ಅವತ್ತು ಅವನು ನಂಗೆ ಫೋನ್ ಮಾಡಿ ಸುಮ್ಮನೆ ಬಾಯಿಗೆ ಬಂದಿದ್ದೇ ಮಾತಾಡ್ತಾ ಇದ್ದ. `ನನ್ನ ಬಗ್ಗೆ ಯಾಕೆ ಏನೆಲ್ಲಾ ಮಾತಾಡ್ತೀರ..? ಏನ್ ಹೇಳೋದಿದ್ರೂ ನಂಗೇ ಹೇಳಿ. ಇದೆಲ್ಲಾ ಸರಿ ಅಲ್ಲ. ಹಂಗೇ ಹಿಂಗೇ’ ಅಂತ… ನಂಗೂ ಪಿತ್ತ ನೆತ್ತಿಗೇರಿತ್ತು. `ಅಲ್ಲರೀ, ನಿಮಗೆ ನಂಬಿಕೆ ಇಲ್ಲ ಅಂದಮೇಲೆ ನನ್ ಜೊತೆ ಯಾಕ್ರೀ ನಿಮ್ಮ ಸ್ನೇಹ..? ಇವತ್ತಿಗೆ ನಂಗೂ ನಿಮಗೂ ಪರ್ಸನಲಿ ಏನೂ ಇಲ್ಲ. ನಿಮ್ಮ ಪಾಡು ನಿಮಗೆ, ನನ್ನ ಪಾಡು ನನಗೆ’ ಅಂತ ನಾನು ರೇಗಾಡಿ ಫೋನ್ ಕಟ್ ಮಾಡಿ ಬಿಟ್ಟೆ. ಅಷ್ಟೆ, ಅದಾದ ಮೇಲೆ 15-20 ನಿಮಿಷ ಮಾತಿಲ್ಲ ಕಥೆ ಇಲ್ಲ. ನಂಗೆ ಅನ್ನಿಸ್ತಿತ್ತು `ಛೇ, ಹಾಗೆಲ್ಲಾ ನಾನೂ ಕಿರುಚಾಡ್ಬಾರ್ದಿತ್ತು’ ಅಂತ. ನಂಗೊತ್ತು ಅವನಿಗೂ ಹಾಗೇ ಅನ್ಸಿರುತ್ತೆ. ಯಾರದೋ ಮಾತು ಕೇಳಿ ಕೀರ್ತಿ ಮೇಲೆ ಕೂಗಾಡಿಬಿಟ್ಟೆ ಅನ್ನೋ ಫೀಲಿಂಗ್ ಅವನಿಗೂ ಖಂಡಿತ ಇದ್ದೇ ಇರುತ್ತೆ. ಅಷ್ಟರಲ್ಲಿ ವಾಟ್ಸಾಪ್ನಲ್ಲಿ ಅವನದೇ ಮೆಸೇಜು. ` ಸಾರಿ’ ಅಂತ. ನಾನ್ ರಿಪ್ಲೆ ಕಳಿಸಿದೆ `ಐ ಹೇಟ್ ಯು’. ಮತ್ತೆ ರಿಪ್ಲೆ ಬಂತು. ` ಸಾರಿ, ಡಾರ್ಲಿಂಗ್, ಐ ಲವ್ ಯೂ’. ಅವನೊಂತರಾ ಹಂಗೆ..! ಒಂದ್ ಸಲ ಸ್ಪೀಡೋಮೀಟರ್, ಮತ್ತೊಂದು ಕ್ಷಣಕ್ಕೆ ಜ್ವರವಿರದ ಬಾಯಲ್ಲಿರೋ ಥರ್ಮಾಮೀಟರ್..! ಅವನು ರಾಘವೇಂದ್ರ ಭಟ್ ಅಲಿಯಾಸ್ ರಾಘು, ಅಲಿಯಾಸ್ ರಘು, ಅಲಿಯಾಸ್ ಪ್ರಿನ್ಸ್ ರಘು, ಅಲಿಯಾಸ್ ಸ್ಮಾರ್ಟ್ ರಘು…!
ಅದೊಂಥರಾ ವಿಚಿತ್ರ, ವಿಶಿಷ್ಟ, ವಿಭಿನ್ನ ವ್ಯಕ್ತಿತ್ವದ ವ್ಯಕ್ತಿ. ನನ್ನ ಕ್ಲೋಸ್ ಫ್ರೆಂಡ್ಗಳಲ್ಲೇ ಅತ್ಯಂತ ಲೇಟೆಸ್ಟ್ ಎಂಟ್ರಿ ಈ ರಘು. ಪರಿಚಯವಾಗಿದ್ದು ಸಂದೇಶ್ ಎಂಬ ಸ್ನೇಹಿತನಿಂದ, ಹತ್ತಿರವಾಗಿತ್ತು ಶೆಟ್ಟಿ ಸರ್ ಸಹವಾಸದಿಂದ. ಈಗ ಕಿತ್ತಾಡೋದು, ಒಂದಾಗೋದು, ಕಿರಚಾಡೋದು, ಸಾರಿ ಕೇಳೋದು ನಮ್ಮಿಬ್ಬರ ಸ್ನೇಹದಿಂದ. ಕಾರಣ ಗೊತ್ತಿಲ್ಲ, ಆದ್ರೂ ಅವನಂದ್ರೆ ನಂಗೆ ಸಿಕ್ಕಾಪಟ್ಟೆ ಲವ್ವು, ಅವನಿಗೂ ಅಂತದ್ದೇ ಫೀಲಿಂಗ್ ಇದೆ ಅನ್ನೊದು ನನ್ನ ನಂಬಿಕೆ. ಲವ್ ಇದೆ ಅನ್ನೋದಕ್ಕೆ ಸಾಕಷ್ಟು ಸಲ ಅನುಭವಾನೂ ಆಗಿದೆ. ಫ್ರೆಂಡ್ಶಿಪ್ಪಲ್ಲಿ ವ್ಯವಹಾರ ಮಾಡ್ಬಾರ್ದು ಅಂತಾರೆ, ಆದ್ರೆ ವ್ಯವಹಾರದಿಂದಲೇ ನಮ್ಮ ಸ್ನೇಹ ಗಟ್ಟಿಯಾಗಿದ್ದು..! ಅವನಲ್ಲಿ ಇಷ್ಟವಾಗುವ ನೂರು ಗುಣಗಳಿವೆ. ಇಷ್ಟವಾಗದಿರೋದು ಒಂದೇ ಒಂದಿದೆ. ಅದು ಅವನ ಹಿತ್ತಾಳೆ ಕಿವಿ. ಎಲ್ಲರ ವಿಚಾರದಲ್ಲೂ ಹಾಗೇನಾ..? ಅದು ನಂಗೊತ್ತಿಲ್ಲ. ಆದ್ರೆ ನಾವಿಬ್ಬರೂ ತುಂಬಾ ಕಮ್ಮಿ ಟೈಮಲ್ಲಿ ಸಿಕ್ಕಾಪಟ್ಟೆ ಕ್ಲೋಸ್ ಆದ್ವಿ ಅನ್ನೋ ಕಾರಣಕ್ಕೆ ಕೆಲವು ಸೋ ಕಾಲ್ಡ್ ಸ್ನೇಹಿತರೇ ನಮ್ಮಿಬ್ಬರ ನಡುವೆ ತಂದಿಟ್ಟು ಮಜಾ ನೋಡಿದಾರೆ. ಅಂತಾ ಟೈಮಲ್ಲೆಲ್ಲಾ ಅವನು ನಂಗೆ ಫೋನ್ ಮಾಡಿ `ನೀವ್ ಹಂಗಂದ್ರಿ, ಹಿಂಗಂದ್ರಿ’ ಅಂತ ಸೌಂಡ್ ಮಾಡಿದ್ದಾನೆ. ಅದಾಗಿ ಮತ್ತೆ 15-20 ನಿಮಿಷಕ್ಕೆ ಮತ್ತೆ ನಮ್ಮಿಬ್ಬರದು ಸೇಮ್ ಓಲ್ಡ್ ಸ್ನೇಹ..! ನಾವಿಬ್ಬರೂ ಪರಸ್ಪರ ಸಖತ್ ನಂಬ್ತೀವಿ. ಆದ್ರೆ ಅದರಷ್ಟೇ ನಂಬಲ್ಲ.. ಅದೇ ನಮ್ಮ ಸ್ನೇಹದಲ್ಲಿರೋ ಸ್ಪೆಷಾಲಿಟಿ.
ನಾವಿಬ್ಬರೂ ಸೇರಿಕೊಂಡ್ರೆ ನಮ್ಮಿಬ್ಬರಿಗೂ ಆನೆ ಬಲ. ಜಯಪ್ರಕಾಶ್ ಶೆಟ್ಟಿ ಸರ್ ಯಾವಾಗಲೂ ಹೇಳ್ತಿರ್ತಾರೆ `ನಿನ್ನ ಹತ್ತಿರ ಏನಿಲ್ವೋ ಅದು ಅವನ ಹತ್ತಿರ ಇದೆ, ಅವನ ಹತ್ತಿರ ಏನಿಲ್ವೋ ಅದು ನಿನ್ ಹತ್ತಿರ ಇದೆ. ಇಬ್ಬರೂ ಸೇರ್ಕೊಂಡು ಏನಾದ್ರೂ ಮಾಡಿ. ನೀವು ಗೆದ್ದೇ ಗೆಲ್ತೀರ’ ಅಂತ. ಆದ್ರೆ ಅದ್ಯಾಕೋ ಅಂತದ್ದೊಂದು ಕೆಮಿಸ್ಟ್ರಿ ನಮ್ಮಿಬ್ಬರ ನಡುವೆ ಇಲ್ಲೀ ತನಕ ವರ್ಕ್ಔಟ್ ಆಗಲೇ ಇಲ್ಲ. ಇಬ್ಬರೂ ಒಟ್ಟಾಗಿ ಒಂದು ಬಿಸ್ನೆಸ್ ಮಾಡೋದು ಅಂತ ಡಿಸೈಡ್ ಮಾಡಿ, ಆಫೀಸ್ ಜಾಗ ಹುಡುಕಿ ಇನ್ನೇನು ಶುರು ಮಾಡ್ಬೇಕು ಅನ್ನೋ ಟೈಮಲ್ಲಿ ರಘು ಹಿಂದೆ ಸರಿದುಬಿಟ್ಟ. ಆದ್ರೆ ನಂಗೆ ಬೇಜಾರಾಗ್ಲಿಲ್ಲ. ಯಾಕಂದ್ರೆ ಅದು ನಮ್ಮ ರಘು. ಏನೇ ಮಾಡಿದ್ರೂ ಯೋಚನೆ ಮಾಡಿ ಮಾಡಿರ್ತಾನೆ ಅನ್ನೋ ಗ್ಯಾರಂಟಿ ನಂಗಿತ್ತು. ಆದ್ರೆ ಅವನ ಆ ನಿರ್ಧಾರದಿಂದಾಗಿ ನಮಗೆ ಆಫೀಸಿಗೆ ಅಂತ ಜಾಗ ಕೊಡಿಸಿದ್ದ ರಂಗನಾಥ್ ಭಾರದ್ವಾಜ್ ಸರ್ ನನ್ನ ಮುಖಕ್ಕೆ ಉಗುದ್ರು. ಆ ಜಾಗ ನಮಗೇ ಕೊಡ್ತೀವಿ ಅಂತ ನಿರ್ಧಾರ ಮಾಡಿದ್ದ ಆ ಬಿಲ್ಡಿಂಗ್ ಅಧ್ಯಕ್ಷರು `ಇನ್ಯಾವತ್ತೂ ಈ ತರ ಮಾಡ್ಬೇಡಿ’ ಅಂತ ಚಾರ್ಜ್ ಮಾಡಿದ್ರು. ಇದ್ಯಾವುದನ್ನೂ ನಾನು ರಘುಗೆ ಇವತ್ತಿಗೂ ಹೇಳಿಲ್ಲ. ಕಾರಣ ರಘು ಬೇಜಾರಾಗ್ಬೋದು. ಮತ್ತೆ ಬೇಜಾರ್ ಮಾಡ್ಕೊಂಡ್ರೆ ಅವನು ಮತ್ತೆ ಒಂದೆರೆಡು ದಿನ ಮಾತಾಡಲ್ಲ. ಅವನು ಮಾತಾಡಿಲ್ಲ ಅಂದ್ರೆ ನಂಗಾಗಲ್ಲ. ಇನ್ಫ್ಯಾಕ್ಟ್ ಅವನಿಗೂ ಆಗಲ್ಲ.
ಸ್ನೇಹ ಶುರುವಾದ ದಿನಗಳಲ್ಲಿ ನಾನು-ಅವನು ಪ್ರತಿದಿನ ಸಿಕ್ತಾ ಇದ್ವಿ. ಆಫೀಸ್ ಮುಗಿದ ಮೇಲೆ ಎಲ್ಲಾದ್ರೂ ಕೂತ್ರೆ ರಾತ್ರಿ 12ರವರೆಗೂ ನಾವು ಜೊತೇಲೇ ಇರ್ತಿದ್ವಿ. ನಮ್ಮ ಜೊತೆಗೆ ಶೆಟ್ಟಿ ಸರ್, ಸಂದೇಶ್, ಭವಿತ್, ಚಂದನ್, ಆಗಾಗ ಸೋಮಣ್ಣ ಮಾಚಿಮಡ. ನಾವೆಲ್ಲಾ ಒಟ್ಟಿಗಿದ್ದ ಅಷ್ಟೂ ದಿನ ನಾನು ರಘು ಅಕ್ಕಪಕ್ಕದಲ್ಲೇ ಕೂತು ಮಾತಾಡಿಕೊಂಡು ಕಾಲ ಕಳೆದಿದೀವಿ. ನಮ್ಮಿಬ್ಬರಿಗೂ ಅದೇನೋ ಅಟ್ಯಾಚ್ಮೆಂಟು. ಒಂಥರಾ ಫಿವಿಕಾಲ್ ಕಾ ಜೋಡ್ ಹೆ.
ರಘು ನನಗಿಂತ ವಯಸ್ಸಲ್ಲಿ ಸ್ವಲ್ಪ ದೊಡ್ಡವನು, ಅವನು ನನ್ನ ಸ್ನೇಹಿತನಿಗಿಂತ ಸಹೋದರನಾಗಿ ನಂಗೆ ತುಂಬಾ ಇಷ್ಟವಾಗ್ತಾನೆ. ನನ್ನೆಲ್ಲಾ ಗುಡ್ ಅಂಡ್ ಬ್ಯಾಡ್ ಟೈಮಲ್ಲಿ `ನಾನಿದೀನಿ ಬ್ರದರ್, ಡೋಂಟ್ ವರಿ’ ಅಂತ ಅವನು ಕೊಡೋ ಕಾನ್ಫಿಡೆನ್ಸು ನನ್ನನ್ನು ಎಷ್ಟೋ ಸಲ ಗೆಲ್ಲಿಸಿದೆ. ಅವನಿಗೆ ಒಂದೇ ಆಸೆ, `ಬ್ರದರ್, ನಾನು ಸಖತ್ ಫೇಮಸ್ ಆಗ್ಬೇಕು, ನಾನು ರೋಡಲ್ಲಿ ಹೋಗ್ತಿದ್ರೆ ಜನ ನನ್ನನ್ನು ಗುರುತು ಹಿಡೀಬೇಕು’ ಅನ್ನೋದು. ರಘುಗೆ ಸಿನಿಮಾ ಅಂದ್ರೆ ಪ್ರೀತಿ. ನೋಡೋಕಲ್ಲ, ಆಕ್ಟ್ ಮಾಡೋಕೆ..! 3-4 ಸಿನಿಮಾದಲ್ಲಿ ಆಕ್ಟ್ ಸಹ ಮಾಡಿದ್ದಾನೆ ನಮ್ ರಘು. ಅವನ ಆಸೆ ಈಡೇರುತ್ತೆ. ಅವನ ಹಠ-ಛಲ ಅವನನ್ನು ಖಂಡಿತ ಗೆಲ್ಲಿಸುತ್ತೆ. ಅದಕ್ಕೆ ಒಬ್ಬ ಗೆಳೆಯನಾಗಿ, ಸಹೋದರನಾಗಿ ಅವನ ಜೊತೆ ಯಾವತ್ತಿಗೂ ನಾನಿರ್ತೀನಿ, ನಾನಿರ್ಲೇಬೇಕು.
ಯಸ್, ಕಮಿಂಗ್ ಟು ದ ಪಾಯಿಂಟ್. ಸುಮಾರು 15-16 ವರ್ಷದ ಹಿಂದೆ ಒಬ್ಬ ಹುಡುಗ ಬೆಂಗಳೂರೆಂಬ ಸಮುದ್ರಕ್ಕೆ ಬೀಳ್ತಾನೆ. ಅವನದು ಖಾಲಿ ಕೈ, ಮೆಜೆಸ್ಟಿಕ್ನಲ್ಲಿದ್ದ ಬಾರ್ ಕೆಳಗಿನ ಒಂದು ಪುಟ್ಟ ಆಫೀಸಲ್ಲಿ ಕೆಲಸ. ಅವತ್ತೇ ಅವನ ಕಣ್ಣಲ್ಲೊಂದು ಕಿಚ್ಚಿತ್ತು. ನಾನ್ ಏನೋ ಆಗ್ತೀನಿ ಅಂತ. ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬಾರ್ ಕೆಳಗೆ ಪುಡಿಗಾಸಿಗೆ ಕೆಲಸ ಮಾಡ್ತಿದ್ದ ಹುಡುಗ ಮುಂದೊಂದು ದಿನ ಆ ಬಾರಿನ ಫ್ಲೋರ್ ಮಾಲೀಕ. ಅದ್ಬುತ ಪಾಂಡಿತ್ಯವೇನಿಲ್ಲ, ಆದ್ರೆ ತಲೆ ಇತ್ತು. ಹೇಗೆ ಬದುಕಬೇಕು ಅನ್ನೋದು ಗೊತ್ತಿತ್ತು. ಅಷ್ಟೇ ಸಾಕಲ್ವಾ. ಅವನು ತಿರುಗಿ ನೋಡ್ಲೇ ಇಲ್ಲ. ಅವನ ಬ್ಯಾಂಕ್ ಬ್ಯಾಲೆನ್ಸ್, ಲೈಫ್ ಸ್ಟೈಲ್ ಎಲ್ಲಾ ಚೇಂಜ್ ಆಯ್ತು. ಇವತ್ತವನಿಗೆ ಬೆಂಗಳೂರಲ್ಲಿ ಸ್ವಂತ ಮನೆ ಇದೆ. ಓಡಾಡೋಕೆ ಎರಡೆರೆಡು ಕಾರ್ ಇದೆ. ಮೈಮೇಲೆ ಬ್ರ್ಯಾಂಡೆಡ್ ಬಟ್ಟೆಗಳಿದೆ. ಕಾಲಲ್ಲಿ ರೀಬಾಕ್, ನೈಕ್ ಶೂ ಇದೆ. ಯಾವುದೂ ಆಕಾಶದಿಂದ ಬಿದ್ದಿದ್ದಲ್ಲ, ಕಷ್ಟಪಟ್ಟು ದುಡಿದಿದ್ದು. ಶ್ರಮಕ್ಕೆ ಸಿಕ್ಕ ಪ್ರತಿಫಲ ಅದು. ಇಷ್ಟೆಲ್ಲಾ ಹೇಳಿದ್ದು ಅವನ ಬಗ್ಗೇನೆ. ಅದೇ ನನ್ನ ಬ್ರದರ್ ರಘು ಬಗ್ಗೆ.
ಇತ್ತೀಚೆಗೆ ಅವನೊಂದು ಕ್ಯಾಮರಾ ತಗೊಂಡ, ಎರಡೂವರೆ ಲಕ್ಷದ್ದು. ತಗೋಬೇಕಾದ್ರೆ ಜೊತೆಗೆ ನನ್ನನ್ನೂ ಕರ್ಕೊಂಡ್ ಹೋಗಿದ್ದ. ಅವನಿಗೇನೋ ನಂಬಿಕೆ ನನ್ನ ಬಗ್ಗೆ. ಅದರ ಚೆಕ್ ಕೊಡುವಾಗ, `ಬ್ರದರ್ ಈ ಚೆಕ್ ಅವರಿಗೆ ನೀವೇ ಕೊಡಿ’ ಅಂತ ಆ ಕ್ಯಾಮರಾ ಕೊಟ್ಟವರಿಗೆ ಕೊಡಿಸಿದ. `ನಂಗೆ ಇದೆಲ್ಲಾ ಏನೂ ಗೊತ್ತಿಲ್ಲ ಬ್ರದರ್ ನೀವೇ ಏನೋ ಮಾಡಿ’ ಅಂದ. ಆದ್ರೆ ನೀವ್ ನಂಬ್ತಿರೋ ಬಿಡ್ತಿರೋ ಆ ಕ್ಯಾಮರಾ ತಗೊಂಡ 1 ತಿಂಗಳ ಒಳಗೆ ಏನಿಲ್ಲಾ ಅಂದ್ರು ಒಂದು ಲಕ್ಷ ದುಡಿದಿದ್ದಾನೆ ನಮ್ ಹೀರೋ. ಅದು ಅವನ ಟ್ಯಾಲೆಂಟು..! ಗೊತ್ತಿರೋರಿಗೆ ಬಾಡಿಗೆ ಕೊಟ್ಟು, ಯಾವ್ದಾದ್ರೂ ಸಿನಿಮಾ ಟೀಮಿನ ಜೊತೆ ಸ್ಟ್ಯಾಂಡ್ಬೈ ಕ್ಯಾಮರಾ ಅಂತ ಕಳಿಸಿ ದಿನಕ್ಕೆ ಅದರಲ್ಲೇ 3-4 ಸಾವಿರ ದುಡಿದು ಬಿಡ್ತಾನೆ. ಅವನು ಚಾಣಕ್ಯನ ದೂರದ ರಿಲೀಶನ್ ಇರ್ಬೇಕು ಅನ್ನೋ ಡೌಟು ನಂಗೆ ಯಾವಾಗ್ಲೂ ಬರೋದು ಇಂತದ್ದೇ ಕಾರಣಗಳಿಗೆ. ಅಂದಹಾಗೆ ಇತ್ತೀಚೆಗೆ ಅವನದೊಂದು ಫೋಟೋ ಶೂಟ್ ಸಹ ಅದೇ ಕ್ಯಾಮರಾದಲ್ಲಿ ಮಾಡಿದ್ದೆ ನಾನು. ಹೆಸರಿಗೆ ತಕ್ಕ ಹಾಗೇ ಫೋಟೊದಲ್ಲೂ ಸ್ಮಾರ್ಟ್ ನಮ್ಮ ರಘು..
ನಮ್ಮ ರಘು ಒಳಗೆ ಒಂದು ಮಗುವಿನ ಮನಸ್ಸಿದೆ. ಅವನು ಮುಗ್ಧ ಅಂದ್ರೆ ತಪ್ಪಾಗುತ್ತೆ, ಆದ್ರೆ ಅವನು ಕೆಟ್ಟವನಲ್ಲ ಅನ್ನೋದಂತೂ ಸತ್ಯ. ಅವನಿಗೆ ನಮ್ಮವ್ರು ತಮ್ಮವ್ರು ಅಂದ್ರೆ ಭಲೇ ಪ್ರೀತಿ. ಅವನು ಯಾರನ್ನೂ ಅಷ್ಟು ಸುಲಭಕ್ಕೆ ಹತ್ತಿರ ಸೇರ್ಸಲ್ಲ. ಹತ್ತಿರವಾದ್ರೆ ಅವನು ಅವರನ್ನ ಅಪ್ಪನಾಣೆ ಬಿಡಲ್ಲ. ಯಾವಾಗ್ಲೂ ಹೇಳ್ತಿರ್ತಾನೆ, `ನಿಮಗೆಲ್ಲಾ ಏನಾದ್ರೂ ಒಂದ್ ವ್ಯವಸ್ಥೆ ಮಾಡೋಣ ಬ್ರದರ್, ಎಲ್ಲರೂ ಚೆನ್ನಾಗಿರ್ಬೇಕು’ ಅಂತ. ಅವನು ಮಾಡ್ತಾನೋ ಬಿಡ್ತಾನೋ ಗೊತ್ತಿಲ್ಲ. ಆದ್ರೆ ಹಾಗೆ ಹೇಳೋ ಮನಸ್ಸಾದ್ರೂ ಈ ಕಾಲದಲ್ಲಿ ಯಾರಿಗಿದೆ ನೀವೇ ಹೇಳಿ.? ಅದಕ್ಕೊಂದು ಒಳ್ಳೇ ಮನಸ್ಸು ಬೇಕು, ಅದು ಅವನಿಗಿದೆ. ಅದಕ್ಕೇ ಅವನಂದ್ರೆ ನಂಗೆ ತುಂಬಾ ಇಷ್ಟ. ಅವನು ನಂಗೆ ಎಷ್ಟ್ ಒಳ್ಳೇ ಫ್ರೆಂಡ್ ಅನ್ನೋಕೆ ಮತ್ತೊಂದ್ ಸಾಕ್ಷಿ ಏನು ಗೊತ್ತಾ..? ಅವನು ನನ್ನನ್ನು ಶಬರಿಮಲೆಗೂ ಕರೀತಾನೆ, ಬ್ಯಾಂಕಾಕಿಗೂ ಕರೀತಾನೆ..!
ಅವತ್ತೊಂದು ದಿನ ರಘು ಅವನ ಸಿನಿಮಾದ ಶೂಟಿಂಗ್ನಲ್ಲಿದ್ದ. ಅದೆಲ್ಲೋ ಬಾಣಸವಾಡಿ ಹತ್ತಿರ. ಅವನು ನನ್ನನ್ನು ಶೂಟಿಂಗ್ ಟೈಮಲ್ಲಿ ಬನ್ನಿ ಅಂತ ಕರೆದಿದ್ದ. ಆದ್ರೆ ಕಾರಣಾಂತರದಿಂದ ಹೋಗೋಕೆ ಸಾಧ್ಯ ಆಗ್ಲಿಲ್ಲ. ಅರ್ಜೆಂಟ್ ಕೋಲಾರದ ಅಣ್ಣನ ಮನೆಗೆ ನಾನು, ನನ್ನ ಹೆಂಡ್ತಿ ಹೋಗಿದ್ವಿ. ಕೋಲಾರ ತಲುಪೋದ್ರೊಳಗೆ ರಘು ಫೋನಿಂದ 10-12 ಮಿಸ್ ಕಾಲ್ ಇತ್ತು. ಮನೆಯ ಒಳಗೆ ಹೋಗೋಕೆ ಮುಂಚೆ ಅವನಿಗೆ ಕಾಲ್ ಮಾಡಿ ಮಾತಾಡೋಣ ಅಂತ ಫೋನ್ ಮಾಡಿದ್ರೆ, ಆ ಕಡೆಯಿಂದ ರಘು ಸ್ಟಾರ್ಟ್ ಮಾಡ್ಕೊಂಡ. ` ಇಷ್ಟೇ ಬ್ರದರ್, ನಾವೆಲ್ಲಾ ನಿಮಗೆ ಏನೂ ಅಲ್ಲ. ನಮ್ ರಘು ಸಿನಿಮಾ ಮಾಡ್ತಿದ್ದಾನೆ, ಶೂಟಿಂಗ್ ಸ್ಪಾಟಿಗೆ ಹೋದ್ರೆ ಅವನಿಗೆ ಒಂದಷ್ಟು ಕಾನ್ಫಿಡೆನ್ಸ್ ಬರುತ್ತೆ ಅಂತ ಯೋಚನೆ ಮಾಡ್ಲಿಲ್ಲ ನೀವು. ನನ್ನ ಮಾತಿಗೆ ಬೆಲೆ ಇಲ್ಲ, ನಮಗೆ ನಿಮ್ ಹತ್ತಿರ ಮಾರ್ಯಾದಿ ಇಲ್ಲ.’ ಹೀಗೇ ಶುರುವಾಗಿದ್ದು ನಿಲ್ಲಲೇ ಇಲ್ಲ. ಎಷ್ಟು ಕನ್ವಿನ್ಸ್ ಮಾಡಿದ್ರು ಅವನು ಕೇಳೋಕೆ ರೆಡೀನೇ ಇಲ್ಲ. ನಾನೂ ಲೈಟಾಗಿ ರೇಗಿ ಫೋನ್ ಕಟ್ ಮಾಡ್ಬಿಟ್ಟೆ. ಮಾರನೇ ದಿನ ನಾನು ಕೋಲಾರದಿಂದ ಬೆಂಗಳೂರಿಗೆ ಹೊರಟೆ. ಅವತ್ತು ಆಫೀಸಿಗೆ ರಜೆ ಹಾಕಿ ನನ್ನ ಹೆಂಡತೀನೂ ಕರ್ಕೊಂಡು ರಘು ಸಿನಿಮಾದ ಶೂಟಿಂಗ್ ಸ್ಪಾಟಿಗೆ ಹೋದೆ. ನಾವು ಹೋದ ಟೈಮಲ್ಲಿ ರಘು ಶೂಟಿಂಗ್ನಲ್ಲಿ ಬಿಜಿó. ಆದ್ರೂ ನನ್ನನ್ನು ನೋಡಿದ ಕೂಡ್ಲೆ ಎಲ್ಲಿಲ್ಲದ ಖುಷಿ ಅವನಿಗೆ. ಅವನ ಆ ಸಂಭ್ರಮ, ಸಂತಸ ಕೋಟಿ ಕೊಟ್ಟರೂ ಸಿಗಲಿಕ್ಕಿಲ್ಲ..! ನಂಗೂ ಅನ್ನಿಸ್ತು, ನಾನು ನಿನ್ನೇನೆ ಬರ್ಬೇಕಿತ್ತು ಅಂತ. ಒಬ್ಬ ಒಳ್ಳೆ ಫ್ರೆಂಡ್ ಇನ್ನೊಬ್ಬ ಫ್ರೆಂಡನ್ನ ಇಷ್ಟು ಎಕ್ಸ್ಪೆಕ್ಟ್ ಮಾಡ್ತಾನೆ ಅನ್ನೋದು ರಘು ನೋಡಿದ್ರೆ ಗೊತ್ತಾಗುತ್ತೆ.
ರಘು ರೀಲ್ ಲೈಫಲ್ಲಿ ಹೀರೋ ಆಗ್ಬೇಕು ಅಂತ ಸಖತ್ ಪ್ರಯತ್ನ ಮಾಡ್ತಿದ್ದಾನೆ. ಅವನು ಒಂದಲ್ಲಾ ಒಂದು ದಿನ ದೊಡ್ಡ ಸ್ಟಾರ್ ಆಗೇ ಆಗ್ತಾನೆ. ಆದ್ರೆ ಅವನಿಗೇ ಗೊತ್ತಿಲ್ಲದ ಸತ್ಯ ಅಂದ್ರೆ ಅವನು ರಿಯಲ್ ಲೈಫ್ನಲ್ಲಿ ಆಲ್ರೆಡಿ ಹೀರೋ ಆಗಿದಾನೆ. ಏನೂ ಇಲ್ಲದೆ ಬಂದವನು ಇವತ್ತು ಏನೇನೋ ಆಗಿದ್ದಾನೆ. ಕೆಲವರು ಕನಸು ಕಾಣೋಕೆ ಬದುಕ್ತಾರೆ, ಇನ್ನು ಕೆಲವರು ಕನಸು ಕಾಣ್ತಾ ಬದುಕ್ತಾರೆ, ಮತ್ತೆ ಕೆಲವರು ಕನಸು ನನಸು ಮಾಡೋಕೆ ಬದುಕ್ತಾರೆ. ಇದ್ರಲ್ಲಿ ಮೂರನೇ ಸಾಲಿಗೆ ಸೇರ್ತಾನೆ ನಮ್ಮ ಹೀರೊ ರಘು..! ಅವನ ಕನಸುಗಳು ಜೀವನದುದ್ದಕ್ಕೂ ನನಸಾಗ್ತಾ ಇರ್ಲಿ. ಅವನ ಟಿಕೆಟ್ ಬುಕ್ಕಿಂಗ್ ಆಫೀಸ್, ರಿಯಲ್ ಎಸ್ಟೇಟ್ ವ್ಯವಹಾರ, ಸಿನಿಮಾ ಬದುಕು, ಹೀಗೆ ಎಲ್ಲದರಲ್ಲೂ ನನ್ನ ಗೆಳೆಯ ಗೆಲ್ಲಲಿ ಅನ್ನೋದು ನನ್ನ ಹಾರೈಕೆ. ಅದೆಲ್ಲದಕ್ಕೂ ಮುಂಚೆ ಅವನಿಗೊಂದು ಮದುವೆ ಮಾಡ್ಸಪ್ಪ ಅನ್ನೋದು ದೇವರಲ್ಲಿ ನನ್ನ ಪ್ರಾರ್ಥನೆ. `ಜೈ ರಾಘವೇಂದ್ರ’
ಜೈ ರಾಘವೇಂದ್ರ…
ಆಗಷ್ಟ್ 5, 2014 keerthishankaraghatta ಮೂಲಕ
ನಿಮ್ಮದೊಂದು ಉತ್ತರ