ, ಯಾಕೋ.. ಬರ್ಲಿಲ್ವ..?’ ಅಂತ ನಾನ್ ಕೇಳ್ದೆ. ಅವನು ಉತ್ತರ ಕೊಟ್ಟ ` ಬಂದಿರುತ್ತೆ ಮಗಾ, ಆದ್ರೆ ಫೋನ್ ನಮ್ಮಪ್ಪ ತಗೊಂಡ್ ಹೋಗಿದ್ದಾರೆ’ ಅಂದ. ಕುಸಿದು ಬೀಳೋದ್ ಒಂದೇ ಬಾಕಿ. ಮೊದಲೇ ಅವರಪ್ಪನ ಕಣ್ಣಲ್ಲಿ ನಾನು ಪೋಲಿ-ಪೊರಕಿ. ಅಂತದ್ರಲ್ಲಿ ಇದು ಬೇರೆ. ಅವರಪ್ಪನಿಂದ ಅವತ್ತು ಸಂಜೆ ಸುಮನ್ಗೆ ಫುಲ್ ಕ್ಲಾಸ್. ಆದ್ರೆ ಸುಮನ್ `ಅದು ಈ ಕೀರ್ತಿ ಅಲ್ವೇ ಅಲ್ಲ’ ಅಂತ ಅವರಪ್ಪನ ಹತ್ತಿರಾನೇ ವಾದ ಮಾಡಿ, ಸಂಜೇನೆ ನಂಗೆ ಫೋನ್ ಮಾಡಿ. ಇಮಿಡಿಯಟ್ ಆಗಿ ನಂಬರ್ ಚೇಂಜ್ ಮಾಡಿಸಿಬಿಟ್ಟ. ಆ ಹೊಸ ನಂಬರ್ನಿಂದ ಅವರಪ್ಪನಿಗೆ ನಾನ್ ಪೋನ್ ಮಾಡಿ ಕಂಪ್ಲೀಟ್ ಡ್ಯಾಮೇಜ್ ಕಂಟ್ರೋಲ್. ನನ್ನನ್ನ ಅವರಪ್ಪನ ದೃಷ್ಟಿಯಲ್ಲಿ ಕೆಟ್ಟವನನ್ನಾಗಿ ಮಾಡ್ಬಾರ್ದು ಅಂತ ಸುಮನ್ ಪಟ್ಟ ಪಾಡು ಅಷ್ಟಿಷ್ಟಲ್ಲ. ಅಂತಾ ಫ್ರೆಂಡ್ ನನ್ನ ಗೆಳೆಯ ಬಾಂಗಡೆ.
ಅವನ ಬಗ್ಗೆ ಹೇಳೋಕೆ ಇಡೀ ಪುಸ್ತಕ ಸಾಲೋದಿಲ್ಲ. ಅವನು ಜೊತೆಗಿದ್ದ ಒಂದೊಂದು ದಿನವೂ ವಂಡರ್ಫುಲ್. ಆರನೇ ಕ್ಲಾಸಲ್ಲಿ ನಾಗೇಂದ್ರ ಅನ್ನೋ ಫ್ರೆಂಡು ಫಿಟ್ಟಿಂಗ್ ಇಟ್ಟು ನಮ್ಮಿಬ್ಬರ ನಡುವೆ ಗ್ಯಾಪ್ ತಂದಿದ್ದ. ಅವತ್ತು ಅವನ ಮನೆಯ ಲ್ಯಾಂಡ್ಲೈನಿಗೆ ಫೋನ್ ಮಾಡಿ `ಪ್ಲೀಸ್ ಮಾತಾಡು ಮಗಾ’ ಅಂತ ಗೋಗರೆದಿದ್ದು ಇನ್ನೂ ನೆನಪಿದೆ ನಂಗೆ. ಅವನು ನನ್ ಜೊತೆ ಮಾತಾಡಲ್ಲ ಅಂದ್ರೆ ಅದಕ್ಕಿಂತ ಕೆಟ್ಟದು ಪ್ರಪಂಚದಲ್ಲಿ ಇನ್ನೇನೂ ಇಲ್ಲ. ಪ್ರತಿ ವರ್ಷದ ನನ್ನ ಹುಟ್ಟುಹಬ್ಬಕ್ಕೆ ಮಧ್ಯರಾತ್ರಿ 12 ಗಂಟೆಗೆ ನಾನು ಕಾದು ಕೂರೋದು ಅವನ ಫೋನ್ಗೆ. ಅವನೂ ಯಾವ ವರ್ಷವೂ ಅದನ್ನು ತಪ್ಪಿಸಿಲ್ಲ. ಯಾಕಂದ್ರೆ ಅವನು ನನ್ನ ಗೆಳೆಯ ಸುಮನ್.
ಸುಮನ್ ಅಣ್ಣ ಕಿರಣ್. ಅವನೂ ನನ್ನ ಸ್ನೇಹಿತನೇ. ಆದ್ರೆ ಅವನ ಮೇಲೆ ನಂಗೊಂಥರಾ ಹೊಟ್ಟೆಕಿಚ್ಚು. ಜೊತೆಗೇ ಹುಟ್ಟಿದ, ಜೊತೆಗೇ ಬೆಳೆದ. ಅವನ ಜೊತೆಗೇ ಇರ್ತಾನೆ ಅಂತ. ನನ್ ಹೆಂಡ್ತೀನೂ ಕೇಳ್ತಿರ್ತಾಳೆ `ನಿಮ್ಮಿಬ್ಬರಲ್ಲಿ ಯಾರಾದ್ರೂ ಒಬ್ಬರು ಹುಡುಗಿ ಆಗಿದ್ದಿದ್ರೆ ಮದುವೆ ಆಗ್ಬಿಡ್ತಿದ್ರಿ ಅಲ್ವಾ.?’ ಅಂತ. ಅದು ನಿಜ ಇದ್ರೂ ಇರ್ಬೋದು. ಕೊನೆಯದಾಗಿ ಅವನು ಪೂಜಿಸೋ ಜೀಸಸ್ಗೂ, ನಾನು ಪೂಜಿಸೋ ಬಾಬಾನಿಗೂ ಕೇಳೋದಿಷ್ಟೆ ` ಮುಂದಿನ ಜನ್ಮ ಅಂತಿದ್ರೆ, ನನ್ನೂ ಅವನ್ನೂ ಅಣ್ಣ ತಮ್ಮ ಮಾಡ್ಬಿಡಿ’ ಅಂತ.
ಗೆಳೆಯ ಐ ಆಮ್ ಲಕ್ಕಿ ಟು ಹ್ಯಾವ್ ಯು…
HOTTEKICCHU THARISUVANTHAHA SNEHA….
OMG!! Keer…. 🙂 Couldn’t control my emotions, was blown away.. No words!! ,<3 You written an article about me, such an honor and reward. Thanks for the wonderful gift on Friendship day and means a lot to me. One such gift I can cherish in my entire life. Feeling blessed to have friend like you who is actor, director, photographer, editor, producer, shopkeeper, Hotel owner, creative mind , healthy competitor, singer, runner, athlete and most importantly my best buddy… Hats off to your creative mind, mind-blowing, true friendship.. I truly respect and value the place I have got in your and your family's heart. I'm sure we gonna carry forward the same feeling, friendship, trust and mischief for the rest of our lives. Love you my dear friend ❤ 😉 " Mundina namma jote aatakke ready naa…!!" 😛
Keerthiji you are really wonderfull,You have the best friends at all the levels.And even your friends are luckiest to have you as the best friend