ಆಗ ನಾನು ನನ್ನ ಹತ್ತನೇ ಕ್ಲಾಸಿನ ದಸರಾ ರಜಾದಲ್ಲಿದ್ದೆ. ಆ ರಜಕ್ಕೆ ನಾನು ಅಜ್ಜಿ ಮನೆಗೆ ಹೋಗಿರಲಿಲ್ಲ. ಹಾಗಾಗಿ ಅಮ್ಮನ ಜೊತೆ ಮನೇಲೆ ಇದ್ದೆ. ನಾನು ಪರೀಕ್ಷೆ ಟೈಮಲ್ಲೇ ಓದೋ ಮಗಾ ಅಲ್ಲ. ಅಂತಾದ್ರಲ್ಲಿ ರಜದಲ್ಲಿ ಓದ್ತೀನ? ನೋ ಚಾನ್ಸ್… ಆದ್ರೆ ನಮ್ಮ ಹೋಟೆಲ್ ಗೆ ಊಟಕ್ಕೆ ಬರ್ತಿದ್ದ ಗಡ್ಡ ನಾಗೇಶ್ ಮಾಮ ನನ್ನನ್ನ ಅವರ ರೂಮಿಗೆ ಕರ್ಕೊಂಡ್ ಹೋಗಿ ಒಂದು ಪೆಟ್ಟಿಗೆ ಓಪನ್ ಮಾಡಿ ಅದ್ರಲ್ಲಿಂದ ನೂರಾರು ಪುಸ್ತಕ ತೋರ್ಸಿದ್ರು. ಇದೆಲ್ಲ ಓದಿದಿರಾ ಅಂತ ನಾನು ಆಶ್ಚರ್ಯದಿಂದ ಕೇಳಿದ್ದೆ. ಅವರೂ ಹೌದಪ್ಪ, ಓದಕ್ಕೆ ಅಂತ ತಂದಮೇಲೆ ಓದಬೇಕಲ್ಲ ಅಂದಿದ್ರು. ನಿಂಗೆ ಓದೋ ಅಭ್ಯಾಸ ಇಲ್ವಾ ಅಂತ ಕೇಳ್ದಾಗ ` ನಾನ್ ಸ್ಕೂಲ್ ಪುಸ್ತಕಾನೇ ಓದಲ್ಲ, ಇದನ್ನೆಲ್ಲಾ ಎಲ್ಲಿ ಓದ್ತೀನಿ’ ಅಂದಿದ್ದೆ. ಅದಕ್ಕವರು, ಇದು ಸ್ಕೂಲ್ ಬುಕ್ಸ್ ತಾರಾ ಅಲ್ಲ ಕಣೋ ದಡ್ಡ. ಇದು ಬುದ್ದಿ ಬೆಳೆಯೋಕೆ, ಪ್ರಪಂಚ ಜ್ಞಾನಕ್ಕೆ ಅಂದಿದ್ರು. ಮೊದಲು ಈ ಪುಸ್ತಕ ಓದು ಅಂತ ನನ್ನ ಕೈಗೊಂಡು ಪುಸ್ತಕ ಕೊಟ್ಟು ಕಳ್ಸಿದ್ರು. ನಾನ್ ಓದಿದಂಗೆ ಅಂತ ಮನಸಲ್ಲೇ ಅನ್ಕೊಂಡು ಮನೆಗೆ ಹೋಗಿ ಅದೆಲ್ಲೋ ಒಂದ್ ಕಡೆ ಬಿಸಾಕ್ದೆ. ಅದಾಗಿ ವಾರ ಬಿಟ್ಟು ಮತ್ತೆ ನಾಗೇಶ್ ಮಾಮ ಕೇಳಿದ್ರು, `ಕೀರ್ತಿ ಆ ಪುಸ್ತಕ ಓದಿದ್ಯೇನೋ’ ಅಂತ. `ಇಲ್ಲ ಮಾಮ ಓದಬೇಕು’ ಅಂತ ಹೇಳ್ದಾಗ, `ಅದು ನಿಮ್ಮಂತ ಹುಡುಗರು ಓದಲೇ ಬೇಕಾದ ಪುಸ್ತಕ ಕಣೋ’ ಅಂತ ಬಯ್ದಿದ್ರು. `ಯಾಕೆ ಈ ಮನುಷ್ಯ ಈ ಪುಸ್ತಕ ಓದಕ್ಕೆ ಇಷ್ಟು ಹಠ ಮಾಡ್ತಿದಾರೆ’ ಅಂತ ಮನಸಲ್ಲೇ ಬಯ್ಕೊಂಡು, ಆಗಿದ್ದಾಗ್ಲಿ ಅಂತ ಅವತ್ತು ರಾತ್ರಿ ಮಲ್ಕೊಂಡು ನಿದ್ದೆ ಕಣ್ಣಲ್ಲಿ ಆ ಪುಸ್ತಕದ ಮೇಲೆ ಕಣ್ಣಾಡಿಸಿದೆ. ಮುನ್ನುಡಿ ಓದ್ತಾ ಇದ್ದ ಹಾಗೆ ನನ್ನ ನಿದ್ದೆ ಹಾರಿ ಹೋಯ್ತು. ಮಲಗಿದ್ದವನು ಎದ್ದು ಕೂತೆ. 198 ಪುಟಗಳ ಪುಸ್ತಕ ಮುಂದಿನ 6-7 ಗಂಟೆಯ ಒಳಗೆ ನನ್ನ ತಲೆಗೆ ಹೊಕ್ಕಿ ಕೂತಿತ್ತು. ಸಿಂಗಲ್ ಸಿಟ್ಟಿಂಗ್ ನಲ್ಲಿ ನಾನು ಆ ಪುಸ್ತಕ ಓದಿ ಮುಗಿಸಿದ್ದೆ. ನಾನು ನನ್ನ ಜೀವನದಲ್ಲಿ ಓದಿದ ಪುಸ್ತಕ ನನ್ನ ರಕ್ತ ಕುದಿಯೋ ಹಾಗೆ ಮಾಡಿತ್ತು. ನನ್ನೊಳಗಿನ ರಾಷ್ಟ್ರ ಪ್ರೇಮಿ ಆ ದಿನ ರೊಚ್ಚಿಗೆದ್ದಿದ್ದ. ಬೆಳಿಗ್ಗೆ ಎದ್ದು ಅಜ್ಜಿ ರೂಮಿನಲ್ಲಿದ್ದ ನೆಹರೂ ಫೋಟೋ ನನ್ನ ಆಕ್ರೋಶಕ್ಕೆ ಬಲಿಯಾಗಿತ್ತು. ಶಾಲಾ ಪುಸ್ತಕಗಳನ್ನು ಬಿಟ್ಟು ಬೇರೆ ಪುಸ್ತಕಗಳನ್ನು ಓದುವ ನನ್ನ ಚಟಕ್ಕೆ ಮುನ್ನುಡಿ ಬರೆದ ಆ ಪುಸ್ತಕ-ಹಿಮಾಲಯನ್ ಬ್ಲಂಡರ್.
ಆ ಪುಸ್ತಕದ ಶಕ್ತಿ ಅಂತದ್ದು, ಆ 198 ಪುಟಗಳ ಪುಸ್ತಕ ನನ್ನ ಪ್ರತಿ ಜರ್ನಿಯ ಸಂಗಾತಿ. ನಾನು ಎಲ್ಲಿಗೆ ಹೋದ್ರೂ, ನನ್ನ ಜೊತೆಗೆ ಯಾವುದೇ ಪುಸ್ತಕವಿದ್ರೂ, ಹಿಮಾಲಯನ್ ಬ್ಲಂಡರ್ ನನ್ನ ಜೊತೆಗಿರುತ್ತೆ. ಇಲ್ಲೀ ತನಕ ಕನಿಷ್ಠ ೧೫ ಸಲ ನಾನು ಆ ಪುಸ್ತಕವನ್ನ ಓದಿದ್ದೇನೆ. ಆ ಪುಸ್ತಕದ ಇಂತದ್ದೇ ಪುಟದಲ್ಲಿ ಇದರ ಬಗ್ಗೆನೇ ಇದೆ ನಾನು ಹೇಳಬಲ್ಲೆ. ಅಷ್ಟರ ಮಟ್ಟಿಗೆ ಅದು ನನ್ನೊಳಗೆ ಬೆರೆತು ಹೋಗಿದೆ. ಅಷ್ಟಕ್ಕೂ ಆ ಪುಸ್ತಕದಲ್ಲಿ ಏನಿದೆ…? ಅದು 1962ರ ಭಾರತ-ಚೈನಾ ಯುದ್ದದ ಚಿತ್ರಣ. ಭಾರತ ಆ ಯುದ್ದವನ್ನ ಹೀನಾಯವಾಗಿ ಸೋತಿದ್ಯಾಕೆ ಅನ್ನೋದನ್ನ ಎಳೆಎಳೆಯಾಗಿ ಬಿಚ್ಚಿಡತ್ತೆ ಆ ಪುಸ್ತಕ. ಆ ಯುದ್ದದಲ್ಲಿ ಭಾರತೀಯ ಸೈನಿಕರು ಪಟ್ಟ ಪಾಡು, ಎರಡೂ ಕಾಲಿಗೆ ಬಲಗಾಲಿನ ಶೂ ಹಾಕಿ ಅವರು ಮಾಡಿದ ಯುದ್ದ, ಹೊಟ್ಟೆಗೆ ಹಿಟ್ಟಿಲ್ಲದೆ ಕಡೆಯ ಬುಲೆಟ್ ಶತ್ರುವಿನೆಡೆಗೆ ಹಾರಿಸುವ ತನಕ ಅವರು ನಡೆಸಿದ ಹೋರಾಟ, ಹಿಮದ ಬೀಡಲ್ಲಿ ಹರಿದ ರಕ್ತದೋಕುಳಿ, ಚೈನಾ ಸೈನಿಕರ ಅಟ್ಟಹಾಸ, ಎಲ್ಲವನ್ನೂ ಕಿಚ್ಚೆಬ್ಬಿಸುವಂತೆ ನಮ್ಮೆದುರು ಒಂದೊಂದೇ ಪುಟವಾಗಿ ತೆರೆದುಕೊಳ್ಳುವ ಪುಸ್ತಕ ಹಿಮಾಲಯನ್ ಬ್ಲಂಡರ್.
ಆ ಯುದ್ದದ ಸಂಧರ್ಭದಲ್ಲಿ ಬ್ರೆಗೆಡಿಯರ್ ಆಗಿದ್ದ ಜಾನ್ ಪಿ ದಳವಿ ತಾವು ಪಟ್ಟ ಪಾಡನ್ನ ಹೇಳುವುದರ ಜೊತೆಗೆ ಆ ಸಮಯದಲ್ಲಿ ದೇಶ ಆಳುತ್ತಿದ್ದ ರಾಜಕಾರಣಿಗಳ ಬಣ್ಣ ಬಯಲು ಮಾಡುತ್ತಾರೆ. ಅಷ್ಟು ದೊಡ್ಡ ಶತ್ರು ರಾಷ್ಟ್ರ ನಮ್ಮ ಮೇಲೆ ಎರಗಿ ಬರುವಾಗ ನಮ್ಮ ದೇಶದ ಪ್ರಧಾನಿ ಆ ಯುದ್ದಕ್ಕೆ ಹೇಗೆ ಸಿದ್ದವೇ ಆಗಿರದೆ `ಇಂಡಿಯ-ಚೀನಾ ಭಾಯಿ ಭಾಯಿ’ ಅಂತ ಓಡಾಡ್ತಿದ್ರು ಅನ್ನೋದನ್ನ ನಮಗೆ ತಿಳಿಸಿಕೊಡ್ತಾರೆ. ಹೇಗೆ ನಮ್ಮ ಸೈನ್ಯದ ಅಧಿಕಾರಿಗಳು ಚೀನಾದ ಯುದ್ದ ಕೈದಿಗಳಾಗಿ ಯಮ ಯಾತನೆ ಅನುಭವಿಸಿದರು ಅನ್ನೋದನ್ನ ತಿಳಿಸಿಕೊಡ್ತಾರೆ. ಇದೆಲ್ಲದರ ಜೊತೆಗೆ ನಮ್ಮ ದೇಶಕ್ಕಾದ ಅವಮಾನವನ್ನ ಸಹಿಸಲಾಗದ ಪರಿಸ್ಥಿತಿಯ ಚಿತ್ರಣ ಕೊಡ್ತಾರೆ. ಅದೆಲ್ಲವನ್ನೂ ನಿಜವಾಗಿ ಅನುಭವಿಸಿದಂತಾಗೋದು ಜಾನ್ ಪಿ ದಳವಿ ಅವರ ಪುಸ್ತಕವನ್ನ ನಮ್ಮದೇ ಕನ್ನಡ ಭಾಷೆಯಲ್ಲಿ ಓದಿದಾಗ. ಹಿಮಾಲಯನ್ ಬ್ಲಂಡರ್ ಪುಸ್ತಕವನ್ನ ಅದೇ ಹೆಸರಿನಲ್ಲಿ ಕನ್ನಡಿಗರಿಗೆ ಉಡುಗೊರೆಯಾಗಿ ನೀಡಿದ್ದಾರೆ ಹಿರಿಯ ಪತ್ರಕರ್ತ ರವಿ ಬೆಳಗೆರೆಯವರು. ಅವರಿಗೆ ಎಲ್ಲ ಕನ್ನಡಿಗರ ಪರವಾಗಿ ಕೋಟಿ ಕೋಟಿ ಥ್ಯಾಂಕ್ಸ್…
ಇಲ್ಲಿಯ ತನಕ ಈ ಪುಸ್ತಕವನ್ನ ನಾನು 16 ಜನರಿಗೆ ಉಡುಗೊರೆಯಾಗಿ ನೀಡಿದ್ದೇನೆ. ಆ ಪುಸ್ತಕ ಯಾರಿಗೆ ಕೊಟ್ಟರೂ ನಾನು ವಾಪಸ್ ಇಸ್ಕೊಳಲ್ಲ. ಅದರ ಬದಲಿಗೆ ಇನ್ಯಾರಿಗಾದ್ರೂ ಆ ಪುಸ್ತಕವನ್ನು ಓದೋಕೆ ಕೊಡಲು ಹೇಳ್ತೀನಿ. ಅಷ್ಟರ ಮಟ್ಟಿಗೆ ಅದು ಪ್ರತಿ ಭಾರತೀಯನೂ ಓದಲೇ ಬೇಕಾದ ಪುಸ್ತಕ. ಮೊನ್ನೆ ಊರಿಗೆ ಹೋದಾಗ ಮತ್ತೆ ಅದನ್ನ ಕಂಪ್ಲೀಟ್ ಆಗಿ ಓದಿದ ಮೇಲೆ ನನ್ನ ಬ್ಲಾಗ್ ನಲ್ಲಿ ಅದರ ಬಗ್ಗೆ ಬರೀಬೇಕು ಅನ್ನಿಸಿ ಬರೀತಿದೀನಿ. ಆ ಪುಸ್ತಕದ ಬೆಲೆ ಬರೀ 125 ರುಪಾಯಿ. ಆದ್ರೆ ಅದರಲ್ಲಿನ ಪ್ರತಿ ಅಕ್ಷರ ಲಕ್ಷ ಲಕ್ಷ ಬೆಲೆ ಬಾಳುತ್ತೆ. ನಿಮ್ಮೊಳಗೊಬ್ಬ ರಾಷ್ಟ್ರಪ್ರೇಮಿ ಇದ್ರೆ, ಅಂದಿನ ಯುದ್ದದ ಚಿತ್ರಣಗಳು ಕಣ್ಣಿಗೆ ಕಟ್ಟಬೇಕಾದರೆ, ಅವತ್ತಿನ ಹೊಲಸು ರಾಜಕೀಯ ವ್ಯವಸ್ಥೆ ಬಗ್ಗೆ ತಿಳ್ಕೊಬೇಕು ಅಂದ್ರೆ ಈಗಲೇ ಹತ್ತಿರದ ಬುಕ್ ಶಾಪ್ ಗೆ ಹೋಗಿ ಆ ಪುಸ್ತಕ ತಂದು ಓದಲು ಕೂತ್ಕೊಳಿ. ನಾನು ಚಾಲೆಂಜ್ ಮಾಡ್ತೀನಿ`ನೀವೂ ಆ ಪುಸ್ತಕವನ್ನ ಸಿಂಗಲ್ ಸಿಟ್ಟಿಂಗ್ ನಲ್ಲಿ ಓದಿ ಮುಗಿಸ್ತೀರಿ…’ಯಾಕಂದ್ರೆ ಇದು `ಸಹಸ್ರ ಯೋಧರ ನೆತ್ತರಗಾಥೆ…’