ಇದನ್ನು ಬರೀಬೇಕೋ ಬೇಡ್ವೋ ನಂಗೊತ್ತಿಲ್ಲ. ಆದ್ರೆ ಮನಸ್ಸು ಸಮಾಧಾನ ಆಗೋಕೆ ಇದಕ್ಕಿಂತ ಒಳ್ಳೆಯ ಪರಿಹಾರ ನಂಗೊತ್ತಿಲ್ಲ. ಆ ಶಕ್ತಿ ಬರಹಕ್ಕಿದೆ. ಅದಕ್ಕೇ ಬರೆಯಲು ಕೂತಿದ್ದೇನೆ. ಇದನ್ನ ಆರಂಭಿಸುವ ಮುನ್ನ ನನ್ನ ಕಣ್ಣಲ್ಲಿ ನೀರು ಆವರಿಸಿದೆ. ಇದನ್ನು ಬರೆದು ಮುಗಿಸುವ ಹೊತ್ತಿಗೆ ನನಗೇ ಗೊತ್ತಿರದೇ ನನ್ನ ಕೆನ್ನೆಯ ಮೇಲಿಂದ ತಾಯಿ ಕಳೆದುಕೊಂಡ ಮಗ ಅಳುವ ಹಾಗೆ ಕಣ್ಣೀರು ಹಾದು ಹೋಗಿರುತ್ತೆ. ನಿಮಗೂ ಹಾಗೇ ಆದ್ರೆ ಪ್ಲೀಸ್ ಅತ್ತುಬಿಡಿ. ಕಣ್ಣೀರ ಶಾಪ ಆ ದೇವರಿಗೆ ತಟ್ಟಲೇಬೇಕು.
ಪ್ರಕಾಶ್-ಸಿಂಚನ, ನಾನು ನನ್ನ ಜೀವನದಲ್ಲಿ ಕಂಡ ಆದರ್ಶ ದಂಪತಿಗಳಲ್ಲೊಂದು ಜೋಡಿ. ಪರಸ್ಪರ ಬಹಳ ಪ್ರೀತಿಸಿಕೊಳ್ತಾರೆ.ಅವನು ಅಂದ್ರೆ ಅವಳಿಗೆ ಪ್ರೀತಿ, ಅವನಿಗಂತೂ ಅವಳು ಅಂದ್ರೆ ಪ್ರೀತಿ-ಪ್ರೀತಿ-ಪ್ರೀತಿ.ಅವನು ಅವಳನ್ನು ಪ್ರೀತಿಸಿವುದನ್ನು ನೋಡಿ ನಾನಂತೂ ನನ್ನ ಹೆಂಡತಿ ಬಾಯಿಂದ ಸಾವಿರ ಸಲ ಬೈಸಿಕೊಂಡಿದ್ದೇನೆ. `ಪ್ರಕಾಶಣ್ಣನ್ನ ನೋಡಿ ಕಲಿ’ ಅಂತ ಹೇಳಿರೋದು ಎಷ್ಟೋ ಸಲ. ಯಸ್, ಅನುಮಾನವೇ ಬೇಡ… ಅವರಿಬ್ಬರದು ರಬ್ ನೇ ಬನಾದಿ ಜೋಡಿ…
ಅವರಿಬ್ಬರ ಮದುವೆಯಾಗಿ ೩-೪ ವರ್ಷ ಆಗಿದೆ. ನಮ್ಮ ಫ್ರೆಂಡ್ ಸರ್ಕಲ್ ನಲ್ಲಿ ಮೊದಲು ಮದುವೆಯಾಗಿದ್ದು ಅವನೇ. ಎಲ್ಲರನ್ನೂ ಪ್ರೀತಿಸುವ ನಮ್ಮ ಟೀಮಿನ ಹುಡುಗಿಯರ ಅಣ್ಣ ಅವನು.
ಇನ್ನು ಸಿಂಚು ನಮ್ಮ ಟೀಮಿನ ಲೇಡಿ ಡಾನ್. ಅವಳ ಮೆಚ್ಯುರಿಟಿಗೆ ಅವಳೇ ಸಾಟಿ. ಅವಳು ಮಾತಾಡಿದ್ರೆ ಅದಕ್ಕೊಂದು ಅರ್ಥ ಇದ್ದೇ ಇರುತ್ತೆ. ಯೋಚನೆ ಮಾಡದೇ ಅವಳು ಯಾವತ್ತೂ ಮಾತಾಡಲ್ಲ. ಅವಳಂಥ ಗಟ್ಟಿ ಹೆಣ್ಣು ಜೀವ ಈ ಕಾಲದಲ್ಲಿ ಸಿಗೋಕೆ ಚಾನ್ಸೇ ಇಲ್ಲ. ಒಟ್ಟಾರೆ ಸಿಂಚು ಅಂದ್ರೆ ಅವಳೊಂದು ಸಿಸ್ಟಮ್ಯಾಟಿಕ್ ಹುಡುಗಿ. ಜವಬ್ದಾರಿಯುತ ಗೃಹಿಣಿ.
ಈಗಿನ ಎಲ್ಲ ದಂಪತಿಗಳ ಹಾಗೆ ಇವರೂ ಸಹ ಒಂದೆರೆಡು ವರ್ಷ ಫ್ಯಾಮಿಲಿ ಪ್ಲ್ಯಾನಿಂಗ್ ಮಾಡಿದ್ರು. ಆದ್ರೆ ಅದಾದ ಮೇಲೆ ಮಕ್ಕಳಾಗಬೇಕು ಅನ್ಕೊಂಡಾಗ ಅದೇನೇನೋ ವೈದ್ಯಕೀಯ ಸಮಸ್ಯೆಗಳು ಅವಳನ್ನ ಕಾಡಿದ್ವು. ಅದ್ಯಾವುದಕ್ಕೂ ಧೃತಿಗೆಟ್ಟವಳಲ್ಲ ಅವಳು. ಪ್ರತೀ ಗುರುವಾರ ಗಂಡ ಹೆಂಡತಿ ತಪ್ಪದೇ ಸಾಯಿಬಾಬಾನ ದೇವಸ್ಟಾನಕ್ಕೆ ಹೋಗಿ ಕೈಜೋಡಿಸಿದ್ದಾರೆ. ಅವತ್ತೊಂದು ದಿನ ರಾತ್ರಿ ಸ್ನೇಹಿತರೆಲ್ಲಾ ಸೇರಿದ್ದಾಗ ನಾವಿಬ್ಬರೂ ರಾತ್ರಿ ೨-೩ ಗಂಟೆಯ ಹೊತ್ತಲ್ಲಿ ಆಡಿದ ಮಾತು ನೆನಪಿದೆ ನನಗೆ. ತಾಯ್ತನದ ಬಗ್ಗೆ ತನ್ನ ಕನಸುಗಳನ್ನ ಹೇಳಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ಲು ಸಿಂಚು. ಅವತ್ತೇ ದೇವರಿಗೆ ಬೇಡಿಕೆ ಇಟ್ಟಿದ್ದೆ. ದೇವರೇ ಇವಳ ಮಗು ಇವಳನ್ನ ಅಮ್ಮ ಅಂತ ಕರೆಯೋ ದಿನ ಬೇಗ ಬರ್ಲಪ್ಪಾ ಅಂತ. ಅದೇನೋ ಹಂಗೂ ಹಿಂಗೂ ೫-೬ ತಿಂಗಳು ಕಳೀತು. ಅವರಿಬ್ಬರ ಮನಸ್ಸಲ್ಲಿ ಅವರಿಗೆ ಇನ್ನು ಮಕ್ಕಳಾಗಲ್ಲ ಅನ್ನೋ ಮನಸ್ಥಿತಿ ಬಂದಿತ್ತು. ಅದ್ಯಾವ್ನೋ ಡಾಕ್ಟರ್ ಸಹ ಹಾಗೇ ಹೇಳಿದ್ನಂತೆ. ಹಾಗಾಗಿ ಅವರಿಗೂ ಅದರ ಬಗ್ಗೆ ಭರವಸೆ ಹೋದ ಹಾಗಾಗಿತ್ತು. ಆದ್ರೆ ಅದ್ಯಾವತ್ತೋ ಒಂದು ದಿನ ಅವರಿಬ್ಬರೂ ಯಾವುದೋ ಕಾರಣಕ್ಕೆ ಆಸ್ಪತ್ರೆಗೆ ಹೋದ್ರು. ಅದೇನೇನೋ ಪರೀಕ್ಷೆ ಮಾಡಿ ಆ ಡಾಕ್ಟರ್ ಹೇಳಿದ್ದೇನು ಗೊತ್ತಾ..? `ಮಿಸಸ್ ಸಿಂಚನ, ನೀವು ೫ ತಿಂಗಳ ಗರ್ಭಿಣಿ’ ಅಂತ. ಅದು ಅವರಿಬ್ಬರ ಪಾಲಿನ ಬಹುದೊಡ್ಡ ದಿನ. ಅವತ್ತು ಅವರಿಬ್ಬರೂ ಅದೆಷ್ಟು ಖುಷಿ ಪಟ್ಟಿರಬಹುದು ಎಂಬುದನ್ನು ನಾನು ಊಹಿಸಬಲ್ಲೆ. ನಂಗೆ ನನ್ನ ಹೆಂಡತಿ ಈ ವಿಷ್ಯ ಹೇಳಿದಾಗ ಮನಸಲ್ಲೇ ಬಾಬಾಗೆ ಥ್ಯಾಂಕ್ಸ್ ಹೇಳಿದ್ದೆ. ಆ ನಂತರ ಸ್ಕ್ಯಾನಿಂಗ್, ಅದೂ ಇದೂ ಅಂತ ಅವರಿಬ್ಬರೂ ಅವರದ್ದೇ ಪ್ರಪಂಚದಲ್ಲಿ ತೇಲ್ತಾ ಇದ್ರು. ನಾನು ನನ್ನ ಹೆಂಡತಿಗೆ ಹೇಳ್ತಿದ್ದೆ ` ಈಗಂತೂ ಪ್ರಕಾಶ, ಸಿಂಚನಾಳ ಹೊಟ್ಟೆ ಇಟ್ಕೊಂಡೇ ಓಡಾಡ್ತಾ ಇರ್ತಾನೆ’ ಅಂತ. ಅವನು ಅವಳನ್ನ ಅಷ್ಟು ಪ್ರೀತಿಸ್ತಾನೆ ಅದರಲ್ಲಿ ಅನುಮಾನವೇ ಇಲ್ಲ…
ಕೆಲಸಕ್ಕೇ ಹೋಗ್ತಿದ್ದ ಸಿಂಚು ಕೆಲಸ ಬಿಟ್ಟು ಅವಳ ಮಗುವಿನ ಆರೈಕೆ ಶುರು ಮಾಡಿದ್ಲು. ಬೇಕಾಬಿಟ್ಟಿ ಮನಸ್ಸಿಗೆ ಬಂದಿದ್ದೆಲ್ಲಾ ತಿಂತಾ ಇದ್ದವಳು ಹೊಟ್ಟೆಯಲ್ಲಿರೋ ಅವಳ ಮಗುವಿಗೋಸ್ಕರ ಎಲ್ಲವನ್ನು ಬಿಟ್ಲು. ಮಗುವಿಗೆ ಏನ್ ಒಳ್ಳೇದೋ ಅದನ್ನ ಮಾತ್ರ ತಿನ್ನೋಕೆ ಶುರು ಮಾಡಿದ್ಲು. ಅವನಂತೂ ಅವಳಿಗೆ ಹಣ್ಣು ಬಿಡಿಸಿಕೊಡೋದೇ ತನ್ನ ಜೀವನದ ಪ್ರಮುಖ ಕೆಲಸ ಅನ್ನೋ ಹಾಗೆ ಅವಳ ಆರೈಕೆ ಮಾಡಿದ. ಮೊನ್ನೆ ಮೊನ್ನೆ ಎರಡು ವಾರದ ಕೆಳಗೆ ಎಲ್ಲರೂ ಗೆಟ್ ಟುಗೆದರ್ ಪ್ಲ್ಯಾನ್ ಮಾಡಿದ್ವಿ. ಸುಮನ್-ಕಿರಣ್ ಮನೆಯಲ್ಲಿ ಎಲ್ಲರೂ ಸೇರಿದ್ವಿ. ಅವತ್ತು ಪ್ರಕಾಶ್-ಸಿಂಚನಾಗೆ ಗೊತ್ತಿಲ್ಲದ ಹಾಗೆ ಒಂದು ಪ್ಲ್ಯಾನ್ ಮಾಡಿದ್ವಿ. ಸರ್ ಪ್ರೈಸ್ ಕೇಕ್ ಕಟ್ ಮಾಡಿಸಿ ಅವರಿಬ್ಬರಿಗೂ ಶುಭ ಹಾರೈಸಿದ್ವಿ. ದುರಾದೃಷ್ಟಕ್ಕೆ ಆ ಟೈಮಿಗೆ ನಾನು ನನ್ನ ಹೆಂಡತಿ ರೀಚ್ ಆಗೋಕೆ ಸಾಧ್ಯ ಆಗ್ಲಿಲ್ಲ. ಆದ್ರೆ ಉಳಿದ ಸ್ನೇಕಿತರೆಲ್ಲಾ ಸೇರಿ ಅವರಿಬ್ಬರನ್ನೂ ಖುಷಿ ಪಡಿಸಿದ್ರು, ಅದಾಗಿ ಸ್ವಲ್ಪ ಹೊತ್ತಿಗೆ ನಾವು ಅಲ್ಲಿಗೆ ಹೋದ್ವಿ. ಎಲ್ಲರೂ ಒಟ್ಟಿಗೆ ತುಂಬಾ ಟೈಂ ಕಳೆದ್ವಿ. ಮಾರನೇ ದಿನ ಇಡೀ ದಿನ ರೆಸಾರ್ಟ್ ನಲ್ಲಿದ್ವಿ. ಸಿಂಚು ಯಾವಾಗ್ಲೂ ಆಕ್ಟಿವ್ ಪಾರ್ಟಿಸಿಪೆಂಟ್. ಆದ್ರೆ ಈ ಸಲ ಅವಳು ಹೊಟ್ಟೆಯ ಮೇಲೆ ಕೈ ಇಟ್ಕೊಂಡು ಎಲ್ಲವನ್ನೂ ನೋಡ್ತಾ ಇದ್ಲು. ಕ್ರಿಕೆಟ್ ಆಡುವಾಗ ತನ್ನ ಹೆಂಡತಿಯ ಹೊಟ್ಟೆಗೆ ಎಲ್ಲಿ ಬಾಲ್ ಬೀಳುತ್ತೋ ಅಂತ ಪ್ರಕಾಶ ಅವಳಿಗೆ ಕಾವಲು ಕಾದಿದ್ದು ಇನ್ನೂ ಕಣ್ಣ ಮುಂದಿದೆ. ನನ್ನ ಹೆಂಡತಿ ಅವಳ ಹೊಟ್ಟೆ ಮುಟ್ಟಿ ಮುಟ್ಟಿ ಸಂಭ್ರಮಿಸ್ತಾ ಇದ್ಲು. ನಾನು ಸಹ ಮುಟ್ಟಿ`ಆಲ್ ಈಸ್ ವೆಲ್- ಆಲ್ ಈಸ್ ವೆಲ್’ ಅಂತ ರೇಗಿಸ್ತಾ ಇದ್ದೆ. ಸಿಂಚು ಕಂಗಳಲ್ಲಿ ಆ ಸಂತುಷ್ಟತೆ ಎದ್ದು ಕಾಣ್ತಿತ್ತು. ತಾಯ್ತನದ ಸಂಭ್ರಮ ಅವಳ ಮುಖದಲ್ಲಿ ಸ್ಪಷ್ಟವಾಗಿ ಗೋಚರಿಸ್ತಿತ್ತು. ಆ ಮಗು ನಮ್ಮನ್ನೆಲ್ಲಾ `ಮಾಮ’ ಅಂತ ಕರೆಯೋ ದಿನ ಹತ್ತಿರ ಇದೆ ಅಂತ ನನಗೂ ಖುಷಿಯಾಗ್ತಿತ್ತು. ಆ ಎರಡೂ ದಿನ ನಮ್ಮ ಟೀಮಿಗೆ ಬೆಸ್ಟ್ ದಿನಗಳು.
ಸಿಂಚನಾಗೆ ೮ನೇ ತಿಂಗಳು ನಡೀತಿದೆ. ಇನ್ನೇನು ತಿಂಗಳಲ್ಲಿ ಪ್ರಕಾಶನ ಮಗಳು ಪ್ರಪಂಚ ನೋಡ್ತಾಳೆ. ಮಗು ಅವನ ಹಾಗಾ- ಅವಳ ಹಾಗಾ ಅನ್ನೋ ಪ್ರಶ್ನೆಗಳು ನಮ್ಮಲ್ಲೇ ಇದ್ದವು. ಪ್ರಕಾಶನಿಗೆ ಮಗ ಹುಟ್ಟಿದ್ರೆ ಹೇಗೆ ಮಾಡಬಹುದು ಎಂಬುದರ ಬಗ್ಗೆಯೇ ಗಂಟೆಗಟ್ಟಲೇ ಚರ್ಚೆ ಮಾಡಿದ್ದೇವೆ ನಾವು. ಅವನ ಚಿಟಿಕೆ ಮಾತಾಡೋ ಸ್ಟೈಲನ್ನ ಎಲ್ಲರೂ ಇಮಿಟೇಟ್ ಮಾಡಿ ತೋರಿಸಿದ್ದೇವೆ. ಅವಳೂ ಸಹ ಅದನ್ನೆಲ್ಲಾ ಕೂತಲ್ಲೇ ಎಂಜಾಯ್ ಮಾಡ್ತಿದ್ಲು. ಅವಳಿಗೆ ಅವಳು ಅಮ್ಮ ಆಗ್ತಿದ್ದಾಳೆ ಅನ್ನೋ ಸಂಭ್ರಮ.. ಅಷ್ಟೆ..!
ಪ್ರತೀ ಗುರುವಾರ ಬಾಬಾಗೆ ನಮಸ್ಕಾರ ಹಾಕಿದ್ದಕ್ಕೆ ಇದಕ್ಕಿಂತ ದೊಡ್ಡ ಉಡುಗೊರೆ ಅವನು ಕೊಡೋಕೆ ಛಾನ್ಸೇ ಇಲ್ಲ. ಆದ್ರೆ ಬಾಬಾ ಎಂತಹ ಕ್ರೂರಿ ಅಂತ ಇವತ್ತು ಪ್ರೂವ್ ಆಗಿಬಿಡ್ತು. ಸಂಜೆ ೭.೪೫ಕ್ಕೆ ಒಂದು ಮೆಸೇಜ್ ಬಂತು. ಅದು ಪ್ರಕಾಶ್ ಕಳ್ಸಿದ್ದು. `ವಿಧಿಯಾಟಕ್ಕೆ ನನ್ನ ಮಗು ಬಲಿಯಾಯ್ತು. ಇವತ್ತು ಸ್ಕ್ಯಾನಿಂಗ್ ರಿಪೋರ್ಟ್ ಬಂತು. ಅದರ ಪ್ರಕಾರ ನಮ್ಮ ಮಗುವಿನ ಹೃದಯ ಬಡಿತ ನಿಂತು ಹೋಗಿದೆ’ ಅಂತ. ನನ್ನ ಕಣ್ಣಿಂದ ಆ ಕ್ಷಣಕ್ಕೆ ಅದೆಷ್ಟು ಕಣ್ಣೀರು ಹೋಯ್ತೋ ಗೊತ್ತಿಲ್ಲ. ಆದ್ರೆ ಎಷ್ಟೇ ಪ್ರಯತ್ನ ಪಟ್ಟರೂ ಕಂಟ್ರೋಲ್ ಆಗಲೇ ಇಲ್ಲ. ಅಷ್ಟರಲ್ಲಿ ನನ್ನ ಹೆಂಡತಿಯ ಫೋನ್ ಬಂತು ರಿಸೀವ್ ಮಾಡಿದ್ರೆ ಆ ಕಡೆಯಿಂದ ಅವಳೂ ಬಿಕ್ಕಿ ಬಿಕ್ಕಿ ಅಳ್ತಿದ್ದಾಳೆ. ಕಾರಣ ಪ್ರಕಾಶ್-ಸಿಂಚುಗೆ ದೇವರು ಮಾಡಿದ ಅನ್ಯಾಯ. ಕೊಡದಿದ್ರೂ ಪರವಾಗಿರ್ಲಿಲ್ಲ. ಆದ್ರೆ ಈ ತರ ಕೊಟ್ಟು ಕಿತ್ಕೊಂಡಿದ್ದು ಯಾವ ನ್ಯಾಯ ಅನ್ನೋದು ನನ್ನ ಹೆಂಡತಿಯ ಪ್ರಶ್ನೆ. ನಂಗೆ ಸಂಕಟ ತಡ್ಕೊಳೋಕ್ ಆಗ್ಲಿಲ್ಲ. ಆಮೇಲ್ ಮಾಡ್ತೀನಿ ಅಂತ ಫೋನಿಟ್ಟು ಸಮಾಧಾನ ಆಗೋ ಆಷ್ಟು ಅತ್ತು ಸುಮ್ಮನಾದೆ. ಪ್ರಕಾಶನಿಗೆ ಸಮಾಧಾನ ಆಗೋ ಹಾಗೆ ಒಂದಷ್ಟು ಮೆಸೇಜ್ ಕಳಿಸಿದೆ. ಆದ್ರೂ ಅವನ ಸಂಕಟ ಅವನ ಮೆಸೇಜ್ ನಲ್ಲೇ ಗೊತ್ತಾಗ್ತಿತ್ತು. ಇನ್ನು, ೮ ತಿಂಗಳು ಕನಸಿನಂತೆ ಹೊತ್ತ ಸಿಂಚು ಪರಿಸ್ಥಿತಿ ನೆನೆಸಿಕೊಂಡ್ರೆ ಕರಳು ಕಿತ್ತು ಬರುತ್ತೆ. ದೇವರ ಹತ್ತಿರ ಪ್ರತೀ ಗುರುವಾರ ಹೋಗಿ ಬೇಡಿದ್ದಕ್ಕೆ ಇಷ್ಟು ದೊಡ್ಡ ಶಿಕ್ಷೇನಾ..? ನಾನೂ ಬಾಬಾ ಭಕ್ತ. ಅವರಿಗೆ ಅದೇನೇನೊ ಬೇಡಿಕೆ ಇಟ್ಟಿದ್ದೇನೆ. ಅದ್ಯಾವುದೂ ಈಡೇರಿಸೋದು ಬೇಡ. ನನ್ನ ಗೆಳೆಯನಿಗೆ ಮತ್ತೆ ಆ ಖುಶಿ ಕೊಡು. ಸಿಂಚು ಮುಖದಲ್ಲಿ ಮತ್ತೆ ಆ ಸಂಭ್ರಮ ನೋಡೋ ಹಾಗೆ ಮಾಡು. ನನ್ನನ್ನ ಅವರಿಬ್ಬರಮಗು `ಮಾಮ’ ` ಅಂತ ಕರೆಯೋ ಹಾಗೆ ಮಾಡು. ಅಲ್ಲಿಯ ತನಕ ಇನ್ಯಾವತ್ತೂ ಯಾವ ದೇವರಿಗೂ ನಾನು ಕೈ ಮುಗಿಯಲ್ಲ. ಪ್ರೀತಿಯ ಪ್ರಕಾಶ್-ಸಿಂಚು ದೇವರು ಇರೊದೇ ನಿಜವಾದ್ರೆ ನಿಮ್ಮ ಜೀವನದ ಅದ್ಭುತ ದಿನಗಳು ಇನ್ನು ಮುಂದೆ ಆರಂಭವಾಗುತ್ತೆ. ಜಗತ್ತು ನೋಡುವ ಮುಂಚೆ ನಮ್ಮಿಂದ ದೂರಾದ ಅವಳು `ಮೌನ’.. ಮತ್ತೆ ನಿಮ್ಮ ಮಗಳಾಗಿ ಹುಟ್ಟೇ ಹುಟ್ತಾಳೆ..! ಅವಳ ನಾಮಕರಣಕ್ಕೆ ನನ್ನ ಕಡೆಯಿಂದ ಚಿನ್ನದ ಚೈನು. ಎಷ್ಟೇ ಆಗಲಿ ಅವಳು ನನ್ನ ಸೊಸೆ. ನಿಮಗೆ ಆ ಇಲ್ಲದ ದೇವರು ಸಮಾಧಾನ ಮಾಡಿಕೊಳ್ಳೋ ಶಕ್ತಿ ಕೊಡಲಿ.. ನಾವೆಲ್ಲ ನಿಮ್ಮ ಜೊತೆಗಿದೀವಿ, ಮರೀಬೇಡಿ. ವಿ ಲವ್ ಯೂ ಲೋಡ್ಸ್…
heart touching ki…feeling sad…
i am very sorry about prakash and sinchu. dont worry, there will be a silverline in every clouds end,we also pray with u for the shinyday.